×
Ad

ಭವಿಷ್ಯನಿಧಿ ಪಾವತಿ: ಹತ್ತು ಸಾವಿರ ಕಂಪೆನಿಗಳು ಸುಸ್ತಿ!

Update: 2016-08-12 22:41 IST

ಒಡಿಶಾದ ಸಂಜಯ ಕುಮಾರ್ ತಮ್ಮ ತಂದೆಯ 40 ಸಾವಿರ ರೂಪಾಯಿ ಭವಿಷ್ಯನಿಧಿ ಹಣವನ್ನು ವಾಪಸು ಪಡೆಯಲು 30 ದಿನ ಸಾಕಾಗಿತ್ತು. ಉದ್ಯೋಗದಿಂದ ನಿವೃತ್ತಿಯಾದ ಬಳಿಕ ಪ್ರಯೋಜನಕ್ಕಾಗಿ ಕಂಪೆನಿಗಳು ಕಡ್ಡಾಯವಾಗಿ ವೇತನದಿಂದ ಕಡಿತ ಮಾಡಿ ಭವಿಷ್ಯನಿಧಿ ಭಾಗವನ್ನು ತುಂಬಬೇಕು. ಆದರೆ ಕುಮಾರ್‌ಗೆ ತಮ್ಮ ತಂದೆ ಕೃಷ್ಣಚಂದ್ರ ತಮ್ಮ 53ನೆ ವಯಸ್ಸಿನಲ್ಲಿ 2011ರಲ್ಲಿ ಮೃತಪಟ್ಟ ಬಳಿಕ ಅವರ ಭವಿಷ್ಯನಿಧಿ ಹಣವನ್ನು ಪಡೆಯಲು 1,824 ದಿನಗಳ ಕಾಲ ಹೋರಾಡಬೇಕಾಯಿತು. ‘‘ಭವಿಷ್ಯನಿಧಿ ಹಣವನ್ನು ವಾಪಸು ಪಡೆಯಲು ದಯವಿಟ್ಟು ನನಗೆ ಸಹಾಯ ಮಾಡಿ. ನನ್ನ ತಾಯಿಗೆ ಅದು ಕೈತಪ್ಪುತ್ತದೆ ಎಂಬ ಭೀತಿ ಎದುರಾಗಿದೆ’’ ಎಂದು ಸಂಜಯ್ ಕುಮಾರ್ ಆನ್‌ಲೈನ್ ವೇದಿಕೆಯೊಂದರಲ್ಲಿ ದೂರು ದಾಖಲಿಸಿದ್ದರು.

ಐದು ವರ್ಷಗಳ ಬಳಿಕ, ಮೂರು ದೂರುಗಳನ್ನು ನೀಡಿದ ಬಳಿಕವೂ ಕುಮಾರ್‌ಗೆ ಸಿಬ್ಬಂದಿ ಭವಿಷ್ಯನಿಧಿ ಸಂಸ್ಥೆಯಿಂದ ಯಾವ ಪ್ರತಿಕ್ರಿಯೆಯೂ ಬರಲಿಲ್ಲ. ಈ ಭವಿಷ್ಯನಿಧಿ ಸಂಸ್ಥೆಯು, ಕಂಪೆನಿಗಳು ಕಡಿತಗೊಳಿಸಿದ ಭವಿಷ್ಯನಿಧಿ ಹಣವನ್ನು ಸ್ವೀಕರಿಸುತ್ತದೆ ಹಾಗೂ ಸುಮಾರು 50 ದಶಲಕ್ಷ ಭವಿಷ್ಯನಿಧಿ ಖಾತೆಗಳನ್ನು ದೇಶಾದ್ಯಂತ ನಿರ್ವಹಿಸುತ್ತದೆ.

