ಹಿಮಾಲಯ ಪ್ರಾಂತ ಪರಿಸರ ಮಾಲಿನ್ಯದಿಂದ ತೀವ್ರ ಬಾಧಿತ

Update: 2016-08-11 18:25 GMT

ಹೊಸದಿಲ್ಲಿ, ಆ.11: ಹಿಮಾಲಯ ಪರ್ವತಶ್ರೇಣಿಗಳು ಪರಿಸರ ಮಾಲಿನ್ಯದ ದುಷ್ಪರಿಣಾಮಗಳಿಂದ ತೀವ್ರವಾಗಿ ಬಾಧಿತವಾಗಿದೆಯೆಂದು ಕೇಂದ್ರ ಪರಿಸರ ಸಚಿವ ಅನಿಲ್ ಮಾಧವ್ ದವೆ ಕಳವಳ ವ್ಯಕ್ತಪಡಿಸಿದ್ದಾರೆ. ಬುಧವಾರ ಹೊಸದಿಲ್ಲಿಯಲ್ಲಿ ನಡೆದ ಹಿಮಾಲಯ ಪ್ರಾಂತದ ಸಂಸದರ ಸಭೆಯಲ್ಲಿ ಪಾಲ್ಗೊಂಡು ಮಾತನಾಡುತ್ತಿದ್ದ ಅವರು, ಈ ಪ್ರಾಂತವು ಎದುರಿಸುತ್ತಿರುವ ನೈಜ ಸಮಸ್ಯೆಗಳನ್ನು ಬಗೆಹರಿಸಲು ವೇದಿಕೆಯೊಂದರ ಅಗತ್ಯವಿರುವುದನ್ನು ಒತ್ತಿ ಹೇಳಿದರು. ಹವಾಮಾನ ಬದಲಾವಣೆ ಹಾಗೂ ನೀರ್ಗಲ್ಲುಗಳ ಕರಗುವಿಕೆಯಿಂದ ಹಿಮಾಲಯ ಪ್ರಾಂತದ ಮೇಲಾಗಿರುವ ಪರಿಣಾಮಗಳ ಬಗ್ಗೆಯೂ ಸಚಿವರು ಸಭೆಯಲ್ಲಿ ಚರ್ಚಿಸಿದರು. ‘‘ಹಿಮಾಲಯ ಪ್ರಾಂತದಲ್ಲಿ ಮನುಷ್ಯರು, ಕಾಡು ಪ್ರಾಣಿಗಳು ಹಾಗೂ ಅರಣ್ಯಗಳು ಸೌಹಾರ್ದಯುತವಾಗಿ ಸಹಬಾಳ್ವೆ ನಡೆಸುತ್ತಿವೆ. ಯಾವುದೇ ಪರಿಶಿಷ್ಟ ಪಂಗಡವೂ ಅರಣ್ಯಗಳಿಗೆ ಬೆದರಿಕೆಯಾಗಿ ಪರಿಣಮಿಸಿಲ್ಲ’’ ಎಂದು ಸಚಿವರು ಹೇಳಿದರು.

ಹಿಮಾಲಯದಲ್ಲಿ ಪ್ರಾಕೃತಿಕ ವಿಕೋಪದ ಅಪಾಯವನ್ನು ಕಡಿಮೆಗೊಳಿಸುವ ಸಾಧ್ಯತೆಗಳ ಬಗ್ಗೆಯೂ ಸಭೆಯಲ್ಲಿ ಚರ್ಚಿಸಲಾಯಿತು. ಕಾಡ್ಗಿಚ್ಚಿನ ಹಾವಳಿಯನ್ನು ತಡೆಗಟ್ಟಲು ಹಾಗೂ ಜನರ ವಲಸೆಯನ್ನು ಕಡಿಮೆಗೊಳಿಸುವ ನಿಟ್ಟಿನಲ್ಲಿ ಸೂಕ್ತ ಕ್ರಮಗಳನ್ನು ಕೈಗೊಳ್ಳುವ ಬಗ್ಗೆ ಸಮಾಲೋಚನೆ ನಡೆಸಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News