ಇನ್ನೂ ವಿಲೇವಾರಿಯಾಗದ ಎಂಡೋಸಲ್ಫಾನ್ ದಾಸ್ತಾನು: ಆತಂಕದಲ್ಲಿ ಜನತೆ

Update: 2016-08-10 03:37 GMT

ಕಾಸರಗೋಡು, ಆ.10: ಜಿಲ್ಲೆಯ ತೋಟಗಾರಿಕಾ ನಿಗಮದ ಗೋದಾಮುಗಳಲ್ಲಿ ಅವೈಜ್ಞಾನಿಕವಾಗಿ ದಾಸ್ತಾನಿಟ್ಟಿರುವ ಮಾರಕ ಕೀಟನಾಶಕ ‘ಎಂಡೋ ಸಲ್ಫಾನ್’  ನಿಷ್ಕ್ರಿಯಗೊಳಿಸುವ ಪ್ರಕ್ರಿಯೆ ಮೂಲೆಗುಂಪಾಗಿದೆ. ಗೋದಾಮುಗಳಲ್ಲಿ ದಾಸ್ತಾನಿಟ್ಟಿರುವ ಮಾರಕ ಕೀಟನಾಶಕವನ್ನುಮೂರುವರ್ಷಗಳ ಹಿಂದೆ ತೆರವುಗೊಳಿಸುವ ನಿಟ್ಟಿನಲ್ಲಿ ಯೋಜನೆ ಹಾಕಿದ್ದರೂ ಇಂದಿಗೂ ಪೂರ್ಣಗೊಳ್ಳದೇ ಇರುವುದು ಜನತೆಯ ಆತಂಕಕ್ಕೆ ಕಾರಣವಾಗಿದೆ.

ಎರಡು ಹಂತಗಳಲ್ಲಿ ಇದನ್ನು ನಿಷ್ಕ್ರಿಯಗೊಳಿಸುವ  ಯೋಜನೆ ಹಾಕಲಾಗಿತ್ತು. ಆದರೆ ತಾಂತ್ರಿಕ ಕಾರಣಗಳು ನಿಷ್ಕ್ರೀಯ ಪ್ರಕ್ರಿಯೆ ಆರಂಭ ಹಂತದಲ್ಲೇ ಉಳಿದುಕೊಂಡಿದೆ.

ಎಂಡೋಸಲ್ಫಾನ್  ನಿಷೇಧಕ್ಕೆ 15 ವರ್ಷಗಳು ಸಂದಿವೆ. 1999ರ ಮೇ  ತಿಂಗಳಲ್ಲಿ  ಎಂಡೋಸಲ್ಫಾನ್  ನನ್ನು ನಿಷೇಧಿಸಲಾಗಿತ್ತು. ಆದರೆ  ಈ  ಸಂದರ್ಭದಲ್ಲಿ  ತೋಟಗಾರಿಕಾ ನಿಗಮದ  ಗೇರು ತೋಟದ  ಗೋದಾಮುಗಳಲ್ಲಿ  ದಾಸ್ತಾನಿಸಿರುವ  ಎಂಡೋಸಲ್ಫಾನ್ ನನ್ನು  ನಿಷ್ಕ್ರಿಯ ಗೊಳಿಸಲು ಇನ್ನೂ ಸಾಧ್ಯವಾಗಿಲ್ಲ . ಕಳೆದ ನಾಲ್ಕೈದು ವರ್ಷಗಳಿಂದ  ನಿಷ್ಕ್ರಿಯಕ್ಕೆ  ಯೋಜನೆ ಹಾಕಿದ್ದರೂ ಇನ್ನೂ ಕಾರ್ಯಗತ ಗೊಂಡಿಲ್ಲ.  ಈ ನಡುವೆ   ಎರ್ನಾಕುಲಂ ನ  ಹಿಂದೂಸ್ಥಾನ್  ಇನ್ ಸೆಕ್ಟಿಸೈಡ್ ಕಂಪೆನಿಗೆ  ಜವಾಬ್ದಾರಿ ನೀಡಲಾಗಿದೆ. ಎಚ್ಐಎಲ್ ಮತ್ತು ಮಂಗಳೂರಿನ ಬಾಮಿ  ಲ್ಯಾಬ್ ಸಂಸ್ಥೆಗಳಿಗೆ ಈ ಹಿಂದೆ ವಹಿಸಿಕೊಡಲಾಗಿತ್ತು. ಆದರೆ ಭಾಮಿ ಲ್ಯಾಬ್  ಬಳಿ ಸೂಕ್ತ ಸೌಲಭ್ಯಗಳಿಲ್ಲದ ಕಾರಣ ಎಚ್ಐಎಲ್ ಗೆ ವಹಿಸಿಕೊಡಲಾಗಿತ್ತಾದರೂ ಇನ್ನೂ  ತಾಂತ್ರಿಕ ಕಾರಣಗಳು ಅಡ್ಡಿಯಾಗಿ ಪರಿಣಮಿಸಿದೆ.

