×
Ad

ಮಹಿಳಾ ಸ್ಪರ್ಧಿಗಳು ಅಧಿಕ; ಆದರೆ... ಗೆಲ್ಲುವವರು ವಿರಳ!

Update: 2016-08-04 22:49 IST

ಳೆದ ಇಪ್ಪತ್ತು ವರ್ಷಗಳ ಅವಧಿಯಲ್ಲಿ ಅಂದರೆ ಐದು ವಿಧಾನಸಭಾ ಚುನಾವಣೆ ಅವಧಿಯಲ್ಲಿ ಮಹಿಳೆಯರು ಹೆಚ್ಚು ಸುಶಿಕ್ಷಿತರಾಗಿದ್ದಾರೆ; ವೈವಿಧ್ಯಮಯ ಜನಪ್ರಿಯ ಹೋರಾಟಗಳ ಮುಂಚೂಣಿಯಲ್ಲಿ ನಿಂತಿದ್ದಾರೆ; ಮತ ಚಲಾಯಿಸಿದ್ದಾರೆ; ಕೇರಳ ವಿಧಾನಸಭಾ ಚುನಾವಣೆಯಲ್ಲಿ ಅಧಿಕ ಸಂಖ್ಯೆಯಲ್ಲಿ ಸ್ಪರ್ಧಿಸಿದ್ದಾರೆ. ಇಷ್ಟಾಗಿಯೂ ನೇರವಾಗಿ ಚುನಾಯಿತರಾದ ಮಹಿಳಾ ಶಾಸಕಿಯರ ಸಂಖ್ಯೆ ನಿಧಾನವಾಗಿ ಇಳಿಯುತ್ತಲೇ ಇದೆ ಎನ್ನುವುದು ಅಂಕಿ ಅಂಶಗಳ ವಿಶ್ಲೇಷಣೆಯಿಂದ ತಿಳಿದುಬರುತ್ತದೆ.

ಕೇರಳ ವಿಧಾನಸಭೆಯಲ್ಲಿ 1996ರಲ್ಲಿ ಶಾಸಕಿಯರ ಸಂಖ್ಯೆ ಶೇ. 10.23 ಇದ್ದುದು, 2016ರ ವೇಳೆಗೆ 6.06ಕ್ಕೆ ಕುಸಿದಿದೆ. ಇಲ್ಲಿ ಗಮನಿಸಬೇಕಾದ ವಿಚಾರವೆಂದರೆ ಮಹಿಳಾ ಅಭ್ಯರ್ಥಿಗಳ ಸಂಖ್ಯೆ ಈ ಐದು ಚುನಾವಣೆಗಳ ಅವಧಿಯಲ್ಲಿ ದುಪ್ಪಟ್ಟಾಗಿದೆ.
ಪುರುಷ ಪ್ರಾಧಾನ್ಯದ ದೇಶದಲ್ಲಿ 2016ರ ಕೇರಳ ವಿಧಾನಸಭಾ ಚುನಾವಣೆಯ ಅಂಕಿ ಅಂಶ ಮಹತ್ವದ್ದಾಗುತ್ತದೆ. 105 ಮಂದಿ ಮಹಿಳೆಯರು ಈ ಚುನಾವಣೆಯಲ್ಲಿ ಸ್ಪರ್ಧಿಸಿದ್ದರು. ಮೂರನೇ ಒಂದರಷ್ಟು ಸ್ವತಂತ್ರ ಅಭ್ಯರ್ಥಿಗಳು. 2011ರಲ್ಲಿ 83 ಮಹಿಳಾ ಅಭ್ಯರ್ಥಿಗಳು ಕಣದಲ್ಲಿದ್ದರು.
ಐದು ವರ್ಷಗಳ ಬಳಿಕ ಎಡ ಪ್ರಜಾಸತ್ತಾತ್ಮಕ ರಂಗ ಅಧಿಕಾರಕ್ಕೆ ಬಂದಿದ್ದು, 140 ಸದಸ್ಯಬಲದ ಸದನದಲ್ಲಿ ಮಹಿಳೆಯರ ಸಂಖ್ಯೆ ಕೇವಲ ಎಂಟು. ಅಂದರೆ 2011ರಲ್ಲಿ ಇದ್ದ ಶಾಸಕಿಯರ ಸಂಖ್ಯೆಗಿಂತ ಒಂದು ಮಾತ್ರ ಹೆಚ್ಚು.

