×
Ad

ಮ್ಯಾಗ್ಸೆಸೆ ಪುರಸ್ಕೃತರನ್ನು ಮೋದಿಯವರು ಅಭಿನಂದಿಸಿಲ್ಲ ಏಕೆ?

Update: 2016-08-05 22:26 IST

ದೇಶದಲ್ಲಿ ಜಾಡಮಾಲಿ ಪದ್ಧತಿ ನಿರ್ಮೂಲನೆ ಕುರಿತ ಹೋರಾಟಕ್ಕೆ ತಮ್ಮ ಜೀವನ ಮುಡಿಪಾಗಿಟ್ಟ ಸಫಾಯಿ ಕರ್ಮಚಾರಿ ಆಂದೋಲನದ ರಾಷ್ಟ್ರೀಯ ಸಂಚಾಲಕ ಬೆಜವಾಡ ವಿಲ್ಸನ್ ಒಂದೆಡೆ; ಇಂಥ ಅನಿಷ್ಟ ಪದ್ಧತಿ ಕೊನೆಗೊಳಿಸಲು ಮುಂದಾಗಿರುವ ಪ್ರಧಾನಿ ನರೇಂದ್ರ ಮೋದಿ ಇನ್ನೊಂದೆಡೆ. ದೇಶ ಹೆಮ್ಮೆಪಡುವಂಥ ಸಾಧನೆ ಮಾಡಿದವರನ್ನು ಟ್ವಿಟರ್ ಮೂಲಕ ಅಭಿನಂದಿಸುವುದರಲ್ಲಿ ಪ್ರಧಾನಿ ಮೋದಿ ಎತ್ತಿದ ಕೈ. ಆದರೆ ವಿಲ್ಸನ್ ಹಾಗೂ ಕರ್ನಾಟಕ ಸಂಗೀತದ ಖ್ಯಾತ ಕಲಾವಿದ ಟಿ.ಎಂ. ಕೃಷ್ಣ ರೆಮೊನ್ ಮ್ಯಾಗ್ಸೆಸೆ ಪ್ರಶಸ್ತಿ ಗೆದ್ದು ವಾರವಾಗುತ್ತಾ ಬಂದರೂ, ಇದನ್ನು ಹೊಗಳುವ ಯಾವ ಶಬ್ದವೂ ಪ್ರಧಾನಿ ಬಾಯಿಯಿಂದ ಬಂದಿಲ್ಲ. ಇದೊಂದು ವಿಲಕ್ಷಣ ಸನ್ನಿವೇಶ.

ಕರ್ನಾಟಕ ಸಂಗೀತ ಕ್ಷೇತ್ರದಲ್ಲಿ ಮೇಲ್ವರ್ಗದ ಏಕಸ್ವಾಮ್ಯವನ್ನು ವಿರೋಧಿಸಿದವರು ಕೃಷ್ಣ. ಪ್ರತಿಷ್ಠಿತ ಚೆನ್ನೈ ಸಂಗೀತ ಸಮ್ಮೇಳನದಲ್ಲಿ ಕಾರ್ಯಕ್ರಮ ನೀಡಲು ನಿರಾಕರಿಸಿದವರು. ಸಂಗೀತಸಭಾ ಎಲ್ಲರನ್ನೂ ಸಕ್ರಿಯವಾಗಿ ತೊಡಗಿಸಿಕೊಂಡಿಲ್ಲ ಎನ್ನುವುದನ್ನು ಪ್ರತಿಭಟಿಸುವ ಸಲುವಾಗಿ ಈ ನಿರ್ಧಾರ ಕೈಗೊಂಡರು.