ಪೆರಿಯ, ರಾಜಾಪುರ, ಚೀಮೆನಿ, ಪಾಲಕ್ಕಾಡ್ ನ  ಗೋದಾಮುಗಳಲ್ಲಿ  ಎರಡು  ಸಾವಿರ  ಲೀಟರ್ ಗಳಷ್ಟು  ಎಂಡೋಸಲ್ಫಾನ್ ದಾಸ್ತಾನಿದೆ. ಗೋದಾಮುಗಳಲ್ಲಿ  ಕಬ್ಬಿಣದ  ಬ್ಯಾರಲ್ ಗಳಲ್ಲಿ  ದಾಸ್ತಾನಿಸಿರುವ ಎಂಡೋಸಲ್ಫಾನ್ ಎರಡೂವರೆ ವರ್ಷಗಳ ಹಿಂದೆ ಪ್ಲಾಸ್ಟಿಕ್  ಬ್ಯಾರಲ್ ಗೆ  ವರ್ಗಾಯಿಸಲಾಗಿದೆ. ಕಬ್ಬಿಣದ ಬ್ಯಾರಲ್  ತುಕ್ಕು ಹಿಡಿದು ಅದರಿಂದ ಹಲವು ಲೀಟರ್  ಗಳಷ್ಟು   ಎಂಡೋಸಲ್ಫಾನ್ ಮಣ್ಣು ಸೇರಿದೆ.  ಉಳಿದ  ಎಂಡೋಸಲ್ಫಾನ್ ನನ್ನು  ಇದೀಗ ಪ್ಲಾಸ್ಟಿಕ್ ಬ್ಯಾರಲ್ ಗಳಲ್ಲಿ  ಇರಿಸಲಾಗಿದೆ.

ಜಿಲ್ಲೆಯ ೧೧ ಗ್ರಾಮ ಪಂಚಾಯತ್  ವ್ಯಾಪ್ತಿಯ ಮತ್ತು ಕರ್ನಾಟಕ ಗಡಿ ಪ್ರದೇಶದ ಸಾವಿರಾರು ಜನರ ಬದುಕನ್ನು ಎಂಡೋಸಲ್ಫಾನ್ ಎಂಬ ಮಹಾಮಾರಿ ಕಸಿದು ಕೊಂಡಿದೆ. ಈ ಪ್ರದೇಶದಲ್ಲಿರುವ ತೋಟಗಾರಿಕಾ ನಿಗಮದ ಗೇರುತೋಟಗಳಿಗೆ  ಹೆಲಿಕಾಪ್ಟರ್ ಮೂಲಕ  ದಶಕ ಗಳ ಕಾಲ ಮಾರಕ ಕೀಟ ನಾಶಕ ಸಿಂಪಡನೆಯ ಪರಿಣಾಮ ಇಂದು ಈ ಪ್ರದೇಶದ  ಸಾವಿರಾರು ಮಂದಿ  ನರಕಯಾತನೆ ಅನುಭವಿಸುತ್ತಿದ್ದಾರೆ. ದುಷ್ಪರಿಣಾಮ ಬೆಳಕಿಗೆ ಬರುತ್ತಲೇ ನಡೆದ ಹೋರಾಟದ ಪರಿಣಾಮ ೧೫ ವರ್ಷಗಳ ಹಿಂದೆ ಎಂಡೋಸಲ್ಫಾನ್  ಮಹಾಮಾರಿ ಸಿಂಪಡಣೆಗೆ ಕಡಿವಾಣ ಬಿದ್ದಿತ್ತು. ಆದರೆ ನಿಷೇಧದ ಸಂದರ್ಭದಲ್ಲಿ ಗೋದಾಮುಗಳಲ್ಲಿ  ದಾಸ್ತಾರಿಸಿದ್ದ  ಎಂಡೋಸಲ್ಫಾನ್ ಒಂದೂವರೆ ದಶಕ ಕಳೆದರೂ  ಜನತೆಯಲ್ಲಿ  ಭಯ ಹುಟ್ಟಿಸುತ್ತಿದ್ದು, ಕೀಟನಾಶಕ ತೆರವುಗೊಳಿಸದಿರುವುದು ಮುಂದೆ ಅನಾಹುತಕ್ಕೆ ಕಾರಣವಾಗಲಿದೆಯೇ ಎಂಬ ಆತಂಕ ಸ್ಥಳೀಯರಲ್ಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News