ನೂತನ ಶಿಕ್ಷಣ ನೀತಿಗೆ ಜ. ಶಹಾರ ಕೆಲವು ಸಲಹೆಗಳು
2016ರ ನೂತನ ಶಿಕ್ಷಣ ನೀತಿಯಲ್ಲಿ ಪ್ರಸ್ತಾಪಿಸಲಾದ ಅಂಶಗಳು, ಶಿಕ್ಷಣವೇತ್ತರು ಸೇರಿದಂತೆ ಸಂಬಂಧಪಟ್ಟ ಹಲವರ ಗಮನವನ್ನು ಸೆಳೆದಿದೆ. ಈ ನೀತಿಯನ್ನು ವಿಸ್ತೃತವಾಗಿ ಅವಲೋಕಿಸಿದಾಗ, ಅದು ಹೊಸ ಬಾಟಲಿಯಲ್ಲಿ ಹಳೆ ಔಷಧಿಯೆಂದು ಭಾಸವಾಗುತ್ತದೆ. ಒಟ್ಟಾರೆಯಾಗಿ ಇದು ಶಿಕ್ಷಣದಲ್ಲಿ ಆರೆಸ್ಸೆಸ್‌ನ ಸಿದ್ಧಾಂತಗಳ ಹೇರುವಿಕೆಯ ಸಮಸ್ಯೆಗೆ ಸ್ಪಂದಿಸುವಲ್ಲಿ ವಿಫಲವಾಗಿದೆ. ನೂತನ ಶಿಕ್ಷಣ ನೀತಿಯ ಕರಡು ಸಮಿತಿಯು ಮೂವರು ಉನ್ನತ ಅಧಿಕಾರಿಗಳು, ಎನ್‌ಸಿಇಆರ್‌ಟಿಯ ಮಾಜಿ ವರಿಷ್ಠ ಪ್ರೊ.ಜೆ.ಎಸ್.ರಜಪೂತ್ ಅವರನ್ನು ಒಳಗೊಂಡಿತ್ತು. ನಮ್ಮ ದೇಶದಲ್ಲಿ ಓರ್ವ ಒಳ್ಳೆಯ ಸರಕಾರಿ ಅಧಿಕಾರಿಯಾಗಲು ಗುಲಾಮಿತನವು ಅತ್ಯಗತ್ಯವಾಗಿದೆಯೇ ಹೊರತು ಅರ್ಹತೆ ಮುಖ್ಯವಲ್ಲವಾದುದರಿಂದ ಮತ್ತು ಸಮಿತಿಯಲ್ಲಿರುವ ಶಿಕ್ಷಣತಜ್ಞರೆಲ್ಲರೂ ಕಟ್ಟಾ ಬಲಪಂಥೀಯರಾಗಿರುವುದರಿಂದ ಈ ನೂತನ ಶಿಕ್ಷಣ ನೀತಿಯಲ್ಲಿ ಯಾವುದೇ ಹೊಸತನವನ್ನು ನಿರೀಕ್ಷಿಸಲು ಸಾಧ್ಯವಿಲ್ಲ.
ಮಾಹಿತಿ ಹಾಗೂ ಸಂವಹನ ತಂತ್ರಜ್ಞಾನವನ್ನು ಶಿಕ್ಷಣ ಕ್ಷೇತ್ರದಲ್ಲಿ ಸಂಪೂರ್ಣವಾಗಿ ಬಳಸಿಕೊಳ್ಳಬೇಕೆಂದು ನೂತನ ಶಿಕ್ಷಣ ನೀತಿಯು ಪ್ರತಿಪಾದಿಸಿದೆ. ಉನ್ನತ ಶಿಕ್ಷಣ ಕ್ಷೇತ್ರದಲ್ಲಿ ಲಿಂಗ ಅಸಮಾನತೆ ಹಾಗೂ ಪರಿಶಿಷ್ಟ ವರ್ಗದ ವಿದ್ಯಾರ್ಥಿಗಳ ಕಡಿಮೆ ಪ್ರಮಾಣದಲ್ಲಿರುವ ಸಮಸ್ಯೆಯನ್ನು ಬಗೆಹರಿಸಲು ಇದು ಹೆಚ್ಚಿನ ಒತ್ತು ನೀಡುತ್ತದೆ.