ನಮ್ಮ ಸಾಮಾಜಿಕ ಪಿಡುಗುಗಳ ವಿರುದ್ಧದ ಹೋರಾಟ ಪರ್ವದಲ್ಲಿ ಈ ಪ್ರಶಸ್ತಿ ಮೈಲುಗಲ್ಲಾಗಿದ್ದರೂ, ಏಷ್ಯಾದ ಅತ್ಯಂತ ಪ್ರತಿಷ್ಠಿತ ಪ್ರಶಸ್ತಿ ಪಡೆದ ಈ ಇಬ್ಬರು ಭಾರತೀಯರ ಬಗ್ಗೆ ಸರಕಾರವಾಗಲಿ, ಪ್ರಧಾನಿ ಮೋದಿಯವವರಾಗಲಿ ಮಾತನಾಡಿಲ್ಲ.
ಇನ್ನೂ ವಿಚಿತ್ರವೆಂದರೆ, ಮೋದಿ ದಲಿತರನ್ನು ಓಲೈಸಲು ತಮ್ಮ ಬಹಳಷ್ಟು ಶ್ರಮ ಹಾಗೂ ಸಮಯ ವಿನಿಯೋಗಿಸುತ್ತಾರೆ ಹಾಗೂ ರಾಜಕೀಯವಾಗಿ ದಲಿತ ಐಕಾನ್ ಡಾ.ಬಿ.ಆರ್.ಅಂಬೇಡ್ಕರ್ ಅವರನ್ನು ಸದಾ ಹೊಗಳುತ್ತಿರುತ್ತಾರೆ. ಆದರೆ ಈಗ ದಲಿತ ವಿಲ್ಸನ್ ಹಾಗೂ ದಲಿತ ಪರ ಹೋರಾಡುವ ಕೃಷ್ಣ ಇಬ್ಬರನ್ನೂ ಪ್ರಧಾನಿ ನಿರ್ಲಕ್ಷಿಸಿದ್ದಾರೆ.
ಫಿಲಿಪ್ಪೀನ್ಸ್‌ನ ಮೂರನೆ ಅಧ್ಯಕ್ಷ ರೆಮೊನ್ ಮ್ಯಾಗ್ಸೆಸೆ ಹೆಸರಿನಲ್ಲಿ ನೀಡುವ ಈ ಪ್ರತಿಷ್ಠಿತ ಪ್ರಶಸ್ತಿ ಆರಂಭವಾದಾಗಿನಿಂದಲೂ ಭಾರತದಲ್ಲಿ ಚಿರಪರಿಚಿತ. ಸತ್ಯಜಿತ್ ರೇ, ಕಿರಣ್ ಬೇಡಿ, ಮಹಾಶ್ವೇತಾ ದೇವಿ, ಅರುಣಾ ರಾಯ್, ಅರುಣ್ ಶೌರಿ, ಎಂ.ಎಸ್.ಸ್ವಾಮಿನಾಥನ್, ಕೆ. ವಿ.ಸುಬ್ಬಣ್ಣ, ಅಣ್ಣಾ ಹಝಾರೆ, ಅರವಿಂದ ಕೇಜ್ರಿವಾಲ್ ಸೇರಿದಂತೆ ಹಲವು ಗಣ್ಯರು ಈ ಪ್ರಶಸ್ತಿ ಪುರಸ್ಕೃತರಾಗಿದ್ದಾರೆ.
ಭಾರತದ ಖ್ಯಾತ ಆಡಳಿತ ತಜ್ಞ ಸಂಜೀವ್ ಚತುರ್ವೇದಿ, 2015ರಲ್ಲಿ ಮ್ಯಾಗ್ಸೆಸೆ ಗೌರವಕ್ಕೆ ಪಾತ್ರರಾದಾಗಲೂ ಮೋದಿ ಅಭಿನಂದಿಸಲಿಲ್ಲ ಎನ್ನುವುದು ಬೇರೆ ವಿಚಾರ. ದೇಶದಲ್ಲಿ ದಶಕಗಳ ಕಾಲ ರಾಜಕೀಯ ಸಂಸ್ಥೆಗಳಿಗೆ ಸವಾಲು ಹಾಕಿ, ಭ್ರಷ್ಟಾಚಾರ ಬಯಲಿಗೆಳೆದು, ಕಟ್ಟಕಡೆಯ ಪ್ರದೇಶಕ್ಕೆ ಹಲವು ಬಾರಿ ವರ್ಗಾವಣೆ ಮಾಡಿದರೂ, ಹೆದರದೇ ತಮ್ಮ ಕಾಯಕವನ್ನು ಮುಂದುವರಿಸಿದವರು ಸಂಜೀವ್.
ಚತುರ್ವೇದಿ, ವಿಲ್ಸನ್ ಹಾಗೂ ಕೃಷ್ಣ ಅವರಲ್ಲಿ ಸಮಾನ ಅಂಶ ಎಂದರೆ ಮೂವರೂ ಮೋದಿ ಹಾಗೂ ಅವರ ಸರಕಾರದ ಟೀಕಾಕಾರರು. ಮೋದಿಯವರ ಈ ದಿವ್ಯ ಮೌನ ಇವರ ಟೀಕೆಗೆ ಒಂದು ಕಾರಣವಾಗಿದೆ ಎಂದರೆ ಮತ್ತೂ ದುರದೃಷ್ಟಕರ.

