ರಾಜ್ಯಗಳ ಶೇ.34ರಷ್ಟು ಸಚಿವರ ವಿರುದ್ಧ ಕ್ರಿಮಿನಲ್ ಪ್ರಕರಣಗಳು
ಹೊಸದಿಲ್ಲಿ,ಆ.5: ರಾಜ್ಯ ವಿಧಾನಸಭೆಗಳ ಶೇ.34ರಷ್ಟು ಸಚಿವರು ತಮ್ಮ ವಿರುದ್ಧ ಕ್ರಿಮಿನಲ್ ಪ್ರಕರಣಗಳಿವೆ ಎಂದು ಘೋಷಿಸಿದ್ದಾರೆ ಮತ್ತು ಶೇ.76ರಷ್ಟು ಸಚಿವರು ಸರಾಸರಿ 8.59 ಕೋ.ರೂ.ಗಳ ಆಸ್ತಿಯೊಂದಿಗೆ ಕೋಟ್ಯಾಧಿಪತಿಗಳಾಗಿದ್ದಾರೆ ಎಂದು ದಿಲ್ಲಿಯ ಚಿಂತನ ಚಾವಡಿ ಎಡಿಆರ್ ನಡೆಸಿರುವ ನೂತನ ಅಧ್ಯಯನವೊಂದು ತಿಳಿಸಿದೆ.
29 ರಾಜ್ಯಗಳು ಮತ್ತು ಎರಡು ಕೇಂದ್ರಾಡಳಿತ ಪ್ರದೇಶಗಳ 620 ಸಚಿವರ ಪೈಕಿ 609 ಜನರನ್ನು ವಿಶ್ಲೇಷಣೆಗೊಳಪಡಿಸಲಾಗಿತ್ತು. ಈ ಪೈಕಿ 462(ಶೇ.76) ಜನರು ಕೋಟಿಪತಿಗಳಾಗಿದ್ದಾರೆ ಎಂದು ಅದು ಹೇಳಿದೆ.
ಅತ್ಯಧಿಕ ಆಸ್ತಿಗಳನ್ನು ಹೊಂದಿರುವ ಸಚಿವರಲ್ಲಿ ಆಂಧ್ರಪ್ರದೇಶದ ಟಿಡಿಪಿಯ ಪೊಂಗುರು ನಾರಾಯಣ(496ಕೋ.ರೂ) ಮತ್ತು ಕರ್ನಾಟಕದ ಕಾಂಗ್ರೆಸ್‌ನ ಡಿ.ಕೆ.ಶಿವಕುಮಾರ(251 ಕೋ.ರೂ.) ಅವರು ಸೇರಿದ್ದಾರೆ.
609 ಸಚಿವರ ಪೈಕಿ 210(ಶೇ.34) ಜನರು ತಮ್ಮ ವಿರುದ್ಧ ಕ್ರಿಮಿನಲ್ ಪ್ರಕರಣಗಳನ್ನು ಹೊಂದಿದ್ದಾರೆ. ಇದೇ ರೀತಿ ವಿಶ್ಲೇಷಣೆಗೊಳಗಾದ 78 ಕೇಂದ್ರ ಸಚಿವರ ಪೈಕಿ 24(ಶೇ.31) ಜನರ ವಿರುದ್ಧ ಕ್ರಿಮಿನಲ್ ಪ್ರಕರಣಗಳಿವೆ ಎಂದಿರುವ ಅಧ್ಯಯನ ವರದಿಯು,ರಾಜ್ಯಗಳ 113 ಸಚಿವರು ಕೊಲೆ,ಕೊಲೆಯತ್ನ,ಅಪಹರಣ ಮತ್ತು ಮಹಿಳೆಯರ ವಿರುದ್ಧ ಅಪರಾಧಗಳಿಗೆ ಸಂಬಂಧಿಸಿದಂತೆ ಕ್ರಿಮಿನಲ್ ಪ್ರಕರಣಗಳನ್ನು ಎದುರಿಸುತ್ತಿದ್ದಾರೆ . ಕೇಂದ್ರ ಸಚಿವರ ಪೈಕಿ 14 ಜನರ ವಿರುದ್ಧ ಇಂತಹ ಗಂಭೀರ ಪ್ರಕರಣಗಳಿವೆ. ರಾಜ್ಯಗಳ ಸಚಿವರಿಗೆ ಹೋಲಿಸಿದರೆ ಕೇಂದ್ರದ ಸಚಿವರು ಸರಾಸರಿ 12.94 ಕೋ.ರೂ.ಗಳ ಆಸ್ತಿಗಳನ್ನು ಹೊಂದಿದ್ದಾರೆ ಎಂದು ತಿಳಿಸಿದೆ.