ಚಂದ್ರ, ಭುವನೇಶ್ವರದ ಟಾರ್ಗೆಟ್ ಅಲೈಡ್ ಸೆಕ್ಯುರಿಟೀಸ್ ಪ್ರೈವೇಟ್ ಲಿಮಿಟೆಡ್ ಎಂಬ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದರು. ಅವರ ಸಹೋದ್ಯೋಗಿಗಳು ಭವಿಷ್ಯನಿಧಿ ಹಣವನ್ನು ಪಡೆದರೂ, ಅವರ ಕುಟುಂಬಕ್ಕೆ ಮಾತ್ರ ಸಿಗಲಿಲ್ಲ. ‘‘ತಂದೆಯ ಪಿಎಫ್ ಹಣ ವಾಪಸು ಪಡೆಯಲು ಹಿಂದಿನ ಉದ್ಯೋಗದಾತರಿಗೆ ಅಸಂಖ್ಯಾತ ಇ-ಮೇಲ್ ಕಳುಹಿಸಬೇಕಾಯಿತು’’ ಎಂದು ಹೈದರಾಬಾದ್‌ನಲ್ಲಿ ನೆಲೆಸಿರುವ ಕುಮಾರ್ ಹೇಳುತ್ತಾರೆ.
‘‘ಇವರು ನಮಗೇನೂ ಸಹಾಯ ಮಾಡುವುದಿಲ್ಲ; ಇಲ್ಲಿಂದ ನಾನು ಒಡಿಶಾಗೆ ಹೇಗೆ ವಾಪಸು ಹೋಗಲು ಸಾಧ್ಯ’’ ಎಂದು ಅವರು ಪ್ರಶ್ನಿಸುತ್ತಾರೆ. ‘‘ನನ್ನ ತಾಯಿ ಪದೇ ಪದೇ ಈ ಬಗ್ಗೆ ನನಗೆ ಹೇಳುತ್ತಲೇ ಇರುತ್ತಾರೆ. ಆದರೆ ನಾನು ಅವರ ಬೆನ್ನುಬೀಳುವುದು ಬಿಟ್ಟಿದ್ದೇನೆ’’ ಎಂದು ಕುಮಾರ್ ವಿವರಿಸುತ್ತಾರೆ.
ದೇಶದಲ್ಲಿ 1,195 ಸರಕಾರಿ ಸ್ವಾಮ್ಯದ ಕಂಪೆನಿಗಳೂ ಸೇರಿದಂತೆ 10 ಸಾವಿರಕ್ಕೂ ಹೆಚ್ಚು ಕಂಪೆನಿಗಳು ದೇಶಾದ್ಯಂತ ಭವಿಷ್ಯನಿಧಿ ಪಾವತಿಯ ಸುಸ್ತಿ ಉಳಿಸಿಕೊಂಡಿವೆ. 2,200 ಕಂಪೆನಿಗಳು ಕನಿಷ್ಠ 2200 ಕೋಟಿ ರೂಪಾಯಿಗಳ ಬಾಕಿಯನ್ನು ಭವಿಷ್ಯನಿಧಿ ಪಾವತಿ ಬಾಕಿ ಉಳಿಸಿಕೊಂಡಿವೆ. ಸಿಬ್ಬಂದಿಯ ವೇತನದಿಂದ ಕಡಿತ ಮಾಡಿದ ಈ ಭಾಗವನ್ನು ಕಡ್ಡಾಯವಾಗಿ ಅವರು ಪಾವತಿಸಬೇಕು.

ಹೆಚ್ಚುತ್ತಿದೆ ಸಂಖ್ಯೆ
ಸುಸ್ತಿ ಕಂಪೆನಿಗಳು ಹಾಗೂ ಸಂಸ್ಥೆಗಳ ಸಂಖ್ಯೆ ಬೆಳೆಯುತ್ತಲೇ ಇದೆ. 2014-2015ರಲ್ಲಿ 10,091 ಸುಸ್ತಿದಾರ ಕಂಪೆನಿಗಳಿದ್ದರೆ, ಈ ಪ್ರಮಾಣ 2015ರ ಡಿಸೆಂಬರ್ ವೇಳೆಗೆ ಇದು 10,932ಕ್ಕೆ ಹೆಚ್ಚಿದೆ.
ಆನ್‌ಲೈನ್ ಗ್ರಾಹಕ ವೇದಿಕೆಗಳಲ್ಲಿ ಕುಮಾರ್ ಅವರ ದೂರಿನಂಥ ಹಲವು ದೂರುಗಳು ಪ್ರವಾಹವೇ ಹರಿದಿದೆ. ಕಂಪೆನಿ ತೊರೆದ ಅಥವಾ ನಿವೃತ್ತರಾದ ನೂರಾರು ಮಂದಿಗೆ ಅವರ ಭವಿಷ್ಯನಿಧಿ ಸೌಲಭ್ಯ ಇನ್ನೂ ಸಿಕ್ಕಿಲ್ಲ.
‘‘ನಮ್ಮಲ್ಲಿ ಕಳೆದ ಒಂದೂವರೆ ವರ್ಷಗಳಲ್ಲಿ ಭವಿಷ್ಯ ನಿಧಿ ಮರುಪಾವತಿ ಹಾಗೂ ಇದರ ಕಾರಣಗಳನ್ನು ಕೋರಿ 2000ಕ್ಕೂ ಹೆಚ್ಚು ಮಾಹಿತಿಹಕ್ಕು ಅರ್ಜಿಗಳು ಸಲ್ಲಿಕೆಯಾಗಿವೆ’’ ಎಂದು ಬೆಂಗಳೂರು ಮೂಲದ ಆಲ್‌ನೈನ್ ಆರ್‌ಟಿಐ.ಕಾಂನ ಸಹ ಸಂಸ್ಥಾಪಕ ಆರ್.ವಿನೋದ್ ಹೇಳುತ್ತಾರೆ.
‘‘ಭವಿಷ್ಯನಿಧಿ ಹಣವನ್ನು ನೀಡದಿರುವ ಬಗ್ಗೆ ಮತ್ತು ಪಿಪಿಎಫ್‌ಒ ಅಧಿಕಾರಿಗಳು ಹಾಗೂ ಉದ್ಯೋಗದಾತರ ನಡುವಿನ ಅಪವಿತ್ರ ಮೈತ್ರಿಯ ಬಗ್ಗೆ ಹಲವು ದೂರು ಗಳು ಬಂದಿವೆ’’ ಎಂದು ಅಖಿಲ ಭಾರತ ಟ್ರೇಡ್ ಯೂನಿಯನ್ ಕಾಂಗ್ರೆಸ್‌ನ ಕಾರ್ಯದರ್ಶಿ ಹಾಗೂ ಇಪಿಎಫ್‌ಒ ಟ್ರಸ್ಟಿ ಡಿ.ಎಲ್. ಸಚ್‌ದೇವ್ ವಿವರಿಸುತ್ತಾರೆ.

ಈ ಬಗ್ಗೆ ಜೂನ್ 29ರಂದು ವಿವರವಾದ ಪ್ರಶ್ನಾವಳಿಯನ್ನು ಭವಿಷ್ಯನಿಧಿ ಆಯುಕ್ತರಿಗೆ ಕಳುಹಿಸಲಾಗಿತ್ತು. ಇದರ ಜತೆಗೆ ಇಪಿಎಫ್‌ಒ ಕೇಂದ್ರೀಯ ವಿಚಕ್ಷಣಾ ಅಧಿಕಾರಿಗೂ ಇ-ಮೇಲ್ ಕಳುಹಿಸಲಾಗಿತ್ತು. ಆಗಸ್ಟ್ 1ರಂದು ನೆನಪೋಲೆಗಳನ್ನು ಕಳುಹಿಸಿದರೂ, ಯಾವುದಕ್ಕೂ ಉತ್ತರ ಸಿಕ್ಕಿಲ್ಲ.
2015-16ರ ಬಜೆಟ್‌ನಲ್ಲಿ ಸರಕಾರ ಭವಿಷ್ಯನಿಧಿಯ ಮೇಲೆ ಆಂಶಿಕ ತೆರಿಗೆ ವಿಧಿಸಲು ನಿರ್ಧರಿಸಿತು. ಆದರೆ ಈ ಬಗ್ಗೆ ವ್ಯಾಪಕ ಪ್ರತಿಭಟನೆ ದೇಶಾದ್ಯಂತ ವ್ಯಕ್ತವಾಯಿತು. ಬೆಂಗಳೂರು ಸೇರಿದಂತೆ ಹಲವೆಡೆ ಇದು ಹಿಂಸೆಗೂ ತಿರುಗಿತು. ಈ ಹಿನ್ನೆಲೆಯಲ್ಲಿ ಸರಕಾರ ನಿರ್ಧಾರ ವಾಪಸು ಪಡೆಯಿತು.

