×
Ad

ಪ್ರಧಾನಿ ಮೋದಿ ಅವರ ಸ್ವಾತಂತ್ರ್ಯ ದಿನದ ಭಾಷಣಕ್ಕೆ 125 ಕೋಟಿ ಜನರ ಐಡಿಯಾಗಳು !

Update: 2016-08-03 22:14 IST

ಪ್ರಧಾನಿ ನರೇಂದ್ರ ಮೋದಿ ಅವರು ಅದ್ಭುತ ವಾಗ್ಮಿ. ಅವರು ಮಾತಿಗೆ ನಿಂತರೆ ಕೇಳುಗರು ಮಂತ್ರ ಮುಗ್ಧರಾಗಿಬಿಡುತ್ತಾರೆ. ಅವರು ಕಟ್ಟಿ ಕೊಡುವ ಭ್ರಮೆಯ ಲೋಕದಲ್ಲಿ ತೇಲುತ್ತಾರೆ. ಅಂತಹ ಸಮ್ಮೋಹನಗೊಳಿಸುವ ವಾಕ್ಚಾತುರ್ಯ ನಮ್ಮ ಪ್ರಧಾನಿಗಳದ್ದು. ಇದೇ ಮೋಡಿಗೆ ಒಳಗಾಗಿ ಕಳೆದ ಲೋಕಸಭಾ ಚುನಾವಣೆಯಲ್ಲಿ ಮತದಾರರು ಅವರಿಗೆ ಭರ್ಜರಿ ಬಹುಮತ ನೀಡಿ ಪ್ರಧಾನಿಯಾಗಿ ಮಾಡಿದರು. ಅಚ್ಛೇದಿನ್ ಗಾಗಿ ಕಾದರು, ಕಾದರು ಇನ್ನೂ ಕಾಯುತ್ತಲೇ ಇದ್ದಾರೆ. " ನನಗೆ ೬೦ ತಿಂಗಳು ಸಮಯ ಕೊಡಿ " ಎಂದು ಅವರು ಚುನಾವಣಾ ಪ್ರಚಾರ ಸಂದರ್ಭದಲ್ಲೇ ಹೇಳಿದ್ದಾರೆ. ಆದ್ದರಿಂದ ಈ ಬಗ್ಗೆ ಈಗ ಚರ್ಚೆ ಬೇಡ. 
ಆದರೆ ಇಂತಹ ಮಾತಿನ ಮಲ್ಲ ಕಳೆದೆರಡು ವರ್ಷಗಳಲ್ಲಿ ಹಲವು ಬಾರಿ ' ಐನ್ ಟೈಮಿಗೆ ' ಮಾತು ಮರೆತು ' ತಮ್ಮ ದೇಶ್ ವಾಸಿಯೊನ್ಕೋ' ಕೈ ಕೊಟ್ಟಿದ್ದಾರೆ. ದೇಶದ ಜನರನ್ನು ಕಾಡಿದ ವಿಷಯಗಳ ಬಗ್ಗೆ ಅವರು ತುಟಿ ಬಿಚ್ಚಿಲ್ಲ. 
ಅಂತಹ ಮೌನಿ ಬಾಬಾ ಈಗ ಸ್ವಾತಂತ್ರ್ಯ ದಿನಾಚರಣೆಯಂದು ಮತ್ತೆ ದೇಶದ ಜನರ ಕಿವಿಗೆ ಹೂವಿಡಲು ಹೊರಟಿದ್ದಾರೆ. ಅವರಿಗೆ ಅವತ್ತು ಮಾಡುವ ಭಾಷಣಕ್ಕೆ ಜನರು ಐಡಿಯಾ ಕೊಡಬೇಕಂತೆ. ಅವರ ಭಾಷಣ ದೇಶದ ೧೨೫ ಕೋಟಿ ಜನರ ಧ್ವನಿಯಾಗಿರಬೇಕು ಎಂದು ಅವರು ಬಯಸಿದ್ದಾರೆ. ಸಂತೋಷ. ಇದು ಅವರು ಪ್ರಾಮಾಣಿಕ ಕಾಳಜಿ ಹೌದು ಎಂದಾದರೆ. 
