ಚುಟುಕು ಸುದ್ದಿಗಳು

Update: 2016-08-09 18:33 GMT

ದೋಣಿ ಮಗುಚಿ ಮೂವರು ಗಾಯ
ಕಾಸರಗೋಡು, ಆ.9: ಇಲ್ಲಿನ ಕಸಬಾ ಸಮುದ್ರದಲ್ಲಿ ದೋಣಿ ಮಗುಚಿ ಮೂವರು ಮೀನುಗಾರರು ಗಾಯಗೊಂಡ ಘಟನೆ ಮಂಗಳವಾರ ನಡೆದಿದೆ.
ಬಾಬು(45), ಜೋಜಿ(29) ಮತ್ತು ಅಖಿಲ್(25) ಗಾಯಗೊಂಡಿದ್ದು,ಇವರನ್ನು ನಗರದ ಆಸ್ಪತ್ರೆಗೆ ದಾಖಲಿಸಲಾಗಿದೆ.
  12 ಮಂದಿಯ ತಂಡವು ಮೀನುಗಾರಿಕೆಗೆ ತೆರಳಿದ್ದ ಸಂದರ್ಭದಲ್ಲಿ ಬೀಸಿದ ಬಲ ವಾದ ಗಾಳಿಯ ಅಬ್ಬರಕ್ಕೆ ದೋಣಿ ಮಗುಚಿ ಬಿತ್ತೆನ್ನಲಾಗಿದೆ. ಬಲೆ, ಎರಡು ಎಂಜಿನ್‌ಗಳು ಹಾನಿಗೊಂಡಿದ್ದು, ಸುಮಾರು 2.20 ಲಕ್ಷ ರೂ. ನಷ್ಟ ಅಂದಾಜಿಸಲಾಗಿದೆ.


ಕಾರು ಢಿಕ್ಕಿ: ಪಾದಚಾರಿ ಗಾಯ
ಪುತ್ತೂರು, ಆ.9: ಕಾರೊಂದು ಢಿಕ್ಕಿಯಾಗಿ ಪಾದಚಾರಿ ಮಹಿಳೆಯೊಬ್ಬರು ಗಂಭೀರ ಗಾಯಗೊಂಡು ಆಸ್ಪತ್ರೆಗೆ ದಾಖಲಾದ ಘಟನೆ ಆರ್ಯಾಪು ಗ್ರಾಮದ ಸಂಟ್ಯಾರ್ ಎಂಬಲ್ಲಿ ಮಂಗಳವಾರ ನಡೆದಿದೆ. ಸಂಟ್ಯಾರ್ ನಿವಾಸಿ ಬೀತ್ರು(60) ಗಾಯಗೊಂಡ ಮಹಿಳೆ. ಇವರು ರಸ್ತೆ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ಮೈಸೂರಿನಿಂದ ಮಂಗಳೂರಿಗೆ ಬರುತ್ತಿದ್ದ ಕಾರು ಢಿಕ್ಕಿಯಾಗಿತ್ತು. ಈ ಸಂದರ್ಭ ಬೀತ್ರು ಅವರಿಗೆ ಗಂಭೀರ ಗಾಯಗಳಾಗಿವೆ. ಗಾಯಾಳುವನ್ನು ಪುತ್ತೂರು ಖಾಸಗಿ ಆಸ್ಪತ್ರೆಗೆ ಕರೆತರಲಾಗಿದ್ದು, ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ. ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕಾರು-ಬೈಕ್ ಢಿಕ್ಕಿ: ಸವಾರ ಗಂಭೀರ