ಸಾರ್ವಜನಿಕ ಹಾಗೂ ಖಾಸಗಿ ರಂಗದ ಪಾಲುದಾರಿಕೆಯ ಮೂಲಕ ಸಮ್ಮಿಶ್ರ ಮಾದರಿಯಡಿ ಶೈಕ್ಷಣಿಕ ಅರ್ಥಿಕ ನಿಧಿ ಸಂಗ್ರಹದ ಅಗತ್ಯವನ್ನು ಕೂಡಾ ಈ ನೀತಿಯಲ್ಲಿ ಪುನರುಚ್ಚರಿಸಲಾಗಿದೆ. ನಮ್ಮ ಖಾಸಗಿ ಶಿಕ್ಷಣ ವಲಯವು ಇನ್ನೂ ಶೈಶವಾಸ್ಥೆಯಲ್ಲಿದೆ ಹಾಗೂ ಸಮಾಜಸೇವೆಯೆಂಬುದು ಕೇವಲ ಬಾಯ್ಮೆತಿನ ಬೊಗಳೆಯಾಗಿದೆಯೆಂಬುದನ್ನು ಸರಕಾರವು ಮನಗಂಡಿದೆ. ತೀವ್ರ ಪೈಪೋಟಿಯೊಂದಿಗೆ ನಡೆಯುತ್ತಿರುವ ವಾಣಿಜ್ಯೀಕರಣದಿಂದಾಗಿ ಖಾಸಗಿ ಶಿಕ್ಷಣಕ್ಷೇತ್ರದ ಗುಣಮಟ್ಟವು ಕುಸಿಯುತ್ತಾ ಬಂದಿದೆ. ಈತನಕ ಆಡಳಿತ ನಡೆಸಿರುವ ಸರಕಾರಗಳು ಶಿಕ್ಷಣ ಕ್ಷೇತ್ರದಲ್ಲಿ ಖಾಸಗಿ ವಲಯದ ಪಾತ್ರವನ್ನು ವಿಸ್ತರಿಸಲು ಮನಸ್ಸು ಮಾಡಿಲ್ಲ. ಇದೇ ವೇಳೆ ಅದು ತಾನು ನಿರ್ವಹಿಸುತ್ತಿರುವ ಶಿಕ್ಷಣ ಸಂಸ್ಥೆಗಳನ್ನು ಮುಚ್ಚಲಾರಂಭಿಸಿದೆ. ಶಿಕ್ಷಣ ಕ್ಷೇತ್ರದ ನಿರ್ಲಕ್ಷಕ್ಕಾಗಿ ರಾಜ್ಯ ಸರಕಾರಗಳು ದಂಡನೆಗೆ ಅರ್ಹವಾಗಿವೆ. ಆದಾಗ್ಯೂ ನೂತನ ನೀತಿಯು ಶಿಕ್ಷಣ ವಲಯಕ್ಕೆ ಒಟ್ಟು ಆಂತರಿಕ ಉತ್ಪನ್ನ (ಜಿಡಿಪಿ)ದ ಶೇ.10ಕ್ಕೂ ಅಧಿಕ ಅನುದಾನವನ್ನು ಶಿಫಾರಸು ಮಾಡುವ ಬದಲು ಕೇವಲ ಶೇ.6ರ ಜಿಡಿಪಿ ಗುರಿಯನ್ನು ಮುಂದುವರಿಸಿದೆ.
