ಕಾಸರಗೋಡು: ಪೆಟ್ರೋಲ್ ಬಂಕ್ ಮಾಲಕನ ದರೋಡೆ ಪ್ರಕರಣ; ಐವರ ಸೆರೆ

Update: 2016-08-08 09:38 GMT

ಕಾಸರಗೋಡು, ಆ.8: ಪೆಟ್ರೋಲ್ ಬ್ಯಾಂಕ್ ಮಾಲಕನ ಮೇಲೆ ಹಲ್ಲೆ ನಡೆಸಿ 3.16 ಲಕ್ಷ ರೂ. ಮತ್ತು ಸ್ಕೂಟರ್ ದರೋಡೆಗೈದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಐದು ಮಂದಿಯನ್ನು ನೀಲೇಶ್ವರ ಪೊಲೀಸರು ಬಂಧಿಸಿದ್ದಾರೆ.

ಬಂಧಿತರನ್ನು ಪಯ್ಯನ್ನೂರು ತಾಯನೆರಿಯ ನಿವಾಸಿ ಮುಹಮ್ಮದ್ ಶಫಾದಖಾನ್ (19), ಬಂಟ್ವಾಳ ಬಿಸಿರೋಡನ ಉಬೈದ್ (20), ರಾಮಂತಳಿಯ ಯದುಕೃಷ್ಣನ್ (28), ಈತನ ಸಹೋದರ ಮಿಥುನ ಕೃಷ್ಣನ್ (24) ಮತ್ತು ಇಳಂಬಚ್ಚಿಯ ಮುಬಾರಕ್ (19) ಎಂದು ಗುರುತಿಸಲಾಗಿದೆ.

ಆರೋಪಿಗಳು ತೃಕ್ಕರಿಪುರ ಬೈಪಾಸ್ ರಸ್ತೆ ಬಳಿ ಆಗಸ್ಟ್ 1ರಂದು ರಾತ್ರಿ ಪೆಟ್ರೋಲ್ ಬಂಕ್ ಮಾಲಕ ಕೆ. ರಾಮಕೃಷ್ಣನರ ಮೇಲೆ ಹಲ್ಲೆ ನಡೆಸಿ ಅವರ ಕೈಯಲ್ಲಿದ್ದ 3,16,000 ರೂ. ದರೋಡೆಗೈದು ವಾಹನವನ್ನು ದರೋಡೆ ಮಾಡಿದ್ದರು. ಇವರು ದರೋಡೆಗೈದ ಹಣದಲ್ಲಿ 1,44,330 ರೂ. ಹಾಗೂ ದರೋಡೆ ಬಳಿಕ ಇವರು ಪರಾರಿಯಾಗಲು ಬಳಸಿದ್ದ ಸ್ಕೂಟರನ್ನು ಪೊಲೀಸರು ಪತ್ತೆಹಚ್ಚಿದ್ದಾರೆ.

ದರೋಡೆಗೈದ ಹಣ ಒಳಗೊಂಡ ಬ್ಯಾಗನಲ್ಲಿದ್ದ ರಾಮಕೃಷ್ಣನರ ಎಟಿಎಂ ಕಾರ್ಡ್ ಬಳಸಿ ಆರೋಪಿಗಳು ಚೆರ್ವತ್ತೂರು ಮತ್ತು ನೀಲೇಶ್ವರದ ಎಟಿಎಂ ಕೌಂಟರನಿಂದ ಹಣ ಪಡೆಯಲು ಯತ್ನಿಸಿದ್ದರು. ಆ ದೃಶ್ಯವನ್ನು ಆ ಪರಿಸರದ ಶಿಕ್ಷಣ ಸಂಸ್ಥೆಯೊಂದರ ಸಿಸಿಟಿವಿ ಕ್ಯಾಮರಾ ಸೆರೆಹಿಡಿದಿರುವುದರಿಂದ ಆರೋಪಿಗಳನ್ನು ಗುರುತು ಪತ್ತೆ ಹಚ್ಚಲು ಸಾಧ್ಯವಾಯಿತು. ಅದರ ಜಾಡು ಹಿಡಿದು ನಡೆಸಿದ ತನಿಖೆಯಿಂದ ಆರೋಪಿಗಳನ್ನು ಬಂಧಿಸಲು ಸಾಧ್ಯವಾಯಿತೆಂದು ಪೊಲೀಸರು ತಿಳಿಸಿದ್ದಾರೆ.

ಬಂಧಿತರ ಪೈಕಿ ಶಫಾದಖಾನ್, ಉಬೈದ್ ಮತ್ತು ಮಿಥುನ ಕೃಷ್ಣನ್ ಮಾತ್ರವೇ ದರೋಡೆಯಲ್ಲಿ ನೇರವಾಗಿ ಶಾಮೀಲಾಗಿದ್ದರು. ಉಳಿದವರು ದರೋಡೆಗಾಗಿ ಸಂಚು ಹಾಕಿಕೊಂಡವರಲ್ಲಿ ಒಳಗೊಂಡವರಾಗಿದ್ದಾರೆಂದೂ ಪೊಲೀಸರು ತಿಳಿಸಿದ್ದಾರೆ. ದರೋಡೆ ನಡೆಸಿದ ಬಳಿಕ ಆರೋಪಿಗಳು ಮಂಗಳೂರಿಗೆ ತೆರಳಿ ಅಲ್ಲಿ ಅರ್ಧದಷ್ಟು ಹಣವನ್ನು ಖರ್ಚು ಮಾಡಿ ಎರಡು ದಿನಗಳ ಹಿಂದೆ ಊರಿಗೆ ಮರಳಿದ್ದರು ಎಂದು ತಿಳಿದುಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News