ಮಹಿಳೆಯರು ಯಶಸ್ವಿಯಾಗಿಲ್ಲ ಎಂದರೆ ಮಹಿಳೆಯರು ಪ್ರಯತ್ನವನ್ನೇ ಮಾಡಿಲ್ಲ ಎಂಬ ಅರ್ಥವಲ್ಲ. ಮಹಿಳಾ ಮತದಾರರು ಮತ ಚಲಾಯಿಸಿದ ಪ್ರಮಾಣ ಅಧಿಕವಾಗಿರುವುದಕ್ಕೂ, ಮಹಿಳಾ ಅಭ್ಯರ್ಥಿಗಳು ಜಯ ಗಳಿಸುವುದಕ್ಕೂ ಯಾವ ಸಂಬಂಧವೂ ಇಲ್ಲ ಎನ್ನುವುದು ಸ್ಪಷ್ಟವಾಗುತ್ತದೆ. 2016ರ ಚುನಾವಣೆಯಲ್ಲಿ ಶೇ. 78ರಷ್ಟು ಮಹಿಳೆಯರು ಮತ ಚಲಾಯಿಸಿದ್ದರು. ಇದು 2011ರ ಚುನಾವಣೆಗಿಂತ ಶೇ. ಒಂದರಷ್ಟು ಹೆಚ್ಚು. ಈ ವರ್ಷದ ಚುನಾವಣೆಯಲ್ಲಿ ಪುರುಷರ ಮತ ಪ್ರಮಾಣ ಶೇ. 76. ಅಂಕಿ ಅಂಶಗಳಿಂದ ತಿಳಿದುಬರುವ ಸ್ಪಷ್ಟ ಅಂಶವೆಂದರೆ, ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಸ್ಪರ್ಧಿಸಿ, ಮಹಿಳೆಯರು ಅಧಿಕ ಪ್ರಮಾಣದಲ್ಲಿ ಮತ ಚಲಾಯಿಸಿದ್ದರೂ, ಮಹಿಳೆಯರು ಮತ್ತೊಬ್ಬ ಮಹಿಳೆಗೇ ಮತ ಹಾಕಿಲ್ಲ!
ಅಧಿಕ ಸಂಖ್ಯೆಯ ಶಾಸಕಿಯರು ಆಯ್ಕೆಯಾದರೂ, ಲಿಂಗ ಸಮೀಕರಣವನ್ನು ಬದಲಿಸುವಷ್ಟು ಪ್ರಮಾಣದಲ್ಲಿ ಆಗಿಲ್ಲ ಎನ್ನುವುದು ತಜ್ಞರ ಅಭಿಮತ.
‘‘ಕೇವಲ ಶಾಸಕಿಯರ ಸಂಖ್ಯೆ ಹೆಚ್ಚುವುದರಿಂದ ಮಹಿಳೆಯರ ಪಾಲ್ಗೊಳ್ಳುವಿಕೆಯಲ್ಲಿ ಗುಣಾತ್ಮಕ ಬದಲಾವಣೆಯೇನೂ ಆಗುವುದಿಲ್ಲ’’ ಎನ್ನುವುದು ಮದ್ರಾಸ್ ಐಐಟಿಯ ಮಾನವೀಯ ಶಾಸ್ತ್ರ ಮತ್ತು ಸಮಾಜ ವಿಜ್ಞಾನ ವಿಭಾಗದ ಅಭಿವೃದ್ಧಿ ಅಧ್ಯಯನ ಪ್ರಾಧ್ಯಾಪಕಿ ಬಿನಿತಾ ಥಾಂಪಿ ಅವರ ಅಭಿಪ್ರಾಯ. ಮಹಿಳಾ ರಾಜಕೀಯವನ್ನು ಉತ್ತೇಜಿಸಲು ಇದು ಸಕಾಲ. ಆಗ ಮಾತ್ರ ಪ್ರಾಯೋಗಿಕ ಲಿಂಗ ಅಸಮಾನತೆ ಸಮಸ್ಯೆಗೆ ಪರಿಹಾರ ಸಿಗುತ್ತದೆ ಎಂದು ಅವರು ಹೇಳುತ್ತಾರೆ.

ಮಹಿಳಾ ಕಾರ್ಯಸೂಚಿಯನ್ನು ವಿಸ್ತರಿಸಲು ತಳಹಂತದಿಂದ ಸಿದ್ಧತೆಗಳು ಆಗಬೇಕು. ಪಂಚಾಯತ್ ಮಟ್ಟದಲ್ಲಿ ಮಹಿಳೆಯರಿಗೆ ಮೀಸಲಾತಿ ನೀಡಬೇಕು. ಸಾಮಾನ್ಯವಾಗಿ ಮಹಿಳಾ ಕೋಟಾವನ್ನು ಕೆನೆಪದರದ ಸ್ತರದವರೇ ಕಬಳಿಸುತ್ತಾರೆ ಎಂದು ಅಭಿಪ್ರಾಯಪಡುತ್ತಾರೆ.

