×
Ad

ಮೆಸ್ಸಿ ಅರ್ಜೆಂಟೀನ ತಂಡಕ್ಕೆ ಮರಳಿ ಬರುತ್ತಾರಂತೆ...!

Update: 2016-08-13 10:59 IST

ಬಾರ್ಸಿಲೋನಾ, ಆ.13: ಅರ್ಜೆಂಟೀನದ ಸೂಪರ್ ಸ್ಟಾರ್ ಫುಟ್ಬಾಲ್ ಆಟಗಾರ ಲಿಯೊನೆಲ್ ಮೆಸ್ಸಿ ಅವರು ನಿವೃತ್ತಿ ನಿರ್ಧಾರವನ್ನು ಹಿಂಪಡೆದು ಅರ್ಜೆಂಟೀನ ತಂಡಕ್ಕೆ ವಾಪಸಾಗಲು ಚಿಂತನೆ ನಡೆಸಿದ್ದಾರೆ.
 
ಮೆಸ್ಸಿಗೆ ತನ್ನ ನಿವೃತ್ತಿಯ ಬಳಿಕ ಅರ್ಜೆಂಟೀನ ತಂಡದ ಸ್ಥಿತಿ ನೋಡಿ ಮನಸ್ಸಿಗೆ ನೋವಾಗಿದೆ. ಈ ಕಾರಣದಿಂದಾಗಿ ಅವರು ತಂಡಕ್ಕೆ ಮರಳುವ ಇಂಗಿತ ವ್ಯಕ್ತಪಡಿಸಿದ್ದಾರೆ.ತಂಡದ ಆಟಗಾರನಾಗಿ ತಂಡವನ್ನು ಬಲಿಷ್ಠವಾಗಿ ಕಟ್ಟುವ ಯೋಜನೆಯನ್ನು ಮೆಸ್ಸಿ ಹಾಕಿಕೊಂಡಿದ್ದಾರೆ. ಬಾರ್ಸಿಲೋನಾದ ಸ್ಟಾರ್ ಮೆಸ್ಸಿ ಅವರು ಕಳೆದ ಜೂನ್‌ನಲ್ಲಿ ಅರ್ಜೆಂಟೀನ ತಂಡ ಅಮೆರಿಕದಲ್ಲಿ ನಡೆದ ಕೋಪಾ ಅಮೆರಿಕ ಫುಟ್ಬಾಲ್ ಟೂರ್ನಮೆಂಟ್‌ನಲ್ಲಿ ಪೆನಾಲ್ಟಿ ಶೂಟೌಟ್‌ನಲ್ಲಿ ಚಿಲಿಗೆ ಶರಣಾದ ಹಿನ್ನೆಲೆಯಲ್ಲಿ ಆಘಾತಗೊಂಡು ಅಂತಾರಾಷ್ಟ್ರೀಯ ಫುಟ್ಬಾಲ್‌ಗೆ ವಿದಾಯ ಪ್ರಕಟಿಸಿದ್ದರು.
ಮೆಸ್ಸಿ ನೇತೃತ್ವದಲ್ಲಿ ಅರ್ಜೆಂಟೀನ ತಂಡ ವಿಶ್ವಕಪ್ ಸೇರಿದಂತೆ ಪ್ರಮುಖ ನಾಲ್ಕು ಟೂರ್ನಮೆಂಟ್‌ಗಳ ಫೈನಲ್‌ನಲ್ಲಿ ಸೋತು ಪ್ರಶಸ್ತಿ ಎತ್ತುವ ಅವಕಾಶ ಕೈ ಚೆಲ್ಲಿತ್ತು.ಇದು ಮೆಸ್ಸಿ ಅವರ ನಿವೃತ್ತಿಗೆ ಕಾರಣವಾಗಿತ್ತು. ಮೆಸ್ಸಿ ದಿಢೀರನೆ ನಿವೃತ್ತಿ ನಿರ್ಧಾರ ಕೈಗೊಂಡಾಗ ದೇಶದ ಅಧ್ಯಕ್ಷರು ಸೇರಿದಂತೆ ಫುಟ್ಬಾಲ್ ಅಭಿಮಾನಿಗಳು ನಿವೃತ್ತಿಯ ನಿರ್ಧಾರವನ್ನು ಪುನರ್ ಪರಿಶೀಲಿಸುವಂತೆ ಮನವಿ ಮಾಡಿದ್ದರು. ಆದರೆ ಆಗ ಅವರು ತಾನು ಕೈಗೊಂಡಿದ್ದ ನಿರ್ಧಾರದಿಂದ ಹಿಂದೆ ಸರಿಯಲಿಲ್ಲ. ಎರಡು ತಿಂಗಳ ಬಳಿಕ ನಿವೃತ್ತಿ ನಿರ್ಧಾರವನ್ನು ಹಿಂಪಡೆದು ತಂಡಕ್ಕೆ ಮರಳುವ ಆಲೋಚನೆ ಮಾಡಿದ್ದಾರೆ.
 ‘‘ ಅರ್ಜೆಂಟೀನ ಫುಟ್ಬಾಲ್ ಆನೇಕ ಸಮಸ್ಯೆ ಎದುರಿಸುತ್ತಿದೆ. ಆದರೆ ನನ್ನ ಉದ್ದೇಶ ತಂಡಕ್ಕೆ ಮರಳಿ ಇನ್ನೊಂದು ಸಮಸ್ಯೆ ಸೃಷ್ಠಿಸುವುದಲ್ಲ. ತಂಡದಲ್ಲಿದ್ದುಕೊಂಡು ಸಮಸ್ಯೆಯನ್ನು ಬಗೆಹರಿಸುವ ನಿಟ್ಟಿನಲ್ಲಿ ನೆರವು ನೀಡುವುದು ನನ್ನ ಉದ್ದೇಶವಾಗಿದೆ. ತಂಡದ ಹೊರಗಿದ್ದುಕೊಂಡು ಟೀಕೆ ಮಾಡುವ ವ್ಯಕ್ತಿ ನಾನಲ್ಲ’’ ಎಂದು ಮೆಸ್ಸಿ ಹೇಳಿದ್ದಾರೆ.
ಮೆಸ್ಸಿ 2018ರ ವಿಶ್ವಕಪ್‌ನ ಅರ್ಹತಾ ಸುತ್ತಿನ ಪಂದ್ಯಗಳಿಗೆ ಅರ್ಜೆಂಟೀನ ತಂಡಕ್ಕೆ ಆಯ್ಕೆಯಾಗಲಿದ್ದಾರೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News