ಹಿಂದಿನ ನೀತಿ ನಿರೂಪಕರು ಕೂಡಾ 1986 ಹಾಗೂ 1992ರಲ್ಲಿ ಶಿಕ್ಷಣಕ್ಕೆ ಜಿಡಿಪಿ ಶೇ. 6ರಷ್ಟು ಅನುದಾನ ನೀಡಬೇಕೆಂದು ಶಿಫಾರಸು ಮಾಡಿದ್ದರು. ಆದರೆ ಸರಕಾರವು ಶೇ.3.5ರ ಗಡಿಯನ್ನು ದಾಟಲು ವಿಫಲವಾಗಿದೆ. ಅಲಿಗಢ ಮುಸ್ಲಿಂ ವಿವಿಯ ಉಪಕುಲಪತಿ ಲೆ.ಜ. ಝಮೀರುದ್ದೀನ್ ಶಹಾ ಅವರು ಅಮರ್‌ಕಾಂತಕ್‌ನಲ್ಲಿ ಇತ್ತೀಚೆಗೆ ನಡೆದ 2016 ರಾಷ್ಟೀಯ ಶಿಕ್ಷಣ ನೀತಿ ಕುರಿತ ವಿಚಾರ ಸಂಕಿರಣದಲ್ಲಿ ಮಾತನಾಡುತ್ತಾ, ಶಿಕ್ಷಣರಂಗಕ್ಕೆ ಜಿಡಿಪಿಯ ಶೇ.10ರಷ್ಟು ಅನುದಾನವನ್ನು ನೀಡಬೇಕೆಂದು ಸಲಹೆ ನೀಡಿರುವುದು ಸರಿಯಾಗಿದೆ.
ಶಿಕ್ಷಣರಂಗದಲ್ಲಿ ಗುಪ್ತವಾಗಿರುವ ಕೇಸರಿ ಅಜೆಂಡಾವನ್ನು ತನ್ನ ಭಾಷಣದಲ್ಲಿ ಬಯಲಿಗೆಳೆದುದಕ್ಕಾಗಿ ಜನರಲ್ ಶಹಾ ಅವರನ್ನು ನಾನು ಅಭಿನಂದಿಸಬಯಸುತ್ತೇನೆ. ಓರ್ವ ನಿರ್ಭೀತ ಮುತ್ಸದ್ಧಿ ಮಾತ್ರವೇ ಈ ರೀತಿ ಮಾಡಬಹುದಾಗಿದೆ. ಆದರೆ ಉಪಕುಲಪತಿಯವರಿಂದಾಗಲಿ ಅಥವಾ ಯಾವುದೇ ರೀತಿಯ ಸರಕಾರಿ ಉದ್ಯೋಗಿಯಿಂದ ಇಂತಹದ್ದನ್ನು ನಿರೀಕ್ಷಿಸಲು ಖಂಡಿತವಾಗಿಯೂ ಸಾಧ್ಯವಿಲ್ಲ. ಅವರು ಈ ನಿಟ್ಟಿನಲ್ಲಿ ನೂತನ ಶಿಕ್ಷಣ ನೀತಿಯಲ್ಲಿ ಮಾಡಿರುವ ಶಿಫಾರಸುಗಳ ಕೆಲವು ಪ್ರಮುಖ ಅಂಶಗಳನ್ನು ಹೀಗಿವೆ.
ರಾಷ್ಟ್ರೀಯವಾದವನ್ನು ನಾವು ದೇಶಭಕ್ತಿಯೊಂದಿಗೆ ಸಮೀಕರಿಸಲು ಸಾಧ್ಯವಿಲ್ಲ. ಪ್ರಜಾಪ್ರಭುತ್ವವಾದಿ ದೇಶದ ಪೌರರಿಗೆ ದೇಶಭಕ್ತಿಯು ಅತ್ಯಗತ್ಯವಾಗಿದೆ. ಆದರೆ ತೀವ್ರವಾದಿ ರಾಷ್ಟ್ರೀಯತೆಯನ್ನು ಅತ್ಯಂತ ಎಚ್ಚರಿಕೆಯಿಂದ ಮಟ್ಟಹಾಕಬೇಕಾಗಿದೆ.
2016ರ ನೂತನ ಶಿಕ್ಷಣ ನೀತಿಯು ನಮ್ಮ ಶಿಕ್ಷಣ ವ್ಯವಸ್ಥೆಯ ಮೇಲೆ ವಸಾಹತುಶಾಹಿ ಜ್ಞಾನದ ದಾಳಿಯ ಮೇಲಿನ ಪ್ರತ್ಯಾಕ್ರಮಣವಾಗಿದೆ.
ಮಾಜಿ ವಸಾಹತುಶಾಹಿ ಶಕ್ತಿಗಳು ದೇಶವನ್ನು ಸೂರೆ ಹೊಡೆದು ನಿರ್ಗಮಿಸಿದರು. ಅವರಿಗಿಂತಲೂ ಮೊದಲು ಭಾರತಕ್ಕೆ ಬಂದು ನೆಲೆಕಂಡುಕೊಂಡವರು ದೇಶವನ್ನು ತಮ್ಮ ಶಾಶ್ವತ ಮನೆಯೆಂದೇ ಅಂಗೀಕರಿಸಿದರು. 2016ರ ನೂತನ ಶಿಕ್ಷಣ ನೀತಿ (ಎನ್‌ಇಪಿ)ಯು ಬಹುಧಾರ್ಮಿಕ, ಬಹುಜನಾಂಗೀಯ, ಬಹುಭಾಷಿಕ, ಬಹುಸಾಂಸ್ಕೃತಿಕ ಚೌಕಟ್ಟನ್ನು ಒಳಗೊಂಡಿರಬೇಕಾದ ಅಗತ್ಯವಿದೆ.
ಭಾರತದ ಭಾಷಾ ಸಂಪತ್ತನ್ನು ಸಂರಕ್ಷಿಸುವ ಗುರಿಯನ್ನು ಹೊಂದಿರುವ ಭಾರತೀಯ ಭಾಷೆಗಳ ಕೇಂದ್ರೀಯ ಸಂಸ್ಥೆಯಡಿ ಮಾನವಸಂಪನ್ಮೂಲಾಭಿವೃದ್ಧಿ ಸಚಿವಾಲಯವು ಆರಂಭಿಸಿರುವ ಮುಂಚೂಣಿಯ ಕಾರ್ಯಕ್ರಮ ಎಸ್‌ಪಿಪಿಇಎಲ್ (ಅಳಿವಿನಂಚಿನಲ್ಲಿರುವ ಭಾಷೆಗಳ ಪಾಲನೆ ಹಾಗೂ ಸಂರಕ್ಷಣೆ)ನ್ನು ಕೂಡಾ ನೂತನ ಶಿಕ್ಷಣ ನೀತಿಯಲ್ಲಿ ಸಮ್ಮಿಳಿತಗೊಳಿಸಬೇಕಾಗಿದೆ.
ಮಾಹಿತಿ ಹಾಗೂ ಸಂವಹನ ತಂತ್ರಜ್ಞಾನವನ್ನು ಆರನೆಯ ತರಗತಿಯಿಂದ ಪಠ್ಯವಿಷಯವಾಗಿ ಅಳವಡಿಸಬೇಕೆಂಬ ಪ್ರಸ್ತಾಪವನ್ನು ಮರುಪರಿಶೀಲಿಸಬೇಕಾದ ಅಗತ್ಯವಿದೆ. ಜನರಲ್ ಶಹಾ ಅವರು, ಈ ಪಠ್ಯ ವಿಷಯವನ್ನು ಅದಕ್ಕಿಂತಲೂ ಮುಂಚಿತವಾಗಿಯೇ ಕಲಿಸಬೇಕೆಂದು ಪ್ರಸ್ತಾಪಿಸಿದ್ದಾರೆ. ಉದಾಹರಣೆಗೆ, ಭಾಷೆಯೊಂದನ್ನು ಹತ್ತು ವರ್ಷ ವಯಸ್ಸಿನ ವಿದ್ಯಾರ್ಥಿಗೆ ಕಲಿಸುವುದಕ್ಕಿಂತ ಮೂರನೆ ವರ್ಷದ ಮಗುವಿಗೆ ಕಲಿಸುವುದು ಹೆಚ್ಚು ಸುಲಭವಾದುದಾಗಿದೆ.