ಪಕ್ಷಪಾತ ಮುಂದುವರಿಕೆ
ಕೇರಳ ರಾಜಕೀಯದಲ್ಲಿ ಮಹಿಳೆಯರ ಸೀಮಿತ ಚುನಾವಣಾ ಯಶಸ್ಸು ಅವರ ವಿಮೋಚನೆಯ ಲಕ್ಷಣವಲ್ಲ. ಬದಲಾಗಿ ಅವರ ಸಾಮಾಜಿಕ ಇರುವಿಕೆಗೆ ಕಠಿಣವಾಗುತ್ತಿರುವ ಪ್ರತಿರೋಧ ಕಾರಣ. 2014ರಲ್ಲಿ ಮಹಿಳೆಯರು ರಾಜ್ಯಾದ್ಯಂತ ನಿಲ್ಪು ಸಮರಂ (ನಿಲ್ಲುವ ಪ್ರತಿಭಟನೆ) ಹಮ್ಮಿಕೊಂಡು, ಬುಡಕಟ್ಟು ಜನಾಂಗದವರಿಗೆ ಭೂಮಿಯ ಹಕ್ಕು ನೀಡುವಂತೆ ಸರಕಾರವನ್ನು ಒತ್ತಾಯಿಸಿದರು. ಸ್ಥಳೀಯ ಸಮುದಾಯದವರು ಅರಣ್ಯ ಬಳಕೆಗೆ ಅವಕಾಶ ನೀಡಬೇಕು ಮತ್ತು ಪೊಲೀಸರ ದೌರ್ಜನ್ಯ ನಿಲ್ಲಿಸಬೇಕು ಎಂದು ಒತ್ತಾಯಿಸಿದರು.
ಮಹಿಳೆಯರು 2015ರಲ್ಲಿ ‘ಪೆಂಬಿಲೈ ಒರುಮೈ’ (ಮಹಿಳಾ ಏಕತೆ) ಚಳವಳಿಯನ್ನು ಕೇರಳದ ಚಹಾ ಬೆಳೆಯುವ ಬೆಟ್ಟ ಪ್ರದೇಶವಾದ ಮುನ್ನಾರ್‌ನಲ್ಲಿ ಹಮ್ಮಿಕೊಂಡರು. ತೋಟದ ಕೆಲಸಗಾರರಿಗೆ ಹೆಚ್ಚಿನ ಸೌಲಭ್ಯ ಮತ್ತು ವೇತನ ನೀಡುವಂತೆ ಹಕ್ಕೊತ್ತಾಯ ಮಂಡಿಸಿದರು.
ಸಾರ್ವಜನಿಕ ವಲಯದಲ್ಲಿ ಮಹಿಳೆಯರು ತೋರುತ್ತಿರುವ ಧೈರ್ಯ, ರಾಜ್ಯದ ಮಹಿಳೆಯರ ಸ್ಥಿತಿ ಹಾಗೂ ವಿಮೋಚನೆಯ ಪ್ರತಿಬಿಂಬ ಎನ್ನಬಹುದು. ಕೇರಳ ಮಹಿಳೆಯರು ದೇಶದಲ್ಲೇ ಅತಿಹೆಚ್ಚು ಸುಶಿಕ್ಷಿತರು. ಕೇರಳದ ಶೇ. 92 ಮಹಿಳೆಯರು ಸಾಕ್ಷರರಾಗಿದ್ದರೆ, ರಾಷ್ಟ್ರಮಟ್ಟದಲ್ಲಿ ಶಿಕ್ಷಣ ಪಡೆದ ಮಹಿಳೆಯರು ಶೇ. 65ರಷ್ಟು. ಜತೆಗೆ ಅತಿ ಕಡಿಮೆ ಮಕ್ಕಳನ್ನು ಕೇರಳ ಮಹಿಳೆಯರು ಹೊಂದಿರುತ್ತಾರೆ. ಕೇರಳ ಮಹಿಳೆಯರು ಸರಾಸರಿ 1.7 ಮಕ್ಕಳನ್ನು ಹೊಂದಿದ್ದರೆ, ರಾಷ್ಟ್ರೀಯ ಸರಾಸರಿ 2.5. ಆದರೆ ರಾಜ್ಯದ ಕಾರ್ಮಿಕ ಬಲದಲ್ಲಿ ಮಹಿಳೆಯರ ಪಾಲ್ಗೊಳ್ಳುವಿಕೆ ಕಡಿಮೆ. ಶೇ. 18ರಷ್ಟು ಮಹಿಳೆಯರು ಮಾತ್ರ ಉದ್ಯೋಗಸ್ಥರಾಗಿದ್ದು, ರಾಷ್ಟ್ರೀಯ ಸರಾಸರಿ ಶೇಕಡ 25 ಆಗಿದೆ.