ವಿಲ್ಸನ್ ಅವರ ಸಂದೇಹದಂತೆ ಮೋದಿಯವರಿಂದ ಅಭಿನಂದನೆ ದೊರಕದಿರಲು ಮುಖ್ಯ ಕಾರಣ, ಮೋದಿಯವರ ಸ್ವಚ್ಛ ಭಾರತ ಆಂದೋಲನವನ್ನು, ಒಣ ಶೌಚಾಲಯವನ್ನು ಆಧರಿಸಿದ ಹಿನ್ನೆಲೆಯಲ್ಲಿ ತಾವು ಟೀಕಿಸಿದ್ದು. ಇಂಥ ಶೌಚಾಲಯ ಬಳಕೆ ಮಾಡುವುದರಿಂದ ಮತ್ತೆ ಇದನ್ನು ಸ್ವಚ್ಛಗೊಳಿಸಲು ಜಾಡಮಾಲಿಗಳೇ ಮುಂದಾಗಬೇಕಾಗುತ್ತದೆ. ಬಿಜೆಪಿ ಆಡಳಿತದಲ್ಲಿ ದಲಿತರ ಸ್ಥಿತಿಗತಿ ಬಗ್ಗೆಯೂ ಟೀಕಿಸಿದ್ದು ಕಾರಣ ಎನ್ನುವುದು ಅವರ ವಿಶ್ಲೇಷಣೆ. ಮೋದಿ ಈವರೆಗೂ ತಮ್ಮನ್ನು ಸಂಪರ್ಕಿಸಿಲ್ಲ ಎಂದು ವಿಲ್ಸನ್ ಹೇಳುತ್ತಾರೆ.
ಕೃಷ್ಣ ಅವರೂ ಮೋದಿಯವರನ್ನು ಬಹಿರಂಗವಾಗಿ ಟೀಕಿಸುವ ಜಾಯಮಾನದವರು. ಅವರ ಆಡಳಿತಾವಧಿಯ ಅಸಹಿಷ್ಣುತೆ ಮತ್ತು ಮುಹಮ್ಮದ್ ಅಖ್ಲಾಕ್ ಅವರ ಹತ್ಯೆ ಪ್ರಕರಣದಲ್ಲಿ ಮೋದಿಯವರ ಮೌನವನ್ನು ಕಟುವಾಗಿ ಟೀಕಿಸಿದವರು. ಪ್ರಧಾನಿಗೆ ಬರೆದ ಬಹಿರಂಗ ಪತ್ರದಲ್ಲಿ ಅವರು, ‘‘ಪ್ರಬಲ ಹಾಗೂ ಭಾವನಾತ್ಮಕ ಶಬ್ದಗಳು ನಿಮಗೆ ಸುಲಭವಾಗಿ ಬರುತ್ತವೆ. ಗೋಮಾಂಸ ಸೇವಿಸಿದ ಆರೋಪದಲ್ಲಿ ಒಬ್ಬನ ಹತ್ಯೆ ನಡೆದರೆ ಆ ಬಗ್ಗೆ ಒಂದಿಷ್ಟು ಹೇಳುವಂತೆ ನಾವೇಕೆ ಬೊಬ್ಬೆ ಹೊಡೆಯಬೇಕು’’ ಎಂದು ಹೇಳಿದ್ದರು.

