ಭಾರತದ ಕ್ರೀಡಾ ಸಚಿವರಿಗೆ ಒಲಿಂಪಿಕ್ಸ್ ಮಾನ್ಯತಾ ಪತ್ರ ರದ್ದುಪಡಿಸುವ ಎಚ್ಚರಿಕೆ!
ರಿಯೋ ಡಿ ಜನೈರೊ, ಆ.11: ಭಾರತದ ಕ್ರೀಡಾ ಸಚಿವರಾದ ವಿಜಯ್ ಗೋಯಲ್‌ರ ಬೆಂಬಲಿಗರು ಆಕ್ರಮಣಕಾರಿ ಹಾಗೂ ಅಸಭ್ಯ ವರ್ತನೆ ಮುಂದುವರಿಸಿದರೆ ಗೋಯೆಲ್‌ರ ಮಾನ್ಯತಾ ಪತ್ರವನ್ನು ರದ್ದುಪಡಿಸುವುದಾಗಿ ರಿಯೋ ಸಂಘಟಕರು ಎಚ್ಚರಿಕೆ ನೀಡಿದ್ದಾರೆ.
ನಿಮ್ಮ ಕ್ರೀಡಾ ಸಚಿವರು ಮಾನ್ಯತಾ ಪತ್ರವಿಲ್ಲದ ಸಹಚರರೊಂದಿಗೆ ಪ್ರವೇಶಕ್ಕೆ ಅನುಮತಿಯಿಲ್ಲದ ಸ್ಥಳಗಳಿಗೆ ಪ್ರವೇಶಿಸುತ್ತಿದ್ದಾರೆ ಎಂಬ ಬಗ್ಗೆ ಹಲವು ದೂರುಗಳು ಬಂದಿವೆ. ನಮ್ಮ ಸಿಬ್ಬಂದಿಗಳು ಆ ಬಗ್ಗೆ ವಿವರಣೆ ನೀಡಲು ಹೋದರೆ, ಅವರ ಮೇಲೆ ಅಸಭ್ಯವಾಗಿ ವರ್ತಿಸುತ್ತಾರೆ. ಕೆಲವೊಮ್ಮೆ ಹಲ್ಲೆ ಮಾಡಲು ಯತ್ನಿಸಿದ್ದಾರೆ. ಇಂತಹ ವರ್ತನೆ ಸ್ವೀಕಾರಾರ್ಹವಲ್ಲ. ನಾವು ಈ ಹಿಂದೆ ಎಚ್ಚರಿಕೆ ನೀಡಿದರೂ ಅದೇ ರೀತಿ ವರ್ತಿಸುತ್ತಿದ್ದಾರೆ. ಈ ರೀತಿಯ ವರ್ತನೆ ಮುಂದುವರಿಸಿದರೆ ನಿಮ್ಮ ಕ್ರೀಡಾಮಂತ್ರಿಗಳ ಮಾನ್ಯತೆ ಪತ್ರ ರದ್ದುಪಡಿಸಲಾಗುತ್ತದೆ ಎಂದು ರಿಯೋ ಒಲಿಂಪಿಕ್ ಆಯೋಜನಾ ಸಮಿತಿಯ ಮ್ಯಾನೇಜರ್ ಭಾರತದ ಅಥ್ಲೀಟ್‌ಗಳ ಮುಖ್ಯಸ್ಥ ರಾಕೇಶ್ ಗುಪ್ತಾರಿಗೆ ಬರೆದ ಪತ್ರದಲ್ಲಿ ಎಚ್ಚರಿಸಿದ್ದಾರೆ.