ಕೇರಳ ಚುನಾವಣೆಯಲ್ಲಿ ಸೋಲು ಅನುಭವಿಸಿದ ಕೆಲ ಪ್ರಭಾವಿ ಮಹಿಳೆಯರ ಪರಿಚಯಪತ್ರವನ್ನು ಗಮನಿಸಿ.
ಸಿ. ಕೆ. ಜಾನು ಅತ್ಯಂತ ಜನಪ್ರಿಯ ಬುಡಕಟ್ಟು ನಾಯಕಿ. ಎನ್‌ಡಿಎ ಬೆಂಬಲದೊಂದಿಗೆ ಸ್ವತಂತ್ರ ಅಭ್ಯರ್ಥಿಯಾಗಿ ಉತ್ತರ ಕೇರಳದ ವಯನಾಡ್ ಜಿಲ್ಲೆ ಸುಲ್ತಾನ್ ಬತ್ತೇರಿ ಕ್ಷೇತ್ರದಿಂದ ಕಣಕ್ಕೆ ಇಳಿದರು. ಇಲ್ಲಿ ಅತ್ಯಧಿಕ ಪ್ರಮಾಣದ ಬುಡಕಟ್ಟು ಜನಾಂಗದ ಮತದಾರರಿದ್ದಾರೆ. ಆದರೆ ಎಂಟು ಅಭ್ಯರ್ಥಿಗಳ ಪೈಕಿ ಶೇ. 16 ಮತಗಳನ್ನು ಪಡೆದ ಜಾನು ಮೂರನೆ ಸ್ಥಾನಕ್ಕೆ ತೃಪ್ತಿಪಟ್ಟುಕೊಳ್ಳಬೇಕಾಯಿತು.
ಹಿಂದಿನ ಸರಕಾರದಲ್ಲಿ ಬುಡಕಟ್ಟು ಪಂಗಡ ಕಲ್ಯಾಣ ಖಾತೆ ಸಚಿವೆಯಾಗಿದ್ದ ಪಿ.ಕೆ.ಜಯಲಕ್ಷ್ಮಿ, ಯುಡಿಎಫ್ ಅಭ್ಯರ್ಥಿಯಾಗಿ ವಯನಾಡ್ ಜಿಲ್ಲೆ ಮಾನಂತವಾಡಿ ಕ್ಷೇತ್ರದಿಂದ ಕಣಕ್ಕಿಳಿದು, ಶೇ. 42ರಷ್ಟು ಮತಗಳೊಂದಿಗೆ ದ್ವಿತೀಯ ಸ್ಥಾನಿಯಾದರು.
ಚುನಾವಣೆ ಮುಗಿದು ಕೆಲ ದಿನಗಳ ಬಳಿಕ ಪರಿಶಿಷ್ಟ ಜಾತಿಗೆ ಸೇರಿದ ಕಾನೂನು ವಿದ್ಯಾರ್ಥಿನಿಯೊಬ್ಬಳ ಮೇಲೆ ನಡೆದ ಅತ್ಯಾಚಾರ ಹಾಗೂ ಹತ್ಯೆ ಪ್ರಕರಣ ರಾಜ್ಯದಲ್ಲಿ ಮುಂದುವರಿದಿರುವ ಲಿಂಗ ಅಸಮಾನತೆ ಮತ್ತು ಮಹಿಳೆಯರ ಮೇಲಿನ ದೌರ್ಜನ್ಯಕ್ಕೆ ಸಾಕ್ಷಿ.
‘‘ಮಹಿಳಾ ಮತದಾರರಿಗೆ ಮಹಿಳಾ ಅಭ್ಯರ್ಥಿಗಳ ಬಗ್ಗೆ ವಿಶ್ವಾಸ ಇರಬೇಕು.. ಈ ವಿಶ್ವಾಸ ನಿಧಾನವಾಗಿ ಕಡಿಮೆಯಾಗುತ್ತಿದೆ’’ ಎಂದು ಜಾನು ಅಭಿಪ್ರಾಯಪಡುತ್ತಾರೆ. ಸಾಮಾನ್ಯವಾಗಿ ಮತದಾರರು, ಮಹಿಳಾ ಅಭ್ಯರ್ಥಿ ಗೆದ್ದರೆ ಭವಿಷ್ಯದಲ್ಲಿ ತಮ್ಮ ಬೇಡಿಕೆಗಳನ್ನು ಈಡೇರಿಸಬಲ್ಲರೇ ಎಂಬ ಸಂದೇಹ ಹೊಂದಿರುತ್ತಾರೆ. ಏಕೆಂದರೆ ಮಹಿಳೆಯರ ಗೃಹಕೃತ್ಯದ ಜವಾಬ್ದಾರಿಯಿಂದ ಅಷ್ಟು ಬೇಗನೆ ಕಳಚಿಕೊಳ್ಳಲು ಸಾಧ್ಯವಿಲ್ಲ. ಒಂದು ವೇಳೆ ಮಹಿಳೆಯರು ಶಾಸಕರಾಗಿ ಆಯ್ಕೆಯಾದರೂ, ಅವರ ಪತಿ ನಿರ್ಧಾರಗಳನ್ನು ತೆಗೆದುಕೊಳ್ಳುವ ನಿದರ್ಶನವೂ ಇದೆ ಎನ್ನುವುದು ಅವರ ಅಭಿಪ್ರಾಯ.
ಕೇರಳದಲ್ಲಿ ಲಿಂಗ ಸಮಸ್ಯೆ ಇದೆ. ಇದು ಕುಟುಂಬಗಳಿಗೂ ವಿಸ್ತರಿಸುತ್ತಿದೆ ಎನ್ನುವುದನ್ನು ಯಶಸ್ವಿ ಮಹಿಳಾ ರಾಜಕಾರಣಿಗಳೂ ಒಪ್ಪಿಕೊಳ್ಳುತ್ತಾರೆ.
‘‘ಪುರುಷ- ಮಹಿಳೆ ಸಂಬಂಧವನ್ನು ಪುನರ್ ಸ್ಥಾಪಿಸಬೇಕು. ಇದು ಗೃಹಕೃತ್ಯದ ಜವಾಬ್ದಾರಿಗಳನ್ನು ಹಂಚಿಕೊಳ್ಳುವಲ್ಲಿಂದ ಆರಂಭವಾಗಬೇಕು ಎನ್ನುವುದು ಆರೋಗ್ಯ ಮತ್ತು ಸಮಾಜ ಕಲ್ಯಾಣ ಖಾತೆ ಸಚಿವೆ ಕೆ.ಕೆ.ಶೈಲಜಾ ಅವರ ವಾದ. ಮಹಿಳೆಯರು ಬದಲಾವಣೆಯ ಏಜೆಂಟರಾಗಿ ಪಾತ್ರ ನಿರ್ವಹಿಸುವ ಬಗ್ಗೆ ಮರು ಚಿಂತನೆ ನಡೆಯಬೇಕಿದೆ ಎಂದು ಅವರು ಹೇಳುತ್ತಾರೆ.

