×
Ad

ದೇವಸ್ಥಾನವನ್ನು ಪ್ರವೇಶಿಸಿದ್ದ ಮಾನಸಿಕ ಅಸ್ವಸ್ಥೆಗೆ ಥಳಿತ

Update: 2016-08-13 23:57 IST

ಕೇಂದ್ರಪಾಡಾ(ಒಡಿಶಾ),ಆ.13: ಇಲ್ಲಿಯ ಬಡಾ ಮಂಗಳಾ ಬಡಾವಣೆಯಲ್ಲಿ ದೇವಸ್ಥಾನವನ್ನು ಪ್ರವೇಶಿಸಿದ್ದ ವಯಸ್ಸಾದ ಮಾನಸಿಕ ಅಸ್ವಸ್ಥೆಯನ್ನು ಸ್ಥಳೀಯ ಯುವಕರನ್ನೊಳಗೊಂಡ ಗುಂಪೊಂದು ಎರಡೂ ಕೈಗಳನ್ನು ಕಟ್ಟಿ ಹಾಕಿ ಬರ್ಬರವಾಗಿ ಥಳಿಸಿದೆ. ಸಕಾಲದಲ್ಲಿ ಸ್ಥಳಕ್ಕೆ ತಲುಪಿದ ಪೊಲೀಸರು ಆಕೆಯನ್ನು ರಕ್ಷಿಸಿದ್ದಾರೆ. ಮಾನಸಿಕ ಅಸ್ವಸ್ಥ ಮಹಿಳೆಯ ಮೇಲಿನ ಈ ಹಲ್ಲೆಗೆ ಸಮಾಜದ ವಿವಿಧ ವರ್ಗಗಳಿಂದ ತೀಕ್ಷ್ಣ ಪ್ರತಿಕ್ರಿಯೆ ವ್ಯಕ್ತವಾಗಿದೆ.
 ಮಹಿಳೆಯು ಬಡಾ ಮಂಗಳಾ ದೇವಸ್ಥಾನದ ಗರ್ಭಗುಡಿಯನ್ನು ಪ್ರವೇಶಿಸಿ ದೇವರ ವಿಗ್ರಹವನ್ನು ಕೈಯಿಂದ ಸ್ಪರ್ಶಿಸಿದ್ದಳು. ಇದರಿಂದಾಗಿ ದೇಗುಲವು ಅಪವಿತ್ರಗೊಂಡಿದೆ ಎಂದು ಬಲವಾಗಿ ನಂಬಿದ್ದ ಸ್ಥಳೀಯರು ಸುಮಾರು 15 ನಿಮಿಷಗಳ ಕಾಲ ಬಿಟ್ಟೂಬಿಡದೆ ಆಕೆಯನ್ನು ಥಳಿಸಿದ್ದಾರೆ.
ಪೊಲೀಸರು ಸ್ಥಳವನ್ನು ತಲುಪಿದಾಗ ಹಲ್ಲೆಕೋರರು ಪರಾರಿಯಾಗಿದ್ದು, ಆಕೆಯನ್ನು ಮನೆ ತಲುಪಿಸಿದ್ದಾರೆ. ಈ ಬಗ್ಗೆ ಪೊಲೀಸರು ಪ್ರಕರಣವನ್ನು ಇನ್ನಷ್ಟೇ ದಾಖಲಿಸಿಕೊಳ್ಳಬೇಕಾಗಿದೆ.

........................

ನಾಳೆ ರೈತರ ಮಕ್ಕಳಿಂದ ಉಪವಾಸ ಸತ್ಯಾಗ್ರಹ
ಮುಂಬೈ,ಆ.13: ‘ಕೃಷಿಕ ವಿರೋಧಿ ’ಕಾನೂನುಗಳನ್ನು ರದ್ದುಗೊಳಿಸುವಂತೆ ಆಗ್ರಹಿಸಿ ಮಹಾರಾಷ್ಟ್ರದಾದ್ಯಂತ ರೈತರ ಮಕ್ಕಳು ಸ್ವಾತಂತ್ರೋತ್ಸವ ದಿನದಂದು ಉಪವಾಸ ಮುಷ್ಕರವನ್ನು ನಡೆಸಲಿದ್ದಾರೆ.
ಶನಿವಾರ ಇಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಭೂಮಿಪುತ್ರ ಸಂಘರ್ಷ ವಾಹಿನಿಯ ಅಧ್ಯಕ್ಷ ಅಭಿಜಿತ್ ಪಾಟೀಲ್ ಫಾಲ್ಕೆ ಅವರು, ರೈತರನ್ನು ಗುಲಾಮರನ್ನಾಗಿಸಿರುವ ಕಾನೂನುಗಳ ಹಿಡಿತದಿಂದ ಅವರನ್ನು ಮುಕ್ತಗೊಳಿಸುವಂತೆ ಆಗ್ರಹಿಸಲು ಆ.15ರಂದು ಇಲ್ಲಿಯ ಆಝಾದ್ ಮೈದಾನದಲ್ಲಿ ಮತ್ತು ರಾಜ್ಯಾದ್ಯಂತ ‘ಆತ್ಮಕ್ಲೇಶ ಆಂದೋಲನ’ವನ್ನು ನಡೆಸಲು ನಿರ್ಧರಿಸಿದ್ದೇವೆ. ಸರಕಾರವು ರೈತರನ್ನು ವಂಚಿಸಿದೆ ಮತ್ತು ಅವರನ್ನು ಕಾಡುತ್ತಿರುವ ಸಮಸ್ಯೆಗಳನ್ನು ಬಗೆಹರಿಸುವಲ್ಲಿ ವಿಫಲಗೊಂಡಿದೆ ಎಂದರು.
ಭೂ ಮಿತಿ ಕಾಯ್ದೆ,ಅಗತ್ಯ ಸೇವೆಗಳ ಕಾಯ್ದೆ ಮತ್ತು ಭೂ ಸ್ವಾಧೀನ ಕಾಯ್ದೆಗಳನ್ನು ಹಿಂದೆಗೆದು ಕೊಳ್ಳುವಲ್ಲಿ ಸರಕಾರವು ವಿಫಲವಾಗಿದೆ ಎಂದು ವಾಹಿನಿಯ ನಾಯಕ ಅಮರ್ ಹಬೀಬ್ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News