ಚತುರ್ವೇದಿಯವರನ್ನು 2014ರ ಆಗಸ್ಟ್ ನಲ್ಲಿ ಹರ್ಷವರ್ಧನ್ ಅವರು ಆರೋಗ್ಯ ಸಚಿವರಾಗಿದ್ದ ಅವಧಿಯಲ್ಲಿ ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆಯ ಮುಖ್ಯ ವಿಚಕ್ಷಣಾ ಅಧಿಕಾರಿ ಹುದ್ದೆಯಿಂದ ಕಿತ್ತುಹಾಕಲಾ ಗಿತ್ತು. ಅವರು ಕೂಡಾ, ಆಡಳಿತಾತ್ಮಕ ಕೆಲಸಗಳಲ್ಲಿ ಮೋದಿ ಸರಕಾರದ ಹಸ್ತಕ್ಷೇಪವನ್ನು ಕಟುವಾಗಿ ಟೀಕಿಸಿದ್ದರಲ್ಲದೆ, ಅಧಿಕಾರಿಗಳ ತೇಜೋವಧೆಯನ್ನು ಖಂಡಿಸಿದ್ದರು.
‘‘ಮೋದಿಯವರ ಮೌನಕ್ಕೆ ನಾವು ಅವರನ್ನು ಟೀಕಿಸಿರುವುದು ಕಾರಣವಾದರೆ, ನಮಗೆ ಈ ಬಗ್ಗೆ ಅತೀವ ಬೇಸರವಿದೆ. ಅದು ಕಾರಣವಲ್ಲ ಎಂಬ ನಿರೀಕ್ಷೆ ನನ್ನದು. ಪ್ರಜಾಪ್ರಭುತ್ವದಲ್ಲಿ ಪ್ರಧಾನಿ ವಿಭಿನ್ನ ಅಭಿಪ್ರಾಯಗಳನ್ನು ಹಾಗೂ ವಿವಿಧ ಯೋಚನಾ ಪ್ರಕ್ರಿಯೆಯನ್ನು ಸ್ವಾಗತಿಸಬೇಕು. ಸರಕಾರ ವಿಭಿನ್ನ ನಿಲುವುಗಳನ್ನು ಪ್ರೋತ್ಸಾಹಿಸಬೇಕು’’ ಎಂದು ಕೃಷ್ಣ ಹೇಳುತ್ತಾರೆ.
ವಿಲ್ಸನ್, ಮೋದಿ ನೀತಿಗಳನ್ನು ಟೀಕಿಸಿರುವುದು ಮಾತ್ರವಲ್ಲದೆ, ‘‘50 ವರ್ಷ ವಯಸ್ಸಿನ ಈ ಹೋರಾಟಗಾರ, ಪದ್ಮಭೂಷಣ ಪ್ರಶಸ್ತಿಗೆ ಅವರು ಅರ್ಜಿ ಸಲ್ಲಿಸಬೇಕಿತ್ತು ಎಂಬ ಸರಕಾರದ ಸಲಹೆಯನ್ನು ಕೂಡಾ ತಳ್ಳಿಹಾಕಿದ್ದರು. ಭಾರತೀಯ ರೈಲ್ವೆ ಹಳಿಗಳನ್ನು ಸ್ವಚ್ಛಗೊಳಿಸಲು ಜಾಡಮಾಲಿಗಳನ್ನು ಬಳಸಿಕೊಳ್ಳುವುದು ನಿಲ್ಲಿಸುವವರೆಗೂ, ಭಾರತ ಸರಕಾರದಿಂದ ಯಾವ ಪ್ರಶಸ್ತಿಯನ್ನೂ ಸ್ವೀಕರಿಸುವುದಿಲ್ಲ’’ ಎಂಬ ದೃಢ ನಿಲುವನ್ನು ವಿಲ್ಸನ್ ಹೊಂದಿದ್ದಾರೆ.
ಶತಮಾನಗಳ ಕಾಲದಿಂದ ದಲಿತರ ಮೇಲೆ ಹೊರಿಸಿದ ಈ ಅಮಾನವೀಯ ಜಾಡಮಾಲಿ ಪದ್ಧತಿ ನಿರ್ಮೂಲನೆ ಮಾಡುವ ನಿಟ್ಟಿನಲ್ಲಿ ಹೋರಾಟಕ್ಕೆ ತಮ್ಮ ಜೀವನವನ್ನು ವಿಲ್ಸನ್ ಮುಡಿಪಾಗಿಟ್ಟಿದ್ದರೆ, ಈ ವಿಷಯದ ಬಗ್ಗೆ ಮೋದಿಯವರ ದೃಷ್ಟಿಕೋನ ಒಂದಷ್ಟು ಮಟ್ಟಿಗೆ ಬದಲಾಗಿದೆ. ಕಳೆದ ವರ್ಷದ ಎಪ್ರಿಲ್‌ನಲ್ಲಿ ಮೋದಿ ತಮ್ಮ ರೇಡಿಯೊ ಭಾಷಣದಲ್ಲಿ, ಜಾಡಮಾಲಿ ಪದ್ಧತಿಗೆ ಅಂತ್ಯ ಹಾಡಬೇಕು ಎಂದು ಕರೆ ನೀಡಿದ್ದರೂ, ಅವರು ಇದನ್ನು, ಕೆಲ ವರ್ಷಗಳ ಹಿಂದೆ ದಲಿತರಿಗೆ ಆಧ್ಯಾತ್ಮಿಕ ಅನುಭವ ಎಂದು ಅದನ್ನು ಭಾವಿಸಿದ್ದರು.

