×
Ad

ಆಫ್‌ಸ್ಪಾ ಹಿಂದೆಗೆಯುವ ವರೆಗೆ ತಾಯಿಯ ಭೇಟಿಯಾಗದಿರಲು ಶರ್ಮಿಳಾ ನಿರ್ಧಾರ

Update: 2016-08-10 20:41 IST

ಇಂಫಾಲ, ಆ.10: ಸಶಸ್ತ್ರ ಪಡೆಗಳ ವಿಶೇಷಾಧಿಕಾರ ಕಾಯ್ದೆಯನ್ನು (ಆಫ್‌ಸ್ಪಾ) ಹಿಂದೆಗೆಯುವ ವರೆಗೆ ಉಗುರು ಕತ್ತರಿಸದಿರಲು, ತಲೆ ಬಾಚದಿರಲು ಹಾಗೂ ತನ್ನ ಮನೆಗೆ ಹೋಗಿ ತಾಯಿಯನ್ನು ಭೇಟಿಯಾಗದಿರಲು ಮಣಿಪುರದ ‘ಉಕ್ಕಿನ ಮಹಿಳೆ’ ಹೋರಾಟಗಾರ್ತಿ ಇರೋಮ್ ಚಾನು ಶರ್ಮಿಳಾ ನಿರ್ಧರಿಸಿದ್ದಾರೆ. ಅವರು ವಿಶ್ವದಲ್ಲೇ ಅತಿ ದೀರ್ಘವಾದ 16 ವರ್ಷಗಳ ಉಪವಾಸ ಮುಷ್ಕರವನ್ನು ಒಂದು ಹನಿ ಜೇನು ಸೇವಿಸುವ ಮೂಲಕ ನಿನ್ನೆ ಕೊನೆಗೊಳಿಸಿದ್ದರು.

ಶರ್ಮಿಳಾರ ಈ ಶಪಥಗಳಲ್ಲಿ ಆಫ್‌ಸ್ಪಾ ಹಿಂದೆಗೆತದ ಗುರಿ ಸಾಧಿಸದೆ ತನ್ನ 84ರ ಹರೆಯದ ತಾಯಿಯನ್ನು ಭೇಟಿಯಾಗದಿರುವುದು ಅತಿ ಕಠಿಣದ್ದಾಗಿದೆ. ಅವರು 2000ನೆ ಇಸವಿಯ ನ.5ರಂದು ನಿರಶನ ಮುಷ್ಕರ ಆರಂಭಿಸಿದ ಬಳಿಕ ಇಂಫಾಲ ನಗರದ ಅಂಚಿನಲ್ಲಿರುವ ಕೊಂಗ್ಪಾಲ್ ಕೊಂಗ್‌ಖಾಮ್ ಲೀಕೈಯಲ್ಲಿರುವ ತನ್ನ ಮನೆಗೆ ಒಮ್ಮೆಯೂ ಹೋಗಿರಲಿಲ್ಲ. ಗುರಿ ಸಾಧಿಸುವ ವರೆಗೆ ಇನ್ನು ಮುಂದೆಯೂ ಆಶ್ರಮವೊಂದರಲ್ಲಿ ವಾಸಿಸಲು ಶರ್ಮಿಳಾ ನಿರ್ಧರಿಸಿದ್ದಾರೆ.

ತಮ್ಮ ತಾಯಿ ವಿಜಯದ ಕ್ಷಣವನ್ನು ಕಾಯುತ್ತಿದ್ದಾರೆ. ಆಫ್‌ಸ್ಪಾ ಹಿಂದೆಗೆದಾಗಲೇ ಅದು ಸಾಧ್ಯವಾಗಲಿದೆಯೆಂದು ನಿರ್ಮಲಾರ ಅಣ್ಣ ಸಿಂಘಜಿತ್ ತಿಳಿಸಿದ್ದಾರೆ.

ಆತ್ಮಹತ್ಯೆ ಯತ್ನ ಆರೋಪದಲ್ಲಿ ಶರ್ಮಿಳಾರನ್ನು ಬಂಧಿಸಿ, ಜವಾಹರ್‌ಲಾಲ್ ನೆಹರೂ ಆಸ್ಪತ್ರೆಯಲ್ಲಿ ಅವರಿಗೆ ಬಲವಂತವಾಗಿ ಮೂಗಿನ ಮೂಲಕ ಕೊಳವೆಯಲ್ಲಿ ಆಹಾರ ನೀಡುತ್ತಿದ್ದ ಕಾಲದಲ್ಲಿ, ಶರ್ಮಿಳಾರ ತಾಯಿ ಶಾಖಿ ದೇವಿಯವರನ್ನೂ ಅನಾರೋಗ್ಯದ ನಿಮಿತ್ತ ಅದೇ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅದು 2009ನೆ ಇಸವಿಯಾಗಿತ್ತು.

ಆ ಸಂದರ್ಭ ತಾಯಿ ತೀವ್ರ ಅಸ್ತಮಾದಿಂದ ಕೋಮಾಕ್ಕೆ ಜಾರಿದ್ದರು. ಅವರು ಮೃತಪಟ್ಟಿರಬಹುದೆಂಬ ಭೀತಿಯಿಂದ ಶರ್ಮಿಳಾ ಮಧ್ಯರಾತ್ರಿ ಅವರಿದ್ದ ವಾರ್ಡ್‌ಗೆ ನುಸುಳಿ, ಅವರ ಮುಖದ ಬಳಿ ಬಗ್ಗಿದಾಗ, ಒಮ್ಮೆಲೇ ತಾಯಿಗೆ ಪ್ರಜ್ಞೆ ಬಂದಿತ್ತು.

ಆದರೆ, ತಾಯಿ, ಶರ್ಮಿಳಾಗೆ ಅಲ್ಲಿಂದ ತಕ್ಷಣ ಹೋಗುವಂತೆ ಆಜ್ಞಾಪಿಸಿದರು. ‘‘ಗೆದ್ದ ಮೇಲೆ ಬಾ. ನಾನು ಅಲ್ಲಿಯ ವರೆಗೆ ಕಾಯುತ್ತೇನೆ. ಗೆದ್ದ ಮೇಲೆ ಮನೆಗೆ ಬಂದು ನನಗಾಗಿ ಊಟ ತಯಾರಿಸಿಕೊಡು’’ ಎಂದಿದ್ದರು. ಅದಕ್ಕವರು ಈಗಲೂ ಬದ್ಧರಾಗಿದ್ದಾರೆಂದು ಸಿಂಘಜಿತ್ ಹಿಂದಿನ ಘಟನೆಯನ್ನು ವಿವರಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News