ಹಿಂದಿನ ಸರಕಾರಕ್ಕೆ ಹೋಲಿಸಿದರೆ ಈ ಸರಕಾರದಲ್ಲಿ ಮಹಿಳಾ ಸಚಿವರ ಸಂಖ್ಯೆ ದ್ವಿಗುಣಗೊಂಡಿದೆ. ಹಿಂದಿನ ಸರಕಾರದಲ್ಲಿ ಪಿ.ಕೆ.ಜಯಲಕ್ಷ್ಮಿ ಏಕೈಕ ಮಹಿಳಾ ಸಚಿವೆಯಾಗಿದ್ದರೆ, ಈ ಬಾರಿ ಕೆ.ಕೆ.ಶೈಲಜಾ ಹಾಗೂ ಜೆ.ಮರ್ಸಿಕುಟ್ಟಿ ಅಮ್ಮ ಸಚಿವರಾಗಿದ್ದಾರೆ. 1957ರಲ್ಲಿ ಕೇರಳದ ಮೊದಲ ಸಚಿವ ಸಂಪುಟದಲ್ಲಿ ಐದು ಮಂದಿ ಮಹಿಳೆಯರಿದ್ದರು.

Writer - ಎಸ್. ಶ್ರೀದೇವಿ

contributor

Editor - ಎಸ್. ಶ್ರೀದೇವಿ

contributor

Similar News