ಅತಿ ವೇಗದಲ್ಲಿ ಸಾಗರಕ್ಕೆ ಅಪ್ಪಳಿಸಿದ್ದ ಎಂಎಚ್370

Update: 2016-08-09 14:32 GMT

ಸಿಡ್ನಿ, ಆ. 9: ಎರಡೂವರೆ ವರ್ಷಗಳ ಹಿಂದೆ ನಿಗೂಢವಾಗಿ ನಾಪತ್ತೆಯಾಗಿರುವ ಮಲೇಶ್ಯನ್ ಏರ್‌ಲೈನ್ಸ್‌ನ ಎಂಎಚ್370 ವಿಮಾನ ಅತಿ ವೇಗದಲ್ಲಿ, ಅಂದರೆ ಗಂಟೆಗೆ 366 ಕಿ.ಮೀ. ವರೆಗಿನ ವೇಗದಲ್ಲಿ ಸಾಗರಕ್ಕೆ ಅಪ್ಪಳಿಸಿದೆ ಹಾಗೂ ಈಗಿನ ಶೋಧ ಪ್ರದೇಶದಲ್ಲೇ ವಿಮಾನ ಪತನಗೊಂಡಿದೆ ಎಂಬ ಸಿದ್ಧಾಂತವನ್ನು ಇದು ಬಲಪಡಿಸಿದೆ ಎಂದು ವರದಿಯೊಂದು ಮಂಗಳವಾರ ತಿಳಿಸಿದೆ.
2014 ಮಾರ್ಚ್ 8ರಂದು ಕೌಲಾಲಂಪುರದಿಂದ 239 ಮಂದಿಯನ್ನು ಹೊತ್ತುಕೊಂಡು ಬೀಜಿಂಗ್‌ಗೆ ಹಾರುತ್ತಿದ್ದ ಬೋಯಿಂಗ್ 777 ವಿಮಾನ ನಾಪತ್ತೆಯಾಗಿತ್ತು.
 ವಿಮಾನದ ಅವಶೇಷಗಳಿಗಾಗಿ ದಕ್ಷಿಣ ಹಿಂದೂ ಮಹಾಸಾಗರದಲ್ಲಿ ವ್ಯಾಪಕ ಸಾಗರ ತಳ ಶೋಧ ಕಾರ್ಯಾಚರಣೆ ಸಾಗಿದ್ದು, ಈವರೆಗೂ ಅವಶೇಷಗಳು ಪತ್ತೆಯಾಗಿಲ್ಲ. ವಿಮಾನದ ಕೊನೆಯ ಗಳಿಗೆಗಳಲ್ಲಿ ಅದನ್ನು ಯಾರಾದರೂ ನಿಯಂತ್ರಿಸುತ್ತಿದ್ದರೆ ವಿಮಾನವು ಈಗಿನ ಶೋಧ ವ್ಯಾಪ್ತಿಯಿಂದ ಹೊರಗಿರುವ ಸಾಧ್ಯತೆಯಿದೆ ಎಂಬ ಅಭಿಪ್ರಾಯಗಳೂ ಈ ಹಿನ್ನೆಲೆಯಲ್ಲಿ ವ್ಯಕ್ತವಾಗಿವೆ.
ವಿಮಾನವನ್ನು ಪೈಲಟ್ ಉದ್ದೇಶಪೂರ್ವಕವಾಗಿ ನಿಧಾನವಾಗಿ ಕೆಳಮುಖವಾಗಿ ಹಾರಿಸುತ್ತಾ ಬಂದು ಸಾಗರಕ್ಕೆ ಇಳಿಸಿರಬಹುದು ಎಂಬ ಅಭಿಪ್ರಾಯವನ್ನು ಕೆಲವು ಪರಿಣತರು ವ್ಯಕ್ತಪಡಿಸಿದ್ದಾರೆ. ಒಂದು ವೇಳೆ, ಹೀಗಾದರೆ ವಿಮಾನವು ಈಗಿನ ಶೋಧ ಪ್ರದೇಶದ ವ್ಯಾಪ್ತಿಯಿಂದ ಹೊರಗಿರುವ ಸಾಧ್ಯತೆಯಿದೆ.
 ಆದರೆ, ಒಬ್ಬ ಅಥವಾ ಇಬ್ಬರೂ ಪೈಲಟ್‌ಗಳ ಸಂಭಾವ್ಯ ಕೃತ್ಯಗಳ ಹೊರತಾಗಿಯೂ ವಿಮಾನವು ಸಾಗರಕ್ಕೆ ಅತಿ ವೇಗದಲ್ಲಿ ಅಪ್ಪಳಿಸಿದೆ ಎಂಬುದಾಗಿ ವಿಮಾನ ತಯಾರಕ ಸಂಸ್ಥೆ ಬೋಯಿಂಗ್ ನಡೆಸಿದ ತೀವ್ರ ಪರೀಕ್ಷೆಯಲ್ಲಿ ವ್ಯಕ್ತವಾಗಿದೆ. ಅದೇ ವೇಳೆ, ಈ ಫಲಿತಾಂಶವನ್ನು ಆಸ್ಟ್ರೇಲಿಯ ರಕ್ಷಣಾ ಇಲಾಖೆಯ ಅಂಕಿಅಂಶಗಳ ನೂತನ ವಿಶ್ಲೇಷಣೆಯೂ ದೃಢೀಕರಿಸಿದೆ ಎಂದು ‘ದ ಆಸ್ಟ್ರೇಲಿಯನ್’ ವರದಿ ಮಾಡಿದೆ.
ಇಂಧನ ಖಾಲಿಯಾದ ಬಳಿಕ ಹಾಗೂ ಇಂಜಿನ್‌ಗಳಿಗೆ ಬೆಂಕಿ ಹೊತ್ತಿದ ಬಳಿಕ, ನೀರಿಗೆ ಅಪ್ಪಳಿಸುವ ಮುನ್ನ ವಿಮಾನದ ವೇಗ ಕಡಿಮೆಯಾಯಿತು ಎಂದು ಬೋಯಿಂಗ್ ಹೇಳಿದೆ ಎಂದು ವರದಿ ತಿಳಿಸಿದೆ. ವಿಮಾನದ ವೇಗವು ಗಂಟೆಗೆ 640 ಕಿ.ಮೀ.ನಿಂದ ಗಂಟೆಗೆ 220 ಮತ್ತು 366 ಕಿ.ಮೀ. ನಡುವಿನ ವೇಗಕ್ಕೆ ಕುಸಿಯಿತು ಎಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News