ಹೊಸ ಬದುಕಿನತ್ತ ಮುಖ ಮಾಡಿದ ಸಫಾಯಿ ಕರ್ಮಚಾರಿಗಳು
‘‘ಮನೆಯಲ್ಲಿ ಪ್ರತೀ ದಿನ ಜಗಳ. ಪ್ರೀತಿಯಿಂದ ನನ್ನ ಮಗು ತೊಡೆಮೇಲೆ ಕುಳಿತು, ಅಪ್ಪಾ ಒಂದೇ ಒಂದು ಕೈ ತುತ್ತು ತಿನ್ನಿಸಪ್ಪ ಅಂತ ಗೋಗರೆದು ಕೇಳುತ್ತಿತ್ತು. ಆದರೆ, ಮಲ ಬಾಚಿದ್ದ ಕೈಯಿಂದ ನಾ ಹೇಗೆ ತಿನ್ನಿಸಲಿ ಎಂದು ದೂರ ಕಳಿಸುತ್ತಿದ್ದೆ. ಈಗ ಮುದ್ದು ಮಾಡಿ ತುತ್ತು ಅನ್ನ ತಿನ್ನಿಸುತ್ತಿದ್ದೇನೆ, ಕುಡಿತ ಬಿಟ್ಟಿದ್ದೇನೆ. ನನ್ನ ಕುಟುಂಬದ ಜೊತೆ ನೆಮ್ಮದಿಯಿಂದ ಜೀವನ ಸಾಗಿಸುತ್ತಿದ್ದೇನೆ’’ ಎಂದು ಹೇಳುತ್ತಿದ್ದಂತೆ ನಗರದ ಕಾಕ್ಸ್‌ಟೌನ್ ನಿವಾಸಿ, ಸಫಾಯಿ ಕರ್ಮಚಾರಿ ಕೆಲಸದಿಂದ ಮುಕ್ತಿ ಹೊಂದಿ, ಹೊಸ ಜೀವನ ಕಟ್ಟಿಕೊಂಡಿರುವ ವಿನೋದ್ ಅವರ ಕಣ್ಣುಗಳು ನೀರಾದವು.
ಸಫಾಯಿ ಕರ್ಮಚಾರಿಗಳಿಗೆ ಪುನರ್ವಸತಿ ಕಲ್ಪಿಸುವ ಉದ್ದೇಶದಿಂದ ಅಂಬೇಡ್ಕರ್ ಅಭಿವೃದ್ಧಿ ನಿಗಮವು ಸಫಾಯಿ ಕರ್ಮಚಾರಿ ಆಯೋಗದ ಸಹಯೋಗದಲ್ಲಿ ಧರ್ಮಸ್ಥಳದ ಗ್ರಾಮೀಣಾಭಿವೃದ್ಧಿ ಸಂಸ್ಥೆಯು ಮಲ ಹೊರುವ ವೃತ್ತಿಯನ್ನು ತೊರೆಯುವಂತೆ ಮನವೊಲಿಸಲು ಮುಂದಾಗಿದೆ. ಈ ನಿಟ್ಟಿನಲ್ಲಿ ಪ್ರಥಮ ಹಂತದಲ್ಲಿ ನಗರದ 60 ಮಂದಿ ಸಫಾಯಿ ಕರ್ಮಚಾರಿಗಳ ತಂಡವನ್ನು ಸ್ವಯಂ ಉದ್ಯೋಗ ತರಬೇತಿಗೆಂದು ಧರ್ಮಸ್ಥಳದ ಗ್ರಾಮೀಣಾಭಿವೃದ್ಧಿ ಸಂಸ್ಥೆಗೆ ಜೂನ್ ಮೊದಲನೆ ವಾರದಲ್ಲಿ ಕಳುಹಿಸಿಕೊಟ್ಟಿತ್ತು.
ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಸ್ಥೆಯಲ್ಲಿ ಒಂದು ತಿಂಗಳ ಕಾಲ ಸ್ವಯಂ ಉದ್ಯೋಗ ತರಬೇತಿ ಪಡೆದುಕೊಂಡು ನಗರಕ್ಕೆ ವಾಪಸಾಗಿರುವ ಮಾಜಿ ಸಫಾಯಿ ಕರ್ಮಚಾರಿ ಮೊಗದಲ್ಲಿ ಮಂದಹಾಸ ಮೂಡಿದೆ. ‘‘ನಾವೂ ಸಮಾಜದಲ್ಲಿ ತಲೆ ಎತ್ತಿ ಓಡಾಡುತ್ತೇವೆ, ನಾವು ಯಾರಿಗೇನು ಕಮ್ಮಿಯಿಲ್ಲ’’ ಎಂದು ಹೆಮ್ಮೆಯಿಂದ ಹೇಳುತ್ತಾರೆ.