ಕಷ್ಟದ ದಿನಗಳಿಗೆ
ಭವಿಷ್ಯನಿಧಿ ಇರುವುದು ವೇತನ ಪಡೆಯುವ ಸಿಬ್ಬಂದಿಯ ಹಣಕಾಸು ಭದ್ರತೆಗಾಗಿ. ವೇತನದ ಶೇಕಡ 12 ಭಾಗವನ್ನು ಮಾಸಿಕ ವೇತನದಿಂದ ಕಡಿತ ಮಾಡಿಕೊಳ್ಳಲಾಗುತ್ತದೆ. ಇದರ ಜತೆಗೆ ಉದ್ಯೋಗದಾತರು ಶೇಕಡ 13.6ರಷ್ಟು ಪಾಲು ನೀಡಬೇಕಾಗುತ್ತದೆ.
19 ಮಂದಿಗಿಂತ ಅಧಿಕ ಸಿಬ್ಬಂದಿ ಇರುವ ಕಂಪೆನಿಗಳು ಅಥವಾ ಸಂಸ್ಥೆಗಳು ಕಡ್ಡಾಯವಾಗಿ ಪ್ರತಿಯೊಬ್ಬರ ಭವಿಷ್ಯನಿಧಿ ಹಣವನ್ನು ಭವಿಷ್ಯನಿಧಿ ಕಚೇರಿಯಲ್ಲಿ ಪಾವತಿಸಬೇಕಾಗುತ್ತದೆ. ಇದನ್ನು ಉದ್ಯೋಗಿ ಖಾತೆಯಲ್ಲಿ ಠೇವಣಿ ಇಡಲಾಗುತ್ತದೆ ಹಾಗೂ ಇದಕ್ಕೆ ಸರಕಾರದಿಂದ ಶೇ. 8.8ರ ಬಡ್ಡಿಯೂ ಪಾವತಿಯಾಗುತ್ತದೆ. ಸರಕಾರವು ಈ ಹಣವನ್ನು ಸರಕಾರಿ ಭದ್ರತಾಪತ್ರ ಹಾಗೂ ಕಾರ್ಪೊರೇಟ್ ಬಾಂಡ್‌ಗಳಲ್ಲಿ ಹೂಡಿಕೆ ಮಾಡುತ್ತದೆ.
ಉದ್ಯೋಗಿಗಳು ನಿವೃತ್ತಿಯ ಬಳಿಕ ಸಂಪೂರ್ಣ ಹಣವನ್ನು ಮರಳಿ ಪಡೆಯಬಹುದು ಅಥವಾ ಕೆಲಸಕ್ಕೆ ರಾಜೀನಾಮೆ ನೀಡಿದ ಎರಡು ತಿಂಗಳ ಬಳಿಕ ಪೂರ್ಣ ಹಣವನ್ನು ವಾಪಸು ಪಡೆಯಬಹುದು. ಅಂತೆಯೇ ಮನೆ ನಿರ್ಮಾಣಕ್ಕೆ, ಮಕ್ಕಳ ಶಿಕ್ಷಣ, ಮದುವೆ ಅಥವಾ ಕಾಯಿಲೆಗಳ ಸಂದರ್ಭದಲ್ಲಿ ಭಾಗಶಃ ಹಣವನ್ನು ವಾಪಸು ಪಡೆಯಲು ಅವಕಾಶ ಇರುತ್ತದೆ.

