" ಗೋ ರಕ್ಷಣೆಯ ಹೆಸರಲ್ಲಿ ಗೂಂಡಾಗಿರಿಗೆ ವಿ ಎಚ್ ಪಿ, ಬಜರಂಗದಳ ನಾಯಕತ್ವ, ಆರೆಸ್ಸೆಸ್ ಸಹಕಾರ "

Update: 2016-08-06 12:38 GMT

ಹೊಸದಿಲ್ಲಿ, ಆ. 6 : ಟೈಮ್ಸ್ ನೌ ಸುದ್ದಿ ವಾಹಿನಿ ನಡೆಸಿರುವ ತನಿಖಾ ಕಾರ್ಯಾಚರಣೆಯಲ್ಲಿ  ಗೋ ರಕ್ಷಣೆಯ ಹೆಸರಲ್ಲಿ ದೇಶಾದ್ಯಂತ ನಡೆಯುತ್ತಿರುವ ಗೂಂಡಾಗಿರಿ, ಹಲ್ಲೆ, ಕೊಲೆ ಯತ್ನ ಹಾಗು ಕೊಲೆಗಳಿಗೆ ವಿಶ್ವ ಹಿಂದೂ ಪರಿಷತ್ ಹಾಗು ಬಜರಂಗದಳದ ವರಿಷ್ಠರ ಸಂಪೂರ್ಣ ಸಮ್ಮತಿ ಹಾಗು ಸಹಕಾರ ಇದೆ ಎಂಬ ಆರೋಪವನ್ನು ಪುಷ್ಟೀಕರಿಸುವ ವೀಡಿಯೋಗಳು ಬಹಿರಂಗವಾಗಿವೆ. 

ಗೋ ರಕ್ಷಣೆಯ ಹೆಸರಲ್ಲಿ ವಿ ಎಚ್ ಪಿ ಹಾಗು ಬಜರಂಗದಳಗಳು ಅಭಿಯಾನವನ್ನೇ ನಡೆಸುತ್ತಿದ್ದು ಅದಕ್ಕಾಗಿ ಹಿಂಸೆಗೆ ಇಳಿಯುವುದನ್ನು ಈ ಸಂಘಟನೆಗಳ ನಾಯಕರು ಸಮರ್ಥಿಸಿಕೊಳ್ಳುವ ಆಘಾತಕಾರಿ ವೀಡಿಯೊಗಳು ಈ ಕಾರ್ಯಾಚರಣೆಯಲ್ಲಿ ಬಹಿರಂಗವಾಗಿವೆ. ನೇರ ಸಂದರ್ಶನ ಹಾಗು ಕುಟುಕು ಕಾರ್ಯಾಚರಣೆಯ ಮೂಲಕ ಟೈಮ್ಸ್ ನೌ ವಾಹಿನಿಯ ವಿಶೇಷ ತನಿಖಾ ತಂಡ ಈ ಕಾರ್ಯಾಚರಣೆ ನಡೆಸಿದೆ. 

" ವಿ ಎಚ್ ಪಿ ಯ ' ಗೋ ರಕ್ಷಕ' ಯುವಕರು ರಾತ್ರಿ ' ನೈಟ್ ಪಟ್ರೋಲಿಂಗ್ ( ರಾತ್ರಿ ಗಸ್ತು ) ' ನಡೆಸುತ್ತಾರೆ. ಈ ಸಂದರ್ಭದಲ್ಲಿ ಅವರ ಬಳಿ ಶಸ್ತ್ರಾಸ್ತ್ರಗಳು ಇರುತ್ತವೆ. ಗೋಸಾಗಾಟ ಮಾಡುವವರನ್ನು ಅವರು ಹುಡುಕಿ ಹಿಡಿದು ಗೋವುಗಳನ್ನು ರಕ್ಷಿಸುತ್ತಾರೆ " ಎಂದು ವಿ ಎಚ್ ಪಿ ನಾಯಕರು ಈ ಕಾರ್ಯಾಚರಣೆಯಲ್ಲಿ ಟೈಮ್ಸ್ ನೌ ವರದಿಗಾರ ಬಳಿ ಬಾಯಿ ಬಿಟ್ಟಿದ್ದಾರೆ. 

