ಕಾಶ್ಮೀರಿ ಸಿಖ್ ನಿಂದ ಪ್ರಧಾನಿ ಮೋದಿಗೆ ಬಹಿರಂಗ ಪತ್ರ
ಮಾನ್ಯ ಪ್ರಧಾನ ಮಂತ್ರಿಯವರೇ,
ನಾನು ನಿಮಗೆ ಈ ಪತ್ರ ಬರೆಯುತ್ತಿದ್ದೇನೆ ಯಾಕೆಂದರೆ ಕಾಶ್ಮೀರದ ಇತರ ಸಿಖ್ಗಳಂತೆ ನಾನೂ ಕೂಡಾ ತಿರಸ್ಕಾರ ಮತ್ತು ಖಿನ್ನತೆಗೊಳಪಟ್ಟಿದ್ದೇನೆ.ಪ್ರತಿಯೊಂದು ಸಂಕಷ್ಟದ ಸಮಯದಲ್ಲೂ ಸಮರ್ಥವಾಗಿ ಎದ್ದುನಿಂತು ಸವಾಲುಗಳನ್ನು ಎದುರಿಸಿರುವ ಕಾಶ್ಮೀರದ ಪ್ರಮುಖ ಸಮುದಾಯವಾಗಿರುವ ಸಿಖ್ ಜನಾಂಗ ಇಂದು ದುಸ್ಥರ ದಿನಗಳನ್ನು ಎದುರಿಸುತ್ತಿದೆ ಎಂಬುದನ್ನು ಯಾರೂ ಅಲ್ಲಗಳೆಲಾರರು. ಜಮ್ಮು ಮತ್ತು ಕಾಶ್ಮೀರದ ಪ್ರತಿಯೊಂದು ಸರಕಾರ ಕೂಡಾ ಕಾಶ್ಮೀರದ ಸಿಖ್ಖರನ್ನು ಅತ್ಯಂತ ಹೀನಾಯವಾಗಿ ನಡೆಸಿಕೊಂಡಿದೆ.
1947ರ ಕ್ರಾಂತಿಯ ಸಮಯದಲ್ಲಿ ಕಾಶ್ಮೀರದ ಸಿಖ್ಖರು ಪಲಾಯನ ಮಾಡುವುದರ ಬದಲು ಎದುರು ನಿಂತು ಹೋರಾಡಲು ಮುಂದಾದ ಪರಿಣಾಮ ಸಿಖ್ಖರ ರಕ್ತಪಾತವೇ ನಡೆದುಹೋಯಿತು.ಕಾಶ್ಮೀರದ ಕಟ್ಟಕಡೆಯ ಅಲ್ಪಸಂಖ್ಯಾತ ಸಮುದಾಯವಾಗಿರುವ ಸಿಖ್ ಜನಾಂಗ ಸದ್ಯದ ಪ್ರಜಾಸತ್ತಾತ್ಮಕ ಸರಕಾರದಿಂದ ಭ್ರಮನಿರಸನಗೊಂಡಿದೆ.ಈ ಜನಾಂಗೀಯ ಗುಂಪಿಗೆ ಯಾವುದೇ ಅಲ್ಪಸಂಖ್ಯಾತ ಹಕ್ಕುಗಳನ್ನು ನೀಡಲಾಗಿಲ್ಲ ಮತ್ತು ಎಲ್ಲಾ ಕಡೆಯಿಂದಲೂ ಪೂರ್ವಾಗ್ರಹಿಕೆಯನ್ನು ಎದುರಿಸುತ್ತಿರುವ ಇವರು ನಿರ್ಲಕ್ಷ್ಯ ಭಾವವನ್ನು ಹೊಂದಿದ್ದಾರೆ.
