ಗೋರಕ್ಷಕ ಸಂಘಟನೆಗಳನ್ನು ನಿಷೇಧಿಸಿ: ಸದನದಲ್ಲಿ ಪ್ರತಿಪಕ್ಷಗಳ ಒಕ್ಕೊರಲ ಆಗ್ರಹ
ಹೊಸದಿಲ್ಲಿ, ಆ.11: ದೇಶಾದ್ಯಂತ ದಲಿತರ ವಿರುದ್ಧ ಹೆಚ್ಚುತ್ತಿರುವ ದೌರ್ಜನ್ಯಗಳ ಕುರಿತ ಆಕ್ರೋಶ ಗುರುವಾರ ಲೋಕಸಭೆಯಲ್ಲೂ ಪ್ರತಿಧ್ವನಿಸಿತು. ದಲಿತರ ಮೇಲೆ ನಡೆಯುತ್ತಿರುವ ದೌರ್ಜನ್ಯಗಳನ್ನು ತಡೆಗಟ್ಟುವಲ್ಲಿ ಕೇಂದ್ರ ಸರಕಾರವು ವಿಫಲವಾಗಿದೆಯೆಂದು ಪ್ರತಿಪಕ್ಷಗಳು ಕಿಡಿಕಾರಿವೆ. ಗೋರಕ್ಷಕ ಸಂಘಟನೆಗಳ ದಬ್ಬಾಳಿಕೆಯಿಂದಾಗಿ ದಲಿತರು ಭೀತಿಯ ವಾತಾವರಣದಲ್ಲಿ ಬದುಕುವ ಪರಿಸ್ಥಿತಿಯುಂಟಾಗಿದೆ. ಈ ಸಂಘಟನೆಗಳನ್ನು ನಿಷೇಧಿಸುವಂತೆ ಅವು ಸರಕಾರವನ್ನು ಒಕ್ಕೊರಲಿನಿಂದ ಆಗ್ರಹಿಸಿವೆ.
ದಲಿತರ ಮೇಲೆ ದಾಳಿ ಪ್ರಕರಣಗಳ ಕುರಿತ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡುತ್ತಿದ್ದ ಸದಸ್ಯರು, ದೇಶದಲ್ಲೆಡೆ ಈ ದಮನಿತ ವರ್ಗಗಳ ಜನತೆಯ ಶೋಚನೀಯ ಸ್ಥಿತಿಯ ಬಗ್ಗೆ ಸದನದ ಗಮನಸೆಳೆದರು. ಬಿಜೆಪಿ ಆಳ್ವಿಕೆಯಿರುವ ಗುಜರಾತ್‌ನಲ್ಲಿ ದಲಿತರ ಮೇಲಿನ ದೌರ್ಜನ್ಯಗಳು ಇತಿಹಾಸದಲ್ಲೇ ಕಂಡರಿಯದ ಹಂತಕ್ಕೆ ತಲುಪಿದೆಯೆಂದು ಕಾಂಗ್ರೆಸ್ ಸಂಸದ ಕೆ.ಎಚ್. ಮುನಿಯಪ್ಪ ಆಕ್ರೋಶ ವ್ಯಕ್ತಪಡಿಸಿದರು.
ದೇಶದ ಎಲ್ಲಾ ಪೌರರರಿಗೂ ಸಮಾನ ಹಕ್ಕುಗಳನ್ನು ಸಂವಿಧಾನವು ವಾಗ್ದಾನ ಮಾಡಿದ್ದರೂ, ದಲಿತರಿಗೆ ಈಗಲೂ ಅವುಗಳನ್ನು ನಿರಾಕರಿಸಲಾಗುತ್ತಿದೆಯೆಂದು ಸಿಪಿಎಂ ಸದಸ್ಯ ಪಿ.ಕೆ. ಬಿಜು ವಿಷಾದ ವ್ಯಕ್ತಪಡಿಸಿದರು. ದೇಶದಲ್ಲಿ ಪ್ರತಿ ದಿನವೂ ಸರಾಸರಿ ಮೂವರು ದಲಿತ ಮಹಿಳೆಯರು ಅತ್ಯಾಚಾರಕ್ಕೊಳಗಾಗುತ್ತಿದ್ದಾರೆ ಹಾಗೂ ಪ್ರತಿ 18 ನಿಮಿಷಗಳಿಗೊಮ್ಮೆ ದಲಿತರ ವಿರುದ್ಧ ದೌರ್ಜನ್ಯ ಪ್ರಕರಣಗಳು ವರದಿಯಾಗುತ್ತಿವೆ. ಶೇ. 38ರಷ್ಟು ದಲಿತ ವಿದ್ಯಾರ್ಥಿಗಳನ್ನು ಸರಕಾರಿ ಶಾಲೆಗಳಲ್ಲಿ ಪ್ರತ್ಯೇಕವಾಗಿ ಕುಳ್ಳಿರಿಸಲಾಗುತ್ತಿದ್ದರೆ, ಶೇ. 24.5 ಮಂದಿಗೆ ಈಗಲೂ ಪೊಲೀಸ್ ಠಾಣೆ ಪ್ರವೇಶಿಸಲು ಅವಕಾಶ ನೀಡಲಾಗುತ್ತಿಲ್ಲವೆಂದು ಅವರು ಹೇಳಿದರು.
