ಆ್ಯಂಡಿ ಮರ್ರೆ ಬ್ರಿಟನ್‌ನ ಧ್ವಜಧಾರಿ
ರಿಯೋ ಡಿ ಜನೈರೊ, ಆ.4: ಹಾಲಿ ಒಲಿಂಪಿಕ್ಸ್ ಹಾಗೂ ವಿಂಬಲ್ಡನ್ ಚಾಂಪಿಯನ್ ಆ್ಯಂಡಿ ಮರ್ರೆ ರಿಯೋ ಗೇಮ್ಸ್‌ನ ಉದ್ಘಾಟನಾ ಸಮಾರಂಭದಲ್ಲಿ ಬ್ರಿಟನ್ ಅಥ್ಲೀಟ್ ತಂಡದ ಧ್ವಜಧಾರಿಯಾಗಿ ಪಥ ಸಂಚಲನದಲ್ಲಿ ಭಾಗವಹಿಸಲಿದ್ದಾರೆ.
ಕಳೆದ ತಿಂಗಳು ಎರಡನೆ ಬಾರಿ ವಿಂಬಲ್ಡನ್ ಪ್ರಶಸ್ತಿ ಜಯಿಸಿರುವ, ನಾಲ್ಕು ವರ್ಷಗಳ ಹಿಂದೆ ಲಂಡನ್‌ನಲ್ಲಿ ನಡೆದ ಒಲಿಂಪಿಕ್ಸ್‌ನಲ್ಲಿ ಚಿನ್ನದ ಪದಕ ಜಯಿಸಿದ್ದ ಮರ್ರೆ ಒಲಿಂಪಿಕ್ಸ್ ಗೇಮ್ಸ್‌ನ ಉದ್ಘಾಟನಾ ಸಮಾರಂಭದಲ್ಲಿ ಬ್ರಿಟನ್ ತಂಡವನ್ನು ಮುನ್ನಡೆಸಲಿರುವ ಮೊದಲ ಟೆನಿಸ್ ಆಟಗಾರನಾಗಿದ್ದಾರೆ.
ದೇಶವನ್ನು ಒಲಿಂಪಿಕ್ಸ್ ಗೇಮ್ಸ್‌ನಲ್ಲಿ ಪ್ರತಿನಿಧಿಸುವುದು ಒಂದು ನಂಬಸಾಧ್ಯ ಅನುಭವ. ಪ್ರತಿಷ್ಠಿತ ಕ್ರೀಡಾಕೂಟದಲ್ಲಿ ಗ್ರೇಟ್ ಬ್ರಿಟನ್ ತಂಡವನ್ನು ಧ್ವಜಧಾರಿಯಾಗಿ ಮುನ್ನಡೆಸುವುದು ಮಹಾಗೌರವ. ಇದು ನನ್ನ ಪಾಲಿಗೆ ಹೆಮ್ಮೆ ತರುವ ಹಾಗೂ ಜೀವನದಲ್ಲಿ ಮರೆಯಲಾರದ ವಿಷಯವಾಗಿದೆ ಎಂದು ವಿಶ್ವದ ನಂ.2ನೆ ಆಟಗಾರ ಮರ್ರೆ ಹೇಳಿದ್ದಾರೆ.
ರಿಯೋ ಗೇಮ್ಸ್ ನನ್ನ ಮೂರನೆ ಒಲಿಂಪಿಕ್ಸ್ ಹಾಗೂ ನನಗೆ ತುಂಬಾ ವಿಶೇಷ ಸ್ಪರ್ಧೆಯಾಗಿದೆ. ಲಂಡನ್‌ನಲ್ಲಿ ಸ್ಮರಣೀಯ ಕ್ಷಣ ಎದುರಿಸಿದ್ದೆ. ರಿಯೋದಲ್ಲಿ ಪದಕ ಗೆಲ್ಲುವ ನಿಟ್ಟಿನಲ್ಲಿ 100 ಶೇ. ಗಮನ ನೀಡುವೆ ಎಂದು ಮರ್ರೆ ಹೇಳಿದ್ದಾರೆ.