ಉತ್ತರ ಪ್ರದೇಶದ ಗೋರಕ್ಷಕರಿಗೆ ಇದೆ ವ್ಯವಸ್ಥಿತ ಜಾಲ, ಅತ್ಯಾಧುನಿಕ ವ್ಯವಸ್ಥೆ
ಮೀರಠ್, ಆ.9 ಹನ್ನೆರಡನೆ ವರ್ಷದಲ್ಲೇ ಗೋಸಂರಕ್ಷಣೆ ಕಾರ್ಯಾಚರಣೆಯಲ್ಲಿ ಪಾಲ್ಗೊಂಡು ಇದೀಗ ರಾಜ್ಯಾದ್ಯಂತ ಕುಖ್ಯಾತಿ ಗಳಿಸಿರುವ 22 ವರ್ಷದ ವಿವಾದಾತ್ಮಕ ಗೋರಕ್ಷಕ ವಿವೇಕ್ ಪ್ರೇಮಿ ಮತ್ತು ಗ್ಯಾಂಗ್, ಗೋ ಹಂತಕರನ್ನು ರೆಡ್‌ಹ್ಯಾಂಡ್ ಆಗಿ ಹಿಡಿಯಲು ನಡೆಸುವ ರಾತ್ರಿ ಕಾರ್ಯಾಚರಣೆಗೆ ಇದೀಗ ವಾಟ್ಸ್‌ಅಪ್ ಅಸ್ತ್ರ ಬಳಸಿಕೊಳ್ಳುತ್ತಿದೆ.
ಬಜರಂಗದಳದ ಹಿರಿಯ ಕಾರ್ಯಕರ್ತರ ಜತೆಗೆ ತೆರಳುವ ವಿವೇಕ್, ಇಂದಿಗೂ ತಮ್ಮ ಹೈವೆ ಗಸ್ತು ಹಾಗೂ ರಾತ್ರಿ ಜಾಲದ ಬಾಲ್ಯದ ಅನುಭವಗಳನ್ನು ನೆನಪಿಸಿಕೊಳ್ಳುತ್ತಾರೆ. ಹಿಂದೆಯೂ ನಮಗೆ ಮಾಹಿತಿದಾರರಿದ್ದರು. ಆದರೆ ಆ ಮಾಹಿತಿ ತಲುಪುವುದು ವಿಳಂಬವಾಗುತ್ತಿತ್ತು. ಇದೀಗ ವಾಟ್ಸ್‌ಅಪ್ ಮೂಲಕ ಚಿತ್ರ ಸಹಿತ ಮಾಹಿತಿ ಮಿಂಚಿನ ವೇಗದಲ್ಲಿ ಬರುತ್ತದೆ ಎಂದು ಅವರು ಹೇಳುತ್ತಾರೆ.
ವಿವೇಕ್ ಈಗ ಕೋಮು ಸೂಕ್ಷ್ಮ ಜಿಲ್ಲೆ ಎನಿಸಿದ ಶಾಮ್ಲಿಯಲ್ಲಿ ಗೋಸಂರಕ್ಷಣೆ ಪಡೆಯ ಮುಖ್ಯಸ್ಥ. ಶಾಮ್ಲಿ ಜಿಲ್ಲೆಯಲ್ಲೇ ವಾಟ್ಸ್‌ಅಪ್ ಗ್ರೂಪ್ ಮೂಲಕ 500 ಮಂದಿ ಮಾಹಿತಿದಾರರ ದೊಡ್ಡ ಗುಂಪು ಹೊಂದಿದ್ದಾರೆ. ರಾಜ್ಯಾದ್ಯಂತ ಇಂಥ ಹಲವು ವಾಟ್ಸ್‌ಅಪ್ ಗುಂಪುಗಳು ಕಾರ್ಯ ನಿರ್ವಹಿಸುತ್ತಿವೆ. ಬಹುತೇಕ ಮಾಹಿತಿದಾರರು ಹೆದ್ದಾರಿ ಬಳಿಯ ಚಹಾ ಅಂಗಡಿಯವರು ಮತ್ತು ಡಾಬಾ ಮಾಲಕರು. ಗೋಸಾಗಾಟ ವಾಹನಗಳ ಮೇಲೆ ನಿಗಾ ಇಟ್ಟು ಮಾಹಿತಿ ನೀಡುತ್ತಾರೆ.
ಶಾಮ್ಲಿ- ಪಾಣಿಪತ್ ಮಾರ್ಗದಲ್ಲಿ ಟ್ರಕ್‌ನಲ್ಲಿ ಹಸುಗಳನ್ನು ತುಂಬಿಕೊಂಡು ಹೊರಟರೆ ತಕ್ಷಣ ಮಾಹಿತಿ ವಾಟ್ಸ್‌ಅಪ್ ಗ್ರೂಪ್‌ಗೆ ರವಾನೆಯಾಗುತ್ತದೆ. ರಕ್ಷಕ ಗುಂಪು ಕಾರ್ಯಾಚರಣೆಗೆ ಇಳಿಯುತ್ತದೆ ಎಂದು ವಿವೇಕ್ ಹೇಳುತ್ತಾರೆ. ಅವರ ಗುಂಪಿಗೆ ಗೋರಕ್ಷಣೆ ಪೂರ್ಣಾವಧಿ ಉದ್ಯೋಗ.