ಜಮ್ಮು ಮತ್ತು ಕಾಶ್ಮೀರದ ವ್ಯವಹಾರಗಳ ಉನ್ನತ ಸ್ಥಾನದಲ್ಲಿರುವವರು ಜಮ್ಮು ಮತ್ತು ಕಾಶ್ಮೀರ ರಾಜ್ಯವನ್ನು ಪ್ರಕ್ಷುಬ್ಧ ಸಮುದ್ರದಲ್ಲಿ ಸಮೃದ್ಧ ಗುರಿಯತ್ತ ಸಾಗುತ್ತಿರುವ ಬೃಹತ್ ಹಡಗಿಗೆ ಹೋಲಿಸಬೇಕೆಂಬುದನ್ನು ತಮ್ಮ ತಲೆಯಲ್ಲಿಟ್ಟುಕೊಳ್ಳಬೇಕು.ಈ ಸಮುದ್ರಯಾನದಲ್ಲಿ ಸಮಾಜದ ಪ್ರತಿಯೊಂದು ವಿಭಾಗ ಕೂಡಾ ಒಂದೇ ಎಂಬಂತೆ ಜೊತೆಗೂಡಿ ಸಾಗಬೇಕು.ಒಂದು ಸಣ್ಣ ಬಿರುಕು,ಅಂದರೆ ಅಸಂತುಷ್ಟ ಅಲ್ಪಸಂಖ್ಯಾತ ಸಮುದಾಯ ಆ ಬೃಹತ್ ಹಡಗನ್ನು, ಆ ಬಿರುಕು ಸರಿಯಾಗುವವರೆಗೆ ಸಮುದ್ರದ ಮಧ್ಯದಲ್ಲೇ ನಿಲ್ಲಿಸುವಷ್ಟು ಸಾಮರ್ಥ್ಯ ಹೊಂದಿದೆ. ಹಾಗಾಗಿ ಒಂದು ಉತ್ತಮ ಪ್ರಜಾಪ್ರಭುತ್ವದಲ್ಲಿ ಅಲ್ಪಸಂಖ್ಯಾತರ ಹಕ್ಕುಗಳನ್ನು ರಕ್ಷಿಸುವುದು ಅತೀ ಮುಖ್ಯ.
ಐತಿಹಾಸಿಕವಾಗಿ ನೋಡುವುದಾದರೆ ಸಿಖ್ಖರು ಕಾಶ್ಮೀರದಲ್ಲಿ ವಿವಿಧ ಆಡಳಿತಗಾರರ ಕೈಯಲ್ಲಿ ಆರ್ಥಿಕ ಮತ್ತು ರಾಜಕೀಯವಾಗಿ ಸಂಕಷ್ಟಕ್ಕೀಡಾಗಿದ್ದಾರೆ.ಕಾಶ್ಮೀರದ ಸಿಖ್ಖರಿಗೆ ಕೃಷಿ ಮತ್ತು ಸಾರಿಗೆ ಕ್ಷೇತ್ರ ಮುಖ್ಯ ಜೀವನಾಧಾರವಾಗಿದೆ. ಹೆಚ್ಚುವರಿ ಜಮೀನು ನಿರ್ಮೂಲನಾ ಕಾಯ್ದೆಯ ಘೋಷಣೆ ಮತ್ತು ಕೃಷಿ ಸುಧಾರಣಾ ಕಾಯ್ದೆಯ ಅನುಷ್ಠಾನದಿಂದಾಗಿ ನಿಗದಿತ ಪ್ರಮಾಣಕ್ಕಿಂತ ಹೆಚ್ಚಿನ ಜಮೀನನ್ನು ಒಂದೋ ಸರಕಾರ ಸ್ವಾಧೀನಪಡಿಸಿಕೊಂಡಿತು ಅಥವಾ ಉಳುವವರಿಗೆ ನೀಡಲಾಯಿತು ಮತ್ತು ಹಿಡುವಳಿದಾರರು ಕೃಷಿ ಮಾಡುತ್ತಿದ್ದ ಜಮೀನನ್ನು ಅವರ ಹೆಸರಿಗೆ ವರ್ಗಾಯಿಸಲಾಯಿತು.ಇದರ ಪರಿಣಾಮವಾಗಿ ಸಿಖ್ ಯುವಕರು ಹಳ್ಳಿಗಳಿಂದ ನಗರದ ಕಡೆಗೆ ಉದ್ಯೋಗವನ್ನರಸಿ ವಲಸೆ ಹೊರಟರು ಮತ್ತು ಅಲ್ಪಸಂಖ್ಯಾತರು ರಾಜಕೀಯವಾಗಿ ಯಾವುದೇ ಪ್ರೋತ್ಸಾಹವಿಲ್ಲದ ಪರಿಣಾಮವಾಗಿ ಔದ್ಯೋಗಿಕವಾಗಿಯೂ ಸಂಕಷ್ಟಕ್ಕೀಡಾದರು.
