ಧಾರವಾಡ ಸಹಿತ 6 ಐಐಟಿಗಳ ಸ್ಥಾಪನೆಗೆ ರಾಷ್ಟ್ರಪತಿ ಅಂಕಿತ
ಹೊಸದಿಲ್ಲಿ,ಆ.11: ಕರ್ನಾಟಕದ ಧಾರವಾಡ ಸೇರಿದಂತೆ ದೇಶದ ವಿವಿಧೆಡೆ ಆರು ನೂತನ ಭಾರತೀಯ ತಂತ್ರಜ್ಞಾನ ಸಂಸ್ಥೆ (ಐಐಟಿ)ಗಳನ್ನು ಸ್ಥಾಪಿಸುವ ಕುರಿತ ಕಾಯ್ದೆಗೆ ರಾಷ್ಟ್ರಪತಿ ಹಸಿರುನಿಶಾನೆ ತೋರಿಸಿದ್ದಾರೆ. ನೂತನ ಐಐಟಿಗಳ ಸ್ಥಾಪನೆಗೆ ಅವಕಾಶ ನೀಡುವ 2016ರ ತಂತ್ರಜ್ಞಾನ (ತಿದ್ದುಪಡಿ )ಕಾಯ್ದೆಗೆ ರಾಷ್ಟ್ರಪತಿ ಮಂಗಳವಾರ ಸಹಿಹಾಕಿರುವುದಾಗಿ ಅಧಿಕೃತ ಮೂಲಗಳು ತಿಳಿಸಿವೆ. ಪಾಲಕ್ಕಾಡ್ (ಕೇರಳ), ಗೋವಾ, ಜಮ್ಮುಕಾಶ್ಮೀರ, ಭಿಲಾಯ್ (ಚತ್ತೀಸ್‌ಗಢ), ಜಮ್ಮು (ಜಮ್ಮುಕಾಶ್ಮೀರ) ಹಾಗೂ ತಿರುಪತಿ (ಆಂಧ್ರ)ಗಳಲ್ಲಯೂ ಐಐಟಿ ಸ್ಥಾಪನೆಯಾಗಲಿದೆ.
ಈ ಕಾಯ್ದೆಯು ಧನಾಬಾದ್‌ನಲ್ಲಿರುವ ಭಾರತೀಯ ಗಣಿ ವಿದ್ಯಾಲಯ (ಐಎಸ್‌ಎಂ)ವನ್ನು ಕೂಡಾ ತನ್ನ ವ್ಯಾಪ್ತಿಗೆ ತಂದಿದೆ. ಇನ್ನು ಮುಂದೆ ಐಎಸ್‌ಎಂನ್ನು ಕೂಡಾ ಭಾರತೀಯ ತಂತ್ರಜ್ಞಾನ ಸಂಸ್ಥೆ (ಐಐಟಿ) ಎಂದೇ ಕರೆಯಲಾಗುವುದು. ದೇಶದಲ್ಲಿ ಆರು ನೂತನ ಐಐಟಿಗಳನ್ನು ಸ್ಥಾಪನೆಗಾಗಿ, ಜುಲೈ 25ರಂದು ಐಐಟಿ (ತಿದ್ದುಪಡಿ) ವಿಧೇಯಕವನ್ನು ಲೋಕಸಭೆಯು ಅಂಗೀಕರಿಸಿತ್ತು. ಆಗಸ್ಟ್ 2ರಂದು ಅದು ರಾಜ್ಯಸಭೆಯ ಅನುಮೋದನೆಯನ್ನು ಪಡೆಯಿತು. ಆಂಧ್ರಪ್ರದೇಶದಲ್ಲಿ ರಾಷ್ಟ್ರೀಯ ತಂತ್ರಜ್ಞಾನ ಸಂಸ್ಥೆ (ಎನ್‌ಐಟಿ)ಯನ್ನು ಸ್ಥಾಪಿಸುವ ಕಾನೂನಿಗೂ ರಾಷ್ಟ್ರಪತಿ ಅಂಕಿತ ಹಾಕಿದ್ದಾರೆ.