ಸಹಾಯಕ ಪ್ರೊಫೆಸರ್ ಹುದ್ದೆಗೆ ಆರಂಭಿಕ ನೇಮಕಾತಿಯ ಮಟ್ಟದಲ್ಲಿ ಎರಡು ಹಂತಗಳ ವೌಲ್ಯಮಾಪನ ವ್ಯವಸ್ಥೆಯನ್ನು ಜಾರಿಗೊಳಿ ಸಬೇಕೆಂದು ಅವರು ತನ್ನ ಭಾಷಣದಲ್ಲಿ ಸಲಹೆ ನೀಡಿದ್ದಾರೆ. ಮೊದಲನೆ ಹಂತದ ವೌಲ್ಯಮಾಪನವು ಇತರ ಬೋಧಕವರ್ಗದ ಉಪಸ್ಥಿತಿಯಲ್ಲಿ ಉಪನ್ಯಾಸಕನು ತರಗತಿಯ ಕೊಠಡಿಯಲ್ಲಿ ತೋರಿಸುವ ನಿರ್ವಹಣೆಯನ್ನು ಆಧರಿಸಿರುತ್ತದೆ. ಎರಡನೆ ಹಂತದ ವೌಲ್ಯಮಾಪನವನ್ನು ಉಪಕುಲಪತಿಯವರ ಅಧ್ಯಕ್ಷತೆಯ ಸಾಮಾನ್ಯ ಆಯ್ಕೆ ಸಮಿತಿಯು ನಡೆಸಬೇಕಾಗುತ್ತದೆ.
ಅದೇ ರೀತಿ ಬೋಧಕೇತರ ಸಿಬ್ಬಂದಿಯ ನೇಮಕಾತಿಯನ್ನು ಕೂಡಾ ಇನ್ನೂ ಹೆಚ್ಚು ಸ್ಪರ್ಧಾತ್ಮಕವಾದ ರೀತಿಯಲ್ಲಿ ಮಾಡಬೇಕಾದ ಅಗತ್ಯವಿದೆ. ವಿಶ್ವವಿದ್ಯಾನಿಲಯಗಳ ಬೋಧಕೇತರ ಸಿಬ್ಬಂದಿಗೆ ಸೆಕ್ರಟೇರಿಯಲ್ ಪ್ರಾಕ್ಟೀಸ್, ಫೈಲ್ ನೋಟಿಂಗ್, ಕಡತ ದಾಖಲೆಗಳ ಚಲನೆ ಹಾಗೂ ನಿರ್ವಹಣೆಯ ಬಗ್ಗೆ ನಿಯತಕಾಲಿಕವಾಗಿ ತರಬೇತಿ ನೀಡಬೇಕಾಗಿದೆ.
ಶಿಕ್ಷಣ ಆಯೋಗದ ಪರಿಣಾಮವಾಗಿಯೇ ವಿಶ್ವವಿದ್ಯಾನಿಲಯಗಳ ಸ್ವಾಯತ್ತೆಯ ಮೇಲೆ ಅತಿಕ್ರಮಣವಾಗಿದೆಯೆಂಬ ಆತಂಕವನ್ನು ಜನರಲ್ ಶಹಾ ವ್ಯಕ್ತಪಡಿಸಿದ್ದಾರೆ. ಡಾಕ್ಟರೇಟ್ ಪದವಿಗಳ ಕುರಿತಾದ ಪ್ರಸಕ್ತ ಮಾನದಂಡಗಳನ್ನು ಸಹ ಜನರಲ್ ಶಹಾ ಅವರು ಟೀಕಿಸಿದ್ದು, ದೇಶವು ಜ್ಞಾನ ಸೃಷ್ಟಿಯ ಕೊರತೆಯನ್ನು ಕಾಣಲು ಇದೂ ಕಾರಣವೆಂದು ಅವರು ಅಭಿಪ್ರಾಯಿಸಿದ್ದಾರೆ. ಶ್ರೇಷ್ಠ ಪಿಎಚ್‌ಡಿ ಪ್ರಬಂಧಗಳ ಅಂತಿಮಪಟ್ಟಿಯನ್ನು ಸಿದ್ಧಪಡಿಸುವ ಕಠಿಣ ವಿಧಾನವನ್ನು ಅನುಸರಿಸುವ ಮೂಲಕ ಉತ್ತಮ ಪಿಎಚ್‌ಡಿ ಪ್ರಬಂಧಗಳಿಗೆ ಅನುದಾನವನ್ನು ಬಿಡುಗಡೆಗೊಳಿಸಬೇಕೆಂದು ಅವರು ಕರೆ ನೀಡಿದ್ದಾರೆ.