ಪುತ್ತೂರು, ಆ.9: ಕಾರು ಮತ್ತು ಬೈಕ್ ನಡುವೆ ಢಿಕ್ಕಿ ಸಂಭವಿಸಿ ಬೈಕ್ ಸವಾರ ಗಂಭೀರ ಗಾಯಗೊಂಡ ಘಟನೆ ಮಾಣಿ ಆರ್ಯಾಪು ಗ್ರಾಮದ ಸಂಟ್ಯಾರ್ ಎಂಬಲ್ಲಿ ಮಂಗಳವಾರ ನಡೆದಿದೆ. ಬೈಕ್ ಚಾಲಕ ಸಂತೋಷ್ ಕುಮಾರ್ ಗಾಯಗೊಂಡವರು. ಇವರು ಬೆಳ್ಳಾರೆ ಯಿಂದ ಪುತ್ತೂರಿಗೆ ಆಗಮಿಸುತ್ತಿದ್ದ ಸಂದಭರ್ದಲ್ಲಿ ಸಂಟ್ಯಾರ್‌ನಲ್ಲಿ ಬೈಕ್ ನಿಯಂತ್ರಣ ಕಳೆದುಕೊಂಡು ಮುಂಭಾಗದಿಂದ ಬರುತ್ತಿದ್ದ ರಿಟ್ಜ್ ಕಾರಿಗೆ ಢಿಕ್ಕಿ ಹೊಡೆಯಿತು. ಗಾಯಾಳು ಸಂತೋಷ್ ಕುಮಾರ್ ರನ್ನು ಮಂಗಳೂರು ಆಸ್ಪತ್ರೆಗೆ ದಾಖಲಿಸಲಾಗಿದೆ. ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


ನದಿಗೆ ಬಿದ್ದು ಮಹಿಳೆ ಮೃತ್ಯು
ಗಂಗೊಳ್ಳಿ, ಆ.9: ನದಿಯ ದಂಡೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಮಹಿಳೆಯೊಬ್ಬರು ಆಕಸ್ಮಿಕವಾಗಿ ಕಾಲು ಜಾರಿ ನೀರಿಗೆ ಬಿದ್ದು ಮೃತಪಟ್ಟ ಘಟನೆ ಮಂಗಳವಾರ ಬೆಳಗ್ಗೆ ಹಕ್ಲಾಡಿ ಎಂಬಲ್ಲಿ ನಡೆದಿದೆ.
ಮೃತರನ್ನು ಹಕ್ಲಾಡಿ ಗ್ರಾಮದ ಬಟ್ಟೆ ಕುದ್ರು ನಿವಾಸಿ ಮುತ್ತಯ್ಯ ಪೂಜಾರಿ ಎಂಬವರ ಪತ್ನಿ ಸೂರು ಪೂಜಾರ್ತಿ(65) ಎಂದು ಗುರುತಿಸಲಾಗಿದೆ. ಇವರು ಹಕ್ಲಾಡಿ ಚಕ್ರ ನದಿಯ ದಂಡೆಯ ಬದಿಯಲ್ಲಿ ನಡೆದುಕೊಂಡು ಬರುವಾಗ ಆಕಸ್ಮಿಕವಾಗಿ ಕಾಲು ಜಾರಿ ನದಿಗೆ ಬಿದ್ದು ಮೃತಪಟ್ಟಿದ್ದಾರೆ. ಈ ಬಗ್ಗೆ ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

ವರದಕ್ಷಿಣೆಗಾಗಿ ಹಲ್ಲೆ: ಆರೋಪ
ಪುತ್ತೂರು, ಆ.9: ವರದಕ್ಷಿಣೆಗಾಗಿ ಪತಿ ಹಲ್ಲೆ ನಡೆಸಿರುವ ಬಗ್ಗೆ ಮಹಿಳೆಯೊಬ್ಬರು ಪುತ್ತೂರು ನಗರ ಠಾಣೆಗೆ ದೂರು ನೀಡಿದ್ದಾರೆ. ಪುತ್ತೂರು ತಾಲೂಕಿನ ಜೈನರಗುರಿ ನಿವಾಸಿ ರವಿರಾಜ್ ಹೆಗ್ಡೆ ಎಂಬವರ ಪತ್ನಿ ರೇಶ್ಮಾ ದೂರು ನೀಡಿರುವ ಮಹಿಳೆ. ರವಿರಾಜ್ ಹೆಗ್ಡೆ ಅವರೊಂದಿಗೆ 5 ವರ್ಷಗಳ ಹಿಂದೆ ವಿವಾಹವಾಗಿದ್ದು, ಈ ಸಂದರ್ಭದಲ್ಲಿ ವರದಕ್ಷಿಣೆ ನೀಡಲಾಗಿತ್ತು. ಸೋಮವಾರ ಪಾನಮತ್ತರಾಗಿ ಬಂದು ಮನೆಯಲ್ಲಿ ಗಲಾಟೆ ನಡೆಸಿ ವರದಕ್ಷಿಣೆ ನೀಡುವಂತೆ ತನ್ನ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಅವರು ದೂರಿನಲ್ಲಿ ಆರೋಪಿಸಿದ್ದಾರೆ. ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ದನಕಳವು: ಇಬ್ಬರು ಆರೋಪಿಗಳ ಬಂಧನ
ಬೆಳ್ತಂಗಡಿ, ಆ.9: ಮಲವಂತಿಗೆ ಗ್ರಾಮದ ಲಕ್ಷ್ಮಣ ಗೌಡ ಎಂಬವರ ಹಟ್ಟಿಯಿಂದ ದನವನ್ನು ಕದ್ದೊಯ್ದ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ.
ಈ ಬಗ್ಗೆ ಆ.6 ರಂದು ಬೆಳ್ತಂಗಡಿ ಠಾಣೆಯಲ್ಲಿ ದೂರು ನೀಡಿದ್ದು ಪ್ರಕರಣ ದಾಖಲಾಗಿತ್ತು. ಪ್ರಕರಣದ ಜಾಡು ಹಿಡಿದ ಬೆಳ್ತಂಗಡಿ ಪೋಲಿಸರು ಕಾರ್ಯಚರಣೆ ವೇಳೆ ಇಬ್ಬರು ಆರೋಪಿಗಳಾದ ಹೈದರ್ ಕೊಲ್ಲಿಬೆಟ್ಟು(28) ಮತ್ತು ಆಸಿಫ್ ಕೊಲ್ಲಿ ಬೆಟ್ಟು (23) ಎಂಬ ಕೊಲ್ಲಿ ನಿವಾಸಿಗಳನ್ನು ಬಂಧಿಸಿದ್ದಾರೆ. ಮತ್ತೋರ್ವ ಆರೋಪಿ ಪರಾರಿಯಾಗಿದ್ದಾನೆ. ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದೆ.

ಮದ್ರಸ ಪರೀಕ್ಷೆ: ರೇಂಜ್‌ನಲ್ಲಿ ಪ್ರಥಮ
ಕೃಷ್ಣಾಪುರ, ಆ.9: ಇಸ್ಲಾಮಿಕ್ ಎಜುಕೇಶನಲ್ ಬೋರ್ಡ್ ಆಫ್ ಇಂಡಿಯಾ ಇದರ ಅಧೀನದಲ್ಲಿ ನಡೆದ ಹತ್ತನೆ ತರಗತಿಯ ಪಬ್ಲಿಕ್ ಪರೀಕ್ಷೆಯಲ್ಲಿ ಕೃಷ್ಣಾಪುರ ಅಲ್- ಬದ್ರಿಯಾ ಈದ್ಗಾ ಮದ್ರಸದ ವಿದ್ಯಾರ್ಥಿನಿ ಶಬೀಬಾ ಸುರತ್ಕಲ್ ರೇಂಜ್ ಮಟ್ಟದಲ್ಲಿ ಪ್ರಥಮ ಸ್ಥಾನವನ್ನು ಗಳಿಸಿದ್ದಾರೆ. ಈಕೆ ಅಬೂಬಕರ್ ಮುಸ್ಲಿಯಾರ್ ಅವರ ಪುತ್ರಿ.

