×
Ad

ಡೆಲ್ಟಾ ಏರ್‌ಲೈನ್ಸ್ ವಿಮಾನದಿಂದ ಮುಸ್ಲಿಮ್ ದಂಪತಿಯನ್ನು ಹೊರದಬ್ಬಿದ ಸಿಬ್ಬಂದಿ

Update: 2016-08-05 19:50 IST

ಶಿಕಾಗೊ, ಆ. 5: ಪ್ಯಾರಿಸ್‌ನಿಂದ ಅಮೆರಿಕಕ್ಕೆ ತೆರಳುತ್ತಿದ್ದ ವಿಮಾನವೊಂದರಿಂದ ತಮ್ಮನ್ನು ಹೊರದಬ್ಬಲಾಗಿದೆ ಎಂದು ಪಾಕಿಸ್ತಾನಿ-ಅಮೆರಿಕನ್ ದಂಪತಿಯೊಂದು ಹೇಳಿದೆ. ಈ ದಂಪತಿ ‘‘ಬೆವರುತ್ತಿರುವುದನ್ನು’’, ‘‘ಅಲ್ಲಾ’’ ಎಂದು ಹೇಳುತ್ತಿರುವುದನ್ನು ಹಾಗೂ ಮೊಬೈಲ್‌ನಲ್ಲಿ ಸಂದೇಶ ಕಳುಹಿಸುತ್ತಿರುವುದನ್ನು ನೋಡಿ ವಿಮಾನದ ಓರ್ವ ಸಿಬ್ಬಂದಿ ಅಸಂತುಷ್ಟಗೊಂಡ ಬಳಿಕ ಈ ಕ್ರಮ ತೆಗೆದುಕೊಳ್ಳಲಾಯಿತು ಎಂದು ಹೇಳಲಾಗಿದೆ.
ಪ್ಯಾರಿಸ್‌ನಿಂದ ಸಿನ್ಸಿನಾಟಿಗೆ ಹೋಗುತ್ತಿದ್ದ ಡೆಲ್ಟಾ ಏರ್‌ಲೈನ್ಸ್ ವಿಮಾನದಿಂದ ತಮ್ಮನ್ನು ಹೊರದಬ್ಬಿರುವುದಕ್ಕೆ ವಿಮಾನ ಸಿಬ್ಬಂದಿಯ ಇಸ್ಲಾಮ್ ಭಯ ಕಾರಣ ಎಂಬುದಾಗಿ ನಾಝಿಯಾ ಮತ್ತು ಫೈಝಲ್ ಅಲಿ ಆರೋಪಿಸಿದ್ದಾರೆ.
34 ವರ್ಷದ ನಾಝಿಯಾ ತನ್ನ ಚಪ್ಪಲಿಗಳನ್ನು ಪಾದಗಳಿಂದ ಕಳಚಿದ್ದರು, ತನ್ನ ಹೆತ್ತವರಿಗೆ ಮೊಬೈಲ್ ಸಂದೇಶವೊಂದನ್ನು ಕಳಿಸಿದ್ದರು, ಹೆಡ್‌ಫೋನ್‌ಗಳನ್ನು ಧರಿಸಿದ್ದರು ಹಾಗೂ ಪ್ಯಾರಿಸ್‌ನಿಂದ ಸಿನ್ಸಿನಾಟಿಗೆ 9 ಗಂಟೆಗಳ ಪ್ರಯಾಣಕ್ಕೆ ಸಜ್ಜಾಗುತ್ತಿದ್ದರು. ಆಗ ಡೆಲ್ಟಾ ಏರ್‌ಲೈನ್ಸ್ ಸಿಬ್ಬಂದಿಯೊಬ್ಬರು ನಾಝಿಯಾ ಮತ್ತು ಅವರ ಗಂಡ ಫೈಝಲ್ ಬಳಿ ಬಂದರು.
ಈ ಮುಸ್ಲಿಮ್ ದಂಪತಿಗೂ ತನಗೂ ಸರಿಬರುವುದಿಲ್ಲ ಎಂಬುದಾಗಿ ವಿಮಾನ ಪರಿಚಾರಿಕೆಯೊಬ್ಬರು ಪೈಲಟ್‌ಗೆ ದೂರು ನೀಡಿದ್ದರು ಎಂದು ‘ದ ಸಿನ್ಸಿನಾಟಿ ಎನ್‌ಕ್ವಯರರ್’ ವರದಿ ಮಾಡಿದೆ.
ಮಹಿಳೆ ಶಿರವಸ್ತ್ರ ಧರಿಸಿದ್ದರು ಹಾಗೂ ಫೋನ್ ಬಳಸುತ್ತಿದ್ದರು ಹಾಗೂ ಪುರುಷ ಬೆವರುತ್ತಿದರು ಎಂಬುದಾಗಿ ವಿಮಾನ ಸಿಬ್ಬಂದಿಯು ಪೈಲಟ್‌ಗೆ ಹೇಳಿದ್ದಾರೆನ್ನಲಾಗಿದೆ.