ಉನ್ನತ ಶಿಕ್ಷಣದ ಗುಣಮಟ್ಟವನ್ನು ತೀರ್ಮಾನಿಸಲು ನ್ಯಾಯಾಧಿಕರಣ ಗಳನ್ನು ಸ್ಥಾಪಿಸುವ ಪ್ರಸ್ತಾಪವನ್ನು ಕೂಡಾ ಅವರು ಸ್ವಾಗತಿಸಿದ್ದಾರೆ. ಇದರಿಂದಾಗಿ ನ್ಯಾಯಾಂಗದ ಹೊರೆಯು ಕಡಿಮೆಯಾಗಲಿದೆಯೆಂದು ಅವರ ಅನಿಸಿಕೆಯಾಗಿದೆ. ಉದಾರ ಅಂಕನೀಡಿಕೆಯ ಕಾರಣದಿಂದಾಗಿ ಕಡಿಮೆ ಪ್ರತಿಭಾವಂತ ವಿದ್ಯಾರ್ಥಿಗಳು ಅತ್ಯಧಿಕ ಅಂಕಗಳನ್ನು ಪಡೆಯುತ್ತಿದ್ದಾರೆ. ಈ ಸಮಸ್ಯೆಯನ್ನು ಶಹಾ ಅವರು ಈ ಹಿಂದೆಯೂ ಸಮಾವೇಶವೊಂದರಲ್ಲಿ ಪ್ರಸ್ತಾಪಿಸಿದ್ದರು. ಪ್ರಾಯಶಃ ಈ ವಿಷಯವನ್ನು ಉನ್ನತ ಮಟ್ಟದಲ್ಲಿ ಪ್ರಸ್ತಾಪಿಸಿರುವುದು ಇದೇ ಮೊದಲ ಸಲವಾಗಿದೆ.
2016ರ ನೂತನ ಶಿಕ್ಷಣ ನೀತಿಯ ಮುನ್ನುಡಿಯಲ್ಲಿ, ಶೈಕ್ಷಣಿಕ ವ್ಯವಸ್ಥೆಯು ಮೊತ್ತಮೊದಲು ಪುರಾತನ ಭಾರತದಲ್ಲಿಯೇ ರೂಪುಗೊಂಡಿತ್ತು ಹಾಗೂ ಅದನ್ನು ವೈದಿಕ ಶಿಕ್ಷಣವೆಂದೇ ಕರೆಯಲಾಗುತ್ತಿತ್ತೆಂದು ಹೇಳಲಾಗಿದೆ. ಆದಾಗ್ಯೂ, ನಮ್ಮ ಶಿಕ್ಷಕರು ನಮ್ಮ ಸುದೀರ್ಘ ಇತಿಹಾಸದುದ್ದಕ್ಕೂ ನಡೆದ ನಾಗರಿಕತೆಗಳ ಕೊಡುಕೊಳ್ಳುವಿಕೆಗಳ ಬಗ್ಗೆ ಹೆಚ್ಚು ತಿಳುವಳಿಕೆಯನ್ನು ಹೊಂದುವಂತೆ ಮಾಡದೇ ಹೋದಲ್ಲಿ, ನಮ್ಮ ಶಿಕ್ಷಣ ವ್ಯವಸ್ಥೆಯ ಚೌಕಟ್ಟು ವೌಲ್ಯಯುತವಾಗಿರದೆಂದು ಜನರಲ್ ಶಹಾ ಅಭಿಪ್ರಾಯಿಸಿದ್ದಾರೆ. ಭಾರತವನ್ನು ಭೂಲೋಕದ ಸ್ವರ್ಗವೆಂದು ಪರ್ಶಿಯಾದ ಖ್ಯಾತ ಕವಿ ಅಮೀರ್ ಖುಸ್ರೋ ಸ್ತುತಿಸಿರುವುದು (ಫಿರ್ದೌಸ್ ಬಾರೂ ಎ ಝಮೀನ್)ನ್ನು ಗಮನಿಸಿದಾಗ ನಾವು ಕೂಡಾ ಇತರ ಸಂಸ್ಕೃತಿಗಳು, ಪರಂಪರೆಗಳು, ಭಾಷೆಗಳು, ಧರ್ಮಗಳು ಹಾಗೂ ಸಾಹಿತ್ಯಗಳ ಬಗ್ಗೆ ತುಲನಾತ್ಮಕ ಅಧ್ಯಯನವನ್ನು ನಡೆಸುವ ಅಗತ್ಯವಿದೆಯೆಂದು ಶಹಾ ಹೇಳಿದ್ದಾರೆ.
