ಜಿ.ಪಂ.ನ ಸ್ಪಿಲ್ ಓವರ್ ಹಣ ಹೊಸ ಯೋಜನೆಗೆ ಬಳಕೆ ವಿಚಾರ: 2 ತಿಂಗಳಾದರೂ ಅನುಷ್ಠಾನಕ್ಕೆ ಬಾರದ ನಿರ್ಣಯ

Update: 2016-08-08 12:47 GMT

ಮಂಗಳೂರು,ಆ.8: ದ.ಕ. ಜಿಲ್ಲಾ ಪಂಚಾಯತ್ ವ್ಯಾಪ್ತಿಯಲ್ಲಿ ಕುಡಿಯುವ ನೀರಿಗೆ ಬಿಡುಗಡೆಯಾದ ಹಣವನ್ನು ಮುಂದುವರಿದ ಕಾಮಗಾರಿ(ಸ್ಪಿಲ್ ಓವರ್)ಗಳಿಗೆ ಉಪಯೋಗಿಸಬೇಕೆಂಬ ಸರಕಾರದ ನಿರ್ದೇಶನದ ಹಿನ್ನೆಲೆಯಲ್ಲಿ, ಬಿಡುಗಡೆಯಾದ ಹಣದಲ್ಲಿ ಶೇ. 50ರಷ್ಟು ಹೊಸ ಕಾಮಗಾರಿಗಳಿಗೆ ಬಳಸಬೇಕೆಂದು ಎರಡು ತಿಂಗಳ ಹಿಂದೆ ನಡೆದ ಸಾಮಾನ್ಯ ಸಭೆಯಲ್ಲಿ ನಿರ್ಣಯಿಸಲಾಗಿತ್ತಾದರೂ, ಆ ನಿರ್ಣಯ ಅನುಷ್ಠಾನಗೊಳ್ಳದ ಕುರಿತಂತೆ ಪಕ್ಷ ಬೇಧ ಮರೆತು ಅಧಿಕಾರಿಗಳನ್ನು ತರಾಟೆಗೈದ ಪ್ರಸಂಗ ಇಂದು ನಡೆಯಿತು.

ಜಿ.ಪಂ. ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು ಅಧ್ಯಕ್ಷತೆಯಲ್ಲಿ ಇಂದು ನಡೆದ ಸಾಮಾನ್ಯ ಸಭೆಯಲ್ಲಿ ಕಳೆದ ಜೂನ್ 7ರಂದು ನಡೆದ ಸಭೆಯಲ್ಲಿ ಸರಕಾರದಿಂದ ಬಿಡುಗಡೆಯಾದ ಹಣದಲ್ಲಿ ಶೇ. 50ರಷ್ಟನ್ನು ಕುಡಿಯುವ ನೀರಿನ ಹೊಸ ಕಾಮಗಾರಿಗಳಿಗೆ ಮೀಸಲಿಡಬೇಕೆಂದು ಅಧ್ಯಕ್ಷರ ನಿರ್ಣಯವನ್ನು ಕಡೆಗಣಿಸಲಾಗಿದೆ ಎಂದು ಆಕ್ಷೇಪಿಸಿ ಸದಸ್ಯರು ಸಮಾರು ಎರಡೂವರೆ ಗಂಟೆ ಕಾಲ ಈ ವಿಷಯಲ್ಲಿ ಗಂಭೀರ ಚರ್ಚೆ ನಡೆಸಿದರು.

ಸಭೆ ಆರಂಭವಾಗುತ್ತಿದಂತೆಯೇ ವಿಷಯ ಪ್ರಸ್ತಾಪಿಸಿದ ಸದಸ್ಯ ಎಂ.ಎಸ್. ಮುಹಮ್ಮದ್, ಅನುದಾನದಲ್ಲಿ ಶೇ.50ರಷ್ಟನ್ನು ಹೊಸ ಕುಡಿಯುವ ನೀರಿನ ಕಾಮಗಾರಿಗಳಿಗೆ ಬಳಸುವ ನಿಟ್ಟಿನಲ್ಲಿ ಇನ್ನೂ ಸದಸ್ಯರಿಂದ ಹೊಸ ಕಾಮಗಾರಿಗಳಿಗೆ ಪ್ರಸ್ತಾವನೆ ಪಡೆಯಲಾಗಿಲ್ಲ. ಹಾಗಿದ್ದರೆ ನಿರ್ಣಯ ಏನಾಯಿತು ? ಅಧಿಕಾರಿಗಳು ಸರ್ವಾಧಿಕಾರಿ ಧೋರಣೆ ತೋರುತ್ತಿದ್ದು, ಜನಪ್ರತಿನಿಧಿಗಳಿಗೆ ಗೌರವ ಕೊಡುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು. 