ಆ.12: ‘ನಶೀಬಾಚೊ ಖೇಳ್’ ಕೊಂಕಣಿ ಚಿತ್ರ ಬಿಡುಗಡೆ
ಮಂಗಳೂರು, ಆ.9: ಕ್ಯಾಮ್ ಫಿಲಂಸ್ ಅರ್ಪಿಸುವ, ಪ್ರೆಸ್ಟನ್ ಎಂಟರ್‌ಪ್ರೈಸಸ್ ಲಾಂಛನದಲ್ಲಿ ತಯಾರಾದ ಹೆನ್ರಿ ಡಿಸಿಲ್ವಾ ಸುರತ್ಕಲ್ ನಿರ್ಮಿಸಿದ ‘ನಶೀಬಾಚೊ ಖೇಳ್’ ಕೊಂಕಣಿ ಚಿತ್ರವು ಆ.12ರಂದು ನಗರದ ಪ್ರಭಾತ್ ಟಾಕೀಸ್‌ನಲ್ಲಿ ತೆರೆಕಾಣಲಿದೆ.
ಸಿನಿಮಾದ ಉದ್ಘಾಟನಾ ಸಮಾರಂಭದಲ್ಲಿ ಮಂಗಳೂರಿನ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ ಬಿಷಪ್ ಅಲೋಶಿಯಸ್ ಪೌಲ್ ಡಿಸೋಜ, ಶಾಸಕ ಜೆ. ಆರ್. ಲೋಬೊ, ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ, ಚಲನಚಿತ್ರ ನಿರ್ಮಾಪಕ-ನಿರ್ದೇಶಕ ರಿಚರ್ಡ್ ಕ್ಯಾಸ್ತಲಿನೋ, ವಾಲ್ಟರ್ ನಂದಳಿಕೆ ಮತ್ತಿತರರು ಭಾಗವಹಿಸಲಿದ್ದಾರೆ. ‘ನಶೀಬಾಚೊ ಖೆಳ್’ ಕೊಂಕಣಿ ಚಿತ್ರಕ್ಕೆ ಹೆನ್ರಿ ಡಿಸಿಲ್ವಾ ಕಥೆ-ಸಂಭಾಷಣೆ ಬರೆದು ಸಿನಿಮಾ ನಿರ್ಮಾಣ ಮಾಡಿದ್ದ್ದಾರೆ. ಹ್ಯಾರಿ ಫೆರ್ನಾಂಡಿಸ್ ಬಾರ್ಕೂರ್ ಚಿತ್ರಕಥೆ ರಚಿಸಿ ನಿರ್ದೇಶಿಸಿದ್ದಾರೆ. ಸಿನೆಮಾಕ್ಕೆ ವಿಲ್ಸನ್ ಓಲಿವರ್ - ಗುಣವಂತ ಸೇನ್ ಸಂಗೀತ ನೀಡಿದ್ದು, ಶಫಿಶೇಕ್ ಛಾಯಾಗ್ರಾಹಕರಾಗಿದ್ದು, ಅಭಿಷೇಕ್ ಸಂಕಲನ ಮಾಡಿದ್ದಾರೆ. ದಿಲ್‌ವಾಲೆ ಖ್ಯಾತಿಯ ಸುನೀಲ್ ರೊಡ್ರಿಗಸ್ ಬಾರ್ಕೂರ್ ಸಿನೆಮಾಕ್ಕೆ ಸಾಹಸ ನಿರ್ದೇಶನ ಮಾಡಿದ್ದಾರೆ. ಸಿನಿಮಾ ಆ.12ರಂದು ಪ್ರಭಾತ್‌ನಲ್ಲಿ ಹಾಗೂ ಆ. 19ರಂದು ಉಡುಪಿ ಆಶೀರ್ವಾದ್ ಟಾಕೀಸಿನಲ್ಲಿ ತೆರೆಕಾಣಲಿದೆ. ಸಿನಿಮಾದಲ್ಲಿ ಎಲ್ಬೆನ್ ಮಸ್ಕರೇನಸ್, ಎಸ್ತೆರ್ ನೊರೊನ್ಹಾ, ರಂಜಿತಾ ಲೂವಿಸ್ ಸಾಸ್ತಾನ, ಪ್ರೀನ್ಸ್ ಜಾಕೊಬ್ ಗೋವಾ, ಸ್ಟಾನಿ ಅಲ್ವಾರಿಸ್, ಸುಜಾತಾ ಅಂದ್ರಾದೆ, ಗ್ಯಾಲ್ವಿನ್ ಫೆರ್ನಾಂಡಿಸ್ ಮತ್ತಿತರರು ಪ್ರಮುಖ ಪಾತ್ರದಲ್ಲಿದ್ದ್ದು, ಒಟ್ಟು 30ಕ್ಕೂ ಹೆಚ್ಚು ಮಂದಿ ಕಲಾವಿದರು ಅಭಿನಯಿಸಿದ್ದಾರೆ.

ಮೀನುಗಾರನ ಮೃತದೇಹ ಪತ್ತೆ
ಗಂಗೊಳ್ಳಿ, ಆ.9: ಭಟ್ಕಳ ಆಳ ಸಮುದ್ರದಲ್ಲಿ ಆ.3ರಂದು ಸಂಭ ವಿಸಿದ ದೋಣಿ ದುರಂತದಲ್ಲಿ ನಾಪತ್ತೆಯಾಗಿದ್ದ ಮೀನುಗಾರರೊಬ್ಬರ ಮೃತದೇಹ ಮಂಗಳವಾರ ಬೆಳಗ್ಗೆ ಹೊಸಾಡು ಗ್ರಾಮದ ಟರ್ಟಲ್ ಬೀಚ್ ಕಂಚುಗೋಡು ಬಳಿ ಪತ್ತೆಯಾಗಿದೆ.
ಮೃತರನ್ನು ಭಟ್ಕಳದ ಮಾವಿನಕುಳಿವೆ ನಿವಾಸಿ ಮಂಜುನಾಥ ಖಾರ್ವಿ(35) ಎಂದು ಗುರುತಿಸಲಾಗಿದೆ. ಇವರು ಇತರ ಮೀನುಗಾರ ರೊಂದಿಗೆ ಆ.3 ರಂದು ಭಟ್ಕಳ ಬಂದರಿನಿಂದ ದೋಣಿ ಯಲ್ಲಿ ಮೀನುಗಾರಿಕೆಗೆ ಹೊರಟಿದ್ದರು. ಆಳಸಮುದ್ರದಲ್ಲಿ ಮೀನುಗಾರಿಕೆ ಮಾಡುತ್ತಿರುವಾಗ ಭಾರಿ ಗಾಳಿ ಮಳೆಗೆ ದೋಣಿ ಮಗುಚಿ ಬಿತ್ತೆನ್ನಲಾಗಿದೆ. ಈ ವೇಳೆ ಮಂಜುನಾಥ್ ಸಮುದ್ರದಲ್ಲಿ ಮುಳುಗಿ ನಾಪತ್ತೆಯಾಗಿದ್ದರು. ಈ ಬಗ್ಗೆ ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಸತಿ ನಿಲಯದ ತ್ಯಾಜ್ಯ ನೀರಿನಿಂದ ಸಾರ್ವಜನಿಕರಿಗೆ ತೊಂದರೆ
 ಬೆಳ್ತಂಗಡಿ, ಆ.9: ಇಲ್ಲಿನ ಪಪಂ ವ್ಯಾಪ್ತಿಯ ಚರ್ಚ್ ರೋಡ್ ಬಳಿಯ ಸಮಾಜ ಕಲ್ಯಾಣ ಇಲಾಖೆಯ ವಿದ್ಯಾರ್ಥಿನಿ ವಸತಿ ನಿಲಯದ ತ್ಯಾಜ್ಯ ನೀರಿನಿಂದಾಗಿ ಸಾರ್ವಜನಿಕರಿಗೆ ಉಂಟಾಗಿರುವ ಸಮಸ್ಯೆಯ ಬಗ್ಗೆ ಮಂಗಳವಾರ ನಡೆದ ಪಪಂ ಸಾಮಾನ್ಯ ಸಭೆಯಲ್ಲಿ ಚರ್ಚೆ ನಡೆದಿದೆ. ಈ ಬಗ್ಗೆ ಜಿಲ್ಲಾಧಿಕಾರಿಯವರಿಗೆ ಪತ್ರ ಬರೆಯುವ ನಿರ್ಣಯ ಕೈಗೊಳ್ಳಲಾಯಿತು. ಪಪಂ ಅಧ್ಯಕ್ಷ ಮುಗುಳಿ ನಾರಾಯಣ ರಾವ್ ಅಧ್ಯಕ್ಷತೆ ಯಲ್ಲಿ ಸಭೆ ನಡೆಯಿತು. ನಾಮ ನಿರ್ದೇಶಿತ ಸದಸ್ಯ ಜನಾರ್ದನ ಬಂಗೇರ, ವಸತಿ ನಿಲಯದಿಂದ ಆಗುವ ತೊಂದರೆಯನ್ನು ಸಭೆಯಲ್ಲಿ ವಿವರಿಸಿದರು. ಸುಮಾರು 200 ಮಂದಿ ವಿದ್ಯಾರ್ಥಿನಿಯರು ಇರುವ ವಸತಿ ನಿಲಯದಿಂದ ತ್ಯಾಜ್ಯ ನೀರನ್ನು ಖಾಸಗಿಯವರ ಹಾಗೂ ಪಪಂ ಚರಂಡಿಗೆ ಹರಿಯ ಬಿಡುತ್ತಿದ್ದಾರೆ. ಇದರಿಂದ ಪರಿಸರದಲ್ಲಿ ದುರ್ವಾಸನೆಯ ವಾತಾವರಣವಿದೆ. ನಿಲಯದ ಕೆಲವು ಕಾಮಗಾರಿಗಳಿಗೆ ಪಪಂನಿಂದ ಅನುದಾನ ನೀಡಲಾಗಿದೆ ಎಂದು ಸಭೆಯಲ್ಲಿ ತಿಳಿಸಲಾಯಿತು.
ಬೆಳ್ತಂಗಡಿಯಲ್ಲಿ ವಾಹನ ಸಂಚಾರ ದಟ್ಟಣೆಯಿಂದ ಪಾರ್ಕಿಂಗ್ ವ್ಯವಸ್ಥೆಯನ್ನು ಸರಿಮಾಡುವ ಬಗ್ಗೆ ಆ.16 ಮತ್ತು 17ರಂದು ಬಂಟ್ವಾಳ ಡಿವೈಎಸ್ಪಿ ರವೀಶ್ ಉಪಸ್ಥಿತಿ ಯಲ್ಲಿ ನಿರ್ಧರಿಸಲಾಗುವುದು ಎಂದು ಸಭೆಯಲ್ಲಿ ತೀರ್ಮಾ ನಿಸಲಾಯಿತು. ಸಭೆಯಲ್ಲಿ ಪಂಚಾಯತ್ ಉಪಾಧ್ಯಕ್ಷ ಜಗದೀಶ್ ಡಿ., ಸ್ಥಾಯಿ ಸಮಿತಿ ಅಧ್ಯಕ್ಷ ಸಂತೋಷ್ ಕುಮಾರ್ ಜೈನ್, ಶಹರಿ ರೋಜ್‌ಗಾರ್ ಯೋಜನಾಧಿಕಾರಿ ವೆಂಕಟರಮಣ ಶರ್ಮ, ಇಂಜಿನಿಯರ್ ಮಹಾವೀರ್ ಉಪಸ್ಥಿತರಿದ್ದರು.