ನೂತನ ಶಿಕ್ಷಣ ನೀತಿಯು ವ್ಯಕ್ತಿಗಳ ನಡುವೆ ಭಾವೈಕ್ಯತೆಯನ್ನು ಅಭಿವೃದ್ಧಿಪಡಿಸಲು ಮುತುವರ್ಜಿ ವಹಿಸಬೇಕೆಂದು ಅವರು ಅಭಿಪ್ರಾಯಿಸಿದ್ದಾರೆ. ವಿದ್ಯಾರ್ಥಿಗಳಿಗೆ ಹಿಂದೂ ಹಾಗೂ ಸಿಖ್ಖ್ ಧರ್ಮಗಳಿಗೆ ಸಂಬಂಧಿಸಿದ ಪುರಾಣ ಗ್ರಂಥಗಳಲ್ಲದೆ ಬೌದ್ಧ, ಜೈನ, ಇಸ್ಲಾಮ್ ಹಾಗೂ ಕ್ರೈಸ್ತ ಇತ್ಯಾದಿ ಧರ್ಮಗಳ ಗ್ರಂಥಗಳನ್ನು ಕೂಡಾ ಬೋಧಿಸಬೇಕಾಗಿದೆ. ಇದರ ಜೊತೆಗೆ ಬುಡಕಟ್ಟು ಜನಾಂಗಗಳ ಜಾನಪದ ಕಥೆಗಳನ್ನು ಕೂಡಾ ಅವರಿಗೆ ಪರಿಚಯಿಸಬೇಕಾಗಿದೆ. ಆದಾಗ್ಯೂ ದೀರ್ಘಕಾಲದಿಂದ ಪ್ರಚಲಿತದಲ್ಲಿರುವ ಆಚರಣೆಗಳನ್ನು ಪರಾಮರ್ಶಿಸದೆ ಒಪ್ಪಿಕೊಳ್ಳುವುದು, ವಿಮರ್ಶಾತ್ಮಕ ಚಿಂತನೆಯನ್ನು ಬೆಳೆಸಿಕೊಳ್ಳುವುದಕ್ಕೆ ಅಡ್ಡಿಯುಂಟು ಮಾಡುತ್ತದೆ. ವಿವಿಧ ಸಂಸ್ಕೃತಿಗಳು ಹಾಗೂ ಅವುಗಳ ಇತಿಹಾಸಗಳ ತುಲನಾತ್ಮಕ ಅಧ್ಯಯನ ಹಾಗೂ ನಮ್ಮಂತಹ ಬಹುಸಂಸ್ಕೃತಿಯ ಸಮಾನ ಅಂಶಗಳು ಹಾಗೂ ಸೌಹಾರ್ದಯುತ ಸಾಮಾಜಿಕ ಸಂರಚನೆಯ ಆವಶ್ಯಕತೆಯನ್ನು ಪ್ರತಿಪಾದಿಸುವ ವಿಷಯಗಳನ್ನು ನಮ್ಮ ಪಠ್ಯಗಳಲ್ಲಿ ಅವಳವಡಿಸಬೇಕಾಗಿದೆ.