ಹಿರಿಯ ಅಧಿಕಾರಿ ಮಾತನಾಡುತ್ತಾ, 805ರಷ್ಟು ಹಳೆಯ ಕಾಮಗಾರಿಗಳಿಗೆ 78 ಕೋಟಿ ರೂ. ಬೇಕಾಗಿದ್ದು, 34.33 ಕೋಟಿ ರೂ. ಬಿಡುಗಡೆಯಾಗಿದೆ. ಅದನ್ನು ಹೊಸ ಕಾಮಗಾರಿಗಳಿಗೆ ಬಳಸುವಂತಿಲ್ಲ. ಹಳೆ ಕಾಮಗಾರಿಯನ್ನೇ ಪೂರ್ಣಗೊಳಿಸುವಂತೆ ಸೂಚನೆ ದೊರಕಿದೆ ಎಂದು ಹೇಳಿದರು. ಸರಕಾರದ ನಿರ್ದೇಶನ, ಅಧಿಕಾರಿಗಳ ಅಸಹಾಯಕತೆ ಹಾಗೂ ಜಿಲ್ಲಾ ಪಂಚಾಯತ್ ಸದಸ್ಯರ ಒಗ್ಗಟ್ಟಿನ ಪ್ರದರ್ಶನದೊಂದಿಗೆ ದೀರ್ಘಾವಧಿಯ ಚರ್ಚೆಯ ಬಳಿಕ ಹಳೆಯ ನಿರ್ಣಯಕ್ಕೆ ಕೊಂಚ ತಿದ್ದುಪಡಿಯೊಂದಿಗೆ ಬಿಡುಗಡೆಯಾದ ಅನುದಾನದಲ್ಲಿ ಶೇ. 60:40ರ ಅನುಪಾತದಲ್ಲಿ (ಶೇ. 40 ಹೊಸ ಕಾಮಗಾರಿಗಳಿಗೆ) ಸ್ಪಿಲ್ ಓವರ್ ಹಾಗೂ ಹೊಸ ಕಾಮಗಾರಿಗಳಿಗೆ ಬಳಸುವಂತೆ ಮರು ನಿರ್ಣಯ ಕೈಗೊಳ್ಳಲಾಯಿತು. 

ಅಧ್ಯಕ್ಷೆ ಶಾಂತಿಗೋಡು ಅವರು ಈ ನಿರ್ಣಯ ಪ್ರಕಟಿಸಿದಾಗ, ಈ ಬಗ್ಗೆ ಆಡಳಿತ ಹಾಗೂ ವಿರೋಧ ಪಕ್ಷದ ಸದಸ್ಯರು ಈ ಬಗ್ಗೆ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ನಿರ್ಣಯವನ್ನು ಅನುಷ್ಠಾನಗೊಳಿಸುವ ಖಾತರಿಯನ್ನು ನೀಡಬೇಕೆಂದು ಒತ್ತಾಯಿಸಿದರು. ತಾನು ವೈಯಕ್ತಿಕ ಹಿತಾಸಕ್ತಿಯಲ್ಲಿ ನಿರ್ಣಯ ಕೈಗೊಳ್ಳಲು ಆಗುವುದಿಲ್ಲ. ಸರಕಾರದ ನಿರ್ದೇಶನ ಹಾಗೂ ಕಾನೂನಿನ ಪ್ರಕಾರ ತಾನು ಕಾರ್ಯ ನಿರ್ವಹಿಸಬೇಕಾಗಿರುವುದರಿಂದ ಇಂದು ಕೈಗೊಳ್ಳಲಾದ ನಿರ್ಣಯವನ್ನು ಮತ್ತೆ ಸರಕಾರಕ್ಕೆ ಕಳುಹಿಸಿ ಸರಕಾರದ ತೀರ್ಮಾನಕ್ಕೆ ಬದ್ಧವಾಗಿ ಕಾರ್ಯ ನಿರ್ವಹಿಸುವುದಾಗಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪಿ.ಐ. ಶ್ರೀವಿದ್ಯಾ ತಿಳಿಸಿದರು. 

ಈ ಸಂದರ್ಭ ಕೆಲಹೊತ್ತು ಚರ್ಚೆ ನಡೆದ ಬಳಿಕ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು ಈಗಾಗಲೇ ಕೈಗೊಂಡಿರುವ ನಿರ್ಣಯದಂತೆ ಅನುದಾನ ಬಳಕೆಯಾಗಬೇಕು ಎಂದು ನಿರ್ಣಯಿಸಿದರಲ್ಲದೆ, ಹೊಸ ಕಾಮಗಾರಿಗಳಿಗೆ ಪಟ್ಟಿ ಸಭೆ ಮುಂದುವರಿಸಲು ತಿಳಿಸಿದರು. ಈ ನಿರ್ಣಯವೂ ಕಳೆದ ನಿರ್ಣಯದಂತೆ ಆಗದೆ, ಅನುಷ್ಠಾನ ಆಗಬೇಕು. ಇದಕ್ಕಾಗಿ ಅನುಷ್ಠಾನ ಅಧಿಕಾರಿಗಳು ಈ ಮಾತನ್ನು ಅನುಮೋದಿಸಬೇಕು. ಇಲ್ಲವಾದಲ್ಲಿ ಅಧ್ಯಕ್ಷರ ಮಾತಿಗೆ ಯಾವುದೇ ಬೆಲೆ ಇಲ್ಲದಂತಾಗುತ್ತದೆ ಎಂದು ಹಿರಿಯ ಸದಸ್ಯ ಎಂ.ಎಸ್. ಮುಹಮ್ಮದ್ ಸಭೆಯಲ್ಲಿ ಮತ್ತು ಪಟ್ಟು ಹಿಡಿದಾಗ ಸಭೆ ಮತ್ತೆ ಗೊಂದಲದ ಗೂಡಾಯಿತು. ಈಗ ನಿರ್ಣಯಕ್ಕೆ ಬರಲಾಗಿದೆ ಸಭೆ ಮುಂದುವರಿಸೋಣ ಎಂದು ಅಧ್ಯಕ್ಷೆ ಶಾಂತಿಗೋಡು ಸೂಚಿಸಿದಾಗ, ನಿರ್ಣಯವನ್ನು ಅನುಷ್ಠಾನಗೊಳಿಸುವ ಜವಾಬ್ಧಾರಿ ವಹಿಸುತ್ತೀರಾ ಎಂದು ಸದಸ್ಯ ಮುಹಮ್ಮದ್ ಪ್ರಶ್ನಿಸಿದರು. ‘‘ನಾನು ಜವಾಬ್ಧಾರಿ ತೆಗೆದುಕೊಳ್ಳುತ್ತೇನೆ’’ ಎಂದು ಅಧ್ಯಕ್ಷೆ ಸವಾಲು ಸ್ವೀಕರಿಸಿದಾಗ, ಆಡಳಿತ ಪಕ್ಷದ ಸದಸ್ಯರು ಆಕ್ಷೇಪಿಸಿದರು. ಇಂತಹ ಮಾತಿನಿಂದ ಮುಂದೆ ಅಧ್ಯಕ್ಷರನ್ನು ಇಕ್ಕಟ್ಟಿಗೆ ಸಿಲುಕಿಸುವ ಪ್ರಮೇಯ ನಡೆಯಲಿದೆ ಎಂದು ಸುಚರಿತ ಶೆಟ್ಟಿ ಹಾಗೂ ಇತರರು ಜವಾಬ್ಧಾರಿಯನ್ನು ಅಧ್ಯಕ್ಷರು ವಹಿಸುವುದು ಬೇಡ ಎಂದರು. 

