ಮಾಯಾವತಿ-ಅಠಾವಳೆ: ನೈಜ ಅಂಬೇಡ್ಕರ್‌ವಾದಿ ಯಾರು?
ಮಾಯಾವತಿ ನಿಜವಾಗಿಯೂ ಅಂಬೇಡ್ಕರ್‌ವಾದಿಯಾದರೆ, ಆಕೆ ಬೌದ್ಧಧರ್ಮವನ್ನು ಅಪ್ಪಿಕೊಳ್ಳಬೇಕು ಎಂದು ಹೇಳಿಕೆ ನೀಡುವ ಮೂಲಕ, ಕೇಂದ್ರ ಸಚಿವ ರಾಮದಾಸ್ ಅಠಾವಳೆ ಜುಲೈ 30ರಂದು ಬಿಎಸ್ಪಿನಾಯಕಿ ಮಾಯಾವತಿ ವಿರುದ್ಧ ವಾಕ್ಸಮರಕ್ಕೆ ಚಾಲನೆ ನೀಡಿದ್ದಾರೆ. ಅಠಾವಳೆ ಕೇಂದ್ರ ಸಚಿವರಾಗಿ ಅಧಿಕಾರ ಸ್ವೀಕರಿಸಿದ ದಿನದಿಂದಲೂ ಬಹುಜನ ಸಮಾಜ ಪಕ್ಷದ ಮುಖ್ಯಸ್ಥೆ ಮಾಯಾವತಿ ವಿರುದ್ಧ ವಾಗ್ದಾಳಿಗೆ ಇಳಿದಿರುವುದು ನೋಡಿದರೆ, ಮುಂಬರುವ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ದಲಿತ ಮತಗಳನ್ನು ವಿಭಜಿಸಲು ಬಿಜೆಪಿಯಿಂದ ಸುಪಾರಿ ಪಡೆದಿದ್ದಾರೆ ಎನ್ನುವುದು ಸ್ಪಷ್ಟವಾಗುತ್ತದೆ. ಮಹಾರಾಷ್ಟ್ರ ಮೂಲದ ಈ ದಲಿತ ಮುಖಂಡ ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾದ ಮುಖ್ಯಸ್ಥ.
‘‘ನಾನು ಬಹುಜನ ಸಮಾಜ ಪಕ್ಷದಿಂದ ಆನೆಯನ್ನು ಕಿತ್ತುಕೊಳ್ಳಲು ಪ್ರಯತ್ನಿಸುತ್ತೇನೆ. ಉತ್ತರ ಪ್ರದೇಶದ ದಲಿತರು ಹೇಗೆ ಬಿಜೆಪಿಗೆ ತಿರುಗುತ್ತಾರೆ’’ ಎಂದು ಕಾದುನೋಡಿ ಎಂದು ಹೇಳಿದ್ದರು. ಮತ್ತೊಬ್ಬ ದಲಿತ ಮುಖಂಡ, ಈಶಾನ್ಯ ದಿಲ್ಲಿ ಸಂಸದ ಉದಿತ್‌ರಾಜ್ ಕೂಡಾ ಕಣಕ್ಕೆ ಧುಮುಕಿ, ಮಾಯಾವತಿಗೆ ಸವಾಲು ಹಾಕಿದ್ದಾರೆ. ‘‘ದಲಿತರಿಗೆ ಮಾಯಾವತಿ ಮಾಡಿದ್ದಕ್ಕಿಂತ ಹೆಚ್ಚು ಕೆಲಸ ನಾನು ಮಾಡಿದ್ದೇನೆ’’ ಎಂದು ಹೇಳಿಕೊಂಡಿದ್ದಾರೆ.
ಅಂಬೇಡ್ಕರ್, ಅಂಬೇಡ್ಕರ್‌ವಾದಿ
ದಲಿತ ಜಗತ್ತಿನಲ್ಲಿ ಬಾಬಾಸಾಹೇಬ್ ಅಂಬೇಡ್ಕರ್ ಹೆಸರು ಹೇಳಿ ಕೊಂಡು ಯಾವುದನ್ನೂ ಸಮರ್ಥಿಸಿಕೊಳ್ಳಬಹುದು. ಇದೊಂದೇ ತತ್ವದ ಆಧಾರದಲ್ಲಿ ದಲಿತ ಹಿತಾಸಕ್ತಿಯ ಬ್ರೋಕರ್‌ಗಳ ಎಲ್ಲ ವಹಿವಾಟು ಬೆಳೆಯುತ್ತದೆ. ದಲಿತರ ಹಿತ ಕಾಪಾಡುವವರು ಇದರಲ್ಲೇ ಬೆಳೆದಿದ್ದಾರೆ. ದಲಿತ ಪಕ್ಷಗಳ ಹಾಗೂ ದಲಿತ ಸಂಘಟನೆಗಳ ಬಂಡವಾಳವೇ ಅಂಬೇಡ್ಕರ್ ಅವರ ಅನುಯಾಯಿಗಳು ಎಂದು ಹೇಳಿಕೊಳ್ಳುವುದು. ದಲಿತ ಮತಗಳನ್ನು ಕಸಿಯಲು ಮುಖ್ಯವಾಹಿನಿ ಪಕ್ಷಗಳೂ ಈ ಮಾರ್ಗ ಕಂಡುಕೊಂಡಿವೆ.