    ಉದ್ಯೋಗದಾತ ಸಂಸ್ಥೆಗಳು ಉದ್ಯೋಗಿಗಳ ಪಾಲನ್ನು ವೇತನದಿಂದ ಕಡಿತಗೊಳಿಸುತ್ತವೆ. ಆದರೆ ಇದನ್ನು ನಿಗದಿತ ಸಮಯದಲ್ಲಿ ಭವಿಷ್ಯನಿಧಿ ಕಚೇರಿಗೆ ಪಾವತಿಸದಿದ್ದರೆ, ಅವರನ್ನು ಸುಸ್ತಿದಾರರು ಎಂದು ಪರಿಗಣಿಸಲಾಗುತ್ತದೆ. ಪುದುಚೇರಿ ಸೇರಿದಂತೆ ತಮಿಳುನಾಡಿನಲ್ಲಿ ದೇಶದಲ್ಲೇ ಅತ್ಯಧಿಕ ಸುಸ್ತಿದಾರ ಕಂಪೆನಿಗಳಿವೆ (2,644), ಉಳಿದಂತೆ ಮಹಾರಾಷ್ಟ್ರದಲ್ಲಿ 1,682, ಕೇರಳದಲ್ಲಿ 1,118 ಸುಸ್ತಿದಾರ ಕಂಪೆನಿಗಳಿವೆ. ಸುಸ್ತಿದಾರರ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವುದು ಭಾರತ ವಿಮಾನ ನಿಲ್ದಾಣಗಳ ಪ್ರಾಧಿಕಾರ. ಈ ಸಂಸ್ಥೆ ಭವಿಷ್ಯನಿಧಿ ಕಚೇರಿಗೆ 192 ಕೋಟಿ ರೂಪಾಯಿ ಬಾಕಿ ಉಳಿಸಿಕೊಂಡಿದೆ. ನಂತರದ ಸ್ಥಾನದಲ್ಲಿ ಮುಂಬೈನ ಎಚ್‌ಬಿಎಲ್ ಗ್ಲೋಬಲ್ ಹಾಗೂ ದಿಲ್ಲಿಯ ಅಹ್ಲುವಾಲಿಯಾ ಕಾಂಟ್ರಾಕ್ಟ್ಸ್ಸ್ ಇಂಡಿಯಾ ಲಿಮಿಟೆಡ್ ಇವೆ. ಇವುಗಳ ಸುಸ್ತಿಬಾಕಿ ಕ್ರಮವಾಗಿ 64.5 ಕೋಟಿ ರೂಪಾಯಿ ಹಾಗೂ 54.5 ಕೋಟಿ ರೂಪಾಯಿ.

