×
Ad

ಒಲಿಂಪಿಕ್ಸ್ ಪದಕ ದ್ವಿಗುಣಗೊಳಿಸಲು ಸರಕಾರ ವಿಶೇಷ ಉಪಕ್ರಮ

Update: 2016-08-04 23:49 IST

 ಹೊಸದಿಲ್ಲಿ, ಆ.4: ಭಾರತ ಈ ಬಾರಿಯ ರಿಯೋ ಗೇಮ್ಸ್‌ಗೆ ಅತ್ಯಂತ ದೊಡ್ಡ ಸಂಖ್ಯೆಯಲ್ಲಿ ಅಥ್ಲೀಟ್‌ಗಳನ್ನು ಕಳುಹಿಸಿಕೊಟ್ಟಿದ್ದು, ಈ ಮೊದಲಿನ ಆವೃತ್ತಿಗಿಂತ ಹೆಚ್ಚು ಪದಕ ಗೆಲ್ಲಲಿದೆ ಎಂಬ ವಿಶ್ವಾಸವಿದೆ. ಲಂಡನ್ ಒಲಿಂಪಿಕ್ಸ್ ಬಳಿಕ ಕೇಂದ್ರ ಸರಕಾರ ಹಾಗೂ ಭಾರತದ ಕ್ರೀಡಾ ಪ್ರಾಧಿಕಾರ(ಸಾಯ್) ವಿಶೇಷ ಉಪಕ್ರಮಗಳನ್ನು ತೆಗೆದುಕೊಂಡಿದೆ. ಅವುಗಳೆಂದರೆ ....

1.ರಾಷ್ಟ್ರೀಯ ಕ್ರೀಡಾಭಿವೃದ್ದಿ ನಿಧಿಯಡಿ ಯುವಜನ ವ್ಯವಹಾರ ಹಾಗೂ ಕ್ರೀಡಾ ಇಲಾಖೆ ‘ಟಾರ್ಗೆಟ್ ಫೋರ್ ಪೋಡಿಯಂ(ಟಾಪ್) ಯೋಜನೆ ರಚಿಸಿತ್ತು. ಈ ಯೋಜನೆಗೆ 45 ಕೋಟಿ ರೂ. ಮೀಸಲಿಡಲಾಗಿದ್ದು, 100ಕ್ಕೂ ಅಧಿಕ ಅಥ್ಲೀಟ್‌ಗಳು ಈ ಯೋಜನೆ ಪ್ರಯೋಜನ ಪಡೆದಿದ್ದಾರೆ. ಪ್ರತಿ ಅಥ್ಲೀಟ್‌ಗಳಿಗೆ 30ರಿಂದ 150 ಲಕ್ಷ ರೂ. ಆರ್ಥಿಕ ನೆರವು ಮಂಜೂರು ಮಾಡಲಾಗಿದೆ.

2. ತರಬೇತಿ ಹಾಗೂ ಪಂದ್ಯಾವಳಿಗಳ ವಾರ್ಷಿಕ ಕ್ಯಾಲೆಂಡರ್ ಪ್ರಕಾರ ಅಥ್ಲೀಟ್‌ಗಳಿಗೆ ವಿದೇಶದಲ್ಲಿ ತರಬೇತಿ ನಡೆಸಲು ಉದಾರ ಆರ್ಥಿಕ ನೆರವು ನೀಡಲಾಗಿದ್ದು, ಈ ಉದ್ದೇಶಕ್ಕಾಗಿ ಕಳೆದ ಎರಡು ವರ್ಷಗಳಲ್ಲಿ ಒಟ್ಟು 180 ಕೋಟಿ ರೂ. ಬಜೆಟ್ ಮೀಸಲಿಡಲಾಗಿದೆ.