ಅಂಬೇಡ್ಕರ್ ಅವರ ಸ್ಮಾರಕಗಳನ್ನು ನಿರ್ಮಿಸುವಲ್ಲಿ ಬಿಜೆಪಿಯ ಅತ್ಯಾಸಕ್ತಿ ಮತ್ತು ಅವರಿಗೆ ನಿಕಟವರ್ತಿಗಳಂತೆ ತೋರಿಸಿಕೊಳ್ಳುವುದು ಈ ತಂತ್ರಗಾರಿಕೆಯ ಭಾಗ. ಇದರಿಂದಾಗಿ ಅಠಾವಳೆ, ಮಾಯಾವತಿಯವರನ್ನು ಹೀಗಳೆಯಲು ಅಂಬೇಡ್ಕರ್ ಅವರನ್ನೇ ಬಳಿಸಿಕೊಂಡಿರುವುದರಲ್ಲಿ ಅಚ್ಚರಿ ಇಲ್ಲ. ಇದರ ಒಳ ಅರ್ಥವೆಂದರೆ, ನಾನು ನಿಜವಾದ ಅಂಬೇಡ್ಕರ್‌ವಾದಿ; ನೀವಲ್ಲ ಎನ್ನುವುದು!
ಅಂಬೇಡ್ಕರ್ ಎಂದರೇನು? ಅಂಬೇಡ್ಕರ್ ವಾದಿಯಾಗುವುದು ಎಂದರೇನು ಎಂಬ ಪ್ರಶ್ನೆ ಸಹಜವಾಗಿಯೇ ಉದ್ಭವಿಸುತ್ತದೆ.
ಅಂಬೇಡ್ಕರ್ ತಮ್ಮ ಜೀವನದುದ್ದಕ್ಕೂ ಊಹೆಗೂ ನಿಲುಕದ ವ್ಯಕ್ತಿತ್ವವನ್ನೇ ಬೆಳೆಸಿಕೊಂಡವರು. ಜಾತಿ ವ್ಯವಸ್ಥೆ ವಿರುದ್ಧ ಹೋರಾಡಿದವರು. ಆದರೆ ಇದು ಸಮರ್ಪಕವಾಗಿ ಇತಿಹಾಸದಲ್ಲಿ ದಾಖಲಾಗಿಲ್ಲ. ವಿಸ್ತೃತ ಸಮಾಜ ಈ ಬಗ್ಗೆ ಹೆಚ್ಚಿನ ಕಳಕಳಿಯನ್ನೂ ಹೊಂದಿಲ್ಲ. ಇದರಿಂದ ಅಂಬೇಡ್ಕರ್ ತಮ್ಮ ಹೋರಾಟಕ್ಕೆ ತಮ್ಮದೇ ಸ್ವಂತ ಸಿದ್ಧಾಂತವನ್ನು ಕಂಡುಕೊಳ್ಳಬೇಕಾಯಿತು. ರಾಜಕೀಯ ಸ್ಪರ್ಧೆಗಾಗಿ ಹುಟ್ಟುಹಾಕಿದ್ದ ಹಿಂದೂ ಹಾಗೂ ಮುಸ್ಲಿಂ ಸಮುದಾಯಗಳ ನಡುವಿನ ಬಿರುಕನ್ನೇ ತಮ್ಮ ಹೋರಾಟಕ್ಕೆ ಬಳಸಿ ಕೊಂಡರು. ಆದ್ದರಿಂದ ಅಂಬೇಡ್ಕರ್ ಅಥವಾ ಅಂಬೇಡ್ಕರ್‌ವಾದ ವನ್ನು ಅಠಾವಳೆ ಕಲಾತ್ಮಕವಾಗಿ ಬಳಸಿಕೊಂಡಷ್ಟು ಸುಲಭವಾಗಿ ತಿಳಿದುಕೊಳ್ಳುವುದು ಸಾಧ್ಯವಿಲ್ಲ.
