ಮುಂದಿನ ವರ್ಷದಿಂದ ರೈಲ್ವೆ ಬಜೆಟ್ ಇಲ್ಲ

Update: 2016-08-14 08:45 GMT

ಹೊಸದಿಲ್ಲಿ, ಆ.14: ಪ್ರತ್ಯೇಕ ರೈಲ್ವೆ ಬಜೆಟ್ ಮಂಡಿಸುವ 92 ವರ್ಷಗಳ ಸಂಪ್ರದಾಯಕ್ಕೆ ಈ ವರ್ಷ ತೆರೆ ಬೀಳಲಿದ್ದು, ಈ ಸಂಬಂಧ ರೈಲ್ವೆ ಖಾತೆ ಸಚಿವ ಸುರೇಶ್ ಪ್ರಭು ಮುಂದಿಟ್ಟಿದ್ದ ಪ್ರಸ್ತಾವನೆಗೆ ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಒಪ್ಪಿಗೆ ನೀಡಿದ್ದಾರೆ.


ಇದರಿಂದಾಗಿ 2017-18ನೆ ಸಾಲಿನಿಂದ ಪ್ರತ್ಯೇಕ ರೈಲ್ವೆ ಬಜೆಟ್ ಇರುವುದಿಲ್ಲ. ರೈಲ್ವೆ ಬಜೆಟನ್ನು ಕೇಂದ್ರ ಬಜೆಟ್‌ನಲ್ಲೇ ವಿಲೀನಗೊಳಿಸಲಾಗುವುದು.
ಈ ವಿಲೀನ ಪ್ರಕ್ರಿಯೆಯ ವಿಧಿವಿಧಾನಗಳನ್ನು ಅನುಸರಿಸುವ ಸಲುವಾಗಿ ಈ ರಾಷ್ಟ್ರೀಯ ಸಾರಿಗೆ, ಐದು ಮಂದಿ ತಜ್ಞರ ಸಮಿತಿಯನ್ನು ನೇಮಕ ಮಾಡಲಿದೆ ಎಂದು ಉನ್ನತ ಮೂಲಗಳು ಹೇಳಿವೆ. ಈ ತಿಂಗಳ ಅಂತ್ಯದ ಒಳಗಾಗಿ ಸಮಿತಿ ವರದಿ ಸಲ್ಲಿಸಲಿದೆ.


ರೈಲ್ವೆ ಹಿತಾಸಕ್ತಿಯಿಂದ ಮತ್ತು ದೇಶದ ಹಿತಾಸಕ್ತಿಯಿಂದ ಈ ಸಂಬಂಧ ಹಣಕಾಸು ಸಚಿವ ಅರುಣ್ ಜೇಟ್ಲಿಯವರಿಗೆ ಪತ್ರ ಬರೆದಿದ್ದೆ. ಇದೀಗ ಅನುಸರಿಸಬೇಕಾದ ವಿಧಿವಿಧಾನಗಳನ್ನು ಅಂತಿಮಪಡಿಸಲಾಗುತ್ತಿದೆ ಎಂದು ಸುರೇಶ್ ಪ್ರಭು ಹೇಳಿದ್ದಾರೆ.


ಏಳನೇ ವೇತನ ಆಯೋಗದ ಶಿಫಾರಸ್ಸುಗಳನ್ನು ಜಾರಿಗೊಳಿಸುವ ಸಲುವಾಗಿ ರೈಲ್ವೆಗೆ 40 ಸಾವಿರ ಕೋಟಿ ರೂಪಾಯಿಗಳ ಹೊರೆ ಬಿದ್ದಿದ್ದು, ಇದರ ಜತೆಗೆ ವಾರ್ಷಿಕ 32 ಸಾವಿರ ಕೋಟಿ ರೂಪಾಯಿ ಸಬ್ಸಿಡಿ ಹೊರೆಯನ್ನೂ ತಾಳಿಕೊಳ್ಳುವ ಸ್ಥಿತಿಯಲ್ಲಿ ರೈಲ್ವೆ ಇಲಾಖೆ ಇಲ್ಲ. ಇದರ ಜತೆಗೆ ಯೋಜನೆಗಳ ವಿಳಂಬದಿಂದಾಗಿ 1.07 ಲಕ್ಷ ಕೋಟಿ ರೂಪಾಯಿ ನಷ್ಟವಾಗಲಿದ್ದು, 442 ಕಾಮಗಾರಿ ಹಂತದ ಯೋಜನೆಗಳಿಗಾಗಿ 1.86 ಲಕ್ಷ ಕೋಟಿ ರೂಪಾಯಿಗಳನ್ನು ಹೊಂದಿಸುವುದು ರೈಲ್ವೆಗೆ ದೊಡ್ಡ ಸವಾಲಾಗಿದೆ.

ಮೋದಿ ಸರ್ಕಾರದ ಸುಧಾರಣಾ ಕಾರ್ಯಸೂಚಿಯ ಅಂಗವಾಗಿ ಇದನ್ನು ಜಾರಿಗೆ ತರಲಾಗುತ್ತಿದ್ದು, ಪ್ರಯಾಣ ದರ ಹೆಚ್ಚಿಸುವುದು ಇನ್ನು ಮೇಲೆ ಹಣಕಾಸು ಸಚಿವರ ವಿವೇಚನೆಗೆ ಬಿಟ್ಟ ವಿಚಾರವಾಗಿರುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News