×
Ad

ಲಾಸ್ ಏಂಜಲೀಸ್ ಘಟನೆ : ಅಮೆರಿಕನ್ ರಾಯಭಾರಿಯಿಂದ ಶಾರುಕ್‌ಖಾನ್‌ರ ಕ್ಷಮೆ ಯಾಚನೆ

Update: 2016-08-12 18:21 IST

ಹೊಸದಿಲ್ಲಿ, ಆ.12: ಲಾಸ್ ಏಂಜಲೀಸ್ ವಿಮಾನ ನಿಲ್ದಾಣದಲ್ಲಿ ತನ್ನನ್ನು ವಶಪಡಿಸಿಕೊಳ್ಳಲಾಗಿತ್ತೆಂದು ಬಾಲಿವುಡ್ ನಟ ಶಾರುಕ್‌ಖಾನ್ ಟ್ವೀಟಿಸಿದ ಕೆಲವೇ ತಾಸುಗಳಲ್ಲಿ ‘ಈ ತೊಂದರೆಗಾಗಿ’ ಅಮೆರಿಕದ ರಾಯಭಾರಿ ಕ್ಷಮೆ ಯಾಚಿಸಿದ್ದಾರೆ.
ತೊಂದರೆಗಾಗಿ ವಿಷಾದಿಸುತ್ತೇನೆ. ಇಂತಹದು ಪುನಃ ಸಂಭವಿಸದಂತೆ ಖಚಿತಪಡಿಸಲು ತಾವು ಕೆಲಸ ಮಾಡುತ್ತಿದ್ದೇವೆಂದು ಭಾರತದ ಅಮೆರಿಕನ್ ರಾಯಭಾರಿ ರಿಚಾರ್ಡ್ ವರ್ಮ ಶುಕ್ರವಾರ ಟ್ವೀಟಿಸಿದ್ದಾರೆ.
‘‘ನಿಮ್ಮ ಕೆಲಸವು ಅಮೆರಿಕನ್ನರು ಸಹಿತ ಲಕ್ಷಾಂತರ ಜನರಿಗೆ ಸ್ಫೂರ್ತಿದಾಯಕವಾಗಿದೆ’’ ಎಂದು ವರ್ಮ ಟ್ವೀಟರ್‌ನಲ್ಲಿ ಬರೆದಿದ್ದಾರೆ. ಅವರ ಕಾಳಜಿಗಾಗಿ ಖಾನ್ ಧನ್ಯವಾದ ಸಲ್ಲಿಸಿದ್ದಾರೆ.
‘‘ಯಾವುದೇ ತೊಂದರೆಯಾಗಿಲ್ಲ ಸರ್, ಔಪಚಾರಿಕತೆಯನ್ನು ಗೌರವಿಸಿದ್ದೇನೆ ಹಾಗೂ ಅದಕ್ಕಿಂತ ಹೆಚ್ಚೇನೂ ನಾನು ನಿರೀಕ್ಷಿಸಿಲ್ಲ. ಇದೊಂದು ಸಣ್ಣ ತೊಂದರೆಯಷ್ಟೇ. ಕಾಳಜಿಗೆ ಧನ್ಯವಾದಗಳು’’ ಎಂದವರು ಬರೆದಿದ್ದಾರೆ.
ಬಾಲಿವುಡ್ ನಟಿ ಶಾರುಕ್‌ಖಾನರನ್ನು ಲಾಸ್ ಏಂಜಲೀಸ ವಿಮಾನನಿಲ್ದಾಣದಲ್ಲಿ ಅಮೆರಿಕದ ವಲಸೆ ಅಧಿಕಾರಿಗಳು ವಶಕ್ಕೆ ಪಡೆದಿದ್ದರು. ಇದು ಅಮೆರಿಕದಲ್ಲಿ ಅವರಿಗಾಗಿರುವ ಇಂತಹ ಮೂರನೆಯ ಅನುಭವವಾಗಿದೆ. ಈ ಬಗ್ಗೆ ಖಾನ್ ಸಾಮಾಜಿಕ ಮಾಧ್ಯಮದಲ್ಲಿ ಅಸಮಾಧಾನ ವ್ಯಕ್ತಪಡಿಸಿದ್ದರು.
ಪ್ರಪಂಚವು ಈಗಿರುವ ಸ್ಥಿತಿಯಲ್ಲಿ ಭದ್ರತೆಯನ್ನು ತಾನು ಸಂಪೂರ್ಣವಾಗಿ ಅರ್ಥಮಾಡಿಕೊಂಡಿದ್ದೇನೆ ಹಾಗೂ ಗೌರವಿಸಿದ್ದೇನೆ. ಆದರೆ, ಪ್ರತಿ ಬಾರಿಯೂ ಅಮೆರಿಕದ ವಲಸೆ ವಿಭಾಗವು ತನ್ನನ್ನು ವಶಪಡಿಸಿಕೊಳ್ಳುವುದು ಖಂಡನೀಯ ಎಂದು ಅವರು ಲಾಸ್ ಏಂಜಲೀಸ್ ವಿಮಾನ ನಿಲ್ದಾಣದಲ್ಲಿ ವಶಕ್ಕೆ ಪಡೆಯಲಾದ ಬಳಿಕ ಟ್ವೀಟಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News