ಅಂಬೇಡ್ಕರ್ ಯೋಚನೆ
ಅಂತಹ ಸುಸಂಬದ್ಧ ಸೈದ್ಧಾಂತಿಕ ಮಾರ್ಗದರ್ಶನ ಇಲ್ಲದಿದ್ದರೂ, ಅಂಬೇಡ್ಕರ್ ವಾಸ್ತವವಾಗಿ ದಕ್ಷಿಣ ಏಷ್ಯಾದಲ್ಲಿ ಮಾನವೀಯತೆಯ ನರಳಿಕೆಗೆ ದಾರಿದೀಪವಾಗಿದ್ದಾರೆ ಎನ್ನಬಹುದು. ಮಾನವ ವಿಮೋಚನೆಯ ದೃಷ್ಟಿಯಿಂದ ಜನ ಕೆಲಸ ಮಾಡಬೇಕು ಎಂಬ ಅವರ ಯೋಚನೆಯಿಂದಾಗಿ ಅವರು ಅವಿಸ್ಮರಣೀಯರಾದರು.
ಪ್ರಾರಂಭದಲ್ಲಿ ಅವರು ಜಾತಿ ನಿರ್ಮೂಲನೆಯ ಗುರಿ ಹೊಂದಿದ್ದರು. ಕೇವಲ ದಲಿತರ ವಿಮೋಚನೆ ದೃಷ್ಟಿಯಿಂದ ಮಾತ್ರವಲ್ಲ; ಇಡೀ ದೇಶದ ಮನುಕುಲದ ಸಲುವಾಗಿ. ಜಾತಿ ಅಸ್ತಿತ್ವದಲ್ಲಿದ್ದರೆ, ದೇಶ ಬೆಳೆಯಲು ಸಾಧ್ಯವೇ ಇಲ್ಲ ಎನ್ನುವುದು ಅವರ ವಾದವಾಗಿತ್ತು. ಬಳಿಕ ಈ ನಿಲುವನ್ನು ಅವರು ತಮ್ಮ ‘ಆದರ್ಶ ಸಮಾಜ’ ಕೃತಿಯಲ್ಲಿ ಸ್ಪಷ್ಟವಾಗಿ ಹೇಳಿದ್ದಾರೆ. ಸ್ವಾತಂತ್ರ್ಯ, ಸಮಾನತೆ ಹಾಗೂ ಭ್ರಾತೃತ್ವದ ನೆಲೆಯಲ್ಲಿ ಆದರ್ಶ ಸಮಾಜದ ಕನಸು ಕಂಡಿದ್ದವರು ಅವರು. ಫ್ರಾನ್ಸ್ ಕ್ರಾಂತಿಯ ಬದಲಾಗಿ ಇದಕ್ಕೆ ಬೌದ್ಧ ಯೋಚನೆಗಳು ಮಾರ್ಗದರ್ಶಿಯಾಗಬೇಕು ಎಂದು ಬಯಸಿದ್ದರು. ಇದು ಅವರ ವಿಶ್ವ ಭ್ರಾತೃತ್ವದ ದೃಷ್ಟಿಯಾಗಿತ್ತು. ಇದನ್ನು ಸಾಧಿಸುವ ನಿಟ್ಟಿನಲ್ಲಿ ತಮ್ಮ ಹೋರಾಟ ಮುಂದುವರಿಸಿದರು.
ಅಂಬೇಡ್ಕರ್ ಅವರ ಭಾವಚಿತ್ರವನ್ನು ಎಷ್ಟೇ ಎಚ್ಚರಿಕೆಯಿಂದ ತೆಗೆದಿದ್ದರೂ, ಈ ಸಾರವನ್ನು ಹೊಂದಿರಲು ಸಾಧ್ಯವೇ ಇಲ್ಲ. ಅಂಬೇಡ್ಕರ್ ಅವರ ಈ ಯೋಚನೆ, ಐತಿಹಾಸಿಕ ಅಂಬೇಡ್ಕರ್ ಅವರ ಬದಲಾದ ವ್ಯಕ್ತಿತ್ವವು ಬಹುಮುಖಿ ವ್ಯಕ್ತಿಗಳಿಗೆ ಸ್ಫೂರ್ತಿಯಾಯಿತು. ಇವರನ್ನು ವಾಸ್ತವವಾಗಿ ಅಂಬೇಡ್ಕರ್‌ವಾದಿಗಳು ಎಂದು ಪರಿಗಣಿಸಬಹುದು. ಕೆಲವರು ಸರಿಯಾಗಿಯೇ ಇದಕ್ಕೆ ಪ್ರಶ್ನೆಗಳನ್ನೂ ಮುಂದೊಡ್ಡಬಹುದು.
