×
Ad

ಸಚಿವ ಸಂಪುಟದ ತೀರ್ಮಾನಗಳು ಮಾಹಿತಿ ಹಕ್ಕು ವ್ಯಾಪ್ತಿಗೆ: ಕೇಂದ್ರ ಮಾಹಿತಿ ಹಕ್ಕು ಆಯೋಗ

Update: 2016-08-14 12:09 IST

   ಕೊಚ್ಚಿ,ಆ.14: ಸಚಿವ ಸಂಪುಟದ ತೀರ್ಮಾನಗಳು, ಅಜೆಂಡಾಗಳು ಮಾಹಿತಿ ಹಕ್ಕು ವ್ಯಾಪ್ತಿಗೊಳಪಡಲಿದೆ ಎಂದು ಕೇಂದ್ರ ಮಾಹಿತಿ ಹಕ್ಕು ಆಯೋಗ ಸ್ಪಷ್ಟ ಪಡಿಸಿದೆ. ಆದ್ದರಿಂದ ಕೇರಳ ರಾಜ್ಯಸರಕಾರದ ವಾದಕ್ಕೆ ಹಿನ್ನಡೆಯಾಗಿದೆ ಎಂದು ವರದಿಯೊಂದು ತಿಳಿಸಿದೆ. ಮಾಹಿತಿ ಹಕ್ಕು ಕಾರ್ಯಕರ್ತರಾದ ವೆಂಕಟೇಶ್ ನಾಯಕ್ ಎಂಬವರು ಸಲ್ಲಿಸಿದ್ದ ಅರ್ಜಿಯನ್ನು ಪರಿಗಣಿಸಿದ, ಕೇಂದ್ರ ಮಾಹಿತಿ ಹಕ್ಕು ಆಯೋಗ ಅಧ್ಯಕ್ಷ ರಾಧಾಕೃಷ್ಣ ಮಾಥೂರ್ "ಕೇಂದ್ರ ಸಚಿವ ಸಂಪುಟದ ತೀರ್ಮಾನಗಳು, ಅಜೆಂಡಾಗಳು ಇವೆಲ್ಲವೂ ಮಾಹಿತಿ ಹಕ್ಕು ವ್ಯಾಪ್ತಿಗೆ ಒಳಪಡುತ್ತದೆ" ಎಂದು ತೀರ್ಪು ನೀಡಿದ್ದಾರೆ. "ಇದಕ್ಕಾಗಿ ಬೇರೆ ಯಾವುದೇ ಆದೇಶವನ್ನೂ ಕಾಯಬೇಕಿಲ್ಲ. ಈ ತೀರ್ಪನ್ನೇ ಪರಿಗಣಿಸಬೇಕು’ಎಂದು ಮಾಥೂರ್ ತನ್ನ ತೀರ್ಪಿನಲ್ಲಿ ಸೂಚಿಸಿದ್ದಾರೆಂದು ತಿಳಿದು ಬಂದಿದೆ.

     ಆದರೆ, ಕೇರಳ ರಾಜ್ಯ ಸರಕಾರ ಸಚಿವ ಸಂಪುಟದ ತೀರ್ಮಾನಗಳು, ಅಜೆಂಡಾಗಳನ್ನು ಇತ್ಯಾದಿ ಮಾಹಿತಿ ಹಕ್ಕು ಅರ್ಜಿಮುಖಾಂತರ ನೀಡುವುದನ್ನು ವಿರೋಧಿಸಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದು, ಈ ಸಂದರ್ಭದಲ್ಲಿಯೇ ಕೇಂದ್ರ ಮಾಹಿತಿ ಆಯೋಗದ ತೀರ್ಪು ಹೊರಬಿದ್ದಿದೆ. ಈ ಹಿಂದೆ ರಾಜ್ಯ ಮಾಹಿತಿ ಹಕ್ಕು ಆಯೋಗ ಕೇರಳ ಸರಕಾರಕ್ಕೆ ಮಾಹಿತಿ ಹಕ್ಕು ಕಾನೂನುಗಳ ಪ್ರಕಾರ ಸಚಿವ ಸಂಪುಟ ತೀರ್ಮಾನಗಳನ್ನು ಒದಗಿಸಿಕೊಡಬೇಕೆಂದು ಸೂಚಿಸಿದ್ದನ್ನು ಪ್ರಶ್ನಿಸಿ ಸರಕಾರ ಹೈಕೋರ್ಟ್‌ನ್ನು ಸಂಪರ್ಕಿಸಿತ್ತು. ಆದರೆ, ಇದೀಗ ಸರಕಾರದ ಅರ್ಜಿ ಹೈಕೋರ್ಟ್‌ನ ಪರಿಗಣನೆಯಲ್ಲಿರುವಾಗಲೇ ಕೇಂದ್ರ ಮಾಹಿತಿ ಹಕ್ಕು ಆಯೋಗದ ತೀರ್ಪು ಹೊರಬಿದ್ದಿದ್ದು, ಇದು ಕೇರಳ ಸರಕಾರದ ವಾದಕ್ಕೆ ಹಿನ್ನಡೆಯಾದಂತಾಗಿದೆ ಎಂದು ವರದಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News