×
Ad

ತಂತ್ರಜ್ಞಾನ ಕ್ಷೇತ್ರದ ಜಾಗತಿಕ ಶ್ರೀಮಂತರ ಪಟ್ಟಿಯಲ್ಲಿ ಪ್ರೇಮ್‌ಜಿ, ಶಿವ ನಾಡಾರ್

Update: 2016-08-11 21:22 IST

ವಾಶಿಂಗ್ಟನ್, ಆ. 11: ತಂತ್ರಜ್ಞಾನ ಕ್ಷೇತ್ರದ ಜಾಗತಿಕ 100 ಅತಿ ಶ್ರೀಮಂತರ ಫೋರ್ಬ್ಸ್ ಪಟ್ಟಿಯಲ್ಲಿ ಭಾರತದ ಇಬ್ಬರು ಬಿಲಿಯಾಧೀಶರು ಸ್ಥಾನ ಪಡೆದಿದ್ದಾರೆ- ವಿಪ್ರೊ ಅಧ್ಯಕ್ಷ ಅಝೀಮ್ ಪ್ರೇಮ್‌ಜಿ ಮತ್ತು ಎಚ್‌ಸಿಎಲ್ ಸಹಸ್ಥಾಪಕ ಶಿವ ನಾಡಾರ್. ಅವರು ಪಟ್ಟಿಯ ಅಗ್ರ 20ರಲ್ಲಿ ಗೂಗಲ್ ಮುಖ್ಯಸ್ಥ ಎರಿಕ್ ಶ್ಮಿಟ್ ಮತ್ತು ಉಬರ್ ಸಿಇಒ ಟ್ರಾವಿಸ್ ಕಾಲನಿಕ್‌ರಿಗಿಂತ ಮುಂದಿದ್ದಾರೆ.
‘ಜಗತ್ತಿನ 100 ಅತ್ಯಂತ ಶ್ರೀಮಂತ ತಂತ್ರಜ್ಞಾನ ಕ್ಷೇತ್ರದ ಬಿಲಿಯಾಧೀಶರು 2016’ ಪಟ್ಟಿಯಲ್ಲಿ ಮೈಕ್ರೊಸಾಫ್ಟ್ ಸ್ಥಾಪಕ ಬಿಲ್ ಗೇಟ್ಸ್ ಮೊದಲ ಸ್ಥಾನದಲ್ಲಿದ್ದಾರೆ. ಅವರ ಒಟ್ಟು ಅಂದಾಜು ಸಂಪತ್ತು 78 ಬಿಲಿಯ ಡಾಲರ್ (5,21,160 ಕೋಟಿ ರೂಪಾಯಿ).
ಪ್ರೇಮ್‌ಜಿ 16 ಬಿಲಿಯ ಡಾಲರ್ (1,06,904 ಕೋಟಿ ರೂಪಾಯಿ) ಸಂಪತ್ತಿನೊಂದಿಗೆ ಪಟ್ಟಿಯಲ್ಲಿ 13ನೆ ಸ್ಥಾನದಲ್ಲಿದ್ದಾರೆ ಹಾಗೂ 11.6 ಬಿಲಿಯ ಡಾಲರ್ (77,506 ಕೋಟಿ ರೂಪಾಯಿ) ಸಂಪತ್ತಿನೊಂದಿಗೆ ನಾಡರ್ 17ನೆ ಸ್ಥಾನವನ್ನು ಪಡೆದಿದ್ದಾರೆ.
ಇಬ್ಬರು ಭಾರತೀಯ ಅಮೆರಿಕನ್ ತಂತ್ರಜ್ಞಾನ ಉದ್ಯಮಿಗಳಾದ ಸಿಂಫನಿ ಟೆಕ್ನಾಲಜಿ ಗ್ರೂಪ್‌ನ ಸಿಇಒ ರಮೇಶ್ ವದ್ವಾನಿ ಹಾಗೂ ಐಟಿ ಕನ್ಸಲ್ಟಿಂಗ್ ಮತ್ತು ಹೊರಗುತ್ತಿಗೆ ಕಂಪೆನಿಯ ಸ್ಥಾಪಕರಾದ ಸಿಂಟೆಲ್ ಭಾರತ್ ದೇಸಾಯಿ ಮತ್ತು ಅವರ ಪತ್ನಿ ನೀರ್ಜಾ ಸೇಠಿ ಕೂಡ ಪಟ್ಟಿಯಲ್ಲಿದ್ದಾರೆ.
ರಮೇಶ್ ವದ್ವಾನಿ 3 ಬಿಲಿಯ ಡಾಲರ್ (20,045 ಕೋಟಿ ರೂಪಾಯಿ) ನಿವ್ವಳ ಸಂಪತ್ತಿನೊಂದಿಗೆ ಪಟ್ಟಿಯಲ್ಲಿ 67ನೆ ಸ್ಥಾನದಲ್ಲಿದ್ದಾರೆ.
ಚೀನಾದ 19 ತಂತ್ರಜ್ಞಾನ ಕ್ಷೇತ್ರದ ಉದ್ಯಮಿಗಳು ಪಟ್ಟಿಯಲ್ಲಿದ್ದಾರೆ. ಅವರ ಪೈಕಿ ಅತ್ಯಂತ ಶ್ರೀಮಂತ ಅಲಿಬಾಬ ಸ್ಥಾಪಕ ಜಾಕ್ ಮಾ. ಪಟ್ಟಿಯಲ್ಲಿ ಎಂಟನೆ ಸ್ಥಾನದಲ್ಲಿರುವ ಅವರು 25.8 ಬಿಲಿಯ ಡಾಲರ್ (1,72,383 ಕೋಟಿ ರೂಪಾಯಿ) ನಿವ್ವಳ ಸಂಪತ್ತು ಹೊಂದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News