ಅಂಬೇಡ್ಕರ್ ಅವರ ಕೊನೆಯ ಉಪನ್ಯಾಸಗಳಲ್ಲೊಂದಾದ ‘ಬುದ್ಧ ಮತ್ತು ಕಾರ್ಲ್‌ಮಾರ್ಕ್ಸ್’ ಎಂಬ ಬಗ್ಗೆ ಕಠ್ಮಂಡುವಿನಲ್ಲಿ ನೀಡಿದ ಉಪನ್ಯಾಸದಲ್ಲಿ, ಬುದ್ಧ ಹಾಗೂ ಮಾರ್ಕ್ಸ್ ಅವರ ಗುರಿ ಒಂದೇ; ಆದರೆ ಮಾರ್ಗ ಬೇರೆ ಎಂದು ಸ್ಪಷ್ಟಪಡಿಸಿದ್ದರು.
ಮಾರ್ಕ್ಸ್ ಅವರಲ್ಲಿ ಎರಡು ಮುಖ್ಯ ಲೋಪಗಳನ್ನು ಅಂಬೇಡ್ಕರ್ ಗುರುತಿಸಿದ್ದರು. ಅವುಗಳೆಂದರೆ ಹಿಂಸೆ ಹಾಗೂ ಸರ್ವಾಧಿಕಾರಿ ಧೋರಣೆ ಯನ್ನು ಪ್ರತಿಪಾದಿಸಿರುವುದು. ಆದ್ದರಿಂದ ಬುದ್ಧಪಥವನ್ನು ಶ್ರೇಷ್ಠ ಎಂದು ನಂಬಿದ್ದರು. ಇದರಿಂದ ಅಂಬೇಡ್ಕರ್ ಅವರು ಮಾರ್ಕ್ಸ್‌ವಾದವನ್ನು ಎರಡು ಪಂಥಗಳಲ್ಲಿ ಒಂದು ಎಂದು ಪರಿಗಣಿಸಿದ್ದರೂ, ಮಾನವನ ವಿಮೋಚನೆಗಾಗಿ ಬೌದ್ಧಧರ್ಮಕ್ಕೆ ಆದ್ಯತೆ ನೀಡಿದ್ದರು ಎನ್ನುವುದು ಸ್ಪಷ್ಟವಾಗುತ್ತದೆ.
ಅದರ ಆಧಾರದಲ್ಲಿ ಅಂಬೇಡ್ಕರ್ ಅವರು ಮಾರ್ಕ್ಸ್‌ವಾದದ ವಿರೋಧಿ ಎಂದು ಪರಿಗಣಿಸಬೇಕೇ? ಆಥವಾ ಮಾರ್ಕ್ಸ್‌ವಾದದ ಬಗೆಗಿನ ಅವರ ಅಧ್ಯಯನ ಸರಿ ಎಂದು ಗುರುತಿಸಬೇಕೇ?
ಅಂಬೇಡ್ಕರ್ ವ್ಯಾವಹಾರಿಕ ಹಾಗೂ ವಿಮರ್ಶಾತ್ಮಕ ಚಿಂತಕ. ಯಾರೋ ಹೇಳುತ್ತಾರೆ ಎಂಬ ಕಾರಣಕ್ಕೆ ಅವರು ಯಾವುದನ್ನೂ ತಳ್ಳಿಹಾಕುತ್ತಿರಲಿಲ್ಲ. ಅಂಬೇಡ್ಕರ್‌ವಾದಿಗಳು ಕನಿಷ್ಠ ಈ ಗುಣವನ್ನು ಪ್ರತಿಬಿಂಬಿಸಬೇಕು.
ಅಂಬೇಡ್ಕರ್ ಅವರ ಬೌದ್ಧವಾದ
ಬೌದ್ಧಧರ್ಮವನ್ನು ಒಪ್ಪಿ ಕೊಂಡದ್ದು ಅಂಬೇಡ್ಕರ್ ಬದುಕಿನ ತುತ್ತತುದಿ. ಅಂಬೇಡ್ಕರ್‌ವಾದಿಗಳು ಈ ಮಾರ್ಗವನ್ನು ತುಳಿಯಬೇಕು ಎಂದು ಯೋಚಿಸುತ್ತಾರೆ. ಇದು ಒಪ್ಪತಕ್ಕದ್ದೇ. ಆದರೆ ಇಲ್ಲಿ ಉದ್ಭವಿಸುವ ಪ್ರಶ್ನೆಯೆಂದರೆ, ಅಂಬೇಡ್ಕರ್ ಅವರ ಬೌದ್ಧಧರ್ಮದ ಪರಿಕಲ್ಪನೆ ಹೇಗಿತ್ತು ಎನ್ನುವುದು.