ಭಾರತದ ವಿಮಾನ ನಿಲ್ದಾಣಗಳ ಪ್ರಾಧಿಕಾರವು 1995ರ ಎಪ್ರಿಲ್ 1ರಿಂದ 2007ರ ಆಗಸ್ಟ್ 22ರವರೆಗಿನ ಮಾಸಿಕ ದೇಣಿಗೆಯನ್ನು 2007ರ ಸೆಪ್ಟಂಬರ್‌ನಿಂದ ಪಾವತಿಸಲು ಆರಂಭಿಸಿದೆ. ಪ್ರಾಧಿಕಾರವು ಉದ್ಯೋಗಿಗಳ ಪಿಂಚಣಿ ದೇಣಿಗೆಯನ್ನು ಕೂಡಾ ಬಡ್ಡಿಸಹಿತ ಪಾವತಿಸಿದೆ ಎಂದು ಪ್ರಾಧಿಕಾರದ ಆಡಳಿತ ನಿರ್ದೇಶಕ (ಹಣಕಾಸು) ರಾಜೇಶ್ ಭಂಡಾರಿ ಹೇಳಿದರು.
ದಿಲ್ಲಿಯ ಪ್ರಾದೇಶಿಕ ಭವಿಷ್ಯನಿಧಿ ಕಚೇರಿ, ಈ ಅವಧಿಯನ್ನು ಸುಸ್ತಿ ಅವಧಿ ಎಂದು ಪರಿಗಣಿಸಿದ್ದು, 1995ರ ಎಪ್ರಿಲ್‌ನಿಂದ 2006ರ ಫೆಬ್ರವರಿ ವರೆಗೆ 192 ಕೋಟಿ ರೂಪಾಯಿಗಳನ್ನು ಶುಲ್ಕವಾಗಿ ವಿಧಿಸಿದೆ. ಈ ವಿವಾದವನ್ನು ಕೇಂದ್ರ ಕಚೇರಿಗೆ ಒಯ್ಯಲಾಗಿದ್ದು, ಪ್ರಾದೇಶಿಕ ಕಚೇರಿಯ ಹೇಳಿಕೆಯಂತೆ, ಎಎಐ ಇದನ್ನು ಪಾವತಿಸಬೇಕಾಗಿಲ್ಲ. ಏಕೆಂದರೆ ಇದು ಸಂಸ್ಥೆ ಆರಂಭವಾಗುವ ಮೊದಲಿನ ಅವಧಿಯದ್ದು ಎಂದು ಪ್ರತಿಪಾದಿಸಿದೆ. ಆದರೆ ಪ್ರಾದೇಶಿಕ ಕಚೇರಿ ಅಥವಾ ಮುಖ್ಯ ಕಚೇರಿ ಈ ವಾದವನ್ನು ಒಪ್ಪುವುದಿಲ್ಲ ಹಾಗೂ ಇದನ್ನು ಮನ್ನಾ ಮಾಡಲು ನಿರಾಕರಿಸಿದೆ. ಬೇರೆ ವಿಧಿಯಿಲ್ಲದೆ ಎಎಐ ದಿಲ್ಲಿ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿ ತಡೆಯಾಜ್ಞೆ ಪಡೆದಿದೆ. ಈ ಪ್ರಕರಣದ ವಿಚಾರಣೆಯ ಮುಂದಿನ ದಿನಾಂಕ 2016ರ ಸೆಪ್ಟಂಬರ್ 30.
ಪ್ರದೇಶವಾರು 247 ಸುಸ್ತಿದಾರರನ್ನು ಹೊಂದಿರುವ ತಿರುವನಂತಪುರ ಮೊದಲ ಸ್ಥಾನದಲ್ಲಿದ್ದರೆ, ಕೊಲ್ಕತ್ತಾ 173 ಹಾಗೂ ಭುವನೇಶ್ವರ 115 ಸುಸ್ತಿದಾರರೊಂದಿಗೆ ನಂತರದ ಸ್ಥಾನಗಳಲ್ಲಿವೆ.

