ಇಂತಹ ದುಂದುವೆಚ್ಚ ಸರಿಯೇ?
ಮಾನ್ಯರೆ,
ತನ್ನ ಸಿಬ್ಬಂದಿಗೆ ಸಂಬಳ ನೀಡುವುದಕ್ಕೆ ಬಿಡಿಎ ಪರದಾಡುತ್ತಿದೆೆ. ಮೊದಲು ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕು. ಆದರೆ ಬಿಡಿಎ, ಕೇವಲ ಎರಡು ವರ್ಷಗಳಲ್ಲಿ ಎಂಟು ಕಾರುಗಳನ್ನು ಖರೀದಿಸಲು ಒಟ್ಟು 95. 77 ಲಕ್ಷ ರೂ. ಖರ್ಚು ಮಾಡಿದೆ!. ಇದು ಮಾಹಿತಿ ಹಕ್ಕು ಕಾಯ್ದೆಯಡಿ ಬಯಲಾಗಿದೆ. ಈ ಮೂಲಕ ಬಿಡಿಎ, ಜನರ ದುಡ್ಡಲ್ಲಿ ಯಲ್ಲಮ್ಮನ ಜಾತ್ರೆ ಮಾಡಿದೆ. ಜನರ ಪಾಲಿಗೆ ಅಪರಿಚಿತರಾಗಿರುವ ಬಿಡಿಎ ಅಧ್ಯಕ್ಷರಿಗೆ 24.44 ಲಕ್ಷ ರೂ. ಮೌಲ್ಯದ ಇನ್ನೊವಾ ಕ್ರಿಸ್ತಾ ಕಾರು, ನ್ಯಾಯಮೂರ್ತಿ ಫಾರೂಕ್ ಸಮಿತಿಗೆ 8.94 ಲಕ್ಷ ರೂ. ಮೌಲ್ಯದ ಟೊಯೋಟ ಇಟಿಯೋಸ್, ಕಾರ್ಯಪಾಲಕ ಇಂಜಿನಿಯರ್‌ಗೆ 11.10 ಲಕ್ಷ ರೂ. ಮೌಲ್ಯದ ಮಾರುತಿ ಸಿಯಾಜ್, ಬೆಂಗಳೂರು ಅಭಿವೃದ್ಧಿ ಸಚಿವಾಲಯದ ಕಚೇರಿಗೆ 18.93 ಲಕ್ಷ ರೂ.ದ ಇನ್ನೊವಾ ಕಾರನ್ನು ಖರೀದಿಸಲಾಗಿದೆ. ಇದಷ್ಟೇ ಅಲ್ಲ, ಸಿಎಂ ಕಚೇರಿಯ ಓಡಾಟಕ್ಕೆ 7.23 ಲಕ್ಷ ರೂ.ದ ಸ್ವಿಫ್ಟ್ ಡಿಸೈರ್, ದಕ್ಷಿಣದ ಕಾರ್ಯಪಾಲಕ ಇಂಜಿನಿಯರ್‌ಗೆ 7.23 ಲಕ್ಷ ರೂ.ದ ಕಾರನ್ನು ಖರೀದಿಸಿ ಹಣ ದುರ್ಬಳಕೆ ಮಾಡಲಾಗಿದೆ. ಇದನ್ನು ಕೆಲವರು ವೈಯಕ್ತಿಕವಾಗಿ ಬಳಸುತ್ತಿದ್ದಾರೆ ಎಂಬ ಆರೋಪ ಕೂಡಾ ಕೇಳಿ ಬಂದಿದೆ. ನಷ್ಟದ ಹಾದಿಯಲ್ಲಿ ನಡೆಯುತ್ತಿರುವ ಬಿಡಿಎ ಈ ರೀತಿ ಹಣವನ್ನು ಪೋಲು ಮಾಡುವುದು ಎಷ್ಟು ಸರಿ..? ಕಚೇರಿ ಉಪಯೋಗಕ್ಕೆ ಇಂತಹ ದುಬಾರಿ ಕಾರುಗಳ ಅಗತ್ಯವೇ ಇಲ್ಲ. ಹಣ ಹಾಗೂ ಕಾರುಗಳನ್ನು ದುರ್ಬಳಕೆ ಮಾಡಿದವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕಾಗಿದೆ.