×
Ad

ದಲಿತರ ಮೇಲೆ ದೌರ್ಜನ್ಯ ಖಂಡನೀಯ, ಅನ್ಯಾಯ, ಅಮಾನವೀಯ: ಆರೆಸ್ಸೆಸ್

Update: 2016-08-09 08:28 IST

ಹೊಸದಿಲ್ಲಿ, ಆ.9:  ಗೋಸಂರಕ್ಷಣೆ ಹೆಸರಿನಲ್ಲಿ ದಲಿತರ ಮೇಲೆ ನಡೆಯುತ್ತಿರುವ ದೌರ್ಜನ್ಯವನ್ನು ಖಂಡಿಸಿದ ಪ್ರಧಾನಿ ನರೇಂದ್ರ ಮೋದಿಯವರಿಗೆ ಆರೆಸ್ಸೆಸ್ ಸಾಥ್ ನೀಡಿದೆ.

ಕಾನೂನನ್ನು ಕೈಗೆತ್ತಿಕೊಳ್ಳುವುದು ಹಾಗೂ ತಮ್ಮದೇ ಸಮಾಜದ ಜನರನ್ನು ಸರಿಯಾಗಿ ನಡೆಸಿಕೊಳ್ಳದಿರುವುದು ಕೇವಲ ಅನ್ಯಾಯ ಮಾತ್ರವಲ್ಲ, ಅಮಾನವೀಯ ನಡತೆ ಎಂದು ಆರೆಸ್ಸೆಸ್ ಪ್ರಧಾನ ಕಾರ್ಯದರ್ಶಿ ಭಯ್ಯೆಜಿ ಜೋಶಿ ಪ್ರಕಟನೆಯಲ್ಲಿ ಹೇಳಿದ್ದಾರೆ. ಮೋದಿ ಕೂಡಾ ಬಹುತೇಕ ಗೋರಕ್ಷಕರು ಸಮಾಜಘಾತುಕರು ಎಂದು ಹೇಳಿದ್ದರು.

ದಲಿತರ ಮೇಲೆ ನಡೆಯುತ್ತಿರುವ ಹಿಂಸೆಯನ್ನು ಕಟು ಶಬ್ದಗಳಲ್ಲಿ ಖಂಡಿಸಬೇಕು. ವಿಶ್ವಾಸ ಹಾಗೂ ಸೌಹಾರ್ದತೆಗೆ ಧಕ್ಕೆ ತರುವವರ ಬಗ್ಗೆ ಎಚ್ಚರಿಕೆಯಿಂದ ಇರುವಂತೆ ಸಮಾಜದ ಎಲ್ಲ ವರ್ಗಗಳಿಗೆ ಕರೆ ನೀಡುತ್ತಿದ್ದೇವೆ. ಕಾನೂನನ್ನು ಅಣಕಿಸುವ ರೀತಿಯಲ್ಲಿ ಕೃತ್ಯ ನಡೆಸುವ ಜನ ಹಾಗೂ ಗುಂಪುಗಳನ್ನು ಹಿಡಿದು ಶಿಕ್ಷಿಸುವಂತೆ ಆಡಳಿತಯಂತ್ರಕ್ಕೆ ಆಗ್ರಹಿಸುತ್ತಿದ್ದೇವೆ ಎಂದು ವಿವರಿಸಿದ್ದಾರೆ.

ಇದು ಮೋದಿ ವಿರುದ್ಧ ಹೇಳಿಕೆ ನೀಡದಂತೆ ಸಂಘ ಪರಿವಾರದ ಇತರ ಸಂಘಟನೆಗಳಿಗೆ ನೀಡಿರುವ ಪರೋಕ್ಷ ಸೂಚನೆ ಎಂದು ಇದನ್ನು ವಿಶ್ಲೇಷಿಸಲಾಗುತ್ತಿದೆ. ವಿಶ್ವಹಿಂದೂ ಪರಿಷತ್‌ನ ಗುಜರಾತ್ ಘಟಕ ಮೋದಿ ವಿರುದ್ಧ ಪ್ರಧಾನಿ ತಮ್ಮ ಹೇಳಿಕೆಗೆ ಮುಂದಿನ ಚುನಾವಣೆಯಲ್ಲಿ ಬೆಲೆ ತೆರಬೇಕಾಗುತ್ತದೆ ಎಂದು ಹೇಳಿದ್ದನ್ನು ಇಲ್ಲಿ ಸ್ಮರಿಸಬಹುದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News