ಹಲಾಲ್ ಅಲ್ಲದ ಚಿಕನ್ ನೀಡುತ್ತಿರುವ ಕೆ. ಎಫ್. ಸಿ.

Update: 2016-08-13 18:13 GMT

ಹೈದರಾಬಾದ್,ಆ.13: ಬಹುರಾಷ್ಟ್ರೀಯ ಸಂಸ್ಥೆ ಕೆಎಫ್‌ಸಿ ಹಲಾಲ್ ಅಲ್ಲದ ಚಿಕನ್ ನೀಡುವ ಹಾಗೂ ನಕಲಿ ಹಲಾಲ್ ಪ್ರಮಾಣಪತ್ರಗಳನ್ನು ಬಳಸುವ ಮೂಲಕ ತನ್ನ ಗ್ರಾಹಕರನ್ನು ವಂಚಿಸುತ್ತಿರುವುದನ್ನು ಭೋಪಾಲದ ಪತ್ರಕರ್ತ ಅನಾಮ್ ಇಬ್ರಾಹಿಂ ಅವರು ಸ್ವತಂತ್ರ ತನಿಖೆಯ ಮೂಲಕ ಬಯಲಿಗೆಳೆದಿದ್ದಾರೆ.

   ಇಬ್ರಾಹಿಂ ಹಿಂದೊಮ್ಮೆ ಭೋಪಾಲದ ಡಿ.ಬಿ.ಮಾಲ್‌ನಲ್ಲಿರುವ ಕೆಎಫ್‌ಸಿ ಮಳಿಗೆಗೆ ಭೇಟಿ ನೀಡಿದ್ದರು. ಅಲ್ಲಿ ನೀಡಲಾಗುತ್ತಿರುವುದು ಹಲಾಲ್ ಚಿಕನ್ ಹೌದೇ ಅಲ್ಲವೇ ಎಂದು ಮ್ಯಾನೇಜರ್‌ನನ್ನು ಪ್ರಶ್ನಿಸಿದ್ದರು. ಉತ್ತರವಾಗಿ ಆತ ಮುಂಬೈನ ಮುಫ್ತಿ ಅನ್ವರ್ ಖಾನ್ ವೆಂಕೀಸ್ ಕಂಪನಿಗೆ ನೀಡಿದ್ದ ಹಲಾಲ್ ಪ್ರಮಾಣಪತ್ರವನ್ನು ತೋರಿಸಿದ್ದ. ಅದರಲ್ಲಿ ಕೆಎಫ್‌ಸಿಯ ಹೆಸರಿಲ್ಲದಿರುವುದನ್ನು ಮ್ಯಾನೇಜರ್‌ನ ಗಮನಕ್ಕೆ ತಂದಾಗ, ಆತ ತಮಗೆ ವೆಂಕೀಸ್ ಕಂಪನಿಯೇ ಚಿಕನ್ ಪೂರೈಸುತ್ತಿದೆ, ಹೀಗಾಗಿ ವೆಂಕೀಸ್‌ನ ಪ್ರಮಾಣಪತ್ರ ತೋರಿಸಿದ್ದಾಗಿ ಸಮಜಾಯಿಷಿ ನೀಡಿದ್ದ.

ಇಬ್ರಾಹಿಂ ವೆಂಕೀಸ್‌ನ್ನು ವಿಚಾರಿಸಿದಾಗ ತನ್ನ ಮತ್ತು ಕೆಎಫ್‌ಸಿ ನಂಟು ಮೂರು ವರ್ಷಗಳ ಹಿಂದೆಯೇ ಕೊನೆಗೊಂಡಿದೆ ಎಂದು ಅದು ಸ್ಪಷ್ಟಪಡಿಸಿತ್ತು. ಆಗಲೇ ಕೆಎಫ್‌ಸಿಯ ವಂಚನೆಯ ವಾಸನೆ ಇಬ್ರಾಹಿಂಗೆ ಬಡಿದಿತ್ತು.

 ಪಟ್ಟು ಬಿಡದ ಇಬ್ರಾಹಿಂ, ಮುಂಬೈನ ಮುಫ್ತಿ ಅನ್ವರ್ ಖಾನ್‌ರನ್ನು ವಿಚಾರಿಸಿದಾಗ ಪುಣೆಯಲ್ಲಿ ಪ್ರತಿದಿನ 100 ಕೋಳಿಗಳನ್ನು ವಧಿಸುತ್ತಿರುವ ಚೆನ್ನೈನ ವೆಂಕೀಸ್‌ಗೆ ತಾನು ಹಲಾಲ್ ಪ್ರಮಾಣಪತ್ರ ನೀಡಿದ್ದಾಗಿ ಅವರು ತಿಳಿಸಿದ್ದರು.

ತನಿಖೆ ಮುಂದುವರಿಸಿದ ಇಬ್ರಾಹಿಂ ಕೆಎಫ್‌ಸಿ ಕಳೆದ ಮೂರು ವರ್ಷಗಳಿಂದ ಮುಂಬೈನ ಗಾದ್ರೆಜ್ ಕಂಪನಿಯಿಂದ ಹಲಾಲ್ ಮಾಡದ ಚಿಕನ್ ಖರೀದಿಸುತ್ತಿದೆ ಎನ್ನುವುದನ್ನು ಪತ್ತೆ ಹಚ್ಚಿದ್ದಾರೆ. ಕೆಎಫ್‌ಸಿಯ ವಂಚನೆಯ ವಿರುದ್ದ ಇಬ್ರಾಹಿಂ ಆ.6ರಂದು ಭೋಪಾಲದ ಎಂ.ಪಿ.ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಮುಂದಿನ ಕೆಲವು ದಿನಗಳಲ್ಲಿ ನ್ಯಾಯಾಲಯದಲ್ಲಿ ಕೆಎಫ್‌ಸಿ ವಿರುದ್ಧ ಮೊಕದ್ದಮೆ ಹೂಡಲೂ ಅವರು ನಿರ್ಧರಿಸಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ,ಕೇಂದ್ರ ಸಚಿವರಾದ ಸುಶ್ಮಾ ಸ್ವರಾಜ್ ಮತ್ತು ರಾಜನಾಥ್ ಸಿಂಗ್,ದಾರುಲ್ ಉಲೂಮ್ ದೇವಬಂದ್‌ನಂತಹ ಪ್ರಮುಖ ಮುಸ್ಲಿಮ್ ಸಂಸ್ಥೆಗಳು ಹಾಗೂ ಸೌದಿಯ ದೊರೆ ಸಲ್ಮಾನ್,ಅಮೆರಿಕ ಬರಾಕ್ ಒಬಾಮಾ ಸೇರಿದಂತೆ 47 ರಾಷ್ಟ್ರಗಳ ಮುಖ್ಯಸ್ಥರಿಗೆ ಈ ಕುರಿತು ಪತ್ರಗಳನ್ನು ಬರೆದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News