ಆಧುನಿಕ ವೈಜ್ಞಾನಿಕ ದೃಷ್ಟಿಕೋನಕ್ಕೆ ಅನುಗುಣವಾಗಿ ಅವರು ಬೌದ್ಧಮತ ವನ್ನು ಜೀವನಮಾರ್ಗ ಎಂದು ಪರಿಗಣಿಸಿದರು. ವಿಜ್ಞಾನವು ವಿಮರ್ಶಾತ್ಮಕ ಚಿಂತನೆಗೆ ಅವಕಾಶ ನೀಡುವಂತೆ, ಅವರು ಕೂಡಾ ಬೌದ್ಧಧರ್ಮ ಕೂಡಾ ಇದನ್ನು ಉತ್ತೇಜಿಸುತ್ತದೆ ಎಂದು ಭಾವಿಸಿದರು. ‘‘ನಾನು ಹೇಳಿದೆ ಎಂಬ ಕಾರಣಕ್ಕೆ ಯಾವುದನ್ನೂ ನಂಬಬೇಡಿ. ಅದನ್ನು ತಮ್ಮ ಬೌದ್ಧಿಕತೆ ಹಾಗೂ ಅನುಭವದ ಒರೆಗಲ್ಲಿಗೆ ಹಚ್ಚಿ ಪರೀಕ್ಷಿಸಿ’’ ಎಂದು ಬುದ್ಧ ಹೇಳಿದ್ದನು.
ಬುದ್ಧನ ಬೋಧನೆ ಮತ್ತು ಬುದ್ಧ ಹಾಗೂ ಆತನ ಧರ್ಮ ಎಂಬ ಕೃತಿಯಲ್ಲಿ ಅಂಬೇಡ್ಕರ್ ಅವರು, ಸಾಂಪ್ರದಾಯಿಕ ಬೌದ್ಧಧರ್ಮದ ಬಗ್ಗೆ ವಿಮರ್ಶಾತ್ಮಕ ಚಿಂತನೆಯಲ್ಲಿ ತೊಡಗಿ, ವಿವೇಚನಾತ್ಮಕ ಬೌದ್ಧಧರ್ಮವನ್ನು ಪ್ರಚುರಪಡಿಸಿದರು. ಜನಸಾಮಾನ್ಯರಿಗಾಗಿ ಪರ್ಯಾಯ ಸಾಂಸ್ಕೃತಿಕ ಶ್ರೇಣಿಯೊಂದನ್ನು ಅಭಿವೃದ್ಧಿಪಡಿಸುವ ಅಗತ್ಯತೆಯನ್ನು ಅವರು ಮನಗಂಡಿದ್ದರು. ಜನ ಹಿಂದುತ್ವವನ್ನು ತೊರೆಯಬೇಕಾದರೆ, ಪ್ರಬುದ್ಧರಾಗಬೇಕು. ಕೇವಲ ಬೌದ್ಧಧರ್ಮಕ್ಕೆ ಮತಾಂತರ ಹೊಂದುವುದು ಮತ್ತು ಬೌದ್ಧರೆಂದು ಹಣೆಪಟ್ಟಿ ಕಟ್ಟಿಕೊಳ್ಳುವುದರಿಂದ ಯಾವ ಪ್ರಯೋಜನವೂ ಇಲ್ಲ ಎನ್ನುವುದು ಅವರ ಸ್ಪಷ್ಟ ನಂಬಿಕೆಯಾಗಿತ್ತು.
ಮತಾಂತರಿಗಳಲ್ಲಿ ಅಂತ ಬೌದ್ಧರಿದ್ದಾರೆಯೇ?
ವಿಮರ್ಶಾತ್ಮಕ ಚಿಂತನೆ ಬಿಟ್ಟುಬಿಡಿ; ಈ ಬೌದ್ಧರು ಅಂಬೇಡ್ಕರ್ ಅವರನ್ನು ಬೋಧಿಸತ್ವನನ್ನಾಗಿ ಮಾಡಿ, ಅವರ ಬೌದ್ಧಧರ್ಮದಲ್ಲಿ ಕೂಡಾ ಹಿಂದುತ್ವದ ಗೊಂದಲಕಾರಿ ಧಾರ್ಮಿಕತೆಯನ್ನೇ ಉಳಿಸಿಕೊಂಡಿದ್ದಾರೆ. ಬೌದ್ಧಮತ ಅಂಬೇಡ್ಕರ್‌ವಾದಿಗಳ ಅನಿವಾರ್ಯ ಅಂಶವೇ?
