'ಕಾಂಗ್ರೆಸ್ ಮುಕ್ತ ಭಾರತ' ವನ್ನು ನಾವು ಬಯಸುವುದಿಲ್ಲ
ನಾಟಕೀಯ ಯು ಟರ್ನ್ ಪ್ರದರ್ಶಿಸಿದ ಕೇಂದ್ರ ಸಚಿವ ಎಂ ವೆಂಕಯ್ಯ ನಾಯ್ಡು ಅವರು ಬಿಜೆಪಿ ಕಾಂಗ್ರೆಸ್ ಮುಕ್ತ ಭಾರತವನ್ನು ಬಯಸುವುದಿಲ್ಲ, ಬದಲಾಗಿ ಕಾಂಗ್ರೆಸನ್ನು ತಮ್ಮ ಮುಖ್ಯ ವಿಪಕ್ಷವಾಗಿ ಕಾಣಲು ಬಯಸುತ್ತಿದೆ ಎಂದಿದ್ದಾರೆ. ಉತ್ತರಾಖಂಡ ಮತ್ತು ಅರುಣಾಚಲ ಪ್ರದೇಶದ ಬೆಳವಣಿಗೆಗಳ ಕುರಿತಾದ ಚರ್ಚೆಯೊಂದರಲ್ಲಿ ಭಾಗವಹಿಸಿದ ನಾಯ್ಡು ಕಾಂಗ್ರೆಸ್ ಕೇಂದ್ರದಲ್ಲಿ ಅಧಿಕಾರದಲ್ಲಿದ್ದಾಗ ಸಂವಿಧಾನದ 356ನೇ ವಿಧಿಯನ್ನು ದುರುಪಯೋಗಪಡಿಸಿಕೊಂಡಿದೆ ಎಂದು ದೂರಿದ್ದಾರೆ. "ನಾವೆಂದು ಕಾಂಗ್ರೆಸ್ ಮುಕ್ತ ಭಾರತ ಬೇಕೆಂದು ಹೇಳಿಲ್ಲ. ಕಾಂಗ್ರೆಸ್ ನಂತಹ ಪಕ್ಷ ನಮ್ಮ ಮುಖ್ಯ ವಿಪಕ್ಷವಾಗಿದ್ದರೆ ಯಾವಾಗಲೂ ನಮಗೇ ಲಾಭವಾಗಲಿದೆ" ಎಂದು ನಾಯ್ಡು ಹೇಳಿದರು.
ಕಾಂಗ್ರೆಸ್ ನಾಯಕ ಆನಂದ ಶರ್ಮಾ ಅವರು ನರೇಂದ್ರ ಮೋದಿ ಸರ್ಕಾರ ಕಾಂಗ್ರೆಸ್ ಮುಕ್ತ ಭಾರತ ಅಭಿಯಾನಕ್ಕೆ ಹೊರಟಿದೆ ಎಂದು ಆರೋಪಿಸಿದಾಗ ನಾಯ್ಡು ಈ ಪ್ರತ್ಯುತ್ತರ ನೀಡಿದ್ದಾರೆ. "ಬಿಜೆಪಿ ಒಂದು ಉದ್ದೇಶದಿಂದ ಕೆಲಸ ಮಾಡುತ್ತಿದೆ. ಕಾಂಗ್ರೆಸ್ ಮುಕ್ತ ಅಭಿಯಾನಕ್ಕೆ ಪ್ರಯತ್ನಿಸಿದ ಕೇಂದ್ರ ಸರ್ಕಾದ ಪ್ರಯತ್ನ ಪೂರ್ಣವಾಗಿ ಬಯಲಾಗಿದೆ. ಆದರೂ ಪ್ರಧಾನಿ ಮೌನವಾಗಿದ್ದಾರೆ. 131 ವರ್ಷದ ನಮ್ಮ ಪಕ್ಷ ಸಾಕಷ್ಟು ಹೋರಾಟಗಳನ್ನು ಮಾಡಿದೆ. ಈಗಿನಂತೆ ಯಾವಾಗಲೂ ಲೋಕಸಭೆಯಲ್ಲಿ ನಮ್ಮ ಸಂಖ್ಯೆ ಕಡಿಮೆಯೇ ಇರುತ್ತದೆ ಎಂದುಕೊಳ್ಳಬೇಡಿ" ಎಂದು ಶರ್ಮಾ ಹೇಳಿದ್ದಾರೆ.
ಕೇಂದ್ರ ಸರ್ಕಾರ 356ನೇ ವಿಧಿಯನ್ನು ರಾಜ್ಯದ ಮೇಲೆ ಹೇರಿರುವುದನ್ನು ಪ್ರಶ್ನಿಸಲು ಕಾಂಗ್ರೆಸ್‌ಗೆ ಹಕ್ಕಿಲ್ಲ. ಅದು ಸ್ವತಃ ಈ ವಿಧಿಯನ್ನು ದುರುಪಯೋಗಪಡಿಸಿಕೊಂಡಿದೆ ಎಂದು ನಾಯ್ಡು ಹೇಳಿದ್ದಾರೆ.
ಕೃಪೆ: www.financialexpress.com