×
Ad

ರಿಯೋ ಗೇಮ್ಸ್: ಲಲಿತಾ ಬಾಬರ್ ಫೈನಲ್‌ಗೆ ಲಗ್ಗೆ

Update: 2016-08-13 20:09 IST

ರಿಯೋ ಡಿ ಜನೈರೊ, ಆ.13: ರಿಯೋ ಗೇಮ್ಸ್‌ನ ಮಹಿಳೆಯರ 3000 ಮೀ.ಸ್ಟೀಪಲ್‌ಚೇಸ್ ಸ್ಪರ್ಧೆಯಲ್ಲಿ ಫೈನಲ್‌ಗೆ ಪ್ರವೇಶಿಸಿದ ಅಥ್ಲೀಟ್ ಲಲಿತಾ ಬಾಬರ್ ಭಾರತದ ಒಲಿಂಪಿಕ್ಸ್ ಇತಿಹಾಸದಲ್ಲಿ ಹೊಸ ಅಧ್ಯಾಯ ಆರಂಭಿಸಿದರು. ರಾಷ್ಟ್ರೀಯ ದಾಖಲೆಯ ಸಮಯದಲ್ಲಿ ಈ ಸಾಧನೆ ಮಾಡಿರುವ ಲಲಿತಾ 32 ವರ್ಷಗಳ ಬಳಿಕ ಟ್ರಾಕ್‌ನಲ್ಲಿ ಫೈನಲ್ ತಲುಪಿದ ಮೊದಲ ಭಾರತೀಯ ಮಹಿಳಾ ಅಥ್ಲೀಟ್ ಎನಿಸಿಕೊಂಡಿದ್ದಾರೆ.

1984ರ ಲಾಸ್ ಏಂಜಲೀಸ್‌ನಲ್ಲಿ ನಡೆದ ಒಲಿಂಪಿಕ್ಸ್‌ನಲ್ಲಿ 400 ಮೀ. ಹರ್ಡಲ್ಸ್‌ನಲ್ಲಿ ಭಾರತದ ಓಟದ ದಂತಕತೆ ಪಿ.ಟಿ. ಉಷಾ ಫೈನಲ್‌ಗೆ ತಲುಪಿದ್ದರು. ಆದರೆ, ಕೆಲವೇ ಸೆಕೆಂಡ್‌ನಲ್ಲಿ ಕಂಚಿನ ಪದಕದಿಂದ ವಂಚಿತರಾಗಿದ್ದರು.

  ಶನಿವಾರ ನಡೆದ ಅರ್ಹತಾ ಸುತ್ತಿನಲ್ಲಿ 9 ನಿಮಿಷ 19.76 ಸೆಕೆಂಡ್‌ನಲ್ಲಿ ಗುರಿ ತಲುಪಿದ ಮಹಾರಾಷ್ಟ್ರದ ಸತಾರ ಜಿಲ್ಲೆಯ ಲಲಿತಾ 7ನೆ ಸ್ಥಾನ ಪಡೆದರು. ಈ ಮೂಲಕ ಫೈನಲ್‌ಗೆ ಸ್ಪರ್ಧಿಸುವ ಅರ್ಹತೆ ಗಿಟ್ಟಿಸಿಕೊಂಡರು.

2 ವರ್ಷಗಳ ಹಿಂದೆ ದಕ್ಷಿಣ ಕೊರಿಯಾದ ಇಂಚೋನ್‌ನಲ್ಲಿ ನಡೆದ ಏಷ್ಯನ್ ಗೇಮ್ಸ್‌ನಲ್ಲಿ ಕಂಚಿನ ಪದಕ ಜಯಿಸಿದ್ದ ಲಲಿತಾ ರಿಯೋ ಗೇಮ್ಸ್‌ನಲ್ಲಿ ಹೊಸ ರಾಷ್ಟ್ರೀಯ ದಾಖಲೆಯ ಸಮಯದೊಂದಿಗೆ ಫೈನಲ್‌ಗೆ ತಲುಪಿದ್ದಾರೆ. 27ರ ಪ್ರಾಯದ ಲಲಿತಾ ಬಾಬರ್ ಸೋಮವಾರ ರಾತ್ರಿ 7:45ಕ್ಕೆ ಫೈನಲ್ ಪಂದ್ಯದಲ್ಲಿ ಭಾಗವಹಿಸಲಿದ್ದಾರೆ.

ಸ್ಟೀಪಲ್‌ಚೇಸ್ ಸ್ಪರ್ಧೆಯಲ್ಲಿದ್ದ ಭಾರತದ ಇನ್ನೋರ್ವ ಅಥ್ಲೀಟ್ ಸುಧಾ ಸಿಂಗ್ ಅರ್ಹತಾ ಸುತ್ತಿನ ಹೀಟ್-3ರಲ್ಲಿ 9:43.29 ಸೆಕೆಂಡ್‌ನಲ್ಲಿ ಗುರಿ ತಲುಪಿ 9ನೆ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡರು.

ಮಹಿಳೆಯರ 400 ಮೀ. ಓಟದ ಹೀಟ್-1ರಲ್ಲಿ ನಿರ್ಮಲಾ ಶೆರೊನ್ ಆರನೆ ಸ್ಥಾನ ಪಡೆದು ನಿರಾಸೆಗೊಳಿಸಿದರು.

ಇದೇ ವೇಳೆ, ಶೂಟರ್ ಗುರುಪ್ರೀತ್ ಸಿಂಗ್ ಪುರುಷರ 25 ಮೀ. ರ್ಯಾಪಿಡ್‌ಫೈಯರ್ ಪಿಸ್ತೂಲ್‌ನಲ್ಲಿ ಕೇವಲ ಎರಡು ಅಂಕ ಕೊರತೆಯಿಂದಾಗಿ ಫೈನಲ್‌ಗೆ ತಲುಪಲು ವಿಫಲರಾದರು.

ಈಗಾಗಲೇ ಸೆಮಿಫೈನಲ್ ಸ್ಪರ್ಧೆಯಿಂದ ಹೊರ ನಡೆದಿದ್ದ ರೋವರ್ ದತ್ತು ಬಬನ್ ಭೋಕನಲ್ ಪುರುಷರ ಸಿಂಗಲ್ಸ್ ಸ್ಕಲ್ಸ್‌ನಲ್ಲಿ 15ನೆ ಸ್ಥಾನ ಪಡೆದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News