×
Ad

ಮುದುಕನಂತೆ ಕಾಣುತ್ತಿರುವ 4 ವರ್ಷದ ಮಗು

Update: 2016-08-09 20:12 IST

ಢಾಕಾ (ಬಾಂಗ್ಲಾದೇಶ), ಆ. 9: ಬಾಂಗ್ಲಾದೇಶದ ನಾಲ್ಕು ವರ್ಷದ ಮಗುವೊಂದು ನಿಗೂಢ ಕಾಯಿಲೆಯಿಂದ ಬಳಲುತ್ತಿದ್ದು, ನೋಡಲು ಮುದುಕನಂತೆ ಕಾಣುತ್ತಿದ್ದಾನೆ. ಈ ಪ್ರಕರಣ ತೀವ್ರ ಕುತೂಹಲ ಕೆರಳಿಸಿರುವಂತೆಯೇ, ಬಾಲಕನನ್ನು ತಪಾಸಣೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಬಡ ರೈತ ಕುಟುಂಬದಿಂದ ಬಂದಿರುವ ಮಗು ಬೈಝೀದ್ ಸಿಖ್ದರ್‌ನ ಕಾಯಿಲೆಯ ಬಗ್ಗೆ ಇತ್ತೀಚೆಗೆ ಮಾಧ್ಯಮಗಳಲ್ಲಿ ವರದಿಗಳು ಬಂದ ಬಳಿಕ, ಮಗುವಿಗೆ ಉಚಿತ ಚಿಕಿತ್ಸೆ ನೀಡಲು ಢಾಕಾದ ದೊಡ್ಡ ಆಸ್ಪತ್ರೆಯೊಂದರ ವೈದ್ಯರು ಮುಂದೆ ಬಂದಿದ್ದಾರೆ.
ಮಗು ಹುಟ್ಟುವಾಗಲೇ ಹೆಚ್ಚುವರಿ ಚರ್ಮದೊಂದಿಗೆ ಹುಟ್ಟಿದೆ. ಹೆಚ್ಚುವರಿ ಚರ್ಮವು ಕೈಕಾಲುಗಳು ಮತ್ತು ಮುಖದಲ್ಲಿ ನೇತಾಡುತ್ತಿದೆ. ಅದೂ ಅಲ್ಲದೆ ಮಗು ಹೃದಯ, ದೃಷ್ಟಿ ಮತ್ತು ಶ್ರವಣ ದೋಷಗಳಿಂದ ಬಳಲುತ್ತಿದೆ.
ಈವರೆಗೆ ತುಂಬಾ ಮಂದಿ ವೈದ್ಯರಿಗೆ ಮಗುವನ್ನು ತೋರಿಸಲಾಗಿದ್ದು, ಅದರ ಸ್ಥಿತಿಯನ್ನು ವಿವರಿಸಲು ಯಾರಿಗೂ ಸಾಧ್ಯವಾಗಿಲ್ಲ ಎಂದು ತಂದೆ ಲಬ್ಲು ಸಿಖ್ದರ್ ಹೇಳುತ್ತಾರೆ.
ಇದು ಹುಟ್ಟಿದ ತಕ್ಷಣ ಕ್ಷಿಪ್ರ ಮತ್ತು ಅಕಾಲಿಕ ವೃದ್ಧಾಪ್ಯಕ್ಕೆ ಒಳಗಾಗುವ ಲಕ್ಷಣಗಳನ್ನು ಹೊಂದಿರುವ ‘ಪ್ರಜೇರಿಯ’ ಎಂಬ ಕಾಯಿಲೆ ಆಗಿರಬಹುದು ಎಂಬುದಾಗಿ ಆರಂಭದಲ್ಲಿ ವೈದ್ಯರು ಶಂಕಿಸಿದ್ದರು.
ಈ ರೋಗವನ್ನು ಆಧರಿಸಿ ಬ್ರಾಡ್ ಪಿಟ್ ಅಭಿನಯದ ಹಾಲಿವುಡ್ ಚಿತ್ರ ‘ದ ಕ್ಯೂರಿಯಸ್ ಕೇಸ್ ಆಫ್ ಬೆಂಜಮಿನ್ ಬಟನ್’ ತಯಾರಾಗಿರುವುದನ್ನು ಸ್ಮರಿಸಬಹುದಾಗಿದೆ.
ಆದರೆ, ಇದನ್ನು ಖಚಿತಪಡಿಸಲು ವ್ಯಾಪಕ ಪರೀಕ್ಷೆಗಳ ಅಗತ್ಯವಿದೆ ಎಂಬುದಾಗಿ ಢಾಕಾ ಆಸ್ಪತ್ರೆಯ ವೈದ್ಯರು ಹೇಳುತ್ತಾರೆ.
‘‘ಪ್ರಜೇರಿಯದಲ್ಲಿ ವಯಸ್ಸಾಗುವ ಪ್ರಕ್ರಿಯೆ ದಿನಗಳೆದಂತೆ ತ್ವರಿತಗೊಳ್ಳುತ್ತದೆ’’ ಎಂದು ವೈದ್ಯ ಅಬುಲ್ ಕಲಾಮ್ ಹೇಳುತ್ತಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News