ನಾನು ಸೋಲಬಹುದು: ಟ್ರಂಪ್
ಒರ್ಲಾಂಡೊ, ಆ. 12: ಈವರೆಗೆ ವೀರಾವೇಶದ ಮಾತುಗಳನ್ನೇ ಆಡುತ್ತಾ ಬಂದಿರುವ ರಿಪಬ್ಲಿಕನ್ ಪಕ್ಷದ ಅಧ್ಯಕ್ಷೀಯ ಅಭ್ಯರ್ಥಿ ಡೊನಾಲ್ಡ್ ಟ್ರಂಪ್, ತಾನು ಚುನಾವಣೆಯಲ್ಲಿ ಸೋಲುವ ಸಾಧ್ಯತೆಯೂ ಇದೆ ಎಂಬುದನ್ನು ಗುರುವಾರ ಒಪ್ಪಿಕೊಂಡಿದ್ದಾರೆ.
ತನ್ನ ಅಧ್ಯಕ್ಷೀಯ ಅಭಿಯಾನ ಹಲವು ಸವಾಲುಗಳನ್ನು ಎದುರಿಸುತ್ತಿದೆ ಹಾಗೂ ಅಂತಿಮವಾಗಿ ತಾನು ಗುರಿ ಮುಟ್ಟದೆ ಹೋಗಬಹುದು ಎಂದು ಇವ್ಯಾಂಜಲಿಕಲ್ ಮಿನಿಸ್ಟರ್‌ಗಳನ್ನು ಉದ್ದೇಶಿಸಿ ಮಾತನಾಡಿದ ಟ್ರಂಪ್ ಹೇಳಿದರು.
ಇದನ್ನು ಟ್ರಂಪ್‌ರ ಈವರೆಗಿನ ಅತ್ಯಂತ ವಿನೀತ ಮನೋಭಾವ ಎಂಬುದಾಗಿ ಬಣ್ಣಿಸಲಾಗಿದೆ.
ತಾನು ಉಟಾಹ್‌ನಲ್ಲಿ ‘‘ಅಗಾಧ ಸಮಸ್ಯೆಯನ್ನು ಎದುರಿಸುತ್ತಿದ್ದೇನೆ’’ ಎಂದರು.
ಪ್ರಚಲಿತ ವ್ಯವಸ್ಥೆಗೆ ಹೊಂದಿಕೊಳ್ಳದ ತನ್ನ ಮಾತುಗಳನ್ನು ಹಾಗೂ ತನ್ನ ದಿಟ್ಟ ನಿಲುವನ್ನು ಅಮೆರಿಕನ್ನರು ಒಪ್ಪಿಕೊಳ್ಳದಿದ್ದರೆ ಚುನಾವಣೆಯಲ್ಲಿ ತನಗೆ ಸೋಲಾಗಬಹುದು ಎಂಬುದನ್ನು ಅದೇ ದಿನ ಬಿಲಿಯಾಧೀಶ ಅಭ್ಯರ್ಥಿ ಒಪ್ಪಿಕೊಂಡರು.
‘‘ನಮ್ಮಲ್ಲೊಂದು ಸಮಸ್ಯೆಯಿದೆ’’ ಎಂದು ಟ್ರಂಪ್ ಮಿನಿಸ್ಟರ್‌ಗಳಿಗೆ ಹೇಳಿದರು. ಐವರು ಹೈಕೋರ್ಟ್ ನ್ಯಾಯಾಧೀಶರನ್ನು ನೇಮಿಸುವ ಅವಕಾಶ ಮುಂದಿನ ಅಧ್ಯಕ್ಷರಿಗೆ ಲಭಿಸಲಿದೆ ಎಂದರು. ‘‘ಹೀಗಾದರೆ ಸುಪ್ರೀಂ ಕೋರ್ಟ್ ನಮ್ಮ ಕೈತಪ್ಪಬಹುದು’’ ಎಂದರು.
ರಿಪಬ್ಲಿಕನ್ ಪ್ರಾಥಮಿಕ ಚುನಾವಣೆಯಲ್ಲಿ ತನ್ನದೇ ಪಕ್ಷದ 16 ಎದುರಾಳಿಗಳನ್ನು ಹಿಮ್ಮೆಟ್ಟಿಸಿದ ಬಳಿಕ, ಈಗ ಚುನಾವಣಾ ಅಭಿಯಾನದಲ್ಲಿ ಅವರು ಹಲವು ಸವಾಲುಗಳನ್ನು ಎದುರಿಸುತ್ತಿದ್ದಾರೆ. ರಾಷ್ಟ್ರೀಯ ಸಮೀಕ್ಷೆಯಲ್ಲಿ ಅವರ ಎದುರಾಳಿ ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿ ಹಿಲರಿ ಕ್ಲಿಂಟನ್‌ರ ಮುನ್ನಡೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಅದೇ ವೇಳೆ, ಅವರದೇ ಪಕ್ಷದ ಹೆಚ್ಚು ಹೆಚ್ಚು ನಾಯಕರು, ತಮ್ಮ ಪಕ್ಷದ ಅಭ್ಯರ್ಥಿಯನ್ನು ಬೆಂಬಲಿಸುವುದಿಲ್ಲ ಎಂದು ಬಹಿರಂಗವಾಗಿ ಹೇಳಿಕೆ ಕೊಡುತ್ತಿದ್ದಾರೆ.