ತಮ್ಮದೇ ಟ್ರಸ್ಟ್‌ಗಳನ್ನು ಹೊಂದಿರುವ ಕಂಪೆನಿಗಳ ಉದ್ಯೋಗಿಗಳು ಇಪಿಎಫ್‌ಒ ಖಾತೆ ಹೊಂದಿರಬೇಕಿಲ್ಲ. ಇಂತಹ ಪ್ರಕರಣಗಳಲ್ಲಿ ಕಂಪೆನಿ ಸಿಬ್ಬಂದಿಯಿಂದಲೇ ಟ್ರಸ್ಟಿಗಳನ್ನು ಆಯ್ಕೆ ಮಾಡಲಾಗುತ್ತದೆ. ಸುಸ್ತಿದಾರ ಕಂಪೆನಿಗಳು ಸುಸ್ತಿ ಅವಧಿಗೆ ಅನುಗುಣವಾಗಿ ಶೇ. 17ರಿಂದ ಶೇ. 37ರವರೆಗೂ ಬಡ್ಡಿ ಪಾವತಿಸಬೇಕಾಗುತ್ತದೆ.
ಇಪಿಎಫ್‌ಒ ಸುಮಾರು 33 ಕೋಟಿ ರೂಪಾಯಿಗಳನ್ನು ಸಾಮಾಜಿಕ ಜಾಲತಾಣ ನಿರ್ವಹಣೆ ಹಾಗೂ ಮುದ್ರಣ ಹಾಗೂ ದೃಶ್ಯ ಮಾಧ್ಯಮಗಳಲ್ಲಿ ಜಾಹೀರಾತಿಗಾಗಿ ವೆಚ್ಚ ಮಾಡಲು ನಿರ್ಧರಿಸಿದೆ. ಆದರೆ ಸಿಬ್ಬಂದಿ ಉಳಿತಾಯವನ್ನು ಕಾಯುವ ಹೊಣೆ ಹೊತ್ತಿರುವ ಇಪಿಎಫ್‌ಒ ತೀವ್ರ ತೊಂದರೆಯಲ್ಲಿ ಸಿಲುಕಿ ಹಾಕಿಕೊಂಡಿದೆ. ಕಂಪೆನಿಗಳು ಸುಸ್ತಿ ಉಳಿಸಿಕೊಂಡಿವೆ ಎಂದು ಅಂತಿಮ ಕ್ಷಣದವರೆಗೂ ಇಪಿಎಫ್‌ಒ, ಉದ್ಯೋಗಿಗಳಿಗೆ ಹೇಳುವುದಿಲ್ಲ. ಹೀಗೆ ವಿಲೇವಾರಿಗಾಗಿ ಇರುವ ಪ್ರಕರಣಗಳು ಹೆಚ್ಚುತ್ತಿವೆ. ಜತೆಗೆ ಲಂಚ ಕೂಡಾ ಏರುತ್ತಿದೆ.
ವಿಲೇವಾರಿಗೆ ಬಾಕಿ ಇರುವ ಇಪಿಎಫ್ ಪ್ರಕರಣಗಳ ಸಂಖ್ಯೆ 2015-16ರಲ್ಲಿ ಹಿಂದಿನ ವರ್ಷಕ್ಕಿಂತ ಶೇ. 23ರಷ್ಟು ಹೆಚ್ಚಿದೆ. ಇಪಿಎಫ್‌ಒ ಆರು ಸಾವಿರ ಸಿಬ್ಬಂದಿ ಕೊರತೆ ಎದುರಿಸುತ್ತಿದ್ದರೂ, ಸುಸ್ತಿದಾರರ ವಿರುದ್ಧ 228 ಪೊಲೀಸ್ ಪ್ರಕರಣಗಳನ್ನು ದಾಖಲಿಸಿ, 14 ಸಾವಿರ ತನಿಖೆಗಳನ್ನು ನಡೆಸಿ, 2014-15ರಲ್ಲಿ 3,240 ಕೋಟಿ ರೂಪಾಯಿ ವಸೂಲಿ ಮಾಡಿಕೊಂಡಿದೆ. ಸಿಬ್ಬಂದಿ ಕೊರತೆಯಿಂದಾಗಿ ಪಿಎಫ್ ಕಾನೂನು ಕಟ್ಟುನಿಟ್ಟಾಗಿ ಜಾರಿಗೊಳಿಸಲು ಸಾಧ್ಯವಾಗುತ್ತಿಲ್ಲ.