ಗೋರಕ್ಷಕ ಸಂಘಟನೆಗಳ ವಿರುದ್ಧ ಪ್ರಧಾನಿ ನರೇಂದ್ರ ಮೋದಿಯವರ ಹೇಳಿಕೆಯನ್ನು ಸದನದಲ್ಲಿ ಪ್ರಸ್ತಾಪಿಸಿದ ಬಿಜು, ಪ್ರಧಾನಿ ಕೇವಲ ಮಾತುಗಳಿಗಷ್ಟೇ ಸೀಮಿತರಾಗದೆ ಈ ಸಂಘಟನೆಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.
‘‘ಗೋರಕ್ಷಕ ಸಂಘಟನೆಗಳ ಸಮಾಜವಿರೋಧಿ ಕೃತ್ಯಗಳ ವಿರುದ್ಧ ನಿಮಗೆ ಇಷ್ಟೊಂದು ಮಾಹಿತಿಯಿದ್ದರೆ, ನೀವು ಯಾಕೆ ಈ ದೌರ್ಜನ್ಯಗಳನ್ನು ತಡೆಯಲು ಕ್ರಮ ಕೈಗೊಳ್ಳುತ್ತಿಲ್ಲ? ಎಂದು ಅವರು ಪ್ರಧಾನಿಯನ್ನು ಪ್ರಶ್ನಿಸಿದರು.
ಗೋಚರ್ಮ ಸಾಗಣೆ ಮಾಡಿದ ದಲಿತರ ಮೇಲೆ ಮಾರಣಾಂತಿಕ ಹಲ್ಲೆ ನಡೆದ ಗುಜರಾತ್‌ನ ಉನಾ ಪಟ್ಟಣಕ್ಕೆ ತಾನು ಭೇಟಿ ನೀಡಿರುವುದಾಗಿ ಹೇಳಿದ ಬಿಜು ಅವರು, ಗೋರಕ್ಷಕ ಸಂಘಟನೆಗಳ ಮೇಲೆ ದೇಶಾದ್ಯಂತ ನಿಷೇಧ ಹೇರುವಂತೆ ಆಗ್ರಹಿಸಿದರು.
ಕಾಂಗ್ರೆಸ್‌ನ ಸಂಸದ ಮುನಿಯಪ್ಪ ಮಾತನಾಡಿ ದಲಿತರು ಭೀತಿ ಹಾಗೂ ಅಭದ್ರತೆಯ ಭಾವನೆಯಲ್ಲಿ ಬದುಕುತ್ತಿದ್ದಾರೆ.ಕಾಂಗ್ರೆಸ್ ತಮ್ಮನ್ನು ರಕ್ಷಿಸುವುದೆಂಬ ಬಗ್ಗೆ ಅವರಿಗೆ ನಂಬಿಕೆಯಿದೆ. ಆದರೆ ಬಿಜೆಪಿಯ ಮೇಲಿಲ್ಲವೆಂದು ಅವರಜು ಹೇಳಿದರು. ಪರಿಶಿಷ್ಟ ಜಾತಿ, ಪಂಗಡಗಳಿಗೆ ಈ ಮೊದಲು ಇದ್ದ ರಕ್ಷಣೆ ಈಗಿಲ್ಲ. ವಾಜಪೇಯಿ ಅವರು ಪ್ರಧಾನಿಯಾಗಿದ್ದಾಗ ಇಂತಹ ಯಾವುದೇ ಘಟನೆಗಳು ನಡೆದಿಲ್ಲವೆಂದು ಆಪಾದಿಸಿದರು.
ಗುಣಮಟ್ಟದ ಶಿಕ್ಷಣದಿಂದ ಪರಿಶಿಷ್ಟರನ್ನು ಸಮಾಜದ ಮುಖ್ಯವಾಹಿನಿಗೆ ತರಲು ಸಾಧ್ಯವಿದ್ದು, ಅವರಿಗಾಗಿ ನವೋದಯ ಶಾಲೆಗಳನ್ನು ತೆರೆಯುವಂತೆ ಸರಕಾರವನ್ನು ಆಗ್ರಹಿಸಿದರು. ದಲಿತ ದೌರ್ಜನ್ಯ ಪ್ರಕರಣದಲ್ಲಿ ಸಚಿವ ವಿ.ಕೆ.ಸಿಂಗ್ ಅವರು ‘ನಾಯಿ ಮೇಲೆ ಕಲ್ಲೆಸೆತ’ದ ಹೋಲಿಕೆಯನ್ನು ಮಾಡಿದ್ದನ್ನು ಪ್ರಸ್ತಾಪಿಸಿದ ಮುನಿಯಪ್ಪ, ಇಂತಹ ಸಚಿವರನ್ನು ಈಗಲೂ ಯಾಕೆ ಸಂಪುಟದಲ್ಲಿ ಉಳಿಸಿಕೊಳ್ಳಲಾಗಿದೆಯೆಂದು ಪ್ರಶ್ನಿಸಿದರು.
ಗುಜರಾತ್‌ನ ಮುಖ್ಯಮಂತ್ರಿಯಾಗಿ ಮೋದಿ ಅಧಿಕಾರ ವಹಿಸಿದ ಬಳಿಕ ಆ ರಾಜ್ಯದಲ್ಲಿ 14,500ಕ್ಕೂ ಅಧಿಕ ದಲಿತ ದೌರ್ಜನ್ಯದ ಪ್ರಕರಣಗಳು ವರದಿಯಾಗಿದೆ. ಆದರೆ ಈ ಪ್ರಕರಣಗಳಲ್ಲಿ ಅಪರಾಧಿಗಳಿಗೆ ಆದ ಶಿಕ್ಷೆಯ ಪ್ರಮಾಣವು ಕೇವಲ 3-5 ಶೇ. ಎಂದವರು ಹೇಳಿದರು.