‘‘ಶೌಚಾಲಯದಲ್ಲಿ ನೀರು ಕಟ್ಟಿಕೊಂಡಾಗ ನಮ್ಮನ್ನು ಹಿಂದೆ-ಮುಂದೆ ನೋಡದೆ ಮನೆ ಒಳಗೆ ಕರೆದುಕೊಳ್ಳುತ್ತಿದ್ದರು. ಆದರೆ, ಕೆಲಸ ಮುಗಿಯು ತ್ತಿದ್ದಂತೆ ಹೊರ ಕಳುಹಿಸಿ, ಯಥಾಪ್ರಕಾರ ನಿರ್ಲಕ್ಷದಿಂದ ನೋಡುತ್ತಿದ್ದರು. ಈ ರೀತಿಯ ಅವಮಾನವನ್ನು ಸಾಕಷ್ಟು ಅನುಭವಿಸಿದ್ದೇನೆ. ಆದರೆ, ಇನ್ನು ಮುಂದೆ ಆ ಮಾತೇ ಇಲ್ಲ. ಲಕ್ಷ ಕೊಟ್ಟರೂ ಈ ನೀಚ ವೃತ್ತಿಯತ್ತ ಮುಖ ಮಾಡುವುದಿಲ್ಲ’’ ಎಂದು ಪುನರ್ವಸತಿ ಸೌಲಭ್ಯ ಪಡೆದ ಕುಮಾರಯ್ಯ ಹೇಳಿದರು.
‘‘ಪ್ರತೀ ದಿನ ಮದ್ಯ ಕುಡಿದೇ ಮಲ ಗುಂಡಿ ಸ್ವಚ್ಛಗೊಳಿಸಲು ಹೋಗುತ್ತಿದ್ದೆ. ದಿನಕ್ಕ್ಕೆ ಕಮ್ಮಿ ಎಂದರೂ ಎರಡು ಮಲಗುಂಡಿಗಳಿಗೆ ಇಳಿಯುತ್ತಿದ್ದೆ. ಬರಿಗೈಯಿಂದ ಮಲ ಬಾಚುತ್ತಿದ್ದುದರಿಂದ ನನ್ನ ಎರಡು ಕೈ ಬೆರಳುಗಳು ಶೇ.100ರಷ್ಟು ಊನವಾಗಿದೆ. ಬೇರೆಯವರ ಸಹಾಯ ವಿಲ್ಲದೆ ಊಟ ಮಾಡಲು ಆಗುವುದಿಲ್ಲ’’ ಎಂದು ಆಸ್ಟಿನ್ ಟೌನ್ ನಿವಾಸಿ ಆರ್.ಮಣಿ ಅವರು ಮುಂಗೈಯನ್ನು ತೋರಿಸಿದಾಗ ಮನಕಲಕುವಂತಿತ್ತು.
‘‘ಇನ್ನು ಬೆರಳುಗಳು ಇಲ್ಲ ಎಂಬ ಚಿಂತೆಯಿಲ್ಲ. ಧರ್ಮಸ್ಥಳದಲ್ಲಿ ಒಂದು ತಿಂಗಳ ಕಾಲ ಸ್ವಯಂ ಉದ್ಯೋಗ ಮಾಡಲು ತರಬೇತಿ ನೀಡಿದ್ದಾರೆ. ಅಲ್ಲದೆ, ಮದ್ಯ ವ್ಯಸನದಿಂದಾಗುವ ದುಷ್ಪರಿಣಾಮಗಳನ್ನು ಇಲ್ಲಿನ ವೈದ್ಯರು ಮನದಟ್ಟು ಮಾಡಿದ್ದಾರೆ. ಯಾವುದೇ ಕಾರಣಕ್ಕೂ ಇನ್ನು ಮುಂದೆ ಮಲ ಮುಟ್ಟವುದಿಲ್ಲ ಮತ್ತು ಕುಡಿಯುವುದಿಲ್ಲ ಎಂದು ಶಪಥ ಮಾಡಿದ್ದೇನೆ. ಸ್ವಂತ ಉದ್ಯೋಗ ಮಾಡಿಕೊಂಡು ಮಕ್ಕಳಿಗೆ ಉತ್ತಮ ವಿದ್ಯಾಭ್ಯಾಸ ಕೊಡಿಸುವುದೇ ನನ್ನ ಮುಖ್ಯ ಗುರಿ’’ ಎಂದು ಮಣಿ ಹೇಳಿದರು.
ತರಬೇತಿ ಪಡೆದವರಿಗೆ ಒಂದು ಲಕ್ಷ ರೂ. ಸಹಾಯಧನ:
ತರಬೇತಿ ಪಡೆದು ವಾಪಸಾಗಿರುವ ಸಫಾಯಿ ಕರ್ಮಚಾರಿಗಳಿಗೆ ಬದಲಿ ಉದ್ಯೋಗ ಮಾಡಲು ಕೇಂದ್ರ ಸರಕಾರದಿಂದ ಅಂಬೇಡ್ಕರ್ ಅಭಿವೃದ್ಧಿ ಮಂಡಳಿಯು ಒಂದು ಲಕ್ಷ ರೂ. ಸಹಾಯಧನ ನೀಡಿದೆ. ಜೊತೆಗೆ ಹಣ್ಣು ವ್ಯಾಪಾರ, ಆಟೊ ಖರೀದಿಗೆ ಸಾಲ, ಪ್ರಾವಿಜನ್ ಸ್ಟೋರ್ ತೆರೆಯಲು ಮಂಡಳಿ ಅಗತ್ಯ ಸಾಲ ಸೌಲಭ್ಯವನ್ನು ನೀಡಲಿದೆ ಎಂದು ಮಂಡಳಿಯ ನಗರ ಜಿಲ್ಲಾ ವ್ಯವಸ್ಥಾಪಕ ಪದ್ಮನಾಭ್ ತಿಳಿಸಿದರು.