ಮತ್ತೆ ಕೆಲ ನಿಮಿಷಗಳ ಗೊಂದಲದ ವಾತಾವರಣದ ಬಳಿಕ, ಸ್ಪಷ್ಟನೆ ನೀಡಿದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶ್ರೀವಿದ್ಯಾ, ನಿರ್ಣಯವನ್ನು ಸರಕಾರಕ್ಕೆ ಕಳುಹಿಸಲಾಗುವುದು ಹಾಗೂ ಇದೇ ವೇಳೆ ಅಗತ್ಯ ಇರುವ ಕಾಮಗಾರಿಗಳ ಪಟ್ಟಿಯನ್ನು ಸದಸ್ಯರಿಂದ ಪಡೆಯಲಾಗುವುದು ಎಂದರು. ಜಿ.ಪಂ.ನ. ಅಧ್ಯಕ್ಷೆ, ಉಪಾಧ್ಯಕ್ಷೆ ಹಿರಿಯ ಸದಸ್ಯರ ನಿಯೋಗವನ್ನು ಕೊಂಡೊಯ್ಯುವ ನಿರ್ಧಾರವನ್ನೂ ಈ ಸಂದರ್ಭ ಸದಸ್ಯರು ಕೈಗೊಂಡರು. ಇದೇ ವೇಳೆ ಆಯಾ ತಾಲೂಕುಗಳಲ್ಲಿ ಬಾಕಿ ಇರುವ ಸ್ಪಿಲ್ ಓವರ್ ಕಾಮಗಾರಿಗಳ ಕುರಿತಂತೆ ತಾಲೂಕು ಮಟ್ಟದಲ್ಲಿ ವಿಶೇಷ ಸಭೆಯನ್ನು ಕರೆಯಲು ಜಿ.ಪಂ. ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು ನಿರ್ಣಯಿಸಿದರು. 

ಕಿನ್ನಿಗೋಳಿ ಬಹುಗ್ರಾಮ ಕುಡಿಯುವ ನೀರಿನ ಯೋಜನೆ

1 ತಿಂಗಳೊಳಗೆ ಕ್ರಮ ಕಿನ್ನಿಗೋಳಿ ಬಹುಗ್ರಾಮ ಕುಡಿಯುವ ನೀರಿನ ಯೋಜನೆಯಲ್ಲಿ ಅವ್ಯಹವಾರ ನಡೆದಿರುವ ಹಿನ್ನೆಲೆಯಲ್ಲಿ ಲೋಕಾಯುಕ್ತ ತನಿಖೆಗೆ ಹಿಂದೆ ಸಭೆಯಲ್ಲಿ ನಿರ್ಣಯಿಸಲಾಗಿತ್ತು. ಈ ಇದೇ ವೇಳೆ ಮತ್ತೆ ಅದೇ ಗುತ್ತಿಗೆದಾರರಿಂದ ಕೆಲಸ ನಿರ್ವಹಿಸುವಂತೆ ಸೂಚನೆ ನೀಡಲಾಗಿದ್ದರೂ ಕಾಮಗಾರಿ ನಡೆಯುತ್ತಿಲ್ಲ. 2010-11ನೆ ಸಾಲಿನಲ್ಲಿ ಆರಂಭಗೊಂಡ 14 ಕೋಟಿ ರೂ. ಮೊತ್ತದ ಈ ಯೋಜನೆ 2 ವರ್ಷದಲ್ಲಿ ಮುಗಿಯಬೇಕಿತ್ತು. ಈಗಾಗಲೇ ಆರೇಳು ವರ್ಷಗಳು ಕಳೆದಿವೆ. ಕಳೆದ ಬಾರಿ ನೀರಿನ ಸಮಸ್ಯೆ ಉಂಟಾದಾಗ ಈ ಯೋಜನೆಯಿಂದ ಕೆಲವೆಡೆ ನೀರು ಪೂರೈಕೆ ಮಾಡಲಾಗಿತ್ತು. ಆದರೆ ಆ ನೀರು ಉಪ್ಪಿನಿಂದ ಕೂಡಿರುವುದರಿಂದ ಶುದ್ಧೀಕರಣ ಕಾಮಗಾರಿಗೆ ಸಾಮಗ್ರಿಗಳು ಬಂದು ಬಿದ್ದಿವೆ. ಯೋಜನೆಗಾಗಿ 9 ಕೋಟಿ ರೂ. ಪಾವತಿಯಾಗಿದೆ. ಒಂದೂವರೆ ಕೋಟಿ. ರೂ. ಪಾವತಿಗೆ ಬಾಕಿ ಇರಿಸಲಾಗಿದೆ. ಈ ರೀತಿಯ ವಿಳಂಬದಿಂದಾಗಿ ಇದೀಗ ಯೋಜನೆಗಾಗಿ ಅಳವಡಿಸಲಾಗಿರುವ ಯಂತ್ರಗಳು ತುಕ್ಕು ಹಿಡಿಯುತ್ತಿವೆ. ಈ ಬಗ್ಗೆ ಸೂಕ್ತ ನಿರ್ಧಾರ ಕೈಗೊಳ್ಳಬೇಕು ಎಂದು ಸದಸ್ಯ ವಿನೋದ್ ಕುಮಾರ್ ಬೊಳ್ಳೂರು ಸಭೆಯಲ್ಲಿ ಆಗ್ರಹಿಸಿದರು. 

ಮೂಲ ಗುತ್ತಿಗೆದಾರರು 2 ತಿಂಗಳಲ್ಲಿ ಕೆಲಸ ಮುಗಿಸುವುದಾಗಿ ಹೇಳಿದ್ದರೂ ಮಾಡಿಲ್ಲ. ಪೂರ್ತಿ ಕಾಮಗಾರಿ ಆಗದೆ ಪಾವತಿ ಮಾಡುವಂತಿಲ್ಲ ಎಂದು ಸಂಬಂಧಪಟ್ಟ ಅಧಿಕಾರಿ ಸಭೆಗೆ ತಿಳಿಸಿದರು. ಆಗಿರುವ ಕೆಲಸಕ್ಕೆ ಪಾವತಿ ಮಾಡಿ ಉಳಿದ ಕಾಮಗಾರಿಯನ್ನು ಬೇರೆ ಟೆಂಡರ್ ಮೂಲಕ ಮಾಡಿಸುವುದು ಒಳ್ಳೆಯದು. ಇಲ್ಲವಾದಲ್ಲಿ ಸಾರ್ವಜನಿಕರ ಹಣ ಪೋಲಾಗಲಿದೆ ಎಂದು ವಿನೋದ್ ಕುಮಾರ್ ಹೇಳಿದರು. ಸರಕಾರದ ಮಟ್ಟದ ತಂಡ ಅವ್ಯವಹಾರದ ಬಗ್ಗೆ ತನಿಖೆ ಮಾಡಿದೆ. ಕಳೆದ ತಿಂಗಳು ಗ್ರಾಮೀಣ ಸಚಿವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲೂ ಈ ವಿಷಯ ಪ್ರಸ್ತಾಪಿಸಲಾಗಿದೆ. ಹಿಂದಿನ ಗುತ್ತಿಗೆದಾರರಿಂದಲೇ ಕೆಲಸ ಸಂಪೂರ್ಣ ಮಾಡಿಸಿ ಪಾವತಿ ಮಾಡುವಂತೆ ಸಚಿವರು ಸೂಚಿಸಿದ್ದಾರೆ ಎಂದು ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶ್ರೀವಿದ್ಯಾ ಹೇಳಿದರು. ಈ ಬಗ್ಗೆ ಒಂದು ತಿಂಗಳೊಳಗೆ ಸೂಕ್ತ ನಿರ್ಣಯ ಕೈಗೊಳ್ಳಲಾಗುವುದು ಎಂದು ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು ತಿಳಿಸಿದರು. 

ಸಭೆಯಲ್ಲಿ ಉಪಾಧ್ಯಕ್ಷೆ ಕಸ್ತೂರಿ ಪಂಜ, ಸಾಮಾಜಿಕ ನ್ಯಾಯ ಸ್ಥಾಯ ಸಮಿತಿ ಅಧ್ಯಕ್ಷರಾದ ಆಶಾ ತಿಮ್ಮಪ್ಪ ಗೌಡ, ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಶಾಹುಲ್ ಹಮೀದ್, ಕೃಷಿ ಮತ್ತು ಕೈಗಾರಿಕಾ ಸ್ಥಾಯಿ ಸಮಿತಿ ಅಧ್ಯಕ್ಷ ಸರ್ವೋತ್ತಮ ಗೌಡ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News