×
Ad

ಟ್ರಂಪ್‌ರಿಂದ ಹಿಲರಿಗೆ 'ಕೊಲೆ ಬೆದರಿಕೆ'!

Update: 2016-08-10 19:49 IST

ವಾಶಿಂಗ್ಟನ್, ಆ. 10: ನವೆಂಬರ್‌ನಲ್ಲಿ ನಡೆಯಲಿರುವ ಅಧ್ಯಕ್ಷೀಯ ಚುನಾವಣೆಯಲ್ಲಿ ತನ್ನ ಎದುರಾಳಿ ಡೆಮಾಕ್ರಟಿಕ್ ಅಭ್ಯರ್ಥಿ ಹಿಲರಿ ಕ್ಲಿಂಟನ್‌ರನ್ನು ಸೋಲಿಸಲು ರಿಪಬ್ಲಿಕನ್ ಪಕ್ಷದ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ಬಂದೂಕುಗಳ ಮಾಲೀಕರ ಮೊರೆ ಹೋಗಿದ್ದಾರೆ.

ಟ್ರಂಪ್‌ರ ಈ ಸಂದೇಶ ಮಾತ್ರ ಸ್ಪಷ್ಟವಾಗಿಲ್ಲ, ಆದರೆ, 70 ವರ್ಷದ ಬಿಲಿಯಾಧೀಶ ಉದ್ಯಮಿ ಹಿಲರಿಗೆ ಕೊಲೆ ಬೆದರಿಕೆ ಹಾಕಿದ್ದಾರೆ ಎಂಬುದಾಗಿ ಸಂಸದರು ವ್ಯಾಖ್ಯಾನಿಸಿದ್ದಾರೆ.

ಆದರೆ, ಯಾವುದೇ ಇಂಥ ಇಂಗಿತವನ್ನು ಟ್ರಂಪ್ ಪ್ರಚಾರ ತಂಡ ನಿರಾಕರಿಸಿದೆ. ಚುನಾವಣೆಯಲ್ಲಿ ಹಿಲರಿಯನ್ನು ಸೋಲಿಸಲು ರಾಜಕೀಯ ಅಧಿಕಾರ ನೀಡಿ ಎನ್ನುವುದು ಟ್ರಂಪ್‌ರ ಮಾತಿನ ಅರ್ಥವಾಗಿತ್ತು ಎಂದು ಅದು ಹೇಳಿಕೊಂಡಿದೆ.

‘‘ಎರಡನೆ ತಿದ್ದುಪಡಿಯನ್ನು (ಜನರಿಗೆ ಬಂದೂಕು ಹೊಂದುವ ಅಧಿಕಾರ ನೀಡುವ ಮಸೂದೆ) ಸಂಪೂರ್ಣವಾಗಿ ರದ್ದುಪಡಿಸಲು ಹಿಲರಿ ಬಯಸಿದ್ದಾರೆ. ಹಾಗಾಗಿ, ನ್ಯಾಯಾಧೀಶರನ್ನು ಆಯ್ಕೆ ಮಾಡುವ ಅಧಿಕಾರ ಅವರಿಗೆ ಲಭಿಸಿದರೆ, ಮತ್ತೆ ನೀವು ಮಾಡುವಂಥಾದ್ದು ಏನೂ ಇಲ್ಲ’’ ಎಂದು ನಾರ್ತ್ ಕ್ಯಾರಲೈನದ ವಿಲ್ಮಿಂಗ್ಟನ್‌ನಲ್ಲು ಮಂಗಳವಾರ ಚುನಾವಣಾ ಪ್ರಚಾರ ಸಭೆಯೊಂದರಲ್ಲಿ ಮಾತನಾಡುತ್ತಿದ್ದ ಟ್ರಂಪ್ ಹೇಳಿದ್ದರು.

ಟ್ರಂಪ್‌ರ ಹೇಳಿಕೆಗೆ ಹಿಲರಿ ಪ್ರಚಾರ ಬಣ ತಕ್ಷಣ ಆಕ್ರೋಶ ವ್ಯಕ್ತಪಡಿಸಿತು.

 ‘‘ಅವರ ಮಾತುಗಳು ನೇರವಾಗಿವೆ. ಅವರು ಹೇಳುತ್ತಿರುವುದು ಅಪಾಯಕಾರಿಯಾಗಿದೆ. ಅಮೆರಿಕದ ಅಧ್ಯಕ್ಷನಾಗಬೇಕೆಂದು ಕೋರುವ ವ್ಯಕ್ತಿಯೊಬ್ಬರು ಯಾವುದೇ ವಿಧದಲ್ಲಿ ಹಿಂಸೆಯನ್ನು ಪ್ರಸ್ತಾಪಿಸಬಾರದು’’ ಎಂದು ‘ಹಿಲರಿ ಫಾರ್ ಅಮೆರಿಕ ಅಭಿಯಾನ’ದ ಮ್ಯಾನೇಜರ್ ರಾಬಿ ಮೂಕ್ ಹೇಳಿದರು.

