ವಲಸಿಗರಿಗೆ ಸೌದಿ ಸಂಕಟ : ಮೊಬೈಲ್ ಬಳಿಕ ಆರೋಗ್ಯ ಕ್ಷೇತ್ರದ ಸರದಿ

Update: 2016-08-09 09:14 GMT

ಜಿದ್ದಾ, ಆ. 9: ಸೌದಿ ಅರೇಬಿಯದ ಆರೋಗ್ಯ ಕ್ಷೇತ್ರದ ಎಲ್ಲ ಹುದ್ದೆಗಳನ್ನು ರಾಷ್ಟ್ರೀಕರಣಗೊಳಿಸುವ ಯೋಜನೆಯನ್ನು ಕಾರ್ಮಿಕ ಮತ್ತು ಸಮಾಜ ಕಲ್ಯಾಣ ಸಚಿವಾಲಯ ಹೊಂದಿದೆ. ಅದೇ ವೇಳೆ, ಸೌದೀಕರಣವನ್ನು ಔಷಧ ತಯಾರಿಕಾ ಕ್ಷೇತ್ರಕ್ಕಷ್ಟೇ ಸೀಮಿತಗೊಳಿಸಲಾಗುವುದಿಲ್ಲ.

 ಸೌದೀಕರಣವನ್ನು ಆರಂಭಿಸುವ ಯೋಜನೆಯೊಂದನ್ನು ಅಭಿವೃದ್ಧಿಪಡಿಸುವುದಕ್ಕಾಗಿ ಕಾರ್ಮಿಕ ಸಚಿವಾಲಯವು ಆರೋಗ್ಯ ಸಚಿವಾಲಯದ ಜೊತೆಗೂಡಿ ಜಂಟಿ ಸಮಿತಿಯೊಂದನ್ನು ರಚಿಸಿದೆ ಎಂದು ಓರ್ವ ಅಧಿಕಾರಿ ಸ್ಥಳೀಯ ಪತ್ರಿಕೆಯೊಂದಕ್ಕೆ ತಿಳಿಸಿದ್ದಾರೆ. ಇದಕ್ಕೆ ಅಧಿಕೃತ ಅಂಗೀಕಾರ ದೊರೆತ ಬಳಿಕ ಅನುಷ್ಠಾನ ಪ್ರಕ್ರಿಯೆಯನ್ನು ಆರಂಭಿಸಲಾಗುತ್ತದೆ.

ಔಷಧ ತಯಾರಿಕಾ ಕ್ಷೇತ್ರದ ಉದ್ಯೋಗಗಳನ್ನು ಸೌದೀಕರಣಗೊಳಿಸುವುದರಿಂದ ಪುರುಷರು ಮತ್ತು ಮಹಿಳೆಯರಿಗೆ ಲಭ್ಯವಿರುವ ಉದ್ಯೋಗಗಳ ಸಂಖ್ಯೆ 15,000ವನ್ನೂ ಮೀರುತ್ತದೆ ಎಂದು ಅವರು ವಿವರಿಸಿದರು. ಆದಾಗ್ಯೂ, ಆರೋಗ್ಯ ಕ್ಷೇತ್ರದಲ್ಲಿ ಲಭ್ಯವಿರುವ ಉದ್ಯೋಗಗಳ ಸಂಖ್ಯೆಯನ್ನು ಅವರು ಬಹಿರಂಗಪಡಿಸಲಿಲ್ಲ.

ಇದಕ್ಕೂ ಮೊದಲು, ಆಟೊಮೊಬೈಲ್ ಮಾರಾಟ ಕ್ಷೇತ್ರ (ಏಜನ್ಸಿಗಳು ಮತ್ತು ಕಾರು ಬಾಡಿಗೆ ಕಚೇರಿಗಳು)ದಲ್ಲಿನ ಉದ್ಯೋಗಗಳನ್ನು ರಾಷ್ಟ್ರೀಕರಣಗೊಳಿಸುವ ಇಂಗಿತವನ್ನು ಕಾರ್ಮಿಕ ಮತ್ತು ಸಮಾಜ ಕಲ್ಯಾಣ ಸಚಿವಾಲಯ ವ್ಯಕ್ತಪಡಿಸಿರುವುದನ್ನು ಸ್ಮರಿಸಬಹುದಾಗಿದೆ. ಅದು 2017ರ ಮೊದಲಾರ್ಧದಲ್ಲಿ ಅನುಷ್ಠಾನಕ್ಕೆ ಬರಲಿದೆ. ಅದು 9,000 ನಾಗರಿಕರಿಗೆ ಉದ್ಯೋಗಗಳನ್ನು ನೀಡುವುದೆಂದು ನಿರೀಕ್ಷಿಸಲಾಗಿದೆ.

ದೂರಸಂಪರ್ಕ ಕ್ಷೆತ್ರದ ಸೌದೀಕರಣ ಬಳಿಕ ಮುಂದಿನ ಗುರಿ ಆಟೊಮೊಬೈಲ್ ಕ್ಷೇತ್ರವಾಗಿದೆ ಎಂದು ಸಚಿವಾಲಯ ತಿಳಿಸಿದೆ.

ಮುಂದಿನ ಹಂತದಲ್ಲಿ, ಚಿನ್ನ ಮತ್ತು ತರಕಾರಿ ಮುಂತಾದ ಮಾರುಕಟ್ಟೆಗಳನ್ನು ಸೌದೀಕರಣ ಮಾಡುವ ಬಗ್ಗೆ ಮಾತುಕತೆಗಳು ನಡೆಯುತ್ತಿವೆ ಎಂದಿದೆ.

ಮೊಬೈಲ್ ಫೋನ್ ಕ್ಷೇತ್ರವನ್ನು ಈಗಾಗಲೇ ಸೌದೀಕರಣ ಮಾಡಿರುವುದನ್ನು ಸ್ಮರಿಸಬಹುದಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News