ಕಾಶ್ಮೀರದಲ್ಲಿ ತೀವ್ರವಾದಿಗಳ ಆಗಮನದಿಂದ ಈ ಅಸಹಾಯಕ ಸಮುದಾಯದ ಅಸ್ತಿತ್ವ ಮತ್ತಷ್ಟು ಸಂಕಷ್ಟಕ್ಕೀಡಾಯಿತು ಮತ್ತು ಚಿಟ್ಟಿ ಸಿಂಗ್ಪುರ ಮತ್ತು ಮೆಹ್ಜೂರ್ ನಗರ್ ಹತ್ಯಾಕಾಂಡದಂತಹ ಘಟನೆಗಳು ಸಿಖ್ ಸಮುದಾಯದ ಮೇಲೆ ಮತ್ತಷ್ಟು ಪ್ರಹಾರ ಮಾಡಿದವು.ಆದರೆ ಕಾಶ್ಮೀರದ ಸಿಖ್ ಸಮುದಾಯ ಹೆಬ್ಬಂಡೆಯಂತೆ ದೃಢವಾಗಿ ನಿಂತು ಎಲ್ಲವನ್ನೂ ಎದುರಿಸಿತು,ಆದರೆ ವಲಸೆ ಹೋಗಲಿಲ್ಲ. ರಾಜ್ಯ ಸರಕಾರವು ಸಿಖ್ ಸಮುದಾಯದ ಪರಿಸ್ಥಿತಿಯ ಬಗ್ಗೆ ನಿರ್ಲಕ್ಷ ವಹಿಸುವ ಮೂಲಕ ಗಾಯದ ಮೇಲೆ ಉಪ್ಪುಹಾಕುವ ಕೆಲಸ ಮಾಡಿ ಆ ಮೂಲಕ ಸಮಸ್ಯೆಯನ್ನು ದುಪ್ಪಟ್ಟುಗೊಳಿಸಿತು. ಇದರಿಂದ ಸಿಖ್ ಕುಟುಂಬಗಳಲ್ಲಿ ಮತ್ತು ಯುವಕರಲ್ಲಿ ಹತಾಶೆ ಮನೆ ಮಾಡುವಂತಾಯಿತು. ಹಲವು ವರ್ಷಗಳಿಂದ ಸಿಖ್ಖರಿಗೆ ರಾಜ್ಯದ ಆಡಳಿತ ರಚನೆಯಲ್ಲಿ ಪ್ರಜಾಸತಾತ್ಮಕವಾಗಿ ಯಾವುದೇ ಪ್ರಾತಿನಿಧ್ಯ ದೊರಕಿಲ್ಲ. ಕಣಿವೆಯಲ್ಲಿ ಅಲ್ಲಲ್ಲಿ ಸಣ್ಣ ಗುಂಪುಗಳಲ್ಲಿ ಚದುರಿಹೋಗಿರುವ ಸಿಖ್ ಸಮುದಾಯಕ್ಕೆ ತನ್ನಿಂತಾನೆ ಈ ಪ್ರಾತಿನಿಧ್ಯ ಸಿಗಬಹುದು ಎಂದು ನಿರೀಕ್ಷಿಸಲು ಸಾಧ್ಯವಿಲ್ಲ. ಇಂಥಾ ಸಂದರ್ಭಗಳಲ್ಲಿ ದೇಶದ ಸಂವಿಧಾನ ಪ್ರಜಾಸತ್ತಾತ್ಮಕ ಸಂಸ್ಥೆಗಳಿಗೆ ವಂಚಿತ ಸಮುದಾಯದ ಪ್ರಾತಿನಿಧ್ಯಕ್ಕೆ ನಾಮಾಂಕಿತಗೊಳಿಸುವ ಮೂಲಕ ಪರಿಹಾರ ಒದಗಿಸುತ್ತದೆ. ದುರದೃಷ್ಟವಶಾತ್ ಅಧಿಕಾರದಲ್ಲಿರುವವರು ಈ ಅಂಶವನ್ನು ನಿರ್ಲಕ್ಷಿಸಿದಂತಿದೆ. ಹಾಗಾಗಿ ಸಿಖ್ ಸಮುದಾಯ ಈಗಲೂ ಪ್ರಾತಿನಿಧ್ಯವಿಲ್ಲದೆ ವಂಚಿತವಾಗಿಯೇ ಉಳಿದಿದೆ.