ಅವೈಜ್ಞಾನಿಕವಾಗಿ ‘ಎಂಡೋ ಸಲ್ಫಾನ್’ ದಾಸ್ತಾನು: ಸ್ಥಳೀಯರಲ್ಲಿ ಆತಂಕ
 ಕಾಸರಗೋಡು, ಆ.9: ಜಿಲ್ಲೆಯ ತೋಟಗಾರಿಕಾ ನಿಗಮದ ಗೋದಾಮುಗಳಲ್ಲಿ ಅವೈಜ್ಞಾನಿಕವಾಗಿ ದಾಸ್ತಾನಿಟ್ಟಿರುವ ಮಾರಕ ಕೀಟನಾಶಕ ‘ಎಂಡೋ ಸಲ್ಫಾನ್’ನನ್ನು ನಿಷ್ಕ್ರಿಯಗೊಳಿಸುವ ಪ್ರಕ್ರಿಯೆ ಮೂಲೆಗುಂಪಾಗಿದೆ. ಗೋದಾಮುಗಳಲ್ಲಿ ದಾಸ್ತಾನಿಟ್ಟಿರುವ ಮಾರಕ ಕೀಟನಾಶಕವನ್ನು ಮೂರುವರ್ಷಗಳ ಹಿಂದೆ ತೆರವುಗೊಳಿಸುವ ನಿಟ್ಟಿನಲ್ಲಿ ಯೋಜನೆ ಹಾಕಿದ್ದರೂ ಇನ್ನೂ ಪೂರ್ಣಗೊಂಡಿಲ್ಲ.
 ಎರಡು ಹಂತಗಳಲ್ಲಿ ಇದನ್ನು ನಿಷ್ಕ್ರಿಯಗೊಳಿಸುವ ಯೋಜನೆ ಹಾಕಲಾಗಿತ್ತು. ಆದರೆ ತಾಂತ್ರಿಕ ಕಾರಣಗಳಿಂದ ನಿಷ್ಕ್ರಿಯ ಪ್ರಕ್ರಿಯೆ ಆರಂಭ ಹಂತದಲ್ಲೇ ಉಳಿದುಕೊಂಡಿದೆ.
    ಎಂಡೋಸಲ್ಫಾನ್ ನಿಷೇಧಕ್ಕೆ 15ವರ್ಷಗಳು ಸಂದಿವೆ. 1999ರ ಮೇ ತಿಂಗಳಲ್ಲಿ ಎಂಡೋಸಲ್ಫಾನ್‌ನನ್ನು ನಿಷೇಧಿ ಸಲಾಗಿತ್ತು. ಕಳೆದ ನಾಲ್ಕೈದು ವರ್ಷಗಳಿಂದ ನಿಷ್ಕ್ರಿಯಕ್ಕೆ ಯೋಜನೆ ಹಾಕಿದ್ದರೂ ಇನ್ನೂ ಕಾರ್ಯಗತಗೊಂಡಿಲ್ಲ. ಈ ನಡುವೆ ಎರ್ನಾಕುಲಂನ ಹಿಂದೂಸ್ಥಾನ್ ಇನ್ ಸೆಕ್ಟಿಸೈಡ್ ಕಂಪೆನಿಗೆ ಜವಾಬ್ದಾರಿ ನೀಡಲಾಗಿದೆ. ಎಚ್‌ಐಎಲ್ ಮತ್ತು ಮಂಗಳೂರಿನ ಭಾಮಿಲ್ಯಾಬ್ ಸಂಸ್ಥೆಗಳಿಗೆ ಈ ಹಿಂದೆ ವಹಿಸಿಕೊಡಲಾಗಿತ್ತು. ಆದರೆ ಇವರು ಸಲ್ಲಿಸಿದ ವರದಿ ಯನ್ನು ಪರಿಶೀಲಿಸಿದ ಸಭೆಯೂ ಭಾಮಿ ಲ್ಯಾಬ್ ಬಳಿ ಸೂಕ್ತ ಸೌಲಭ್ಯಗಳಿಲ್ಲದ ಕಾರಣ ಎಚ್‌ಐಎಲ್ ಗೆ ವಹಿಸಿ ಕೊಡ ಲಾಗಿತ್ತು. ಆದರೆ ಇನ್ನೂ ತಾಂತ್ರಿಕ ಕಾರಣಗಳು ಅಡ್ಡಿ ಯಾಗಿ ಪರಿಣಮಿಸಿದೆ.