ಮಾತ್ರವಲ್ಲದೆ ವಿ ಎಚ್ ಪಿ ಯ ಗೋರಕ್ಷಣೆಯ ಕ್ಷೇತ್ರೀಯ ಪ್ರಮುಖ ಪ್ರಕಾಶ್ ಎಂಬವರು ಈ ಹಿಂಸಾತ್ಮಕ ಅಭಿಯಾನದಲ್ಲಿ ಆರೆಸ್ಸೆಸ್ ಸಹಕಾರವೂ ಇದೆ ಎಂದು ಹೇಳಿದ್ದಾರೆ. " ಯಾವುದೇ ಗೋರಕ್ಷಕನಿಗೆ ಆತ ಆರೆಸ್ಸೆಸ್  ಇರಲಿ ಅಥವಾ ಬಿಜೆಪಿ ಇರಲಿ, ಆತನಿಗೆ ಬೆಂಬಲ ನೀಡಲಾಗುತ್ತದೆ ಈ" ಎಂದು ಅವರು ಹೇಳಿದ್ದಾರೆ. 

ಇದೇ ಕಾರ್ಯಾಚರಣೆಯಲ್ಲಿ ಬಜರಂಗದಳದ ರಾಷ್ಟ್ರೀಯ ಸಂಯೋಜಕ ರಾಜೇಶ್ ಪಾಂಡೆ ಮಾತನಾಡಿ " ದಾದ್ರಿಯಲ್ಲಿ ಅಖ್ಲಾಕ್ ನನ್ನ ಕೊಂದಿರುವುದು ಸರಿ " ಎಂದು ಸಮರ್ಥಿಸಿಕೊಂಡಿದ್ದಾರೆ. " ಗುರಗಾವ್ ನಲ್ಲಿ ನಮ್ಮ ಮೇಲೆ ದಾಳಿಯಾಗಿತ್ತು ಅದಕ್ಕೆ ಅಲ್ಲಿ ಅವರ ಮೇಲೆ ನಡೆಯಿತು. ಗೋಮಾತೆಯ ಕತ್ತು ಸೀಳಿದವರಿಗೆ ಭಯ ಹುಟ್ಟಿಸಲೇ ಬೇಕು " ಎಂದು ಆಘಾತಕಾರಿ ಹೇಳಿಕೆ ನೀಡಿದ್ದಾರೆ ಪಾಂಡೆ.

ಈ ಬಗ್ಗೆ ವಿ ಎಚ್ ಪಿ ಕಾರ್ಯಾಧ್ಯಕ್ಷ ಪ್ರವೀಣ್ ತೊಗಾಡಿಯಾ ಅವರಲ್ಲಿ ಟೈಮ್ಸ್ ನೌ ಪ್ರತಿಕ್ರಿಯೆ ಕೇಳಿದಾಗ ಎರಡೆರಡು ಬಾರಿ ಅವರು ಪ್ರಶ್ನೆಗೆ ಸಂಬಂಧವೇ ಇಲ್ಲದ ಉತ್ತರ ನೀಡಿದ್ದಾರೆ. ಮತ್ತೆ ಮತ್ತೆ ಪ್ರಶ್ನಿಸಿದಾಗ ವರದಿಗಾರ್ತಿಯ ಮೇಲೆ ಸಿಟ್ಟಾದ ತೊಗಾಡಿಯಾ ಆಕೆಯನ್ನು ತಡೆದು ನಿಲ್ಲಿಸುವಂತೆ ತಮ್ಮ ಜನರಿಗೆ ಹೇಳಿದ್ದಾರೆ. 


 

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News