ಉತ್ತರ ಪ್ರದೇಶದಲ್ಲಿ ಬಿಜೆಪಿ ಕೆಲ ಬೌದ್ಧಭಿಕ್ಷುಗಳ ಸಹಕಾರದೊಂದಿಗೆ ಇದೀಗ ಚಾಲನೆ ನೀಡಿರುವ ಧಮ್ಮಚೇತನ ಯಾತ್ರೆ, ಅಠಾವಳೆ ಮಾಯಾವತಿಗೆ ಹಾಕಿದ ಸವಾಲನ್ನೇ ಪ್ರತಿಧ್ವನಿಸುತ್ತದೆ. ಈ ಯಾತ್ರೆ ಬೌದ್ಧಭಿಕ್ಷುಗಳನ್ನು ಬಳಸಿಕೊಂಡು ಬಿಜೆಪಿ ಹಾಗೂ ಮೋದಿ ಪರ ತುತ್ತೂರಿ ಊದುತ್ತಿದೆ. ಇದು ಅಂಬೇಡ್ಕರ್ ಪರಿಕಲ್ಪನೆಯನ್ನು ಬಿಡಿ; ಬೌದ್ಧಧರ್ಮವನ್ನೇ ಶಿಥಿಲಗೊಳಿಸುವಂಥ ಹುನ್ನಾರ.
ನಿರೀಕ್ಷೆಯಂತೆ ಇದು ಫ್ಲಾಪ್ ಷೋ ಎನಿಸಿದೆ. ಬೌದ್ಧಭಿಕ್ಷು ಧಮ್ಮ ವಿರಿಯೊ ನೇತೃತ್ವದ ಈ ಯಾತ್ರೆಗೆ ದಲಿತರು ಹಲವೆಡೆ ರಾಜ್ಯದಲ್ಲಿ ಕಪ್ಪುಬಾವುಟ ಪ್ರದರ್ಶಿಸಿದ್ದಾರೆ. ಇದರ ಪರಿಣಾಮವಾಗಿಯೇ ಬಿಜೆಪಿ ಅಧ್ಯಕ್ಷ ಅಮಿತ್ ಶಾ ಜುಲೈ 31ರಂದು ಆಗ್ರಾದಲ್ಲಿ ನಡೆಸಲು ಉದ್ದೇಶಿಸಿದ್ದ ಸಮಾವೇಶ ರದ್ದುಗೊಳಿಸಿದ್ದಾರೆ. 50 ಸಾವಿರ ಮಂದಿಯನ್ನು ನಿರೀಕ್ಷಿಸಿದ್ದ ಸಮಾವೇಶಕ್ಕೆ 500ರಷ್ಟು ದಲಿತರೂ ಆಗಮಿಸಿರಲಿಲ್ಲ.
ಅಂಬೇಡ್ಕರ್ ಅವರು ಹಿಂದುತ್ವ ಮತ್ತು ಹಿಂದೂಧರ್ಮದ ದೊಡ್ಡ ಟೀಕಾಕಾರರಾಗಿಯೇ ಇದ್ದರು ಎನ್ನುವಲ್ಲಿ ಯಾವ ವಿವಾದವೂ ಇಲ್ಲ. ಇದೀಗ ಸಂಘ ಪರಿವಾರ ಇಂದಿನ ಹಿಂದುತ್ವದ ಪ್ರಧಾನ ಶಕ್ತಿಯಾಗಿದೆ. ಆದ್ದರಿಂದ ನೈಜ ಅಂಬೇಡ್ಕರ್‌ವಾದಿಗಳಿಗೆ ಬಿಜೆಪಿ ಅಸ್ಪಶ್ಯ ಪಕ್ಷವಾಗಬೇಕಿತ್ತು. ಅಠಾವಳೆಯಂಥವರು, ಅನೈತಿಕ ಹಾಗೂ ತತ್ವರಹಿತವಾಗಿ ಬಿಜೆಪಿಗೆ ಸೇರಿರುವುದು ಮಾತ್ರವಲ್ಲದೇ, ಅವುಗಳ ಕಾರ್ಯವನ್ನು ರಾಜಾರೋಷವಾಗಿ ಮಾಡುತ್ತಿದ್ದಾರೆ.
ಅಂಬೇಡ್ಕರ್ ಬೌದ್ಧಧರ್ಮಕ್ಕೆ ಹೋಗುವ ಮುನ್ನ ಒಳನೋಟ ಹೊಂದಿದ್ದರು ಹಾಗೂ ಸಂಘವನ್ನು ಕಟುವಾಗಿ ಟೀಕಿಸುತ್ತಿದ್ದರು. ಇಂದು ಅಂಬೇಡ್ಕರ್‌ವಾದಿಗಳು ಎಂದು ಹಣೆಪಟ್ಟಿ ಹಚ್ಚಿಕೊಂಡವರು, ಅಂಬೇಡ್ಕರ್‌ಗೆ ವಿರುದ್ಧವಾಗಿದ್ದಾರೆ. ಕೆಲವರನ್ನು ಹೊರತುಪಡಿಸಿದರೆ, ಬಿಜೆಪಿ ಯಾತ್ರೆಯಲ್ಲಿ ಪಾಲ್ಗೊಂಡಿದ್ದ ಬಹುತೇಕ ಭಿಕ್ಷುಗಳು, ಹವಾನಿಯಂತ್ರಿತ ಕಾರಿನಲ್ಲಿ ಓಡಾಡುವ ಕೋಟ್ಯಂತರ ಮೌಲ್ಯದ ಆಸ್ತಿ ಹೊಂದಿರುವವರು.
ಮಾಯಾವತಿ ವರ್ಸಸ್ ಅಠಾವಳೆ
ಕಾನ್ಶಿರಾಂ ಅಥವಾ ಮಾಯಾವತಿ ಇಬ್ಬರೂ ಅಂಬೇಡ್ಕರ್ ಸಿದ್ಧಾಂತವನ್ನು ತಲೆಕೆಳಗೆ ಮಾಡಿ, ಜಾತಿ ಸಮೀಕರಣವನ್ನು ರಾಜಕೀಯ ಅಧಿಕಾರಕ್ಕಾಗಿ ಬಳಸಿಕೊಂಡವರು. ಪಟ್ಟಭದ್ರ ಆಡಳಿತ ವರ್ಗದ ಪಕ್ಷಕ್ಕೆ ಸವಾಲಾಗಿ ಇವರು, ಸದ್ಯದ ಸ್ಥಿತಿಯಲ್ಲಿ ಕಾರ್ಯಸಾಧು ತಂತ್ರವನ್ನು ರೂಪಿಸಿಕೊಳ್ಳಬಹುದು. ಉದಿತ್‌ರಾಜ್ ಪ್ರತಿಪಾದನೆಗಿಂತ ಭಿನ್ನವಾಗಿ ಅವರು ದಲಿತರನ್ನು ಸಬಲಗೊಳಿಸಲು ಪ್ರಯತ್ನಿಸಿದರು. ಆದರೆ ವ್ಯವಸ್ಥೆಯ ಇತಿಮಿತಿಗಳನ್ನು ಮೀರಿ ಬೆಳೆಯಲು ಸಾಧ್ಯವಾಗಲಿಲ್ಲ. ಅವರು ಈಗ ಮಾಡಬಹುದಾದ ಏಕೈಕ ಕಾರ್ಯವೆಂದರೆ, ವ್ಯವಸ್ಥಿತ ಜಾಲದಲ್ಲಿ ಸಮಾಜ ಸಿಕ್ಕಿಹಾಕಿಕೊಂಡಿರುವುದನ್ನು ಜನರಿಗೆ ಮನದಟ್ಟು ಮಾಡಿ, ಇದನ್ನು ಮೀರಿ ಬೆಳೆಯುವ ಶಕ್ತಿಯನ್ನು ಅವರಲ್ಲಿ ತುಂಬುವುದು. ಆದರೆ ಅದರ ಭಾಗವಾಗುವುದನ್ನೇ ಅವರು ಆಯ್ಕೆ ಮಾಡಿಕೊಂಡಿದ್ದಾರೆ. ಅವರ ಎಲ್ಲ ತಪ್ಪುಕೆಲಸಗಳು ಅವರ ಈ ತಪ್ಪುಆಯ್ಕೆಯಿಂದ ಹರಿಯುತ್ತವೆ.
ಇದಕ್ಕಾಗಿ ಅವರನ್ನು ಟೀಕಿಸಬಹುದು. ಆದರೆ ದಲಿತರ ಹಿತಾಸಕ್ತಿಯನ್ನು ಅಗ್ಗವಾಗಿ ಮಾರಾಟ ಮಾಡುತ್ತಿರುವ ಅಠಾವಳೆಯಂಥ ಇತರ ದಲಿತ ಮುಖಂಡರಿಗೆ ಹೋಲಿಸಿದರೆ, ಕಾನ್ಶಿರಾಂ- ಮಾಯಾವತಿ ಸಾವಿರಪಟ್ಟು ಲೇಸು.
