×
Ad

ಓಬಿರಾಯನ ಕಾಲದ ಮರಣೋತ್ತರ ಪರೀಕ್ಷೆಯ ನಿಯಮಗಳ ಮರುಪರಿಶೀಲನೆಗೆ ಆದೇಶ

Update: 2016-08-11 23:05 IST

ಹೊಸದಿಲ್ಲಿ,ಆ.11: ತುಂಬ ಹಳೆಯದಾಗಿರುವ, ಮರಣೋತ್ತರ ಪರೀಕ್ಷೆಗೆ ಸಂಬಂಧಿಸಿದ ನಿಯಮಗಳನ್ನು ಪುನರ್‌ಪರಿಶೀಲಿಸುವಂತೆ ಮತ್ತು ಅಗತ್ಯ ತಿದ್ದು ಪಡಿಗಳನ್ನು ಸೂಚಿಸಿ ಸಮಗ್ರ ವರದಿಯೊಂದನ್ನು ಸಲ್ಲಿಸು ವಂತೆ ಕೇಂದ್ರವು ಕಾನೂನು ಆಯೋಗಕ್ಕೆ ಸೂಚಿಸಿದೆ.
ಮಹಾರಾಷ್ಟ್ರದ ಮಹಾತ್ಮಾ ಗಾಂಧಿ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಕ್ಲಿನಿಕಲ್ ಫಾರೆನ್ಸಿಕ್ ಮೆಡಿಸಿನ್ ಘಟಕವು ಇತ್ತೀಚಿಗೆ ಪ್ರಧಾನಿ ಮತ್ತು ಕೇಂದ್ರ ಗೃಹಸಚಿವರಿಗೆ ವರದಿಯೊಂದನ್ನು ಸಲ್ಲಿಸಿದ ಬಳಿಕ ಕೇಂದ್ರವು ಈ ಹೆಜ್ಜೆಯನ್ನಿರಿಸಿದೆ.
ಭಾರತದಲ್ಲಿ ವೈದ್ಯರು ಮರಣೋತ್ತರ ಪರೀಕ್ಷೆ ಸಂದರ್ಭ 1898ರಿಂದಲೂ ಆಗಿನ ಬ್ರಿಟಿಷ್ ಸರಕಾರವು ರೂಪಿಸಿದ್ದ ಸಿಪಿಸಿಯ ಕಲಂ 174ನ್ನೇ ಅನುಸರಿಸುತ್ತಿದ್ದಾರೆ. ಅದೀಗ ಓಬಿರಾಯನ ಕಾಲದ್ದಾಗಿದೆ ಎಂದು ವರದಿಯ ಮುಖ್ಯಲೇಖಕ ಡಾ.ಇಂದ್ರಜಿತ್ ಖಾಂಡೇಕರ್ ಬೆಟ್ಟು ಮಾಡಿದ್ದಾರೆ.
 100 ವರ್ಷಗಳ ನಂತರವೂ ಸಾವಿನ ಕುರಿತು ವೈದ್ಯಕೀಯ-ಕಾನೂನು ದೃಷ್ಟಿಯಿಂದ ಪೊಲೀಸರು ನಡೆಸುವ ತನಿಖೆಗಳ ದಯನೀಯ ಸ್ಥಿತಿ ಮತ್ತು ದೇಶದಲ್ಲಿ ಇಂದು ನಡೆಯುತ್ತಿರುವ ಮರಣೋತ್ತರ ಪರೀಕ್ಷೆಗಳ ದಯನೀಯ ಗುಣಮಟ್ಟವನ್ನು ನಿವಾರಿಸಬಹುದಾದ ಒಂದೇ ಒಂದು ತಿದ್ದುಪಡಿಯನ್ನು ಕಾನೂನಿಗೆ ಮಾಡಲಾಗಿಲ್ಲ ಎಂದು ಅವರು ವರದಿಯಲ್ಲಿ ಉಲ್ಲೇಖಿಸಿದ್ದಾರೆ.
 ಹಾಲಿ ಕಾನೂನುಗಳಿಗೆ ಯಾವುದೇ ತಿದ್ದುಪಡಿ ಆಗದಿರುವುದು ಅವೈಜ್ಞಾನಿಕ ಮತ್ತು ಅಸಮಂಜಸ ಶವಪರೀಕ್ಷೆ ವಿಧಾನಗಳಿಗೆ ಕಾರಣವಾಗಿದೆ ಮತ್ತು ಇದರ ಫಲಶ್ರುತಿಯಾಗಿ ಮರಣೋತ್ತರ ಪರೀಕ್ಷಾ ವರದಿಗಳು ಅಪೂರ್ಣವಾಗಿರುತ್ತವೆ. ನ್ಯಾಯಾಲಯಗಳಲ್ಲಿ ಶಿಕ್ಷೆಗೊಳಗಾಗುವವರ ಸಂಖ್ಯೆ ಕಡಿಮೆಯಾಗಿರುವುದಕ್ಕೆ ಇಂತಹ ಅಪೂರ್ಣ ವರದಿಗಳು ಭಾಗಶಃ ಕಾರಣವಾಗಿವೆ ಎಂದಿರುವ ವರದಿಯು,ಹಾಲಿ ನಿಯಮಾವಳಿಗಳಿಂದಾಗಿ ಮರಣೋತ್ತರ ಪರೀಕ್ಷಾ ವರದಿಗಳನ್ನು ಪಡೆಯುವುದೇ ಅತ್ಯಂತ ಪ್ರಯಾಸಕರ ಕಾರ್ಯವಾಗಿಬಿಟ್ಟಿದೆ ಎಂದು ಬೆಟ್ಟು ಮಾಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News