ಹಳೆಯ ವಿಶ್ವವಿದ್ಯಾನಿಲಯಗಳು ಹಾಗೂ ಶಿಕ್ಷಣ ಸಂಸ್ಥೆಗಳ ನಿರ್ವಹಣೆಯಲ್ಲಿ ಅನುಭವಿಸುವ ನೋವನ್ನು ಬಣ್ಣಿಸಲು ಅವುಗಳ ಉಪಕುಲಪತಿಗಳಲ್ಲದೆ ಬೇರ್ಯಾರಿಂದಲೂ ಸಾಧ್ಯವಿಲ್ಲ. ಇಂತಹ ವಿಶ್ವವಿದ್ಯಾನಿಲಯಗಳ ಮೂಲಭೂತ ಸೌಕರ್ಯಗಳನ್ನು ಅಭಿವೃದ್ಧಿಪಡಿಸಲು ಪ್ರತ್ಯೇಕ ವ್ಯವಸ್ಥೆಯ ಅಗತ್ಯವಿದೆಯೆಂದು ಶಹಾ ಹೇಳುತ್ತಾರೆ. ಇಂತಹ ವಿಶ್ವವಿದ್ಯಾನಿಲಯಗಳಿಗೆ ದೊರೆಯುವ ಅನುದಾನಗಳ ದೊಡ್ಡ ಪ್ರಮಾಣವು ಸಿಬ್ಬಂದಿಯ ಪಿಂಚಣಿ ಹಾಗೂ ವೇತನಗಳ ಜೊತೆಗೆ ಈಗಾಗಲೇ ಇರುವ ಹಳೆಯ ಮೂಲಸೌಕರ್ಯಗಳ ನಿರ್ವಹಣೆಗೂ ವ್ಯಯವಾಗುತ್ತದೆ. ಹೀಗಾಗಿ ನೂತನ ಮೂಲ ಸೌಕರ್ಯಗಳ ಅಭಿವೃದ್ದಿಗೆ ಆರ್ಥಿಕ ಮುಗ್ಗಟ್ಟು ಎದುರಾಗುತ್ತದೆಯೆಂದು ಅವರು ಬೆಟ್ಟು ಮಾಡುತ್ತಾರೆ.
ರಾಷ್ಟ್ರೀಯ ಅಂದಾಜು ಹಾಗೂ ಮಾನ್ಯತಾ ಮಂಡಳಿ (ಎನ್‌ಎಎಸಿ)ಯಿಂದ ಮಾನ್ಯತೆ ಪಡೆದಿರುವ 140 ವಿಶ್ವವಿದ್ಯಾನಿಲಯಗಳ ಪೈಕಿ ಕೇವಲ ಶೇ.32ರಷ್ಟು ವಿವಿಗಳಿಗೆ ಮಾತ್ರವೇ ಎ ದರ್ಜೆ ದೊರೆತಿದೆ.
ನೂತನ ಶಿಕ್ಷಣ ನೀತಿಯು ಗೋಖಲೆ, ರಾಮ್‌ಮೋಹನ್ ರಾಯ್, ಪಂಡಿತ್ ಮದನ್ ಮೋಹನ್ ಮಾಳವೀಯ ಹಾಗೂ ಗಾಂಧೀಜಿ ಅವರನ್ನು ಭಾರತದಲ್ಲಿ ಉತ್ತಮ ಶಿಕ್ಷಣ ವ್ಯವಸ್ಥೆಯ ಏಳಿಗೆಗೆ ಶ್ರಮಿಸಿದ ಮಹನೀಯರೆಂದು ಉಲ್ಲೇಖಿಸಿದೆ. ಆದರೆ ಸರ್ ಸೈಯದ್ ಅವರನ್ನು ನಿರ್ಲಕ್ಷಿಸಿದೆ.
ಕೇಂದ್ರ ಹಾಗೂ ರಾಜ್ಯಸರಕಾರಗಳ ನಡುವೆ ಸಹಕಾರಯುತವಾದ ಫೆಡರಲ್ ಮನೋಭಾವ ಇದ್ದಲ್ಲಿ ಮಾತ್ರವೇ ತಾನು ಶಿಫಾರಸು ಮಾಡಿರುವ ಅಂಶಗಳು ಯಶಸ್ವಿಯಾಗಲು ಸಾಧ್ಯವೆಂದು 2016ರ ಶಿಕ್ಷಣ ನೀತಿಯ ವರದಿಯು ತಿಳಿಸಿದೆ. ಆದರೆ ಇಂದಿನ ರಾಜಕೀಯದಲ್ಲಿ ಕೇಂದ್ರ ಹಾಗೂ ರಾಜ್ಯಗಳ ನಡುವೆ ಸಹಮತ ಮೂಡುವುದನ್ನು ಕಲ್ಪಿಸಲೂ ಸಾಧ್ಯವಿಲ್ಲದಂತಾಗಿದೆ.