‘‘ದೂರುಗಳನ್ನು ನಿರ್ವಹಿಸುವಲ್ಲಿ ಸಂಸ್ಥೆ ತೀರಾ ನಿಧಾನ’’ ಎನ್ನುವುದು ಇಪಿಎಫ್‌ಒ ಟ್ರಸ್ಟಿ ಸಚ್‌ದೇವ್ ಅವರ ಆರೋಪ. ಅವರು ಹೇಳುವಂತೆ ‘‘ಒಬ್ಬ ಉದ್ಯೋಗಿ ತನ್ನ ಖಾತೆಯನ್ನು ವಿಲೇವಾರಿ ಮಾಡಲು ಇಪಿಎಫ್‌ಒ ಕಚೇರಿಗೆ ಹೋದಾಗ ಮಾತ್ರ, ತನ್ನ ಕಂಪೆನಿ ತನ್ನ ಹಣವನ್ನು ಕಚೇರಿಗೆ ಪಾವತಿಸಿಲ್ಲ ಎನ್ನುವುದು ಆತನಿಗೆ ತಿಳಿಯುತ್ತದೆ.’’
ಸುಸ್ತಿದಾರ ಉದ್ಯೋಗದಾತರ ವಿರುದ್ಧದ ಕಾನೂನು ಕ್ರಮ ಕೈಗೊಳ್ಳುವ ಪ್ರಮಾಣ ಕಳೆದ ಮೂರು ವರ್ಷದಲ್ಲಿ ನಾಲ್ಕು ಪಟ್ಟು ಹೆಚ್ಚಿದೆ. 2012-13ರಲ್ಲಿ ಇಂಥ 317 ಪ್ರಕರಣಗಳನ್ನು ವಿಚಾರಣೆಗೆ ಗುರಿಪಡಿಸಿದ್ದರೆ, 2014-15ರಲ್ಲಿ ಈ ಪ್ರಮಾಣ 1,491ಕ್ಕೆ ಹೆಚ್ಚಿದೆ.
ಇದೇ ಅವಧಿಯಲ್ಲಿ ಇಪಿಎಫ್‌ಒ ಅಧಿಕಾರಿಗಳ ವಿರುದ್ಧ 322 ಲಂಚ ಪ್ರಕರಣಗಳು ದಾಖಲಾಗಿವೆ. ಆದರೆ ಇದೀಗ ಇಂಥ ಲಂಚ ಪ್ರಕರಣಗಳು ಇಳಿಮುಖವಾಗುತ್ತಿವೆ. 2012ರಲ್ಲಿ 167 ಮಂದಿ ಇಪಿಎಫ್‌ಒ ಅಧಿಕಾರಿಗಳ ವಿರುದ್ಧ ಲಂಚ ಪ್ರಕರಣ ದಾಖಲಾಗಿದ್ದರೆ, 2015ರಲ್ಲಿ ಕೇವಲ 8 ಪ್ರಕರಣಗಳು ಮಾತ್ರ ಬೆಳಕಿಗೆ ಬಂದಿವೆ. ಇದಕ್ಕೆ ಮುಖ್ಯ ಕಾರಣ ಎಂದರೆ, ಹಿಂದೆ ಇಪಿಎಫ್‌ಒ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ತಮ್ಮ ವ್ಯಾಪ್ತಿಯ ಪ್ರದೇಶದಲ್ಲಿ ಯಾವುದೇ ಸುಸ್ತಿ ಇಲ್ಲದಂತೆ ನೋಡಿಕೊಳ್ಳುವ ಹೊಣೆಯನ್ನು ನಿರ್ವಹಿಸಬೇಕಾಗಿತ್ತು. ‘‘ಆದರೆ ಈಗ ಸುಸ್ತಿದಾರರಿಗೆ ಕೇಂದ್ರ ಕಚೇರಿಯಿಂದ ನೋಟಿಸ್ ನೀಡಲಾಗುತ್ತದೆ. ಆದ್ದರಿಂದ ಯಾವ ಪ್ರದೇಶದಲ್ಲಿ ಸುಸ್ತಿದಾರರಿದ್ದರೂ, ಯಾವ ಅಧಿಕಾರಿಯನ್ನೂ ಹೊಣೆ ಮಾಡುವಂತಿಲ್ಲ’’ ಎಂದು ಇಪಿಎಫ್‌ಒ ವಿಚಕ್ಷಣಾ ನಿರ್ದೇಶಕ ವಿವೇಕ್ ಕುಮಾರ್ ಹೇಳುತ್ತಾರೆ.
ಆದರೆ ಈ ಯಾವ ಕಾರಣಗಳೂ ಹೈದರಾಬಾದ್‌ನ ಕುಮಾರ್ ಪ್ರಕರಣದಲ್ಲಿ ಅವರ ನೆರವಿಗೆ ಬಂದಿಲ್ಲ.

Writer - ನಿಖಿಲ್ ಎಂ.ಬಾಬು

contributor

Editor - ನಿಖಿಲ್ ಎಂ.ಬಾಬು

contributor

Similar News