7 ತಿಂಗಳ ಮಗುವನ್ನು ಕಾರಿನಲ್ಲಿ ಮರೆತು ಹೋದ ಅಪ್ಪ !
ಟೆಕ್ಸಾಸ್, ಆ.13: ನಗರದ ಸ್ಯಾನ್ ಎಂಟೋನಿಯೋ ಪ್ರದೇಶದ ವಾಲ್ ಮಾರ್ಟ್ ಪಾರ್ಕಿಂಗ್ ಪ್ರದೇಶದಲ್ಲಿದ್ದ ಸ್ಪೋರ್ಟ್ಸ್ ಯುಟಿಲಿಟಿ ವಾಹನದೊಳಗೆ ದಿನವಿಡೀ ಬಂಧಿಯಾಗಿದ್ದ ಏಳು ತಿಂಗಳ ಗಂಡು ಮಗುವೊಂದು ಉಸಿರುಗಟ್ಟಿ ಪ್ರಾಣ ಬಿಟ್ಟಿದೆಯೆಂದು ಪೊಲೀಸರು ತಿಳಿಸಿದ್ದಾರೆ.
ಹೆಲೊಟೆಸ್ ಉಪನಗರದಲ್ಲಿರುವ ಸ್ಟೋರ್ ಒಂದರಲ್ಲಿ ಉದ್ಯೋಗದಲ್ಲಿರುವ ಮಗುವಿನ ತಂದೆ ತಾನು ಉದ್ಯೋಗ ಸ್ಥಳಕ್ಕೆ ಬೆಳಗ್ಗೆ 6.15 ಕ್ಕೆ ಹೋಗುವ ಮುನ್ನ ಮಗುವನ್ನು ಡೇ ಕೇರ್ ಸೆಂಟರ್ ನಲ್ಲಿ ಬಿಟ್ಟು ಬರಲು ಮರೆತಿರುವುದಾಗಿ ಹೇಳಿ ಎಲ್ಲರನ್ನೂ ದಂಗು ಬಡಿಸಿದ್ದಾನೆ. ಮಗು ಕಾರಿನಲ್ಲಿ ಬಂಧಿಯಾಗಿದೆಯೆಂಬ ಅರಿವೇ ಇಲ್ಲದ ಈ ವ್ಯಕ್ತಿ ಅಪರಾಹ್ನ ಮೂರು ಗಂಟೆಗೆ ಕಾರಿನ ಬಾಗಿಲು ತೆರೆದಾಗ ಮಗು ಸತ್ತಿರುವುದು ಕಂಡು ಬಂದಿತ್ತು. ಪೊಲೀಸರು ಯಾರ ವಿರುದ್ಧವೂ ಪ್ರಕರಣ ದಾಖಲಿಸಿಲ್ಲ.
ಕಾರು ನಿಲ್ಲಿಸಿದ್ದ ಪ್ರದೇಶದಲ್ಲಿ ಅಪರಾಹ್ನ ಉಷ್ಣಾಂಶ 37 ಡಿಗ್ರಿ ಸೆಲ್ಸಿಯಸ್ ನಷ್ಟಿತ್ತು.
ಅಮೆರಿಕದಲ್ಲಿ ಈ ವರ್ಷ ಈ ರೀತಿ ಬಿಸಿಯೇರಿದ ಕಾರುಗಳಲ್ಲಿ ಕನಿಷ್ಠ 27 ಮಕ್ಕಳು ಸಾವನ್ನಪ್ಪಿದ್ದಾರೆ ಎಂದು ಕಿಡ್ಸ್ ಎಂಡ್ ಕಾರ್ಸ್.ಆರ್ಗ್ ಎಂಬ ನಾನ್ ಪ್ರಾಫಿಟ್ ಸಂಸ್ಥೆ ಹೇಳಿಕೊಂಡಿದೆ.