ಟ್ರಂಪ್ ವಿರುದ್ಧ ಪ್ರಮುಖ ರಿಪಬ್ಲಿಕನ್ ನಾಯಕರ ಬಂಡಾಯ

ವಾಶಿಂಗ್ಟನ್, ಆ. 10: ಅಮೆರಿಕದ ರಿಪಬ್ಲಿಕನ್ ಸಂಸದರು, ಗವರ್ನರ್‌ಗಳು, ಸಲಹಾಕಾರರು ಮತ್ತು ಮಾಜಿ ಅಧಿಕಾರಿಗಳು ರಿಪಬ್ಲಿಕನ್ ಅಧ್ಯಕ್ಷೀಯ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ವಿರುದ್ಧ ಬಹಿರಂಗ ಬಂಡಾಯ ಸಾರಿದ್ದಾರೆ. ಟ್ರಂಪ್‌ರಲ್ಲಿ ಅಧ್ಯಕ್ಷರಿಗೆ ಇರಬೇಕಾದ ಸರಿಯಾದ ನಿರ್ಧಾರ ತೆಗೆದುಕೊಳ್ಳುವ ಸಾಮರ್ಥ್ಯ, ಸತ್ವ ಮತ್ತು ಅನುಭವ ಇಲ್ಲ ಎಂದು ಅವರು ಹೇಳಿದ್ದಾರೆ.

ಎದುರಾಳಿ ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿ ಹಿಲರಿ ಕ್ಲಿಂಟನ್ ಪರವಾಗಿ ಮತ ಹಾಕುವುದಾಗಿ ಕೆಲವರು ಹೇಳಿದರೆ, ಸ್ವತಂತ್ರ ಅಭ್ಯರ್ಥಿ ಗ್ಯಾರಿ ಜಾನ್ಸನ್ ಮುಂತಾದ ಮೂರನೆ ಪಕ್ಷದ ಅಭ್ಯರ್ಥಿಗಳಿಗೆ ಮತ ಹಾಕುವುದಾಗಿ ಇತರರು ಹೇಳಿದ್ದಾರೆ.

ರಿಪಬ್ಲಿಕನ್ ಪಕ್ಷದ ಅಭ್ಯರ್ಥಿತ್ವ ಪಡೆಯಲು ನಡೆದ ಪ್ರಾಥಮಿಕ ಚುನಾವಣೆಯಲ್ಲಿ ಟ್ರಂಪ್‌ರ ಎದುರಾಳಿಗಳಾಗಿದ್ದ ಟೆಡ್ ಕ್ರೂಝ್, ಜಾನ್ ಕ್ಯಾಸಿಚ್ ಮತ್ತು ಜೇಬ್ ಬುಶ್ ಈ ಪಟ್ಟಿಯಲ್ಲಿ ಇದ್ದಾರೆ.

 ಸೆನೆಟರ್‌ಗಳಾದ ಸುಸಾನ್ ಕಾಲಿನ್ಸ್ ಮತ್ತು ಲಿಂಡ್ಸೆ ಗ್ರಹಾಂ, ಹಿಂದಿನ ಚುನಾವಣೆಯಲ್ಲಿ ರಿಪಬ್ಲಿಕನ್ ಅಭ್ಯರ್ಥಿಯಾಗಿದ್ದ ಮಿಟ್ ರಾಮ್ನಿ ಕೂಡ ಟ್ರಂಪ್‌ಗೆ ತಿರುಗಿ ಬಿದ್ದಿದ್ದಾರೆ.

ತಾವು ಹಿಲರಿ ಕ್ಲಿಂಟನ್‌ಗೆ ಮತ ಹಾಕುವುದಾಗಿ ಮಾಜಿ ಸಿಐಎ ನಿರ್ದೇಶಕ ಮೈಕಲ್ ಹೇಡನ್, ಜಾಜ್ ಡಬ್ಲು. ಬುಶ್‌ರ ಆಡಳಿತದಲ್ಲಿ ಉಪ ವಿದೇಶ ಕಾರ್ಯದರ್ಶಿ ಹಾಗೂ ರೊನಾಲ್ಡ್ ರೇಗನ್‌ರ ಆಡಳಿತದಲ್ಲಿ ಉಪ ರಕ್ಷಣಾ ಕಾರ್ಯದರ್ಶಿಯಾಗಿದ್ದ ರಿಚರ್ಡ್ ಆರ್ಮಿಟೇಜ್ ಮತ್ತು ಜಾರ್ಜ್ ಡಬ್ಲು. ಬುಶ್‌ರ ಆಡಳಿತದಲ್ಲಿ ಖಜಾನೆ ಕಾರ್ಯದರ್ಶಿಯಾಗಿದ್ದ ಹ್ಯಾಂಕ್ ಪೌಲ್ಸನ್ ಈಗಾಗಲೇ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News