ಸಫಾಯಿ ಕರ್ಮಚಾರಿಗಳು ಮದ್ಯ ವ್ಯಸನಿಗಳಾಗಿರುವುದರಿಂದ ಸರಕಾರ ನೀಡುವ ಸಹಾಯಧನ ವ್ಯರ್ಥವಾಗಬಾರದು ಎಂಬ ದೃಷ್ಟಿಯಿಂದ ಸ್ವಯಂ ತರಬೇತಿ ಜೊತೆಗೆ ಸಫಾಯಿ ಕರ್ಮಚಾರಿಗಳನ್ನು ಮದ್ಯ ವ್ಯಸನದಿಂದ ಮುಕ್ತಗೊಳಿಸಲಾಗಿದೆ. ಜೊತೆಗೆ ಹಣಕಾಸು ನಿರ್ವಹಣೆ, ಆರೋಗ್ಯ, ಸಾಮಾಜಿಕ ಸ್ಥಿಗತಿಗಳ ಬಗ್ಗೆ ಅರಿವು ಮೂಡಿಸ ಲಾಗಿದೆ. 60 ಜನರ ತಂಡದಲ್ಲಿ ಏಳು ಮಂದಿ ತೀವ್ರ ಅನಾರೋಗ್ಯದಿಂದ ತರಬೇತಿ ಮಧ್ಯದಲ್ಲಿಯೇ ವಾಪಸಾಗಿದ್ದಾರೆ. ಇನ್ನು ಸಂಪೂರ್ಣವಾಗಿ ತರಬೇತಿ ಪಡೆದವರಿಗೆ ಒಂದು ಲಕ್ಷ ರೂ. ಚೆಕ್ ವಿತರಿಸಲಾಗಿದೆ ಎಂದರು.
ಕರ್ಮಚಾರಿ ಮುಕ್ತ ರಾಜ್ಯ
ರಾಜ್ಯದಲ್ಲಿ 307 ಮಂದಿ ಮಲ ಹೊರುವ ಮೂಲಕ ಜೀವನ ಸಾಗಿಸುತ್ತಿದ್ದಾರೆ ಎಂದು ರಾಜ್ಯ ಸರಕಾರ ನಡೆಸಿರುವ ಮರು ಸಮೀಕ್ಷೆಯಲ್ಲಿ ವರದಿಯಾಗಿದೆ. ರಾಜ್ಯದಲ್ಲಿನ ಎಲ್ಲ ಸಫಾಯಿ ಕರ್ಮಚಾರಿಗಳನ್ನು ಪತ್ತೆಹಚ್ಚಿ ಪುನರ್ವಸತಿ ಕಲ್ಪಿಸಿ ಸಫಾಯಿ ಕರ್ಮಚಾರಿ ಮುಕ್ತ ರಾಜ್ಯವನ್ನಾಗಿಸಲು ಆಯೋಗ ಪಣತೊಟ್ಟಿದೆ.
-ನಾರಾಯಣ, ಅಧ್ಯಕ್ಷರು, ಸಫಾಯಿ ಕರ್ಮಚಾರಿ ಆಯೋಗ
ತರಬೇತಿ ಪಡೆದವರಿಗೆ ಸಹಾಯಧನ
ನಗರದಲ್ಲಿ ಒಟ್ಟು 202 ಮಂದಿ ಸಫಾಯಿ ಕರ್ಮಚಾರಿ ಗಳನ್ನು ಗುರುತಿಸಲಾಗಿದೆ. ಮೊದಲನೆ ಹಂತದಲ್ಲಿ 60 ಮಂದಿ ತಂಡವನ್ನು ಕಳುಹಿಸಿಕೊಡಲಾಗಿತ್ತು. ಇನ್ನು ಉಳಿದವರನ್ನು ಎರಡು ಬ್ಯಾಚ್‌ಗಳಂತೆ ತರಬೇತಿಗೆ ಕಳುಹಿಸಲಾಗುವುದು. ತರಬೇತಿ ಪಡೆದವರಿಗೆ ಒಂದು ಲಕ್ಷ ರೂ. ಸಹಾಯ ಧನ ನೀಡಲಾಗುವುದು.
-ಪದ್ಮನಾಭ್, ನಗರ ಜಿಲ್ಲಾ ವ್ಯವಸ್ಥಾಪಕ, ಅಂಬೇಡ್ಕರ್ ಅಭಿವೃದ್ಧಿ ನಿಗಮ