ಮಂಗಳೂರಿನಿಂದ ಮದೀನಾಕ್ಕೆ ಹಾರಿದ ಹಜ್ ಯಾತ್ರಿಕರ ಮೊದಲ ವಿಮಾನ

Update: 2016-08-04 12:17 GMT

ಮಂಗಳೂರು, ಆ.4: ಹಜ್ ಯಾತ್ರಾರ್ಥಿಗಳನ್ನು ಒಳಗೊಂಡ ಮಂಗಳೂರಿನ ಪ್ರಥಮ ವಿಮಾನವು ಇಂದು ಪೂರ್ವಾಹ್ನ 11:05ಕ್ಕೆ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಮದೀನಾಕ್ಕೆ ಪ್ರಯಾಣ ಬೆಳೆಸಿತು.

ಸುಮಾರು 152 ಮಂದಿ ಹಜ್ ಯಾತ್ರಿಕರು ಪ್ರಥಮ ವಿಮಾನಯಾನದಲ್ಲಿ ಮದೀನಾಕ್ಕೆ ಪ್ರಯಾಣ ಬೆಳೆಸಿದ್ದಾರೆ.

ಬುಧವಾರ ರಾತ್ರಿ ಮತ್ತು ಗುರುವಾರ ಮುಂಜಾನೆಯಿಂದಲೇ ಬಜ್ಪೆಯ ಹಳೆ ಏರ್‌ಪೋರ್ಟ್‌ಗೆ ಬಂದು ತಲುಪಿದ್ದ ಯಾತ್ರಿಕರನ್ನು ವಿಶೇಷ ಬಸ್ ಮೂಲಕ ಹೊಸ ಏರ್ ಪೋರ್ಟ್‌ಗೆ ಕರೆತರಲಾಯಿತು. ಬೆಳಗ್ಗೆ 8 ಗಂಟೆಯ ಬಳಿಕ ಹೊರಟ ಸುಮಾರು 152 ಮಂದಿ ಹಜ್ ಯಾತ್ರಿಕರು ವಿಶೇಷ ಬಸ್ ಸೌಲಭ್ಯದ ಮೂಲಕ 9:15ಕ್ಕೆ ಏರ್‌ಪೋರ್ಟ್‌ನ್ನು ತಲುಪಿದರು.

ನಗರಾಭಿವೃದ್ಧಿ ಮತ್ತು ಹಜ್ ಸಚಿವ ಆರ್. ರೋಶನ್ ಬೇಗ್ ಬೆಳಗ್ಗೆ 9:30ಕ್ಕೆ ಮಂಗಳೂರಿನ ಹೊಸ ಏರ್‌ಪೋರ್ಟ್‌ಗೆ ಆಗಮಿಸಿ, ಹಜ್ ಯಾತ್ರಿಕರಿಗೆ ಶುಭಕೋರಿದರು.

ಈ ಸಂದರ್ಭ ಶಾಸಕರಾದ ಮೊಯ್ದೀನ್ ಬಾವ, ಜೆ.ಆರ್. ಲೋಬೊ, ದ.ಕ. ಜಿಲ್ಲಾ ಹಜ್ ನಿರ್ವಹಣಾ ಸಮಿತಿಯ ಅಧ್ಯಕ್ಷ ವೈ. ಮುಹಮ್ಮದ್ ಕುಂಞಿ, ದ.ಕ. ಜಿಲ್ಲಾ ವಕ್ಫ್ ಸಲಹಾ ಸಮಿತಿ ಅಧ್ಯಕ್ಷ ಎಸ್.ಎಂ. ರಶೀದ್ ಹಾಜಿ, ಉಡುಪಿ ಜಿಲ್ಲಾ ವಕ್ಫ್ ಸಲಹಾ ಸಮಿತಿ ಅಧ್ಯಕ್ಷ ಯಹ್ಯಾ ನಕ್ವಾ ಮಲ್ಪೆ, ಕಾಂಗ್ರೆಸ್ ಮುಖಂಡ ಟಿ.ಕೆ. ಸುಧೀರ್ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News