3.2012ರ ಒಲಿಂಪಿಕ್ಸ್‌ನಿಂದ ಈ ತನಕ ಸಾಯ್ ಕೇಂದ್ರಗಳಲ್ಲಿ ಹಲವಾರು ಆಧುನಿಕ ಕ್ರೀಡಾ ಸಾಧನಗಳನ್ನು ಅಳವಡಿಸಲಾಗಿದೆ. ಆಧುನಿಕ ಕ್ರೀಡಾ ವಿಜ್ಞಾನ ಸಲಕರಣೆಗಳನ್ನು ವಿವಿಧ ಕೇಂದ್ರಕ್ಕೆ ಒದಗಿಸಲಾಗಿದೆ. ಇದನ್ನು ಅಥ್ಲೀಟ್‌ಗಳು ಬಳಸಿಕೊಂಡಿದ್ದಾರೆ.

4. ರಿಯೋ ಒಲಿಂಪಿಕ್ಸ್ ತಯಾರಿಗೆ ಅಥ್ಲೀಟ್‌ಗಳ ಅಗತ್ಯಕ್ಕೆ ತಕ್ಕಂತೆ ಫಿಸಿಯೋ, ಮಸಾಜ್ ತಜ್ಞರು ಹಾಗೂ ತರಬೇತುದಾರರನ್ನು ಒದಗಿಸಲಾಗಿದೆ.

5. ವೈಯಕ್ತಿಕ ಕೋಚ್‌ಗಳು, ಸಲಹೆಗಾರರು, ತರಬೇತುದಾರರು, ಪಿಸಿಯೋ ಹಾಗೂ ಇತರ ಸಹಾಯಕ ಸಿಬ್ಬಂದಿಗಳ ನೆರವಿನಿಂದ ಹೊರಗಡೆ ಇಲ್ಲವೇ ರಾಷ್ಟ್ರೀಯ ಶಿಬಿರಗಳಲ್ಲಿ ಅಭ್ಯಾಸ ನಡೆಸಲು ಅವಕಾಶ ಕಲ್ಪಿಸಲಾಗಿದೆ.

6. ಅಥ್ಲೀಟ್‌ಗಳ ಕೋಚಿಂಗ್ ಹಾಗೂ ತರಬೇತಿಗೆ 40ಕ್ಕೂ ಅಧಿಕ ವಿದೇಶಿ ಕೋಚ್‌ಗಳು ಹಾಗೂ ಇತರ ತಜ್ಞರನ್ನು ನಿಯೋಜಿಸಲಾಗಿದೆ.

7. ಈ ಹಿಂದಿನ ಒಲಿಂಪಿಕ್ಸ್‌ನಲ್ಲಿ ಗೇಮ್ಸ್ ಆರಂಭವಾಗುವ 2-3 ದಿನದ ಮುಂಚಿತವಾಗಿ ಅಥ್ಲೀಟ್‌ಗಳನ್ನು ಕಳುಹಿಸಿಕೊಡಲಾಗುತ್ತಿತ್ತು. ಈ ಬಾರಿ 15-20 ದಿನಗಳು ಮುಂಚಿತವಾಗಿ ಅಥ್ಲೀಟ್‌ಗಳು ರಿಯೋ ತಲುಪಿದ್ದಾರೆ. ಅಲ್ಲಿನ ವಾತಾವರಣಕ್ಕೆ ಹೊಂದಿಕೊಳ್ಳಲು ಅನುವು ಮಾಡಿಕೊಡಲಾಗಿದೆ.

8. ಅಥ್ಲೀಟ್‌ಗಳ ಊಟೋಪಚಾರಕ್ಕೆ ನೀಡುವ ಹಣವನ್ನು ದಿನಕ್ಕೆ 450ರಿಂದ 650 ರೂ.ಗೆ ಹೆಚ್ಚಿಸಲಾಗಿದೆ. ಪೂರಕ ಆಹಾರದ ಶುಲ್ಕವನ್ನು ದಿನಕ್ಕೆ 300 ರಿಂದ 700 ರೂ.ಗೆ ಏರಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News