ಅಕ್ಷರಹಿಂಸೆ ಕ್ಯಾನ್ಸರ್‌ಗಿಂತ ಮಾರಕ: ರಾಜೇಂದ್ರ ಪ್ರಸಾದ್

Update: 2016-08-09 18:42 GMT

ಉಡುಪಿ, ಆ.9: ಪ್ರಸ್ತುತ ಹಿಂಸೆ ಎಂಬುದು ಕೇವಲ ಹೊಡೆದಾಟಕ್ಕೆ ಸೀಮಿತವಾಗಿರದೆ ಅಕ್ಷರ ರೂಪಕ್ಕೂ ಬಂದಿದೆ. ಹಿಂದೆ ಸಾಮಾಜಿಕ ಜಾಲತಾಣಗಳಲ್ಲಿ ಮಾತ್ರ ಕಂಡುಬರುತ್ತಿದ್ದ ಅಕ್ಷರದ ಹಿಂಸೆ, ಇಂದು ದಿನಪತ್ರಿಕೆಗಳ ಮೂಲಕ ಎಲ್ಲ ಕಡೆಗಳಿಗೂ ಪ್ರಸಾರವಾಗುತ್ತಿದೆ. ಈ ಬಗ್ಗೆ ನಾವು ಎಚ್ಚೆತ್ತುಕೊಂಡು ಅಕ್ಷರ ಹಿಂಸೆಯನ್ನು ತಡೆಯದಿದ್ದರೆ ಮುಂದೆ ಇದು ಕ್ಯಾನ್ಸರ್ ರೋಗಕ್ಕಿಂತ ಮಾರಕವಾಗಲಿದೆ ಎಂದು ಮಂಡ್ಯದ ಲೇಖಕ ರಾಜೇಂದ್ರ ಪ್ರಸಾದ್ ಆತಂಕ ವ್ಯಕ್ತಪಡಿಸಿದ್ದಾರೆ.

ಉಡುಪಿಯ ರಾಷ್ಟ್ರಕವಿ ಗೋವಿಂದ ಪೈ ಸಂಶೋಧನ ಕೇಂದ್ರ ಹಾಗೂ ಅಕಾಡಮಿ ಆಫ್ ಜನರಲ್ ಎಜ್ಯುಕೇಶನ್ ಮಣಿಪಾಲ ಇವರ ವತಿಯಿಂದ ಮಂಗಳವಾರ ಕುಂಜಿಬೆಟ್ಟು ಡಾ.ಟಿ.ಎಂ.ಎ.ಪೈ ಶಿಕ್ಷಣ ಮಹಾವಿದ್ಯಾಲಯದಲ್ಲಿ ತನ್ನ ‘ಲಾವೋನ ಕನಸು’ ಕೃತಿಗೆ ಪ್ರದಾನ ಮಾಡಲಾದ ‘ಕಡೆಂಗೋಡ್ಲು ಕಾವ್ಯ ಪ್ರಶಸ್ತಿ-2016’ನ್ನು ಸ್ವೀಕರಿಸಿ ಅವರು ಮಾತನಾಡುತ್ತಿದ್ದರು.

ಇಂದಿನ ಕಾವ್ಯಗಳಿಗೆ ಹೊಸ ಸ್ಪರ್ಶ ಸಿಕ್ಕಿದರೆ ಮಾತ್ರ ಉತ್ತಮ ಕಾವ್ಯ ರಚನೆಗೆ ಹೊಸ ಪ್ರೇರಣೆ ಸಿಗಲು ಸಾಧ್ಯ. ಕಾವ್ಯವನ್ನು ನಾವು ಯಾಕೆ ಬರೆಯುತ್ತೇವೆ ಎನ್ನುವ ಕಾರಣ ಹುಡುಕಿದರೆ ಅದೆಷ್ಟೋ ಪ್ರಶ್ನೆಗಳಿಗೆ ಉತ್ತರ ಸಿಗುವುದಿಲ್ಲ. ಇದಕ್ಕೆ ಉತ್ತರ ಹುಡುಕುತ್ತ ಹೋದರೆ ಕೇವಲ ಮಾರ್ಗ ಮಾತ್ರ. ಆ ಮಾರ್ಗದಲ್ಲಿ ನಡೆದರೆ ಮಾತ್ರ ನಾವು ಬದುಕನ್ನು ಕಟ್ಟಿಕೊಳ್ಳಬಹುದು ಎಂದರು.

ಅಧ್ಯಕ್ಷತೆ ವಹಿಸಿದ್ದ ಸಾಹಿತಿ ಡಾ.ಏರ್ಯ ಲಕ್ಷ್ಮೀ ನಾರಾಯಣ ಆಳ್ವ ರಾಜೇಂದ್ರ ಪ್ರಸಾದ್‌ರ ‘ಲಾವೋನ ಕನಸು’ ಕೃತಿ ಬಿಡುಗಡೆಗೊಳಿಸಿ ಮಾತನಾಡಿ, ಯಾವುದಕ್ಕೂ ಇಲ್ಲದ ಅನನ್ಯ ಶಕ್ತಿ ಸಾಹಿತ್ಯಕ್ಕಿದೆ. ಸಾಹಿತ್ಯದಿಂದ ಎಲ್ಲವನ್ನೂ ಪಡೆಯಲು ಸಾಧ್ಯವಿದೆ. ನವೋದಯದ ಮುಂಗೋಳಿ ಮುದ್ದಣ, ಪಂಜೆ ಹಾಗೂ ಕಡೆಂಗೋಡ್ಲು ಅವರು ಕಾರ್ಗಾಲದ ವೈಭವವನ್ನು ಹಂಚಿಕೊಂಡು ವರ್ಣಿಸಿದ್ದರು ಎಂದರು.
ಸಾಹಿತಿ, ವಿಮರ್ಶಕ ಪ್ರೊ.ಮುರಳೀಧರ ಉಪಾಧ್ಯ ಹಿರಿಯಡ್ಕ ಕೃತಿ ಪರಿಚಯ ಮಾಡಿದರು. ಕಡೆಂಗೋಡ್ಲು ಈಶ್ವರ ಭಟ್ ಬೆಂಗಳೂರು, ಡಾ.ಕೆ.ಎಸ್.ಭಟ್ ಮಣಿಪಾಲ, ಅಕಾಡಮಿ ಆಡಳಿ ತಾಧಿಕಾರಿ ಡಾ.ಎಚ್. ಶಾಂತರಾಮ್ ಉಪಸ್ಥಿತರಿದ್ದರು.

ನಿವೃತ್ತ ಪ್ರಾಚಾರ್ಯ ಡಾ.ಪಾದೆಕಲ್ಲು ವಿಷ್ಣು ಭಟ್ ಸ್ವಾಗತಿಸಿದರು. ಕೇಂದ್ರದ ನಿರ್ದೇಶಕ ಪ್ರೊ.ಹೇರಂಜೆ ಕೃಷ್ಣ ಭಟ್ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News