ಆ.15ರಂದು ರೈತರ ಮಕ್ಕಳಿಂದ ಉಪವಾಸ ಸತ್ಯಾಗ್ರಹ
Update: 2016-08-13 22:08 IST
ಮುಂಬೈ,ಆ.13: ‘ಕೃಷಿಕ ವಿರೋಧಿ ’ಕಾನೂನುಗಳನ್ನು ರದ್ದುಗೊಳಿಸುವಂತೆ ಆಗ್ರಹಿಸಿ ಮಹಾರಾಷ್ಟ್ರದಾದ್ಯಂತ ರೈತರ ಮಕ್ಕಳು ಸ್ವಾತಂತ್ರೋತ್ಸವ ದಿನದಂದು ಉಪವಾಸ ಮುಷ್ಕರವನ್ನು ನಡೆಸಲಿದ್ದಾರೆ.
ಶನಿವಾರ ಇಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಭೂಮಿಪುತ್ರ ಸಂಘರ್ಷ ವಾಹಿನಿಯ ಅಧ್ಯಕ್ಷ ಅಭಿಜಿತ್ ಪಾಟೀಲ್ ಫಾಲ್ಕೆ ಅವರು, ರೈತರನ್ನು ಗುಲಾಮರನ್ನಾಗಿಸಿರುವ ಕಾನೂನುಗಳ ಹಿಡಿತದಿಂದ ಅವರನ್ನು ಮುಕ್ತಗೊಳಿಸುವಂತೆ ಆಗ್ರಹಿಸಲು ಆ.15ರಂದು ಇಲ್ಲಿಯ ಆಝಾದ್ ಮೈದಾನದಲ್ಲಿ ಮತ್ತು ರಾಜ್ಯಾದ್ಯಂತ ‘ಆತ್ಮಕ್ಲೇಶ ಆಂದೋಲನ’ವನ್ನು ನಡೆಸಲು ನಿರ್ಧರಿಸಿದ್ದೇವೆ. ಸರಕಾರವು ರೈತರನ್ನು ವಂಚಿಸಿದೆ ಮತ್ತು ಅವರನ್ನು ಕಾಡುತ್ತಿರುವ ಸಮಸ್ಯೆಗಳನ್ನು ಬಗೆಹರಿಸುವಲ್ಲಿ ವಿಫಲಗೊಂಡಿದೆ ಎಂದರು.
ಭೂ ಮಿತಿ ಕಾಯ್ದೆ,ಅಗತ್ಯ ಸೇವೆಗಳ ಕಾಯ್ದೆ ಮತ್ತು ಭೂ ಸ್ವಾಧೀನ ಕಾಯ್ದೆಗಳನ್ನು ಹಿಂದೆಗೆದುಕೊಳ್ಳುವಲ್ಲಿ ಸರಕಾರವು ವಿಫಲವಾಗಿದೆ ಎಂದು ವಾಹಿನಿಯ ನಾಯಕ ಅಮರ್ ಹಬೀಬ್ ಹೇಳಿದರು.