ಕೇಂದ್ರ ಸರಕಾರಕ್ಕೆ ದಂಡ ವಿಧಿಸಿದ ಸುಪ್ರೀಂ ಕೋರ್ಟ್

Update: 2016-08-12 10:19 GMT

ಹೊಸದಿಲ್ಲಿ, ಆ.12: ರಸ್ತೆ ಅಪಘಾತಗಳಿಗೆ ಸಂಬಂಧಿಸಿದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯೊಂದರ ಸಂಬಂಧ ಅಫಿಡವಿಟ್ ಸಲ್ಲಿಸದೇ ಇರುವ ಕೇಂದ್ರ ಸರಕಾರವನ್ನು ಸುಪ್ರೀಂ ಕೋರ್ಟ್ ಇಂದು ತರಾಟೆಗೆ ತೆಗೆದುಕೊಂಡಿದೆ.ಈ ನಿಟ್ಟಿನಲ್ಲಿ ಅದು ರಸ್ತೆ ಸಾರಿಗೆ ಸಚಿವಾಲಯಕ್ಕೆ 25,000 ರೂ. ದಂಡ ಕೂಡ ವಿಧಿಸಿದೆ.

ಸರಕಾರ ತನ್ನ ಪ್ರತಿಕ್ರಿಯೆಯನ್ನು ಮೂರು ವಾರಗಳೊಳಗಾಗಿ ಸಲ್ಲಿಸುವುದೆಂದು ಸರಕಾರದ ಪರವಾಗಿ ಸುಪ್ರೀಂ ಕೋರ್ಟಿನಲ್ಲಿ ಹಾಜರಿದ್ದ ಅಟಾರ್ನಿ ಜನರಲ್ ಮುಕುಲ್ ರೋಹಟ್ಗಿ ಕೋರ್ಟಿಗೆ ತಿಳಿಸಿದ್ದಾರೆ.
‘‘ನಿಮ್ಮ ಅಸಡ್ಡೆಯಿಂದಾಗಿ ಸಾವಿರಾರು ಮಂದಿ ಸಾಯುತ್ತಿದ್ದಾರೆ’’ ಎಂದು ಕೋರ್ಟ್ ಸರಕಾರಕ್ಕೆ ಹೇಳಿತು. ‘‘ಸರಕಾರವು ಅತಿ ದೊಡ್ಡ ಕಕ್ಷಿಗಾರನಾಗಿದ್ದರೂ ನ್ಯಾಯಾಲಯ ಸರಿಯಾಗಿ ಕಾರ್ಯನಿರ್ವಹಿಸಿಲ್ಲವೆಂದು ಅದು ಯಾವತ್ತೂ ದೂರಿದೆ’’ ಎಂದು ವಿಚಾರಣೆ ವೇಳೆ ಮುಖ್ಯ ನ್ಯಾಯಮೂರ್ತಿ ಟಿ.ಎಸ್.ಠಾಕೂರ್ ಹೇಳಿದರು. ‘‘ನೀವು ಪ್ರತಿ ಅಫಿದವಿತ್ ಸಲ್ಲಿಸದೆ ಒಂದು ವರ್ಷದ ಮೇಲಾಯಿತು. ಇಲ್ಲೇನು ಪಂಚಾಯತ್ ಸಭೆ ನಡೆಯುತ್ತಿದೆಯೇನು?’’ಎಂದು ಜಸ್ಟಿಸ್ ಠಾಕೂರ್ ಖಾರವಾಗಿ ಪ್ರತಿಕ್ರಿಯಿಸಿದರು.
ಕಬ್ಬಿಣದ ಸರಳುಗಳನ್ನು ಹಾಗೂ ಹೊರಕ್ಕೆ ಚಾಚಿಕೊಂಡಿರುವ ಇತರ ಅಪಾಯಕಾರಿ ವಸ್ತುಗಳನ್ನು ಸಾಗಿಸುವ ಹಾಗೂ ಗಂಭೀರ ಅಪಘಾತಗಳಿಗೆ ದಾರಿ ಮಾಡಿಕೊಡಬಹುದಾದಂತ ವಾಹನಗಳಿಗೆ ಸೂಕ್ತ ನಿಯಮಾವಳಿ ರೂಪಿಸುವಂತೆ ಆಗ್ರಹಿಸಿ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ದಾವೆಗೆ ತನ್ನ ಪ್ರತಿಕ್ರಿಯೆಯನ್ನು ಕೇಂದ್ರ ಸರಕಾರ ಈ ಹಿಂದೆ ನೀಡಿತ್ತಾದರೂ, ನಿಲುಗಡೆಯಾಗಿರುವ ವಾಹನಗಳಿಂದ ಸಂಭವಿಸಬಹುದಾದಂತಹ ಅಪರಾಧಗಳನ್ನು ನಿವಾರಿಸುವ ನಿಟ್ಟಿನಲ್ಲಿ ರಚಿಸಬೇಕಾದ ನಿಯಮಾವಳಿಗಳ ಬಗ್ಗೆ ಸರಕಾರ ಇನ್ನಷ್ಟೇ ಪ್ರತಿಕ್ರಿಯಿಸಬೇಕಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News