×
Ad

ಭಾರತದ ಗಡಿಯಲ್ಲಿ ದಾಳಿಗೆ ತಾಲಿಬಾನ್ ಯೋಜನೆ : ಪಾಕಿಸ್ತಾನ ಗುಪ್ತಚರ ಸಂಸ್ಥೆಯ ಎಚ್ಚರಿಕೆ

Update: 2016-08-12 20:23 IST

ಲಾಹೋರ್, ಆ.12: ಪಾಕಿಸ್ತಾನದ ಉನ್ನತ ಭಯೋತ್ಪಾದನೆ ವಿರೋಧಿ ಸಂಸ್ಥೆಯು ಎರಡು ಮುನ್ನೆಚ್ಚರಿಕೆಗಳನ್ನು ಹೊರಡಿಸಿದೆ. ಸ್ವಾತಂತ್ರ ದಿನಾಚರಣೆಯ ಆಸುಪಾಸಿನಲ್ಲಿ ಇಬ್ಬರು ತಾಲಿಬಾನ್ ಆತ್ಮಹತ್ಯಾ ಬಾಂಬರ್‌ಗಳಿಂದ ಭಾರತ-ಪಾಕಿಸ್ತಾನದ ವಾಘಾ ಹಾಗೂ ಗಂದಾ ಸಿಂಗ್ ಗಡಿಗಳಲ್ಲಿ ದಾಳಿ ನಡೆಯುವ ಸಂಭಾವ್ಯವಿದೆಯೆಂದು ಅದು ಎಚ್ಚರಿಸಿವೆ.

ಈ ಹಿನ್ನೆಲೆಯಲ್ಲಿ ಸಾರ್ವಜನಿಕರು ಹಾಗೂ ಭದ್ರತಾ ಸಿಬ್ಬಂದಿಯ ರಕ್ಷಣೆಗೆ ಭಾರೀ ತಡೆ ಕ್ರಮಗಳನ್ನು ಕೈಗೊಳ್ಳುವಂತೆ ಪಾಕಿಸ್ತಾನದ ಭಯೋತ್ಪಾದನೆ ವಿರೋಧಿ ಪ್ರಾಧಿಕಾರವು ಪಾಕಿಸ್ತಾನಿ ರೇಂಜರ್ಸ್‌ನ ಪಂಜಾಬ್ ಮಹಾನಿರ್ದೇಶಕ, ಗೃಹ ಇಲಾಖೆ ಹಾಗೂ ಪಂಜಾಬ್(ಪಾಕಿಸ್ತಾನ) ಪೊಲೀಸ್ ವರಿಷ್ಠರಿಗೆ ಆದೇಶ ನೀಡಿದೆ.

 ತೆಹ್ರಿಕ್-ಇ-ತಾಲಿಬಾನ್‌ನ ಫಝಲುಲ್ಲಾ ಗುಂಪು ಆ.13,14 ಅಥವಾ 15ರಂದು ಲಾಹೋರ್‌ನ ವಾಘಾ ಗಡಿ ಹಾಗೂ ಕಸೂರ್‌ನ ಗಂದಾ ಸಿಂಗ್ ಗಡಿಗಳಲ್ಲಿ ಸ್ವಾತಂತ್ರೋತ್ಸವ ಪೆರೇಡ್‌ನ ಮೇಲೆ ದಾಳಿ ನಡೆಸಲು ಯೋಜನೆ ಹಾಕಿಕೊಂಡಿದೆಯೆಂದು ಭದ್ರತಾ ಎಚ್ಚರಿಕೆ ತಿಳಿಸಿದೆ.

ಈ ಗುರಿಗಳ ಮೇಲೆ ದಾಳಿ ನಡೆಸಲು ಇಬ್ಬರು ಆತ್ಮಹತ್ಯಾ ಬಾಂಬರ್‌ಗಳನ್ನು ಕಳುಹಿಸಲಾಗಿದೆಯೆಂದೂ ಅದು ಹೇಳಿದೆ.

ಯಾವುದೇ ಅಹಿತಕರ ಘಟನೆಯನ್ನು ನಿವಾರಿಸಲು ತೀವ್ರ ಕಣ್ಗಾವಲು ಹಾಗೂ ಉನ್ನತ ಭದ್ರತಾ ಕ್ರಮಗಳನ್ನು ಕೈಗೊಳ್ಳುವಂಎ ಸಲಹೆ ನೀಡಲಾಗಿದೆಯೆಂದು ಎಚ್ಚರಿಕೆ ತಿಳಿಸಿದೆ.

ಕನಿಷ್ಠ 16 ಮಂದಿ ಆತ್ಮಹತ್ಯಾ ದಾಳಿಕಾರರು ಪ್ರಾಂತವನ್ನು ಪ್ರವೇಶಿಸಿದ್ದಾರೆ. ಅವರು, ಸ್ವಾತಂತ್ರ ದಿನಾಚರಣೆಗೆ ಸಂಬಂದಿಸಿದ ಸಾರ್ವಜನಿಕ ಸಭೆಗಳ ಮೇಲೆ ಗುರಿಯಿರಿಸಲು ಯೋಚಿಸಿದ್ದಾರೆಂದು ಪಂಜಾಬ್‌ನ(ಪಾಕಿಸ್ತಾನ) ಗೃಹ ಇಲಾಖೆಯು ಪ್ರತ್ಯೇಕ ಎಚ್ಚರಿಕೆಯನ್ನು ಹೊರಡಿಸಿವೆ.

ಈ ಹಿನ್ನೆಲೆಯಲ್ಲಿ ಪಂಜಾಬ್ ಪೊಲೀಸರು ಗಡಿಪ್ರದೇಶಗಳಲ್ಲಿ ದಾಳಿ ನಡೆಸಿ ಹಲವು ಮಂದಿ ಶಂಕಿತರನ್ನು ಬಂಧಿಸಿದ್ದಾರೆ.

ದಾಳಿಯ ವೇಳೆ ಪೊಲೀಸರು 50ಕ್ಕೂ ಹೆಚ್ಚು ಮಂದಿ ಶಂಕಿತರನ್ನು ಬಂಧಿಸಿದ್ದಾರೆ. ನಗರ ಹಾಗೂ ಗಡಿಪ್ರದೇಶಗಳಲ್ಲಿ ಭದ್ರತೆಯನ್ನು ಬಿಗಿಗೊಳಿಸಲಾಗಿದೆಯೆಂದು ಲಾಹೋರ್ ಪೊಲೀಸ್ ವಕ್ತಾರ ನಿಯಾಬ್ ಹೈದರ್ ತಿಳಿಸಿದ್ದಾರೆ.

ಬಂಧಿತರಲ್ಲಿ ಹಲವರಿಂದ ಅವರ ಗುರುತಿನ ದಾಖಲೆ ಸಲ್ಲಿಸಲು ಸಾಧ್ಯವಾಗಿಲ್ಲ. ಆದುದರಿಂದ ಪರಿಶೀಲನೆ ಪ್ರಕ್ರಿಯೆ ಮುಗಿಯುವ ವರೆಗೆ ಅವರನ್ನು ವಿಚಾರಣೆಗೊಳಪಡಿಸಿ ಕಸ್ಟಡಿಯಲ್ಲೇ ಇರಿಸಿಕೊಳ್ಳಲಾಗುವುದೆಂದು ಅವರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News