ಕುಲಗೆಟ್ಟ ಹೆದ್ದಾರಿ
Update: 2016-08-03 23:22 IST
ಮಾನ್ಯರೆ,
ರಾಷ್ಟ್ರೀಯ ಹೆದ್ದಾರಿ 66ರ ಚತುಷ್ಪಥ ಕಾಮಗಾರಿ ಪಡುಬಿದ್ರೆಯಲ್ಲಿ ಇನ್ನೂ ಆರಂಭವಾಗುವ ಲಕ್ಷಣಗಳು ಕಾಣುತ್ತಿಲ್ಲ. ಹೆದ್ದಾರಿ ಬದಿಯಲ್ಲಿರುವ ಕೆಲವು ಮರಗಳನ್ನು ಕಡಿದದ್ದು ಬಿಟ್ಟರೆ ಬೇರೆ ಯಾವುದೇ ಕಾಮಗಾರಿ ನಡೆಯುವಂತೆ ತೋರುತ್ತಿಲ್ಲ.
ಪಡುಬಿದ್ರೆ ಸುತ್ತಮುತ್ತದ ಹಲವು ಕಿ.ಮೀ. ಹೆದ್ದಾರಿ ಹೊಂಡಗುಂಡಿಗಳಿಂದ ತುಂಬಿ ಕುಲಗೆಟ್ಟುಹೋಗಿವೆ. ಚತುಷ್ಪಥದ ನೆಪದಲ್ಲಿ ರಿಪೇರಿಯೂ ನಡೆಯುತ್ತಿಲ್ಲ.
ಹಲವು ವರ್ಷಗಳಿಂದ ಜಿದ್ದಿಗೆ ಬಿದ್ದು ನನೆಗುದಿಗೆ ಬಿದ್ದಿರುವ ಇಲ್ಲಿನ ಹೆದ್ದಾರಿ ಕಾಮಗಾರಿ ಸದ್ಯಕ್ಕೆ ದಡಸೇರುವ ಲಕ್ಷಣ ಕಾಣುತ್ತಿಲ್ಲವಾದುದರಿಂದ ಸಂಬಂಧಿತ ಜನಪ್ರತಿನಿಧಿಗಳು ಈಗ ಇರುವ ಹೆದ್ದಾರಿಗೆ ಡಾಮರೀಕರಣವನ್ನಾದರೂ ಮಾಡಿದರೆ ದಿನನಿತ್ಯ ಈ ಹೆದ್ದಾರಿಯಲ್ಲಿ ಪ್ರಯಾಣಿಸುವ ಬಳಕೆದಾರರು ನಿಟ್ಟುಸಿರು ಬಿಟ್ಟಾರು. ಕೂಡಲೇ ಸಂಬಂಧಿತರು ಮನಮಾಡುವರೇ?