×
Ad

ಆಸ್ತಿ ವಿವರ ಸಲ್ಲಿಕೆಯಿಂದ ಇವರಿಗೇಕೆ ವಿನಾಯಿತಿ?

Update: 2016-08-12 23:30 IST

ಮಾನ್ಯರೆ,

ಸರಕಾರಿ ಅಧಿಕಾರಿಗಳು ಹಾಗೂ ಎನ್‌ಜಿಒಗಳ ಆಸ್ತಿ ವಿವರ ಸಲ್ಲಿಸುವುದಕ್ಕೆ ವಿನಾಯಿತಿ ನೀಡಿ ಲೋಕಪಾಲ ಹಾಗೂ ಲೋಕಾಯುಕ್ತ ಮಸೂದೆಯಲ್ಲಿ ಮಾಡಲಾಗಿರುವ ತಿದ್ದುಪಡಿಗೆ ಲೋಕಸಭೆ ಹಾಗೂ ರಾಜ್ಯಸಭೆಗಳಲ್ಲಿ ಅನುಮೋದಿಸಲಾಗಿದೆ. ಹಾಗಾಗಿ ಜುಲೈ 31ರೊಳಗೆ ಸರಕಾರಿ ಅಧಿಕಾರಿಗಳು ಕಡ್ಡಾಯವಾಗಿ ಆಸ್ತಿ ವಿವರ ಸಲ್ಲಿಸಬೇಕು ಎಂಬ ನಿಯಮ ರದ್ದಾಗಿದೆ. ಹೀಗಾಗಿ ‘‘ರೋಗಿ ಬಯಸಿದ್ದೂ ಹಾಲು, ವೈದ್ಯ ಹೇಳಿದ್ದೂ ಹಾಲು’’ ಎಂಬಂತಾಗಿದೆ ಸರಕಾರಿ ಅಧಿಕಾರಿಗಳ ಸ್ಥಿತಿ. ಸರಕಾರಿ ಆಧಿಕಾರಿಗಳಿಗೆ ಈ ಬಗ್ಗೆ ರಿಯಾಯಿತಿ ನೀಡಿರುವಾಗ ಸರಕಾರಿ ನೌಕರರು ಯಾಕಾಗಿ ವರ್ಷಂಪ್ರತಿ ಆಸ್ತಿ ವಿವರ ಸಲ್ಲಿಸಬೇಕು ಎಂಬ ಪ್ರಶ್ನೆ ಏಳುವುದಿಲ್ಲವೇ? ಅಧಿಕಾರಿಗಳಿಗೆ ವಿನಾಯಿತಿ ನೀಡಿರುವಾಗ ನೌಕರರಿಗೆ ಸಹ ಕೊಡಬಾರದೇಕೆ? ಹೆಚ್ಚಿನ ಸರಕಾರಿ ಅಧಿಕಾರಿಗಳೆಲ್ಲಾ ಭ್ರಷ್ಟರು. ಲಂಚ ತಿಂದ, ಲಂಚ ತಿನ್ನುವಾಗ ಸಿಕ್ಕಿಬಿದ್ದ, ತಮ್ಮ ಆದಾಯಕ್ಕಿಂತ ಹೆಚ್ಚುವರಿ ಆಸ್ತಿ-ಪಾಸ್ತಿ ಹೊಂದಿದ ಅಧಿಕಾರಿಗಳ ಹಲವಾರು ಪ್ರಕರಣಗಳು ಲೋಕಾಯುಕ್ತದಲ್ಲಿ ಇತ್ಯರ್ಥವಾಗದೆ ಬಾಕಿ ಉಳಿದಿವೆ. ಹೀಗಿರುವಾಗ ಅವರಿಗೆ ವಿನಾಯಿತಿ ಯಾಕಾಗಿ? ಅಧಿಕಾರಿಗಳು ಇನ್ನಷ್ಟು ಆಸ್ತಿ ಮಾಡಲೆಂಬ ಉದ್ದೇಶವೇ?

 ಈ ರೀತಿ ತಾರತಮ್ಯ ಮಾಡಿದರೆ ಒಂದು ಕಣ್ಣಿಗೆ ಬೆಣ್ಣೆ ಇನ್ನೊಂದು ಕಣ್ಣಿಗೆ ಸುಣ್ಣ ಎಂಬಂತಾಗಲಿಲ್ಲವೇ? ಅವರು ವಂಚನೆ ಮಾಡಿ ಗಳಿಸಿದ್ದಾದರೆ ಅವರ ಆಸ್ತಿ ಪಾಸ್ತಿಗಳ ವಿವರ ಸಿಗುವುದಾದರೂ ಹೇಗೆ? ಹಿಂದಿನ ವರ್ಷ ಇಷ್ಟಿತ್ತು, ಪ್ರಸ್ತುತ ಇಷ್ಟಿದೆ ಎನ್ನುವ ಕ್ರಮ ಸರಕಾರಿ ಅಧಿಕಾರಿಗಳಿಗೆ ಅನ್ವಯಿಸುವುದಿಲ್ಲವೇ? ಅವರ ಸಂಪತ್ತಿನಲ್ಲಾದ ದಿಢೀರ್ ಹೆಚ್ಚಳದ ಬಗ್ಗೆ, ಅದು ಹೇಗೆ ಬಂತು? ಎಲ್ಲಿಂದ ಬಂತು? ಎಂದು ಕಂಡುಹಿಡಿಯಲಿಕ್ಕಿಲ್ಲವೇ?

ಜನ ಸಾಮಾನ್ಯರಿಗಿಲ್ಲದ ಕೆಲವೊಂದು ಅನಗತ್ಯ ವಿನಾಯಿತಿಗಳು ರಾಜಕಾರಣಿಗಳಿಗೆ, ಅಧಿಕಾರಿಗಳಿಗೆ ಏಕೆ?

Writer - -ಜೆ.ಎಫ್. ಡಿಸೋಜ, ಅತ್ತಾವರ

contributor

Editor - -ಜೆ.ಎಫ್. ಡಿಸೋಜ, ಅತ್ತಾವರ

contributor

Similar News