‘‘ನನಗೆ ಪ್ರಶಸ್ತಿ ಬಂದ ಬಗ್ಗೆ ಮೋದಿ ಅಭಿನಂದನೆ ಹೇಳದಿದ್ದರೂ ನಾನು ತಲೆ ಕೆಡಿಸಿಕೊಳ್ಳುವುದಿಲ್ಲ. ಆದರೆ, ನಾನು ಯಾವ ಕಾರಣಕ್ಕೆ ಹೋರಾಟ ಮಾಡುತ್ತಿದ್ದೇನೆಯೋ ಆ ಬಗ್ಗೆ ಸ್ಮರಿಸಿಕೊಳ್ಳುವುದು ಮೋದಿ ಹಾಗೂ ಅವರ ಸರಕಾರಕ್ಕೆ ಮಹತ್ವದ್ದು. ಏಕೆಂದರೆ ಅಂತಾರಾಷ್ಟ್ರೀಯ ಸಮುದಾಯ ಅದನ್ನು ಗುರುತಿಸಿದೆ’’ ಎಂದು ವಿಲ್ಸನ್ ಹೇಳುತ್ತಾರೆ. ‘‘ನಾನು ಯಾವ ಹೊಗಳಿಕೆಯನ್ನೂ ನಿರೀಕ್ಷಿಸುತ್ತಿಲ್ಲ. ಆದರೆ ಯಾರಿಗಾಗಿ ಈ ಪ್ರಶಸ್ತಿ ಸಂದಿದೆಯೋ ಅವರ ಧ್ವನಿಯನ್ನು ಅವರು ಕೇಳಿಸಿಕೊಳ್ಳಬೇಕು’’ ಎನ್ನುವುದು ಅವರ ಸಲಹೆ.
ದಲಿತರ ಸ್ಥಿತಿಗತಿ ಸುಧಾರಣೆ ನಿಟ್ಟಿನಲ್ಲಿ ವಿಲ್ಸನ್ ಅವರ ಅಭೂತಪೂರ್ವ ಸಾಧನೆಯನ್ನು ಕನಿಷ್ಠ ಪಕ್ಷ ಮೋದಿ, ದೇಶದ ಜತೆ ಹಂಚಿಕೊಳ್ಳಬೇಕಿತ್ತು ಎನ್ನುವುದು ಕೃಷ್ಣ ಅವರ ಸ್ಪಷ್ಟ ಅಭಿಪ್ರಾಯ. ಏನೇ ಇದ್ದರೂ, ಆ ಮಾನವೀಯ ವ್ಯಕ್ತಿಯ ಸಾಧನೆಯನ್ನು ದೇಶ ಸಂಭ್ರಮಿಸಬೇಕಿತ್ತು.

Writer - ಬಿಟ್ವಾ ಶರ್ಮಾ

contributor

Editor - ಬಿಟ್ವಾ ಶರ್ಮಾ

contributor

Similar News