ದೇಶದ ಬಹುತೇಕರನ್ನು ಕಾಡುತ್ತಿರುವ ಹತ್ತು ಹಲವು ವಿಷಯಗಳ ಬಗ್ಗೆ ಅವರ ಅಭಿಪ್ರಾಯ, ವಿಚಾರಗಳನ್ನು ಕೇಳಲು ಎಲ್ಲರೂ ಇಲ್ಲಿ ಕಾತರರಾಗಿದ್ದಾರೆ. ದೇಶದಲ್ಲಿ ದಲಿತರ ವಿರುದ್ಧ ನಡೆಯುತ್ತಿರುವ ಸತತ ದೌರ್ಜನ್ಯಗಳು, ಅವರ ಮೇಲಿನ ಹಲ್ಲೆ , ಅವಮಾನದ ಪ್ರಕರಣಗಳು, ಅವರ ಪರಿವಾರದ ಗೋ ರಕ್ಷಕರು ದೇಶಾದ್ಯಂತ ನಡೆಸುತ್ತಿರುವ ಗೂಂಡಾಗಿರಿ, ಆಕಾಶಕ್ಕೆ ಹಾರಿರುವ ಬೇಳೆಯ ಬೆಲೆಗಳು, ಆದರೆ ಪಾತಾಳ ಸೇರಿರುವ ರೈತನ ಬೆಲೆ, ಹೆಚ್ಚುತ್ತಿರುವ ರೈತನ ಆತ್ಮಹತ್ಯೆಗಳು, ಕಳೆದು ಹೋಗುತ್ತಿರುವ ಸಹಿಷ್ಣುತೆಯ ವಾತಾವರಣ, ಕಾಶ್ಮೀರದಲ್ಲಿ ತಮ್ಮದೇ ಪ್ರಜೆಗಳನ್ನು ಕೊಂದು , ಕುರುಡು ಮಾಡುತ್ತಿರುವ ಸಶಸ್ತ್ರ ಪಡೆಗಳು, ಅವರ ಸಂಪುಟದ ಸದಸ್ಯರು, ಸಂಸದರು ನೀಡುತ್ತಿರುವ ಪ್ರಚೋದನಕಾರಿ, ಬೇಜವಾಬ್ದಾರಿ ಹೇಳಿಕೆಗಳು, ಅವುಗಳಿಂದ ಉಂಟಾಗುತ್ತಿರುವ ಅವಾಂತರಗಳು, ಗುಜರಾತ್ ನಲ್ಲಿ ಪಟೇಲರು , ಹರ್ಯಾಣದಲ್ಲಿ ಜಾಟರು ನಡೆಸುತ್ತಿರುವ ಗೂಂಡಾಗಿರಿಗೆ ಅಲ್ಲಿಂದ ಸರಕಾರಗಳ ಮೌನ ಸಮ್ಮತಿ ಇವೆಲ್ಲವುಗಳ ಬಗ್ಗೆ ನಮ್ಮ ಮಾನ್ಯ ಪ್ರಧಾನಿಯವರು ಕೆಂಪು ಕೋಟೆಯ ಮೇಲೆ ನಿಂತು ದೇಶವನ್ನು ಉದ್ದೇಶಿಸಿ ಮಾತನಾಡಬೇಕು ಎಂದು ಭಾರತೀಯರು ಕಾಯುತ್ತಿದ್ದಾರೆ.
ಈ ದೇಶದಲ್ಲಿ ಅಸಹಿಷ್ಣುತೆಗೆ ಅವಕಾಶವಿಲ್ಲ, ಇಲ್ಲಿ ದನದ ಹೆಸರಲ್ಲಿ ಮನುಷ್ಯರನ್ನು ಕೊಲ್ಲಲ್ಲು ಬಿಡುವುದಿಲ್ಲ, ಇಲ್ಲಿ ಅಂಬಾನಿಗೆ ಮಾತ್ರವಲ್ಲ ಸಾಮಾನ್ಯನಿಗೂ ರಕ್ಷಣೆ ನೀಡುತ್ತೇನೆ, ಎಲ್ಲರೂ ಹೊಟ್ಟೆ ತುಂಬಾ ಉಂಡು, ಮಲಗುವಂತೆ ನೋಡಿಕೊಳ್ಳುತ್ತೇನೆ,  ತಪ್ಪು ಮಾಡಿದವರಿಗೆ ಶಿಕ್ಷೆಯಾಗುತ್ತದೆ, ದಲಿತರನ್ನು ಮುಟ್ಟಿದರೆ ಸಹಿಸೆನು ಎಂದು ಅವರು ಘರ್ಜಿಸಲಿ. 
ಮಾನ್ಯ ಪ್ರಧಾನಿಗಳೇ, ಹೇಳಿ ಈ ಬಗ್ಗೆ ಮಾತನಾಡುತ್ತೀರಿ ತಾನೇ ? 
 

Writer - ರುದ್ರಪ್ಪ ಎಂ.

contributor

Editor - ರುದ್ರಪ್ಪ ಎಂ.

contributor

Similar News