×
Ad

ಆರ್ಚರಿ: ಅಂತಿಮ 16ರ ಸುತ್ತಿಗೆ ಬಾಂಬೆಲಾದೇವಿ

Update: 2016-08-10 23:38 IST

ರಿಯೋ ಡಿ ಜನೈರೊ, ಆ.10: ತೈಪೆಯ ಶಿನ್-ಚಿಯಾರನ್ನು 6-2 ಅಂತರದಿಂದ ಮಣಿಸಿದ ಭಾರತದ ಬಿಲ್ಲುಗಾರ್ತಿ ಬಾಂಬೆಲಾದೇವಿ ರಿಯೋ ಒಲಿಂಪಿಕ್ಸ್‌ನಲ್ಲಿ ಮಹಿಳೆಯರ ವೈಯಕ್ತಿಕ ಆರ್ಚರಿ ಸ್ಪರ್ಧೆಯಲ್ಲಿ ಪ್ರಿ-ಕ್ವಾರ್ಟರ್‌ಫೈನಲ್‌ಗೆ ತಲುಪಿದ್ದಾರೆ.

ಒಲಿಂಪಿಕ್ಸ್‌ನ 5ನೆ ದಿನವಾದ ಬುಧವಾರ ಭಾರತದ ಪರ ಅತ್ಯುತ್ತಮ ಪ್ರದರ್ಶನ ನೀಡಿರುವ ಏಕೈಕ ಅಥ್ಲೀಟ್ ಬಾಂಬೆಲಾದೇವಿ. ಸ್ಪರ್ಧೆಯಲ್ಲಿದ್ದ ಉಳಿದ ಭಾರತೀಯರು ಭಾರೀ ನಿರಾಸೆಗೊಳಿಸಿದರು. ದೇವಿ ಗುರುವಾರ ನಡೆಯಲಿರುವ ಪ್ರಿ-ಕ್ವಾರ್ಟರ್‌ಫೈನಲ್‌ನಲ್ಲಿ ಸೆಣಸಾಡಲಿದ್ದಾರೆ.

ಬುಧವಾರ ಶಿನ್ ಚಿಯಾ-ಲಿನ್ ವಿರುದ್ಧ ಸೆಣಸಾಡುವ ಮೊದಲು ದೇವಿ ಮಹಿಳೆಯರ 1/64 ಸುತ್ತಿನ ಪಂದ್ಯದಲ್ಲಿ ಆಸ್ಟ್ರೀಯದ ವಿಶ್ವದ ನಂ.10ನೆ ಆಟಗಾರ್ತಿ ಲೌರೆನ್ಸ್ ಬಾಲ್ಡೊಫ್‌ರನ್ನು 6-2 ಅಂತರದಿಂದ ಮಣಿಸಿದರು.

ಭಾರತದ ಆರ್ಚರಿ ಸ್ಪರ್ಧಿಗಳು ಟೀಮ್ ಸ್ಪರ್ಧೆಗಳಲ್ಲಿ ನಿರಾಶಾದಾಯಕ ಪ್ರದರ್ಶನ ನೀಡಿದ ಬಳಿಕ ವೈಯಕ್ತಿಕ ವಿಭಾಗದಲ್ಲಿ ಉತ್ತಮ ಪ್ರದರ್ಶನದಿಂದ ಗಮನ ಸೆಳೆಯುತ್ತಿದ್ದಾರೆ. ಮಂಗಳವಾರ ಪುರುಷರ ವೈಯಕ್ತಿಕ ಸ್ಪರ್ಧೆಯಲ್ಲಿ ಅತಾನು ದಾಸ್ ಪ್ರಿ-ಕ್ವಾರ್ಟರ್ ಫೈನಲ್‌ಗೆ ತಲುಪಿದ್ದರು. ಇದೀಗ ದೇವಿ ಅಂತಿಮ-16ರ ಸುತ್ತಿಗೆ ತೇರ್ಗಡೆಯಾಗಿದ್ದಾರೆ.

ಮೊದಲ ಸೆಟ್‌ನ್ನು 24-27 ಅಂತರದಿಂದ ಸೋತಿದ್ದ ದೇವಿ ಉತ್ತಮ ಆರಂಭ ಪಡೆದಿರಲಿಲ್ಲ. ಜೋರಾಗಿ ಬೀಸುತ್ತಿದ್ದ ಗಾಳಿಯ ನಡುವೆಯೂ ಸ್ಥಿರ ಪ್ರದರ್ಶನ ನೀಡಿದ ದೇವಿ ಮುಂದಿನ 3 ಸೆಟ್‌ಗಳನ್ನು 28-24, 27-23, 26-24 ಅಂತರದಿಂದ ಗೆದ್ದುಕೊಂಡರು.

ದೇವಿ ಮಹಿಳೆಯರ ಟೀಮ್ ಸ್ಪರ್ಧೆಯಲ್ಲಿ ದೀಪಿಕಾ ಕುಮಾರಿ, ಲಕ್ಷ್ಮೀರಾಣಿ ಅವರೊಂದಿಗೆ ರಶ್ಯದ ವಿರುದ್ಧದ ಕ್ವಾರ್ಟರ್ ಫೈನಲ್ ಪಂದ್ಯವನ್ನು ಸೋತಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News