 ಪೆರಿಯ, ರಾಜಾಪುರ, ಚೀಮೆನಿ, ಪಾಲಕ್ಕಾಡ್‌ನ ಗೋದಾ ಮುಗಳಲ್ಲಿ ಎರಡು ಸಾವಿರ ಲೀಟರ್‌ಗಳಷ್ಟು ಎಂಡೋ ಸಲ್ಫಾನ್ ದಾಸ್ತಾನಿದೆ .
       15 ವರ್ಷಗಳ ಹಿಂದೆ ಎಂಡೋಸಲ್ಫಾನ್ ಮಹಾಮಾರಿ ಸಿಂಪಡಣೆಗೆ ಕಡಿವಾಣ ಬಿದಿದ್ದು. ಆದರೆ ನಿಷೇಧದ ಸಂದರ್ಭ ದಲ್ಲಿ ಗೋದಾಮುಗಳಲ್ಲಿ ದಾಸ್ತಾರಿಸಿದ್ದ ಎಂಡೋ ಸಲ್ಫಾನ್ ಒಂದೂವರೆ ದಶಕ ಕಳೆದರೂ ಜನತೆಯಲ್ಲಿ ಭಯ ಹುಟ್ಟಿಸುತ್ತಿದ್ದು, ಕೀಟನಾಶಕ ತೆರವುಗೊಳಿಸದಿರುವುದು ಮುಂದೆ ಅನಾಹುತಕ್ಕೆ ಕಾರಣವಾಗಲಿದೆಯೇ ಎಂಬ ಆತಂಕ ಸ್ಥಳೀಯರಲ್ಲಿದೆ.

ಕುಸಿದು ಬಿದ್ದು ಮೃತ್ಯು
ಉಡುಪಿ, ಆ.9: ಗೋವಾಕ್ಕೆ ತೆರಳಲು ಉಡುಪಿ ಸರ್ವೀಸ್ ಬಸ್ ನಿಲ್ದಾಣ ದಲ್ಲಿರುವ ಗಣೇಶ್ ಟ್ರಾವೆಲ್ಸ್ ಕಚೇರಿಯಲ್ಲಿ ಸೋಮವಾರ ರಾತ್ರಿ ಬಸ್‌ಗಾಗಿ ಕಾಯುತ್ತಿದ್ದ ಪ್ರವೀಣ್ ಭಟ್(50) ಎಂಬವರು ಕುಸಿದು ಬಿದ್ದು ಮೃತಪಟ್ಟಿದ್ದಾರೆ. ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಯುವತಿ ನಾಪತ್ತೆ
ಕಾರ್ಕಳ, ಆ.9: ಮಾಳ ಗ್ರಾಮದ ಪೇರಡ್ಕ ನಿವಾಸಿ ಮನೋಹರ ದೇವಾಡಿಗ ಎಂಬ ವರ ಪತ್ನಿ ನವ್ಯಾ (23) ಆ.5ರಂದು ತನ್ನ ತಾಯಿ ಮನೆ ಕಾರ್ಕಳ ಶಿವತಿಕೆರೆಯಿಂದ ದೇವಸ್ಥಾನಕ್ಕೆ ಹೋಗಿ ಬರುವುದಾಗಿ ಹೇಳಿ ಹೋದ ವರು ಈವರೆಗೆ ವಾಪಸು ಬಾರದೆ ನಾಪತ್ತೆಯಾಗಿದ್ದಾರೆ. ಈ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News