ಅಠಾವಳೆ ಮಾಯಾವತಿಯನ್ನು ಬೌದ್ಧರಾಗುವಂತೆ ಸವಾಲು ಹಾಕಿರುವಂತೆಯೇ, ಮಹಾರಾಷ್ಟ್ರದಲ್ಲಿ ಮಹರ್ ಸಮುದಾಯದವರು ಅಂಬೇಡ್ಕರ್ ಅನುಯಾಯಿಗಳಾಗಿ ಸಾಮೂಹಿಕವಾಗಿ ಬೌದ್ಧಧರ್ಮಕ್ಕೆ ಮತಾಂತರವಾದುದನ್ನು ನೆನಪಿಸಿಕೊಳ್ಳಬೇಕು. 1990ರಲ್ಲಿ ಈ ಎಲ್ಲ ಮತಾಂತರಿಗಳನ್ನೂ ಪರಿಶಿಷ್ಟ ಜಾತಿಯ ಸೌಲಭ್ಯಕ್ಕೆ ಅರ್ಹರಾಗಿಸಲಾಯಿತು. ಆದರೆ ಅಠಾವಳೆ 2009ರ ಎಪ್ರಿಲ್ 3ರಂದು ಚುನಾವಣಾ ಆಯೋಗಕ್ಕೆ ಸಲ್ಲಿಸಿದ ಅಪಿಢವಿಟ್‌ನಲ್ಲಿ ನಾನು ಇನ್ನೂ ಹಿಂದೂ ಮಹರ್ ಸಮುದಾಯಕ್ಕೆ ಸೇರಿದವರು ಎಂದು ಸ್ಪಷ್ಟಪಡಿಸಿದ್ದಾರೆ.
ಮಾಯಾವತಿಯನ್ನು ಬೌದ್ಧಧರ್ಮಕ್ಕೆ ಮತಾಂತರಗೊಳ್ಳುವಂತೆ ಅಠಾವಳೆ ಸಲಹೆ ಮಾಡಿದಂತೆ ವಾಸ್ತವವಾಗಿ ಅವರು ಪ್ರಧಾನಿ ಮೋದಿ ಕೂಡಾ ಅಂಬೇಡ್ಕರ್ ಭಕ್ತಿ ಪ್ರದರ್ಶಿಸುವ ಸಲುವಾಗಿ ಬೌದ್ಧಧರ್ಮ ಸ್ವೀಕರಿಸಬೇಕು ಎಂಬ ಸಲಹೆಯನ್ನು ನೀಡಬಹುದಿತ್ತು ಎನ್ನಬಹುದು.
ಸಂಘ ಪರಿವಾರದ ಜತೆಗಿನ ಸಂಪರ್ಕದಿಂದಾಗಿ ಅವರು ಅಲ್ಲೇ ಉಳಿದಿದ್ದರೂ, ಬೌದ್ಧಧರ್ಮಕ್ಕೆ ಮತಾಂತರಿಸಲು ಕರೆ ನೀಡುವ ಮೂಲಕ ಅವರು ತಮಗೆ ಅರಿವಿಲ್ಲದಂತೆಯೇ ಇಡೀ ಭಾರತವನ್ನು ಬೌದ್ಧಧರ್ಮಕ್ಕೆ ಪರಿವರ್ತಿಸುವ ಅಂಬೇಡ್ಕರ್ ಕನಸನ್ನು ನನಸುಗೊಳಿಸಲು ಪ್ರಯತ್ನಿಸಿದ್ದಾರೆ.
ಉತ್ತರ ಪ್ರದೇಶಕ್ಕಾಗಿ ಬಿಜೆಪಿಯ ಹಪಹಪಿ ಅರ್ಥಮಾಡಿಕೊಳ್ಳಬಹು ದಾದ್ದು. ಆದರೆ ಇದಕ್ಕಾಗಿ ಅಠಾವಳೆ ಹಾಗೂ ಉದಿತ್ ರಾಜ್‌ರಂಥವರನ್ನು ನೆಚ್ಚಿಕೊಂಡರೆ ಅದು ಪ್ರತಿಕೂಲವಾಗಿ ಪರಿಣಮಿಸಲಿದೆ. ಧಮ್ಮಚೇತನ ಯಾತ್ರೆಯಂತೆ, ಇಂಥ ದಲಿತ ಹನುಮಾನ್‌ಗಳು ದಲಿತರನ್ನು ಮಾಯಾವತಿ ಪರವಾಗಿ ಸಂಘಟಿಸಲು ಪರೋಕ್ಷ ಕಾರಣವಾಗುತ್ತಿದ್ದಾರೆ.