×
Ad

ಎನ್‌ಡಿಟಿವಿ ವಿರುದ್ಧ ಸಿಬಿಐ ತನಿಖೆ ಕೋರಿ ಪ್ರಧಾನಿಗೆ ಸ್ವಾಮಿ ಪತ್ರ

Update: 2016-08-11 23:06 IST

ಹೊಸದಿಲ್ಲಿ, ಆ.11: ಸದಾ ಒಂದಿಲ್ಲೊಂದು ವಿಚಾರದಲ್ಲಿ ಸುದ್ದಿಯಲ್ಲಿರುವ ಬಿಜೆಪಿಯ ರಾಜ್ಯಸಭಾ ಸದಸ್ಯ ಸುಬ್ರಮಣಿಯನ್ ಸ್ವಾಮಿ ಇದೀಗ ಪ್ರಧಾನಿ ನರೇಂದ್ರ ಮೋದಿಗೆ ಪತ್ರವೊಂದನ್ನು ಬರೆದು ಎನ್‌ಡಿಟಿವಿ ಹಾಗೂ ಅದರಲ್ಲಿರುವ ಪ್ರಮುಖರ ವಿರುದ್ಧ ಆರ್ಥಿಕ ಅವ್ಯವಹಾರಗಳಿಗೆ ಸಂಬಂಧಿಸಿದಂತೆ ಸಿಬಿಐ ಹಾಗೂ ಜಾರಿ ನಿರ್ದೇಶನಾಲಯದಿಂದ ತನಿಖೆಗೆ ಆಗ್ರಹಿಸಿದ್ದಾರೆ.

 ತಮ್ಮ ಮೂರು ಪುಟಗಳ ಪತ್ರದ ಪ್ರತಿಯೊಂದನ್ನು ಅವರು ಸಾಮಾಜಿಕ ಜಾಲತಾಣ ಟ್ವಿಟರ್‌ನಲ್ಲಿ ಅಪ್‌ಲೋಡ್ ಮಾಡಿದ್ದಾರೆ. ಎನ್‌ಡಿಟಿವಿಯ ಪ್ರಮುಖ ಷೇರುದಾರರಾದ ಪ್ರಣಯ್ ರಾಯ್ ಹಾಗೂ ಅವರ ಪತ್ನಿ ರಾಧಿಕಾ ರಾಯ್, ಬರ್ಖಾ ದತ್ತ್, ವಿಕ್ರಮ್ ಚಂದ್ರ ಹಾಗೂ ಸೋನಿಯಾ ಸಿಂಗ್ ಅವರನ್ನು ವಿಚಾರಣೆ ನಡೆಸಬೇಕೆಂದು ಸ್ವಾಮಿ ತಮ್ಮ ಪತ್ರದಲ್ಲಿ ಹೇಳಿದ್ದಾರೆ.
‘‘ಏರ್‌ಸೆಲ್-ಮ್ಯಾಕ್ಸಿಸ್ ಒಪ್ಪಂದ ಸಂಬಂಧ ಎನ್‌ಡಿಟಿವಿ ಚಾನೆಲ್‌ಗೆ ಹೇಗೆ ಹಣ ಬಂದಿದೆಯೆಂದು ಸಿಬಿಐ ಪ್ರಶ್ನಿಸಬೇಕು’’ ಎಂದು ಹೇಳಿರುವ ಸ್ವಾಮಿ ಈ ಒಪ್ಪಂದವನ್ನು ಆಗಿನ ವಿತ್ತ ಸಚಿವ ಪಿ.ಚಿದಂಬರಂ ಅಕ್ರಮವಾಗಿ ಅನುಮತಿಸಿದ್ದಾರೆಂದು ಹೊರನೋಟಕ್ಕೆ ತಿಳಿಯುತ್ತದೆ ಎಂದು ಆರೋಪಿಸಿದ್ದಾರೆ.
‘‘ಜಾರಿ ನಿರ್ದೇಶನಾಲಯವು ಚಾನೆಲ್‌ಗೆ ರೂ. 2,030 ಕೋಟಿ ದಂಡವನ್ನು ವಿದೇಶಿ ವಿನಿಮಯ ನಿರ್ವಹಣಾ ಕಾಯ್ದೆ ಉಲ್ಲಂಘನೆಗಾಗಿ ವಿಧಿಸಿದ್ದರೂ, ಆರ್‌ಬಿಐ ಗವರ್ನರ್ ರಘುರಾಮ್ ರಾಜನ್ ಎನ್‌ಡಿಟಿವಿ ಸಣ್ಣ ಮೊತ್ತದ ದಂಡ ಪಾವತಿಸುವಂತೆ ಮಾಡಿ ಅದನ್ನು ರಕ್ಷಿಸಿದ್ದಾರೆ’’ ಎಂದೂ ಸ್ವಾಮಿ ಆಪಾದನೆ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News