ತಾಂತ್ರಿಕವಾಗಿ ಅರ್ಹರಾಗಿರುವ ನಿರುದ್ಯೋಗಿ ಸಿಖ್ ಯುವಕರ ಸಂಖ್ಯೆ ಹಲವು ವರ್ಷಗಳಿಂದ ಹೆಚ್ಚುತ್ತಲೇ ಇದೆ. ಇವರ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಸರಕಾರ ಯಾವುದೇ ಕ್ರಮ ಕೈಗೊಳ್ಳದಿರುವ ಕಾರಣ ಈ ಯುವಕರು ಬದುಕಲು ಯಾವುದೇ ದಾರಿಯಿಲ್ಲದೆ ಉದ್ಯೋಗದ ಹುಡುಕಾಟಕ್ಕಾಗಿ ಕಣಿವೆ ಬಿಟ್ಟು ಬೇರೆ ರಾಜ್ಯಗಳಿಗೆ ತೆರಳುತ್ತಿದ್ದಾರೆ. ತಾಂತ್ರಿಕ ಅರ್ಹತೆಯನ್ನು ಪಡೆಯಲು ಮುಂದಾಗುವ ಸಿಖ್ ಸಮುದಾಯದ ಹಲವು ವಿದ್ಯಾರ್ಥಿಗಳು ತಾಂತ್ರಿಕ ಸಂಸ್ಥೆಗಳಿಗೆ ಪ್ರವೇಶದಿಂದ ವಂಚಿತರಾಗುತ್ತಾರೆ,ಯಾಕೆಂದರೆ ಸಿಖ್ ಸಮುದಾಯ ಬಹಿರಂಗ/ಸಾಮಾನ್ಯ ವಿಭಾಗದಲ್ಲಿ ಬರುವ ಕಾರಣಕ್ಕಾಗಿ. ಇದರ ಪರಿಣಾಮವಾಗಿ ಅಂಕಗಳು ಕಡಿಮೆಯಿದ್ದಾಗ ಅವರು ಪ್ರವೇಶ ಪಡೆಯುವಲ್ಲಿ ವಿಫಲವಾಗಿ ತಮ್ಮ ಶಿಕ್ಷಣವನ್ನೇ ಮೊಟಕುಗೊಳಿಸಬೇಕಾಗುತ್ತದೆ.
ಸಾರಿಗೆ ಉದ್ದಿಮೆ ದೀರ್ಘ ಕಾಲದಿಂದ ಜಮ್ಮು ಮತ್ತು ಕಾಶ್ಮೀರದ ಸಿಖ್ ಸಮುದಾಯದ ಪ್ರಮುಖ ಜೀವನಾಧಾರವಾಗಿದೆ. ಇತ್ತೀಚಿನ ಸಮಯದಲ್ಲಿ ಸಾರಿಗೆ ಕ್ಷೇತ್ರವನ್ನು ಸಂಪೂರ್ಣವಾಗಿ ನಿರ್ಲಕ್ಷಿಸಲಾಗಿದ್ದು ಅದರ ಪರಿಣಾಮವಾಗಿ ಸಾರಿಗೆ ಕ್ಷೇತ್ರದ ಸ್ಥಿತಿ ಶೋಚನೀಯವಾಗಿದೆ. ಇದರಿಂದಾಗಿ ಸಿಖ್ ಸಾರಿಗೆ ಮಾಲಕರ ಮತ್ತು ಚಾಲಕರ ಆದಾಯ ಬಹಳ ಕಡಿಮೆಯಾಗಿದೆ. ಇಂಥಾ ಪರಿಸ್ಥಿತಿಯಲ್ಲಿ ಕಾಶ್ಮೀರಿ ಸಿಖ್ಖರು ವಂಚಿಸಲ್ಪಟ್ಟ ಮತ್ತು ಪ್ರತ್ಯೇಕತೆಯ ಭಾವನೆಯನ್ನು ಹೊಂದಿದ್ದಾರೆ. ಮುಂದೊಂದು ದಿನ ಕಣಿವೆಯ ಅತ್ಯಂತ ಕೊನೆಯ ಅಲ್ಪಸಂಖ್ಯಾತ ಸಮುದಾಯ ಅಸ್ತಿತ್ವಕ್ಕಾಗಿ ಕಾಶ್ಮೀರವನ್ನು ತೊರೆದು ದೇಶದ ಇತರೆಡೆಗಳಿಗೆ ವಲಸೆ ಹೋದರೆ ಯಾವುದೇ ಆಶ್ಚರ್ಯವಿಲ್ಲ. ರಾಜ್ಯದ ಸರ್ವತೋಮುಖ ಅಭಿವೃದ್ಧಿಗಾಗಿ ಕಾಶ್ಮೀರಿ ಸಿಖ್ಖರನ್ನು ಒಲಿಸುವ ಮತ್ತು ಪೋಷಿಸುವ ಕೆಲಸ ಮಾಡಬೇಕಿದೆ. ಈ ನಿಟ್ಟಿನಲ್ಲಿ ಕೆಲವು ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕಿದೆ:
ಸಿಖ್ ಸಮುದಾಯಕ್ಕೆ ತಮ್ಮ ಹಕ್ಕು ಮತ್ತು ಭವಿಷ್ಯದ ರಕ್ಷಣೆಯ ಸಾಂವಿಧಾನಿಕ ಭರವಸೆಯನ್ನು ನೀಡಬೇಕು.
ದೇಶದ ಸಂವಿಧಾನದ ಸೆಕ್ಷನ್ 5, ಸಬ್‌ಸೆಕ್ಷನ್ 6ರ ಅನ್ವಯ ಸಿಖ್ ಸಮುದಾಯಕ್ಕೆ ರಾಜಕೀಯ ಪ್ರಾತಿನಿಧ್ಯವನ್ನು ನೀಡಬೇಕು.
ಇತರ ಸಮುದಾಯಗಳಿಗೆ ನೀಡಿದಂತೆ ಅರ್ಹ ಸಿಖ್ ಯುವಕರನ್ನು ಕೂಡಾ ವಿಶೇಷ ಖೋಟಾದಡಿ ಕೇಂದ್ರ ಮತ್ತು ರಾಜ್ಯ ಸರಕಾರದ ಸೇವೆಗಳಿಗೆ ನಿಯೋಜಿಸಬೇಕು.
ವಲಸಿಗ ಕಾಶ್ಮೀರಿ ಪಂಡಿತರಿಗೆ ನೀಡಿದಂತೆ ಉನ್ನತ ಶಿಕ್ಷಣಕ್ಕೆ ಸೇರಲು ಬಯಸುವ ಸಿಖ್ ವಿದ್ಯಾರ್ಥಿಗಳಿಗೆ ಆದ್ಯತೆ ನೀಡಬೇಕು.
ಸಾರಿಗೆ ಕ್ಷೇತ್ರವನ್ನು ಒಂದು ಕೈಗಾರಿಕೆ ಎಂದು ಘೋಷಿಸಬೇಕು.
ಚಿಟ್ಟಿ ಸಿಂಗ್ಪುರ ಮತು ಮೆಹ್ಜೂರ್ ನಗರ್ ಸಿಖ್ ಹತ್ಯಾಕಾಂಡದ ಬಗ್ಗೆ ಸರಿಯಾದ ತನಿಖೆ ನಡೆಸಿ ತಪ್ಪಿತಸ್ಥರಿಗೆ ಶಿಕ್ಷೆಯಾಗುವಂತೆ ನೋಡಿಕೊಳ್ಳಬೇಕು.
ಕಾಶ್ಮೀರಿ ಸಿಖ್ಖರನ್ನು ಸದ್ಯದ ಯಾತನಾಮಯ ಸಂಕಷ್ಟದಿಂದ ರಕ್ಷಿಸಲಾಗುವುದು ಎಂದು ಭಾವಿಸುತ್ತೇನೆ. ಜೀವನವನ್ನು ಯಾವುದೇ ಭಯ ಮತ್ತು ಅಳುಕಿಲ್ಲದೆ ಮತ್ತೊಮ್ಮೆ ಗಾಲಿಗಳ ಮೇಲೆ ಮುನ್ನಡೆಸಬೇಕಿದೆ.