ಫೈಝಲ್ ತನ್ನ ಸೆಲ್‌ಫೋನನ್ನು ಅಡಗಿಸಿಡಲು ಯತ್ನಿಸಿದರು ಹಾಗೂ ದಂಪತಿ ‘ಅಲ್ಲಾ’ ಎಂಬ ಪದವನ್ನು ಉಚ್ಚರಿಸಿರುವುದನ್ನು ತಾನು ಕೇಳಿದೆ ಎಂಬುದಾಗಿ ಆಕೆ ಹೇಳಿದ್ದರು.
ವಿಮಾನ ನಿಲ್ದಾಣ ಸಿಬ್ಬಂದಿಯನ್ನು ಸಂಪರ್ಕಿಸಿದ ಪೈಲಟ್, ಮುಸ್ಲಿಮ್ ದಂಪತಿ ವಿಮಾನದಿಂದ ಹೊರಹೋಗದೆ ವಿಮಾನ ಚಲಾಯಿಸುವುದಿಲ್ಲ ಎಂದು ಹೇಳಿದರು ಎನ್ನಲಾಗಿದೆ.
‘‘ನಾವು ನಮ್ಮ ಆಸನಗಳಲ್ಲಿ 45 ನಿಮಿಷಗಳ ಕಾಲ ಇದ್ದೆವು’’ ಎಂದು ಕೌನ್ಸಿಲ್ ಆನ್ ಅಮೆರಿಕನ್-ಇಸ್ಲಾಮಿಕ್ ರಿಲೇಶನ್ಸ್ (ಸಿಎಐಆರ್)ನ ಸಿನ್ಸಿನಾಟಿ ಪ್ರಾದೇಶಿಕ ಕಚೇರಿಯಲ್ಲಿ ಗುರುವಾರ ನಾಝಿಯಾ ಹೇಳಿದರು.
‘‘ವಿಮಾನ ನಿಲ್ದಾಣದ ಅಧಿಕಾರಿ ಹೇಳಿದರು, ‘ನನ್ನೊಂದಿಗೆ ನೀವು ಹೊರಗೆ ಬರಬಹುದೇ? ನಾವು ನಿಮಗೆ ಕೆಲವು ಪ್ರಶ್ನೆಗಳನ್ನು ಕೇಳಲು ಬಯಸುತ್ತೇವೆ’. ಆಗ ನಾನು ಕೇಳಿದೆ, ‘ನಮ್ಮ ವಸ್ತುಗಳನ್ನು ತೆಗೆದುಕೊಂಡು ಬರಬೇಕೇ?’ ಅದಕ್ಕೆ ಆತ, ‘ಹೌದು, ನಿಮ್ಮ ಎಲ್ಲ ವಸ್ತುಗಳನ್ನು ತೆಗೆದುಕೊಂಡು ಬನ್ನಿ. ನೀವು ಈ ವಿಮಾನದಲ್ಲಿ ಹೋಗುವುದಿಲ್ಲ’ ಎಂದು ಹೇಳಿದ’’ ಎಂದು ಜುಲೈ 26ರ ಘಟನೆಯ ಬಗ್ಗೆ ನಾಝಿಯಾ ಹೇಳಿದರು.
ಫ್ರಾನ್ಸ್ ಪೊಲೀಸ್ ಅಧಿಕಾರಿಯೊಬ್ಬರು ಅವರ ಪ್ಯಾರಿಸ್ ವಾಸ್ತವ್ಯದ ಬಗ್ಗೆ ಪ್ರಶ್ನಿಸಿದರು. ಈ ದಂಪತಿ ತಮ್ಮ ಮದುವೆಯ 10ನೆ ವಾರ್ಷಿಕೋತ್ಸವದ ಸಂದರ್ಭದಲ್ಲಿ ವಿಹಾರಕ್ಕೆ ಪ್ಯಾರಿಸ್‌ಗೆ ತೆರಳಿದ್ದರು ಎಂದು ಮಾಧ್ಯಮ ವರದಿಗಳು ಹೇಳಿವೆ.
ವಿಚಾರಣೆಯ ಬಳಿಕ ಅಧಿಕಾರಿ ಈ ದಂಪತಿಗೆ ಕ್ಲೀನ್ ಚಿಟ್ ನೀಡಿದರು.
ಡೆಲ್ಟಾ ಏರ್‌ಲೈನ್ಸ್ ವಿರುದ್ಧ ಸಿಎಐಆರ್ ಅಮೆರಿಕದ ಸಾರಿಗೆ ಇಲಖೆಯಲ್ಲಿ ಧಾರ್ಮಿಕ ತಾರತಮ್ಯ ದೂರು ದಾಖಲಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News